• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಹಾಡುವ ಹುಚ್ಚು

By Staff
|
  • ಹಳೇಬೀಡು ಸ್ವಾಮಿ,

ಬಸವೇಶ್ವರನಗರ, ಬೆಂಗಳೂರು

ಬಹಳ ಚಿಕ್ಕವನಾಗಿದ್ದಾಗಲೇ ನನಗೆ ದೇವರ ನಾಮಗಳನ್ನು/ಭಾವ ಗೀತೆಗಳನ್ನು ಉರುಹಚ್ಚಿ ಹಾಡಬೇಕೆಂಬ ಹಂಬಲ ಬಹಳವಿತ್ತು . ಆದರೆ ದೇವರು ತಕ್ಕ ಕೋಗಿಲೆ ಕಂಠವನ್ನು ನನಗೆ ಕೊಡದಿದ್ದಾಗ, ಸಂಗೀತವನ್ನು ಹಳ್ಳಿಯಲ್ಲಿ ಹೇಳಿಕೊಡುವವರು ಇಲ್ಲದಿದ್ದಾಗ ಇದು ನನಗೆ ಸಾಧ್ಯವಾಗದ ಹುಚ್ಚು ಎಂದು ತಿಳಿದುಕೊಂಡಿದ್ದೆ. ಒಂದು ಬೇಸಿಗೆ ರಜಾದಲ್ಲಿ ನನ್ನ ಚಿಕ್ಕಪ್ಪನ ಮಗ ನಮ್ಮೂರಿಗೆ ಬಂದ. ನನಗಿಂತ ನಾಲ್ಕು ತಿಂಗಳು ದೊಡ್ಡವನು. ಚೆನ್ನಾಗಿ ಹಾಡಬಲ್ಲವನಿದ್ದ. ಆದ್ದರಿಂದ ಅವನು ಎಲ್ಲರಿಗೂ ತುಂಬಾ ಅಚ್ಚುಮೆಚ್ಚಾಗಿದ್ದ. ಹಾರ್ಮೋನಿಯಮ್‌ ಎಲ್ಲಿಂದಲೋ ತಂದು ನಮ್ಮ ಮನೆಯಲ್ಲೇ ಹೆಚ್ಚಿನ ಅಭ್ಯಾಸ ಮಾಡಲು ಶುರುಮಾಡಿದ. ನನಗೂ ಸಂಗೀತಾಭ್ಯಾಸ ಮಾಡಿಸುತ್ತಾನೆಂದು ಆಸೆಹುಟ್ಟಿತು. ‘ಲಂಬೋದರ ಲಕುಮಿಕರ’ ಎಂದು ಹಾರ್ಮೋನಿಯಮ್‌ ನುಡಿಸುತ್ತ ಅವನು ಹೇಳಿಕೊಟ್ಟಂತೆ ಹಾಡಲು ಶುರುಮಾಡಿದೆ. ನನ್ನ ಕಷ್ಟ ನೋಡಿ ಹಾಸ್ಯ ಮಾಡಿದ, ಹಾಗೂ ನನ್ನ ಆಸೆಗೆ ತಣ್ಣೀರೆರಚಿದ. ಅಲ್ಲಿಗೆ ಮುಗಿಯಿತು ನನ್ನ ಸಂಗೀತಾಭ್ಯಾಸ. ಆದರೂ ಹಾಡು/ಕವನಗಳಲ್ಲಿರುವ ಸಾಹಿತ್ಯವನ್ನು ಮೆಚ್ಚಿಕೊಂಡು ಉರುಹಚ್ಚಿ ನನಗೇ ಕೇಳಿಸದಂತೆ ಹಾಡಿಕೊಳ್ಳುತ್ತಿದ್ದೆ. ಹಾಡುವ ಆಸೆ ಹೋಗಲಿಲ್ಲ. ಮೂರು ನಾಲ್ಕು ಹಾಡು-ಗೀತೆಗಳು ಬಾಯಲ್ಲಿದ್ದರೂ ಗಟ್ಟಿಯಾಗಿ ಹಾಡುವ ಧೈರ್ಯ ಉಡುಗಿಹೋಗಿತ್ತು.

Music: The Universal languageಚಿಕ್ಕಮಗಳೂರಿನ ಹೈಸ್ಕೂಲಿನಲ್ಲಿರುವಾಗ, ನನ್ನ ವಿದ್ಯಾರ್ಥಿನಿಲಯದ ಕೆಲವು ಹುಡುಗರು ಬಚ್ಚಲು ಮನೆಯಲ್ಲಿ ಹಾಡುತ್ತಿದ್ದಾಗಲೂ, ಅವರ ಹಾಡನ್ನ, ಅಲ್ಲ ಅವರ ಕಿರುಚಾಟವನ್ನ ನಿತ್ಯ ಕೇಳಿಸಿಕೊಳ್ಳುತ್ತಿದ್ದ ನನಗೆ ಗಟ್ಟಿಯಾಗಿ ಹಾಡಿಕೊಳ್ಳುವ ಧೈರ್ಯ ಬರಲೇ ಇಲ್ಲ. ಹೀಗೆ ಬಾತ್‌ ರೂಮ್‌ನಲ್ಲಿ ಹಾಡುವುದು ನಮ್ಮ ಕಾಲದ ವಿದ್ಯಾರ್ಥಿ ನಿಲಯಗಳಲ್ಲಿ ಸರ್ವೇ ಸಾಮಾನ್ಯವಾಗಿದ್ದರೂ, ನನಗಂತೂ ಧೈರ್ಯ ಬರಲೇ ಇಲ್ಲ. ನಾನಂತೂ ಬಚ್ಚಲು ಮನೆಯಲ್ಲಿ ಹಾಡುತ್ತಿರಲಿಲ್ಲ .

ಅದುಮಿಟ್ಟಿದ್ದ ಆಸೆ ಒಂದು ದಿನ ಹೊರಗೆ ಬಂತು. ಅಂದು ಹೈಸ್ಕೂಲಿನಲ್ಲಿ ಏನೋ ಸಮಾರಂಭ. ಸಂಜೆಯ ಹೊತ್ತು. ಮುಖ್ಯ ಅತಿಥಿಗಳು ಬರುವುದು ತಡವಾದ್ದರಿಂದ ಕೆಲವು ಹಾಡಬಲ್ಲ ಹುಡುಗರಿಗೆ ಹಾಡಲು ಅವಕಾಶ ಕೊಟ್ಟರು. ನನಗೆ ನನ್ನ ಮೆಚ್ಚಿನ ಹಾಡೊಂದನ್ನು ಹಾಡಿದರೆ ಅದರಲ್ಲಿದ್ದ ಸಾಹಿತ್ಯವನ್ನು ಅಲ್ಲಿ ನೆರೆದಿದ್ದವರಿಗೆ ತಿಳಿಸಬಹುದಲ್ಲ ಎಂದು ಆಸೆಯಾಯ್ತು. ಚೀಟಿ ಕಳುಹಿಸಿದೆ. ನನ್ನನ್ನು ಕೂಗಿ ಕರೆದರು. ಧೈರ್ಯಮಾಡಿ ಹೋದೆ. ನನ್ನ ಮೆಚ್ಚಿನ ‘ ಸಕಲಕೆಲ್ಲ ನೀನೆ ಅಕಳಂಕ ಗುರುವೆಂದು ನಿಖಿಳ ಶಾಸ್ತ್ರವು ಪೇಳುತಿರಲರಿದೆನು’ ಎಂಬ ಹಾಡನ್ನ ಮೆಚ್ಚಿಕೊಂಡಾರೆಂದು ಹಾಡಲು(?)/ ಓದಲು ಹೋದೆ; ಹಾಡಲಿಕ್ಕಲ್ಲ ಎಂದು ಮತ್ತೊಮ್ಮೆ ಹೇಳ ಬಯಸುತ್ತೇನೆ.

ಹಾಡುಗಾರನಂತೆ ಹಾಡಲು ನನ್ನಲ್ಲಿ ಧೈರ್ಯವಿರಲಿಲ್ಲ, ಶುರುಮಾಡಿದೆ ಹಾಡಲು(?). ಬಾಯಿಂದ ನಾಲ್ಕು ಪದಗಳು ಬರುತ್ತಿದ್ದಂತೆಯೇ ಹೋ ಎಂದು ಕೂಗಾಟ, ಕಿರುಚಾಟ ಶುರುವಾಯ್ತು ನನ್ನ ಮುಂದೆ. ಮೈಕನ್ನು ಕೆಳಗಿಟ್ಟು ಓಡಿದೆ ನನ್ನ ಹಾಸ್ಟಲ್‌ಗೆ. ಒಂದೆರಡು ಸಾಲನ್ನೂ ಹೇಳಲು ನನಗಿವರು ಬಿಡಲಿಲ್ಲವಲ್ಲ ಎಂದು ನೊಂದುಕೊಂಡು ಮಲಗಿದ್ದೆ. ಅವಮಾನವಾಯ್ತೆಂದು ಕೊರಗುತ್ತಿದ್ದೆ. ನನ್ನ ಜೊತೆ ಇದ್ದವರು ಬಂದು ಸಮಾಧಾನ ಮಾಡಿದರು. ಅಲ್ಲಿಗೆ ಮುಗಿಯಿತು ನನ್ನ ಸಂಗೀತ ಹಾಗೂ ಸಾಹಿತ್ಯದ ಹುಚ್ಚು.

ನಂತರ ನಾನು ಮೆಚ್ಚಿಕೊಂಡದ್ದನ್ನೆಲ್ಲ ಸಂಗ್ರಹಿಸಿ ಹಾಗೂ ಬರೆದಿಡುವುದರಲ್ಲೇ ಮುಗಿಯಿತು ನನ್ನ ಸಾಹಿತ್ಯಾಭ್ಯಾಸ. ಉರು ಹಚ್ಚಲೂ ನನಗೆ ನೆನಪಿನ ಶಕ್ತಿ ಸಾಲದೆಂದು ಅದನ್ನೂ ಬಿಟ್ಟೆ. ಯಾರಾದರೂ ನಾಲ್ಕು ಹಾಡನ್ನು ಇಲ್ಲ ನಾಲ್ಕು ಕೊಟೇಶನ್‌ಗಳನ್ನು ನೆನಪಿನಿಂದ ಫಟ ಫಟ ಹೇಳಿದರೆ ಅವರ ಜ್ಞಾಪಕ ಶಕ್ತಿಯ ಬಗ್ಗೆ ಆಶ್ಚರ್ಯ ಪಡುತ್ತಿದ್ದೆ. ಅವರ ಜ್ಞಾಪಕ ಶಕ್ತಿ ನನಗಿಲ್ಲವಲ್ಲಾ ಎಂದು ಕೊರಗುತ್ತಿದ್ದೆ.

ರಿಟೈರ್‌ ಆದಮೇಲೆ ಬೆಳಗಿನ ವಾಕಿಂಗ್‌ ಸಮಯದಲ್ಲಿ ನನ್ನ ಹುಚ್ಚು ಮತ್ತೆ ಮರುಕಳಿಸಿತು. ಪುರಂದರ ದಾಸರ ಅನೇಕ ಕೀರ್ತನೆಗಳನ್ನು ಉರುಹಚ್ಚಿದೆ. ನನ್ನ ಜ್ಞಾಪಕ ಶಕ್ತಿಯನ್ನು ನಾನೇ ಮೆಚ್ಚಿಕೊಂಡೆ. ದಾರಿ ಉದ್ದಕ್ಕೂ ಹಾಡಿಕೊಳ್ಳುತ್ತಿದ್ದೆ. ಹಾಡುತ್ತಾ ಹಾಡುತ್ತಾ ನನ್ನ ಕಂಠ ಉತ್ತಮವಾಗುತ್ತಿದೆ ಎಂದುಕೊಂಡೆ. ನಸುಕಿನ ವಾಕಿಂಗ್‌ನಲ್ಲಿ ಹಾಡುತ್ತಾ ಹೋಗುತ್ತಿದ್ದಾಗ ಅನೇಕ ಸ್ನೇಹಿತರಿಂದ ಅನೇಕ ರೀತಿಯ ಕೀಟಲೆ ಮಾತುಗಳು / ಅಭಿಪ್ರಾಯಗಳು ಬಂದವು. ಇವು ನನ್ನ ಹೆಂಡತಿಯ ಕಿವಿಗೂ ಬಿದ್ದವು. ಮನೆಯಲ್ಲಿ ಶುರುವಾಯ್ತು ಕಿರಿಕಿರಿ. ‘ಹೀಗೆಲ್ಲ ಹಾಡಿದರೆ ನಿಮ್ಮ ಹೆಂಡತಿ ಸುಮ್ಮನಿರುತ್ತಾರೇನ್ರಿ?’ ಎಂದು ಒಬ್ಬರು ಕೇಳಿದರು. ಆಲದ ಮರದ ಪಾರ್ಕ್‌ನಲ್ಲಿ ನನಗೆ ನಾನೊಬ್ಬನೇ ಹಾಡಿಕೊಂಡು ನಡೆದಾಡುತ್ತಾ ಎಷ್ಟೋ ದಿನ ಪರವಶನಾಗುತ್ತಿದ್ದೆ. ಹಾಗಿರುವಾಗ ಒಂದು ದಿನ ಹಿಂದಿನಿಂದ ಬಂದು ನನ್ನ ಹಾಡನ್ನ ಕದ್ದು ಕೇಳಿಸಿಕೊಂಡು ಅವರು ಹಾಗೆನ್ನಬಹುದೇ? ಆದಕ್ಕೆ ಸರಿಯಾದ ಉತ್ತರ ಕೊಡುವಷ್ಟು ಧೈರ್ಯ ಬಂದಿತ್ತು. ತಕ್ಕ ಉತ್ತರ ಕೊಟ್ಟೆ, ಅವರು/ಮತ್ತಾರೂ ಮತ್ತೆ ನನ್ನ ತಂಟೆಗೆ ಬರಲಿಲ್ಲ. ನನ್ನ ಸಂಗೀತಾಭ್ಯಾಸ ಹೀಗೇ ಸಾಗಿತು ಪಾರ್ಕ್‌ನಲ್ಲಿ ಮತ್ತೂ ಮನೆಯಲ್ಲಿ. ಹಾಡುವ ನನ್ನ ಹುಮ್ಮಸ್ಸು ಜಾಸ್ತಿಯಾಗುತ್ತಿದೆ.

ಒಂದು ದಿನ ಮನೆಯಲ್ಲಿ ಹಾಡುತ್ತಿದ್ದಾಗ ನನ್ನ ಹೆಂಡತಿ ‘ಎಷ್ಟು ಕರ್ಕಶವಾಗಿದೆ’ ಎಂದಳು. ‘ಷಟ್‌ ಅಪ್‌’ ಅನ್ನಬೇಕೆನಿಸಿತು. ಅನ್ನಲಿಲ್ಲ. ಮುನಿಸಿಕೊಂಡೆ, ಅಷ್ಟೆ. ಆಕೆಗೆ ಸಂಗೀತದ ಹಾಗೂ ಸಾಹಿತ್ಯದ ಗಂಧವೂ ಇಲ್ಲ. ಒಂದು ದೇವರ ನಾಮವೂ/ ಒಂದು ಹಾಡೂ ಗೊತ್ತಿಲ್ಲ. ಒಂದು ದಿನವೂ, ಹೊರಗಿರಲಿ ಮನೆಯಲ್ಲೂ ಹಾಡಿಲ್ಲದ ಆಕೆ ಹಾಗೆನ್ನಬಹುದೆ? ಆದೂ ನನ್ನ ಹಾಡನ್ನು ಆಡಿಕೊಳ್ಳುವುದು ಸೊಕ್ಕಲ್ಲವೆ ? ನಾನೇನು ಆಕೆ ಕೇಳಿಸಿಕೊಳ್ಳಲಿ ಎಂದು ಹಾಡುತ್ತಿರಲಿಲ್ಲ. ನನ್ನಷ್ಟಕ್ಕೆ ನಾನು ಹಾಡಿಕೊಳ್ಳುತ್ತಿರುವಾಗ ಆಕೆ ಯಾಕೆ ಅಲ್ಲಿ ಬರಬೇಕು? ಮತ್ತು ಯಾಕೆ ಹಾಗೆಲ್ಲ ಆಡಿಕೊಳ್ಳಬೇಕು? ಮತ್ತೆ ಆಕೆ ನನ್ನ ತಂಟೆಗೆ ಬರಲಿಲ್ಲ. ಧೈರ್ಯ ಬಂತು. ನನ್ನ ಮನೆಯಲ್ಲಿ ನಾನು ನನಗೆ ಬೇಕಾದಂತೆ ಹಾಡಿಕೊಳ್ಳಲು ಯಾರ ಅಪ್ಪಣೆಯಾದರೂ ಯಾಕೆ ಬೇಕು ? ಹಾಡುತ್ತಿರುತ್ತೇನೆ ರಾತ್ರಿ ಹಗಲೆನ್ನದೆ ಸಮಯ ಸಿಕ್ಕಾಗಲೆಲ್ಲ. ಮನೆಯವರೆಲ್ಲರ ಎದುರಿಗೆ ಹಾಡುವ ಧೈರ್ಯ ಬಂದಿದೆ.

ಒಂದು ದಿನ ನಮ್ಮ ಮನೆಯ ಹತ್ತಿರ ಯಾರದೋ ಮನೆಗೆ ಹೋಗಿದ್ದೆ. ಆ ಮನೆಯ ನನ್ನ ಸ್ನೇಹಿತರು ಪಕ್ಕದ ಮನೆಯ ಒಂದು ಹುಡುಗಿಗೆ ನನ್ನ ಪರಿಚಯ ಮಾಡಿಸಿದರು. ‘ಗೊತ್ತು , ಗೊತ್ತು , ಇವರೇ ಅಲ್ಲವಾ ? ಬೆಳಗಿನ ಹೊತ್ತು ರಸ್ತೆಯಲ್ಲಿ ಹಾಡುತ್ತಾ ಹೋಗುತ್ತಾ ಇರುತ್ತಾರೆ’ ಎಂದಳು ಆ ಹುಡುಗಿ. ಆಕೆ ಹೇಳುವ ರೀತಿಯಿಂದ ನನ್ನಾಕೆಗಿಂತ ಆಕೆ ಹೇಳಿದ್ದು ಉತ್ತಮ ಎನ್ನಿಸಿತು . ಅದನ್ನ ನಾನು ‘ಕಾಂಪ್ಲಿಮೆಂಟ್‌’ ಅಂದುಕೊಳ್ಳದಿದ್ದರೂ ‘ಇನ್ಸಲ್ಟ್‌’ ಎಂದು ತಿಳಿದುಕೊಳ್ಳಲಿಲ್ಲ. ಆದ್ದರಿಂದ ನನ್ನ ‘ಮೊರೇಲ್‌’ ಏನೂ ಕಡಮೆ ಯಾಗಿಲ್ಲ.

ನನ್ನ ಸಂಗೀತಾಭ್ಯಾಸ ಮುಂದುವರೆದಿದೆ. ಬಹಳ ದಿನಗಳಿಂದ ಬೆಳಗಿನ ಜಾವ 5 ಕ್ಕೇ ಎದ್ದು 5 ರಿಂದ 6 ರವರೆಗೆ ನನ್ನ ಸಂಗೀತಾಭ್ಯಾಸ ಮುಂದುವರಿಸಿದ್ದೇನೆ. ಪಕ್ಕದ ಮನೆಯವರಿಗೆ ತೊಂದರೆಯಾಗಬಾರದೆಂದು ಕಿಟಕಿ ಬಾಗಿಲನ್ನೆಲ್ಲ ಮುಚ್ಚಿ ದೇವರ ಮನೆಯಲ್ಲಿ ಇಲ್ಲ ಬಚ್ಚಲು ಮನೆಯಲ್ಲಿ ಹಾಡುತ್ತಿರುತ್ತೇನೆ. ಇನ್ನೂ ಪಕ್ಕದ ಮನೆಯವರಿಂದ ‘ಕಂಪ್ಲೇಂಟ್‌’ ಆಗಲಿ ‘ಕಾಂಪ್ಲಿಮೆಂಟ್‌’ ಆಗಲಿ ಬಂದಿಲ್ಲ.

ಅಲ್ರೀ, ನನ್ನ ಮನೆಯಲ್ಲಿ ನಾನು ಹಾಡಿಕೊಂಡರೆ ಅವರಿಗೇನ್ರಿ ಕಷ್ಟ ? ಬೆಳಗಿನ ಜಾವ ‘ಅಲ್ಲಾ ಹೋ ಅಕ್ಬರ್‌’ಎಂದು ಕೂಗ್ತಾರಲ್ಲ ಮಸೀದಿಯವರು, ಅದಕ್ಕೇನು ಹೇಳ್ತೀರಿ? ಹಾಗೆಂತಲೇ ಕೇಳ್ತೀನಿ ನನ್ನ ಅಕ್ಕ ಪಕ್ಕದವರು ನನ್ನ ಕೇಳಿದರೆ. ನಾನು ಹಾಡಲಿಕ್ಕೆ ಶುರುಮಾಡಿದಾಗ ಅವರಿಗೆ ಬೇಗ ಎಚ್ಚರ ಆದರೆ ಎದ್ದು ಮನೆ ಕೆಲಸ ಮಾಡಿಕೊಳ್ಳಲಿ. ಅಲಾರಮ್‌ ಇಡುವುದು ತಪ್ಪಿತೆಂದು ಒಂದು ದಿನ ನನಗೆ ಕಾಂಪ್ಲಿಮೆಂಟ್‌ ಹೇಳೇ ಹೇಳ್ತಾರೆ.

ಇನ್ನೊಬ್ಬರು ಹೇಳಿದರು, ಮಸೀದಿಯವರಿಗೆ ಹಾಗೆ ಕೂಗಲಿಕ್ಕೆ ಪೊಲೀಸ್‌ ಪರ್ಮಿಶನ್‌ ಇದೆಯಂತೆ ಅಂತ. ‘ನನ್ನಿಂದ ತೊಂದರೆಯಾಗುತ್ತಿದೆಯೆಂದು ಕಂಪ್ಲೇಂಟ್‌ ಬಂದಿದೆ ಎಂದರೆ ಕಾನ್‌ಸ್ಟಿಟ್ಯೂಷನ್‌ ಇಲ್ಲವೆ ಪೊಲೀಸ್‌ ಆಕ್ಟ್‌ ತಿದ್ದಿಕೊಳ್ಳಿ ಎಂದು ಹೇಳ್ತೇನೆ ಪೊಲೀಸ್‌ನವರಿಗೆ. ನನಗೂ ಮಸೀದಿಯವರಂತೆ ದೇವರ ನಾಮ ಗಟ್ಟಿಯಾಗಿ ಹಾಡಿಕೊಳ್ಳಲು ಹಕ್ಕಿದೆಯಲ್ಲವೆ? ಎಂದು ಅವರನ್ನೇ ತಿರುಗಿ ಪ್ರಶ್ನಿಸಿದೆ. ‘ಸದ್ಯಕ್ಕೆ ವಾಜಪೇಯಿ ಸರ್ಕಾರ ಇದೆ/ ಸಂಘ ಪರಿವಾರ ಇದೆ, ನನಗೇನೂ ಭಯವಿಲ್ಲ. ನನಗೆ ಅವರ ನೆರವು ಸಿಕ್ಕೇ ಸಿಕ್ತದೆ’ ಎಂದು ಹೇಳಿದೆ.

ಮುಂದೆ ಬೇರೆ ಸರ್ಕಾರ ಬಂದಾಗ ನೋಡ್ಕೊಳ್ಳೋಣ. ಸದ್ಯಕ್ಕೆ ನನ್ನ ಹಾಡುಗಾರಿಕೆ ಮುಂದುವರಿಯುತ್ತದೆ, ಖಂಡಿತ. ಹೀಗೆ ಹಾಡುತ್ತ ಕಾಲ ಕಳೆಯುವುದರಿಂದ ನನಗೇನೋ ಮಹದಾನಂದವಾಗುತ್ತಿದೆ. ಹಾಡುವಾಗ ನನ್ನನ್ನು ಹಾಗೂ ನನ್ನ ಪೋಸ್ಟ್‌-ರಿಟೈರ್ಮೆಂಟ್‌ ನೋವನ್ನು ನನಗೆ ಮರೆಯಲು ಸಾಧ್ಯವಾಗುತ್ತಿದೆ. ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂದು ಹಾಡುವಾಗ ಅದೆಷ್ಟು ಸಮಾಧಾನ/ ಸಂತೋಷ ಅಗ್ತದೆ ಗೊತ್ತಾ. ಮತ್ತಿನ್ನೇನು ಬೇಕು ನನಗೆ?

ನನಗಿಂತ ಮುಂಚೆ ನನ್ನ ಹಾಗೆ ಬಹಳ ಜನ ಕರ್ಕಶ ಕಂಠದಿಂದಲೇ ಹಾಡುವ ಪ್ರಯತ್ನ ಮಾಡಿರಲೇಬೇಕು. ನನಗೂ ಗೊತ್ತು ನಾನೇನು ಮೊದಲಿಗನಲ್ಲ ಎಂದು. ಈ ಲೇಖನದ ‘ಪ್ರೂಫ್‌’ ಓದಿದ ನನ್ನ ಮಿತ್ರರೊಬ್ಬರು ‘ಶಾರೀರವಿರದ ಶ್ರೀ ಕಿಟ್ಟಿ ಕೃಷ್ಣಯ್ಯಂಗಾರ್‌ ಎಂಬುವವರೊಬ್ಬರು ಚಾಮುಂಡೀಬೆಟ್ಟದ ತಪ್ಪಲಲ್ಲಿ, ನಸುಕಿನಲ್ಲೇ ಸಾಧನೆಮಾಡಿ ಆಸ್ಥಾನ ವಿದ್ವಾಂಸರಾದರು’ ಎಂಬ ನಿದರ್ಶನ ಹೇಳಿದರು. ಇದು ನನಗೆ ಅಪಾರ ಉತ್ತೇಜನ ಕೊಡುತ್ತಿದೆ. ನಾನು ಇದೇ ರೀತಿಯಲ್ಲಿ ಮುಂದುವರೆಸಿದಲ್ಲಿ , ಮುಂದೆ ಎಂದಾದರೂ ಒಂದುದಿನ ನನ್ನನ್ನೂ ಅವರ ಹಾಗೆ ಕಛೇರಿ ಮಾಡಲು ನೀವು ಆಹ್ವಾನಿಸುತ್ತೀರಿ, ಅಲ್ಲವೆ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more