Get Updates
Get notified of breaking news, exclusive insights, and must-see stories!

ಗಿಟಾರ್‌ ಸಮೇತ ನಿಖಿಲ್‌ಜೋಷಿ ಅಮೆರಿಕಕ್ಕೆ

ಡೆಟ್ರಾಯಿಟ್‌ ವಿಶ್ವ ಕನ್ನಡ ಸಮ್ಮೇಳನದಲ್ಲಿ ಗಿಟಾರ್‌ನಲ್ಲಿ ಕರ್ನಾಟಕ ಸಂಗೀತದ ರಾಗಗಳನ್ನು ನುಡಿಸಿದ್ದ ನಿಖಿಲ್‌ ಜೋಷಿ ತನ್ನ ಗಿಟಾರ್‌ ಸಮೇತ ಬೆಂಗಳೂರಿಂದ ನ್ಯೂಯಾರ್ಕ್‌ಗೆ ಹೋಗುವ ತಯಾರಿಯಲ್ಲಿದ್ದಾರೆ.

ಭರ್ತಿ 93.3% ಅಂಕಗಳಿಂದ ಆರ್‌ವಿಸಿಇ ಕಾಲೇಜಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಪದವಿಯನ್ನು ಗಿಟ್ಟಿಸಿರುವ ಜೋಷಿ, ನ್ಯೂಯಾರ್ಕ್‌ನ ಪಾಲಿಟೆಕ್ನಿಕ್‌ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್‌. ಓದಲು ಸೀಟು ಪಡೆದಿದ್ದಾರೆ. ವಿದೇಶಕ್ಕೆ ಹೋಗುವ ಮುಂಚೆ ಅವರು ಎರಡು ಹೊಸ ಸಿ.ಡಿ. ಹಾಗೂ ಕ್ಯಾಸೆಟ್ಟುಗಳನ್ನು ಸಂಗೀತ ಸಹೃದಯರ ಕೈಗಿಟ್ಟ ಗಳಿಗೆಯಲ್ಲಿ ಈ ವಿಷಯ ವ್ಯಕ್ತವಾಯಿತು.

ಗುರುವಾರ (ಜು.25) ಸಂಜೆ ಬೆಂಗಳೂರಿನ ಪ್ರೆಸ್‌ ಕ್ಲಬ್ಬಿನ ಹೆಂಚಿನ ಮನೆಯಲ್ಲಿ ಸಿ.ಡಿ. ಹಾಗೂ ಕ್ಯಾಸೆಟ್‌ಗಳ ಬಿಡುಗಡೆ ಸಮಾರಂಭ. ಒಂದರ ಹೆಸರು ‘ಶ್ರೀ’. ಇನ್ನೊಂದರ ಹೆಸರು ‘ಸರಸ್ವತಿ’. ಶ್ರೀ ಎಂಬುದು ಲಕ್ಷ್ಮಿ ಹಾಗೂ ‘ಶ್ರೀ’ರಾಗ- ಎರಡೂ ಆಗಿರುವ ಕಾರಣಕ್ಕೆ ಒಂದು ಸಿ.ಡಿ./ಕ್ಯಾಸೆಟ್ಟಿಗೆ ಆ ಹೆಸರು. ಇನ್ನೊಂದು ಭಾರತೀಯ ಕಲಾ ಸಂಸ್ಕೃತಿಯ ಪ್ರತೀಕವಾದ ಸರಸ್ವತಿ. ಅಲ್ಬಂಗಳಿಗೆ ತಾನಿಟ್ಟ ಹೆಸರುಗಳ ಬಗ್ಗೆ ಜೋಷಿ ಕೊಟ್ಟ ಕಾರಣವಿದು.

Nikhil Joshis Albam SRI‘ಶ್ರೀ’ ಕ್ಯಾಸೆಟ್ಟನ್ನು ಬಿಡುಗಡೆ ಮಾಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ. ‘ನಿಖಿಲ್‌ ಜೋಷಿಯ ಮೊದಲನೆ ಕ್ಯಾಸೆಟ್ಟನ್ನು 1997ರಲ್ಲಿ ನಾನೇ ಬಿಡುಗಡೆ ಮಾಡಿದ್ದೆ. ಇದು ಅವರ 10 ಮತ್ತು 11ನೇ ಆಲ್ಬಂ. ಮ್ಯಾಂಡೋಲಿನ್‌ ಶ್ರೀನಿವಾಸ್‌, ಸ್ಯಾಕ್ಸಫೋನ್‌ ಕದ್ರಿ ಗೋಪಾಲನಾಥ್‌ ತಂತಮ್ಮ ವಾದ್ಯಗಳಲ್ಲಿ ಕರ್ನಾಟಕ ಸಂಗೀತ ಹೊಮ್ಮಿಸಿದವರು. ಹಾಗೆಯೇ ನಿಖಿಲ್‌ ಜೋಷಿ ಪಾಶ್ಚಿಮಾತ್ಯ ಸಂಗೀತದ ವಾದ್ಯ ಗಿಟಾರ್‌ನಲ್ಲಿ ಕರ್ನಾಟಕ ಸಂಗೀತ ಹೊಮ್ಮಿಸುವ ಸಾಧನೆ ಮಾಡಿದ್ದಾರೆ. ಅಮೆರಿಕಾದಲ್ಲಿ ರಜಾ ದಿನಗಳಲ್ಲಿ ಚರ್ಚುಗಳ ಮುಂದೆ ಅನೇಕರು ಗಿಟಾರ್‌ ಬಾರಿಸುತ್ತಿರುತ್ತಾರೆ. ಅಂಥ ದೇಶಕ್ಕೆ ಜೋಷಿ ಕೂಡ ಗಿಟಾರ್‌ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ ಇವರ ಉದ್ದೇಶ ಬೇರೆಯಾಗಿರುತ್ತದೆ. ಅಲ್ಲೂ ಅವರು ಬೆಳೆಯಲಿ’ ಎಂದು ಮುದ್ದುಕೃಷ್ಣ ಹಾರೈಸಿದರು.

ಜೋಷಿಯ ಎಲ್ಲಾ ಕ್ಯಾಸೆಟ್ಟುಗಳನ್ನು ಹಾಗೂ ಸಿ.ಡಿ.ಗಳನ್ನು ಹೊರತಂದಿರುವ ಲಹರಿ ಕಂಪನಿಯ ವೇಲು ನಯನಾ ಸಭಾಂಗಣದಲ್ಲಿ ಇನ್ನೊಂದು ಕ್ಯಾಸೆಟ್‌ ಸಮಾರಂಭಕ್ಕೆ ಅರ್ಧಕ್ಕೇ ಕೈಕೊಟ್ಟು ಪ್ರೀತಿಯ ಜೋಷಿಗೆ ಹರಸಲು ಬಂದಿದ್ದರು. ಅಮೆರಿಕಕ್ಕೆ ಹೋಗುತ್ತಿರುವ ಜೋಷಿಗೆ ಶುಭ ಕಾಮನೆಗಳನ್ನಷ್ಟೇ ಕೋರಿದ ವೇಲು- ಕೆಲಸ ಮಾಡುವ ಆಸಾಮಿ, ಮಾತಾಡುವವರಲ್ಲ.

Nikhil Joshis Albam Saraswathiಅಂದಹಾಗೆ, 23 ವರ್ಷಗಳಷ್ಟು ಹಳೆಯ ಲಹರಿ ಕ್ಯಾಸೆಟ್‌ ಕಂಪನಿ ಜೋಷಿಯ ಎರಡು ಆಲ್ಬಂಗಳನ್ನು ಹೊರತರುವ ಮೂಲಕ ತನ್ನ ಪಟ್ಟಿಯ ಕ್ಯಾಸೆಟ್‌ ಸಂಖ್ಯೆಯನ್ನು 10,500ಕ್ಕೆ ಏರಿಸಿಕೊಂಡಿದೆ. ಇದೊಂದು ದಾಖಲೆ ಎಂದು ಹೇಳಿದ ಮುದ್ದುಕೃಷ್ಣ, ಕ್ಯಾಸೆಟ್‌ ಲೋಕದಲ್ಲಿ ಲಹರಿಯ ಚಳವಳಿಯನ್ನು ಶ್ಲಾಘಿಸಿದರು.

ವಾದ್ಯದಲ್ಲಿ ಯಾವುದೇ ಮಾರ್ಪಾಟು ಮಾಡದೆ, ಕರ್ನಾಟಕ ರಾಗಗಳನ್ನು ಒಗ್ಗಿಸಿಕೊಂಡು ನುಡಿಸುವ ನಿಖಿಲ್‌ ಪ್ರತಿಭಾವಂತ. ಹಿಂದೆ ಅಮೆರಿಕಾದಿಂದ ಇಲ್ಲಿಗೆ ಬಂದ ಹುಡುಗ, ಆರ್‌.ಆರ್‌.ಕೇಶವಮೂರ್ತಿ ಅವರ ಹತ್ತಿರ ಸಂಗೀತ ಕಲಿತು, ಈಗ ಮತ್ತೆ ಅಮೆರಿಕಕ್ಕೆ ಹೋಗುತ್ತಿದ್ದಾರೆ. ಆತನಿಗೆ ಸಂಗೀತದಲ್ಲಿ ಆಸಕ್ತಿಯಿದೆ. ಅಮೆರಿಕಾಗೆ ಈತ ಕೇವಲ ವಿದ್ಯಾರ್ಥಿಯಾಗಷ್ಟೆ ಅಲ್ಲ , ಸಾಂಸ್ಕೃತಿಕ ರಾಯಭಾರಿಯಾಗಿ ಹೋಗುತ್ತಿದ್ದಾರೆ ಎಂದು ಸಂಗೀತ ವಿಮರ್ಶಕ ಮತ್ತು ಪತ್ರಕರ್ತ ಪಿ.ಜಿ.ಶ್ರೀನಿವಾಸಮೂರ್ತಿ ಬೆನ್ನುತಟ್ಟಿದರು.

ಇನ್ನೊಂದು ಕ್ಯಾಸೆಟ್‌/ಸಿ.ಡಿ.ಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ಸಿ.ಸೋಮಶೇಖರ್‌ ಬಿಡುಗಡೆ ಮಾಡಿದರು.

ನನ್ನ ಮೊದಲ ಕ್ಯಾಸೆಟ್‌ ಬಿಡುಗಡೆಯಾದ ಮಾರನೆಯ ದಿನವೇ ಮುದ್ದುಕೃಷ್ಣ ಅವರು ದೆಹಲಿಗೆ ಕಳಿಸಿಕೊಟ್ಟಿದ್ದರು. ಸಂಗೀತದಲ್ಲಿ ಏನಾದರೂ ಮಾಡಿದ್ದರೆ ಅದರಲ್ಲಿ ಅವರ ಪ್ರೋತ್ಸಾಹವೂ ಇದೆ. ಲಹರಿಯ ವೇಲು ನನಗೆ ಪ್ರೀತಿಯ ವೇಲು ಅಂಕಲ್‌. ಅವರಿಗೆ ಥ್ಯಾಂಕ್ಸ್‌ ಅಂತ ನಿಖಿಲ್‌ ಕೃತಜ್ಞತೆ ಅರ್ಪಿಸಿದರು.

ಶ್ರೀ ಹಾಗೂ ಸರಸ್ವತಿ- ಪ್ರತಿ ಕ್ಯಾಸೆಟ್ಟಿನ ಬೆಲೆ 35 ರುಪಾಯಿ. ಪ್ರತಿ ಸಿ.ಡಿ. ಬೆಲೆ 42 ರುಪಾಯಿ.

ಲಹರಿ ವಿಳಾಸ-
ಲಹರಿ ರೆಕಾರ್ಡಿಂಗ್‌ ಕಂಪನಿ
ನಂ. 61, ಗೌರಿ ಚೇಂಬರ್ಸ್‌, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560 018.

ದೂರವಾಣಿ : (080) 6610333

ಇ- ಮೇಲ್‌ : [email protected]

ಮುಖಪುಟ / ಸಾಹಿತ್ಯ-ಸಂಸ್ಕೃತಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+