• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಜುನನ ಧಾರ್ಮಿಕ ಪ್ರಜ್ಞೆಯೂ ವರ್ಣಸಂಕರವೂ

By Staff
|
  • ಜಾನಕಿ

jaanaki@india.com

ಯುದ್ಧ ಮಾಡುವುದಿಲ್ಲ ಎಂದು ನಿಶ್ಚಯಿಸುವ ಅರ್ಜುನನು ಕುರುಕ್ಷೇತ್ರದ ನಡುವೆ ನಿಂತು ಆಡುವ ಮಾತುಗಳು ತೀರಾ ಸರಳವಾದದ್ದೇನಲ್ಲ. ಅದು ಕೇವಲ ವಿಷಾದವಷ್ಟೇ ಅಲ್ಲ. ವಿಷಾದದ ಜೊತೆ ಅವನ ಧಾರ್ಮಿಕ ಪ್ರಜ್ಞೆ ಕೂಡ ಎಚ್ಚರಗೊಂಡಿದೆ ಅನ್ನುವುದು ಆತನ ಮಾತುಗಳಿಂದಲೇ ಗೊತ್ತಾಗುತ್ತದೆ. ಯಾರಿಗಾಗಿ ಈ ರಾಜ್ಯ, ಸುಖಭೋಗಗಳು ಬೇಕು ಅಂತ ಆಶೆಪಡುತ್ತೇವೋ ಅವರೆಲ್ಲ ಪ್ರಾಣದಾಸೆಯನ್ನು ತೊರೆದು ಯುದ್ಧಕ್ಕೆ ನಿಂತಿದ್ದಾರೆ. ಎಲ್ಲವನ್ನೂ ಸಂಪಾದಿಸುವುದು ಮಕ್ಕಳಿಗಾಗಿ ಎನ್ನುವುದಾದರೆ ಆ ಮಕ್ಕಳೂ ಈ ಯುದ್ಧದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಮಕ್ಕಳನ್ನು ಕೊಲ್ಲುವುದರಿಂದ ನಾವು ಗಳಿಸುವುದಾದರೂ ಏನು? ಸ್ವಜನರನ್ನು ಕೊಂದು ನಾವು ಸುಖವಾಗಿರಬಲ್ಲೆವೇ?

ಇದು ಅರ್ಜುನನ ಮೊದಲ ಪ್ರಶ್ನೆ. ಆದರೆ ಅವನೇ ಮುಂದುವರಿದು ಹೇಳುತ್ತಾನೆ;

ಕುಲಕ್ಷಯೇ ಪ್ರಣಶ್ಯಂತಿ

ಕುಲಧರ್ಮಾ ಸನಾತನಾಃ।

ಧರ್ಮೇ ನಷ್ಟೇ ಕುಲಂ ಕೃತ್ಸ್ನಮ್‌

ಅಧರ್ಮೋǚಭಿಭವತ್ಯುತ।।

ಕುಲಕ್ಷಯದಿಂದಾಗಿ ಅನಾದಿಕಾಲದಿಂದ ಆಚರಿಸಿಕೊಂಡು ಬಂದ ಕುಲಧರ್ಮವು ನಾಶವಾಗುತ್ತದೆ. ಇದರಿಂದ ಅಧರ್ಮ ವಿಜೃಂಭಿಸುತ್ತದೆ.

Sri krishna preaching Bhagavadgitha to Arjunaವಿಷಾದ, ಕರುಣೆ ಮತ್ತು ಧಾರ್ಮಿಕ ಪ್ರಜ್ಞೆ ಅವನಲ್ಲಿ ಜಾಗೃತವಾದದ್ದಾದರೂ ಹೇಗೆ? ಅದು ಕೇವಲ ವಿಷಾದವಷ್ಟೇ ಆಗಿದ್ದರೆ ಅರ್ಥಮಾಡಿಕೊಳ್ಳಬಹುದಿತ್ತು. ಕರುಣೆಯಾಗಿದ್ದರೆ ಅದಕ್ಕೊಂದು ಸಮರ್ಥನೆಯಿರುತ್ತಿತ್ತು. ಇವೆರಡರ ಜೊತೆ ಧಾರ್ಮಿಕ ಪ್ರಜ್ಞೆಯೂ ಸೇರಿಕೊಂಡದ್ದು ಹ್ಯಾಗೆ?

ಯಾಕೆಂದರೆ ಅದಕ್ಕಿಂತ ಮೊದಲು ಯಾವತ್ತೂ ಅರ್ಜುನ ಧರ್ಮಚಿಂತನೆ ಮಾಡಿದ್ದು ಎಲ್ಲೂ ದಾಖಲಾಗಿಲ್ಲ. ಭೀಮನಂತೆ ಮುಂಗೋಪಿಯಲ್ಲದಿದ್ದರೂ ಧರ್ಮರಾಯನಂತೆ ಸಹನಾಮೂರ್ತಿಯೂ ಅವನಲ್ಲ. ಆತ ಯೌವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದಾನೆ. ಹಾಗಿದ್ದಾಗ ಯುದ್ಧಭೂಮಿಯಲ್ಲಿ ಇದ್ದಕ್ಕಿದ್ದಂತೆ ಅವನ ಧಾರ್ಮಿಕ ವಿವೇಕ ಯಾಕೆ ಜಾಗೃತವಾಯಿತು?

ಅನುಮಾನ ಹುಟ್ಟುವುದು ಇಲ್ಲೇ. ಭಗವದ್ಗೀತೆಯನ್ನು ವ್ಯಾಸರು ಬರೆದೇ ಇಲ್ಲವೇನೋ ಎನ್ನುವ ಸಂಶಯವೂ ನಮ್ಮಲ್ಲಿ ಮೂಡುತ್ತದೆ. ಅದಕ್ಕೆ ಕಾರಣಗಳನ್ನು ಹೀಗೆ ಕೊಡಬಹುದು;

ಕೃಷ್ಣ ಚಂದ್ರವಂಶದವನು. ಯದುಕುಲದ ಸಾತ್ವತ ರಾಜನ ಸಂತತಿಯ ಶೂರರಾಜನ ಮಗನಾದ ವಸುದೇವನ ಮಗ. ಯದುವಂಶದ ಉಗ್ರಸೇನನ ಮಗ ಕಂಸನ ಚಿಕ್ಕಪ್ಪನ ಮಗಳು ದೇವಕಿಯ ಮಗ. ಹುಟ್ಟಿದ ತಕ್ಷಣವೇ ಕೃಷ್ಣನನ್ನು ಗೋಕುಲಕ್ಕೆ ಕೊಂಡೊಯ್ದು ನಂದನ ಮನೆಯಲ್ಲಿ ವಸುದೇವ ಬಿಟ್ಟು ಬರುತ್ತಾನೆ. ಹೀಗೆ ಆತ ಗೋಪಾಲಕರ ನಡುವೆ ಬೆಳೆಯುತ್ತಾನೆ. ಹೀಗಾಗಿ ಕೃಷ್ಣನಿಗೆ ವರ್ಣಾಶ್ರಮದ ಬಗ್ಗೆ, ವರ್ಣಸಂಕರದ ಬಗ್ಗೆ ಅಂಥ ಪ್ರೀತಿ ಇರುವುದಂತೂ ಸಾಧ್ಯವಿಲ್ಲ.

ಇನ್ನು ಮಹಾಭಾರತದ ಕರ್ತೃ ವೇದವ್ಯಾಸ. ಪರಾಶರ ಮುನಿಯಿಂದ ಬೆಸ್ತರ ಹುಡುಗಿ ಸತ್ಯವತಿಗೆ ಹುಟ್ಟಿದವನು. ಹೀಗಾಗಿ ವ್ಯಾಸರಿಗೆ ವರ್ಣಸಂಕರದ ಬಗ್ಗೆ ಯಾವ ಕುತ್ಸಿತ ಭಾವನೆಯೂ ಇರುವುದಕ್ಕೆ ಸಾಧ್ಯವಿಲ್ಲ. ಅಷ್ಟಕ್ಕೂ ಇಡೀ ಮಹಾಭಾರತ ಸ್ತ್ರೀಯರ ಸಚ್ಚಾರಿತ್ರವನ್ನೂ ಅವರ ನೈತಿಕತೆಯನ್ನೂ ಕೇವಲ ಲೈಂಗಿಕ ಸಂಬಂಧಗಳಿಂದ ನಿರ್ಧಾರ ಮಾಡುವುದಿಲ್ಲ. ಇವನ್ನೆಲ್ಲ ಗಮನದಲ್ಲಿಟ್ಟುಕೊಂಡು ನೋಡಿದಾಗ ಅರ್ಜುನ ಈ ಕೆಳಗಿನ ಮಾತನ್ನು ಹೇಳಿದ ಎನ್ನುವುದೂ ತನ್ನೊಂದು ಪಾತ್ರದ ಬಾಯಿಯಿಂದ ಇಂಥ ಮಾತನ್ನು ವ್ಯಾಸ ಆಡಿಸಿದರು ಎನ್ನುವುದು ನಂಬುವುದಕ್ಕೆ ಕಷ್ಟವಾಗುತ್ತದೆ.

ಅಧರ್ಮಾಭಿವಾತ್‌ ಕೃಷ್ಣ

ಪ್ರದುಷ್ಯಂತಿ ಕುಲಸ್ತ್ರಿಯಃ।

ಸ್ತ್ರೀಷು ದುಟ್ಟಾಸು ವಾರ್ಷ್ಣೇಯ

ಜಾಯತೇ ವರ್ಣಸಂಕರ।।

ಅಧರ್ಮ ವಿಜೃಂಭಿಸಿದಾಗ ಸ್ತ್ರೀಯರು ನಡತೆಗೆಡುತ್ತಾರೆ. ಅದರಿಂದಾಗಿ ವರ್ಣಸಂಕರ ಉಂಟಾಗುತ್ತದೆ ಎನ್ನುವ ಆತ ಮುಂದುವರಿದು ಹೇಳುತ್ತಾನೆ; ಜಾತಿಗಳ ಗೊಂದಲವು ಇಡೀ ಕುಲವನ್ನು ನರಕಕ್ಕೆ ಒಯ್ದಂತೆ; ವರ್ಣಸಂಕರದಿಂದ ಕುಲಧರ್ಮಗಳು ನಾಶವಾಗಿ ಧಾರ್ಮಿಕ ಕರ್ಮಗಳು ಮತ್ತು ಕುಲಧರ್ಮಗಳು ನಾಶವಾಗುತ್ತವೆ.

ಇದು ಅರ್ಜುನನು ವಿಷಾದದಿಂದ ಹೇಳುವ ಮಾತುಗಳು ಎಂದು ತಿಳಿದುಕೊಂಡರೆ ಆ ವಿಷಾದದಲ್ಲೂ ಆತ ಕಂದಾಚಾರವನ್ನು ಬೆಂಬಲಿಸುವವನಾಗಿದ್ದ ಅನ್ನುವುದು ಸ್ಪಷ್ಟವಾಗುತ್ತದೆ. ಆದರೆ ಮಹಾಭಾರತದಲ್ಲಿ ಎಲ್ಲೂ ಇಂಥ ವಿವರಣೆಗಳು ನಮಗೆ ಸಿಗುವುದಿಲ್ಲ. ಅಲ್ಲಿ ಯಾವ ಪಾತ್ರವೂ, ಧರ್ಮರಾಯನೊಬ್ಬನನ್ನು ಹೊರತು ಪಡಿಸಿ, ಧರ್ಮದ ಹಾದಿಯಲ್ಲಿ ನಡೆಯುವುದಿಲ್ಲ. ಬದಲಾಗಿ ತಮ್ಮ ನಡವಳಿಕೆಯ ಮೂಲಕ ಧರ್ಮ ಇದು ಎಂದು ತೋರಿಸಿಕೊಡುತ್ತವೆ. ಉದಾಹರಣೆಗೆ ಧರ್ಮಸಂಕಟಕ್ಕೆ ಒಳಗಾಗುವ ಸಂದರ್ಭದಲ್ಲಿ ಭೀಷ್ಮರಂಥ ಹಿರಿಯರೇ ಒಂದು ಹೆಣ್ಣಿನ ಮಾನ ಕಾಪಾಡುವುದಕ್ಕಿಂತ ಒಡೆಯನ ಅನ್ನದ ಋಣ ದೊಡ್ಡದು ಎಂಬಂತೆ ವರ್ತಿಸುತ್ತಾರೆ. ವಿದುರನಂಥ ವಿಧುರ ದುರ್ಯೋಧನದ ರಕ್ಷಣೆಗಾಗಿ ಇಟ್ಟ ಬಿಲ್ಲನ್ನು ತುಂಡರಿಸಿ ಎಸೆದು ಅವಮಾನವನ್ನು ಸಹಿಸಲಾರೆ ಎಂದು ತೋರಿಸಿಕೊಡುತ್ತಾನೆ. ಜಾತೀಯತೆಯನ್ನು ಮರೆತ ದುಯೋಧನನ ಪ್ರೀತಿಗಾಗಿ ಕರ್ಣ ಸೋದರರ ವಿರುದ್ಧವೇ ಯುದ್ಧ ಮಾಡುತ್ತಾನೆ.

ಇಂಥ ವೈವಿಧ್ಯಗಳಿರುವ ಮಹಾಭಾರತದ ನಡುವೆ ಭಗವದ್ಗೀತೆ ಹೇಗೆ ನುಸುಳಿಕೊಂಡಿತು?

(ಭಗವದ್ಗೀತೆಯ ಕುರಿತು ವಾಗ್ವಾದಕ್ಕೆ ಆಹ್ವಾನಿಸುವ ಈ ಬರಹ ಇನ್ನೂ ಕೆಲವು ಕಂತು ಪ್ರಕಟವಾಗಲಿದೆ. ನಿರೀಕ್ಷಿಸಿ.)

(ಸ್ನೇಹಸೇತು : ಓ ಮನಸೇ...)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more