• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಜಯಂತ್‌ ಕಾಯ್ಕಿಣಿ ಕತೆಗಳು’

By Staff
|
  • ದಟ್ಸ್‌ ಕನ್ನಡ ಬ್ಯೂರೊ

ಭಾನುವಾರದ ಬೆಳಗು, ಗಾಂಧೀ ಬಜಾರಿನಲ್ಲೊಂದು ಬೆರಗು !ಗಾಂಧಿ ಬಜಾರಿನ ಸಾಲು ಸಾಲು ಹಣ್ಣಿನ ಗಾಡಿಗಳ ನಡುವೆ ಫೂಟ್‌ಪಾತ್‌ಗಿಂತ ತಗ್ಗಿನಲ್ಲಿರುವ ಅಂಕಿತ ಪುಸ್ತಕ ಪ್ರಕಾಶನದ ಅಂಗಡಿ ನೋಡಿದ್ದೀರಾ ? ಆ ಪುಟ್ಟ ಪುಸ್ತಕದಂಗಡಿಗೆ ಆಗಸ್ಟ್‌ 17ರಂದು ವಾರ್ಷಿಕೋತ್ಸವದ ಸಂಭ್ರಮ. ಅದರ ಸಲುವಾಗಿ ಕತೆಗಾರ ಜಯಂತ್‌ ಕಾಯ್ಕಿಣಿ ಅವರ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮೂರು ಕಥಾಸಂಕಲನಗಳ (ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತ ಬಳ್ಳಿ ಕಷಾಯ) ಪ್ರತ್ಯೇಕ ಸಂಪುಟದ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಅದು ವಿಶೇಷ ನಮೂನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಅಂಕಿತ ಪುಸ್ತಕದಂಗಡಿಯಾಳಗೆ ಒಂದಷ್ಟು ಕುರ್ಚಿಗಳು. ಅಕ್ಕ ಪಕ್ಕ ಹೊರಳಿದರೆ ರ್ಯಾಕುಗಳಲ್ಲಿ ಪೇರಿಸಿಟ್ಟ ಪುಸ್ತಕಗಳು ಪುಸ್ತಕಗಳು ಪುಸ್ತಕಗಳು! ಅಂಗಡಿಯ ಗಲ್ಲಾ ಪೆಟ್ಟಿಗೆಯೇ ವೇದಿಕೆ. ಅಲ್ಲಿ ಮೂರು ಕುರ್ಚಿಗಳು. ಕೃತಿಕಾರ ಜಯಂತ್‌ ಕಾಯ್ಕಿಣಿ, ಕಥೆಗಾರ ವಿವೇಕ್‌ ಶಾನುಭೋಗ, ಸರೋದ್‌ ಉಸ್ತಾದ್‌ ರಾಜೀವ್‌ ತಾರಾನಾಥ್‌.

ಬಿಡುಗಡೆ ಎಂದರೆ ಖರೀದಿ !

Cover page of Jayanth Kaikinis Short story collection volume140 ರೂಪಾಯಿ ಕೊಟ್ಟು ‘ಜಯಂತ ಕಾಯ್ಕಿಣಿ ಕತೆಗಳು’ ಪುಸ್ತಕವನ್ನು ಖರೀದಿಸುವ ಮೂಲಕ ರಾಜೀವ ತಾರಾನಾಥರು ಪುಸ್ತಕವನ್ನು ಅನಾವರಣಗೊಳಿಸಿದರು. ಪುಸ್ತಕದ ಅಸಲೀ ಬೆಲೆ 170 ರುಪಾಯಿ. ಬಿಡುಗಡೆಯ ದಿನವಾದ್ದರಿಂದ 30 ರೂಪಾಯಿ ಡಿಸ್ಕೌಂಟ್‌.

ಪುಸ್ತಕದ ಬಗ್ಗೆ ಕಥೆಗಾರ ಹಾಗೂ ಜಯಂತರ ಗೆಳೆಯ ವಿವೇಕ್‌ ಶಾನುಭಾಗ್‌ ಮಾತನಾಡಿದರು. ನವ್ಯೋತ್ತರ ಕಾಲದಲ್ಲಿ ಗಟ್ಟಿ ಸಾಹಿತ್ಯ ಚಳವಳಿ ಇರದಿರುವಾಗ, ಸುಮಾರು ಎರಡು ಮೂರು ದಶಕಗಳ ಕಾಲ ಜಯಂತ್‌ ತಮ್ಮ ಕಥೆಗಳ ಮೂಲಕ ಕನ್ನಡ ಸಾಹಿತ್ಯದ ಭಿನ್ನ ದನಿಯಾಗಿ ಹೊರಹೊಮ್ಮಿದರು. ಬಲವಂತದ ವಲಸೆ ಜಯಂತ್‌ ಕಥೆಗಳ ತಾತ್ವಿಕ ಕೇಂದ್ರ ಎಂದು ವಿವೇಕ್‌ ವಿಶ್ಲೇಷಿಸಿದರು.

ಜಯಂತ್‌ ತಮ್ಮ ಕಥೆಗಳಲ್ಲಿ ವಸ್ತುಗಳ ನಿರ್ವಹಣೆಯನ್ನು ಮಾಡುವ ಸೊಗಸು, ವಿವರಗಳನ್ನು ಕಟ್ಟಿಕೊಡುವ ರೀತಿ ಹಾಗೂ ವಿಶಿಷ್ಟತೆಯನ್ನು ‘ಮೋಗ್ರಿಯ ಸತ್ಸಂಗ’ ಕಥೆಯನ್ನು ಉದಾಹರಿಸಿ ಶ್ಲಾಘಿಸಿದರು. ಉತ್ತರ ಕನ್ನಡದ ಇತರ ಲೇಖಕರು ಜಯಂತ್‌ರನ್ನು ಅನುಕರಿಸಲು ಪ್ರಯತ್ನಿಸಿ ಸೋತಿದ್ದಾರೆ. ಆ ಶೈಲಿಯಲ್ಲಿ ಬರೆಯುವುದು ಅವರಿಗೊಬ್ಬರಿಗೇ ಸಾಧ್ಯ. ಜಯಂತ್‌ರ ಕಥೆಯ ವಿವರಗಳು ಕೇವಲ ತಂತ್ರ ಮಾತ್ರವಾಗಿರದೆ, ಕಥೆಗಾರನ ಜೀವನ ದೃಷ್ಟಿಯಾಗಿದೆ. ಆ ರೀತಿಯ ವಿವರಗಳನ್ನು ಚಿತ್ರಿಸುವುದು ಕನ್ನಡದ ಮತ್ತಾವ ಕಥೆಗಾರನಿಗೂ ಅಸಾಧ್ಯ ಎಂದು ವಿವೇಕ್‌ ಶಾನುಭಾಗ್‌ ಹೇಳಿದರು.

ಕಥೆಗಳು ಮಾತ್ರವಲ್ಲದೆ, ಜಯಂತ್‌ ಅನುವಾದಿಸಿರುವ ನಾಟಕಗಳಲ್ಲಿ ಕೂಡ ಬಲವಂತದ ವಲಸೆಯ ಪ್ರಭಾವವಿದೆ ಎಂದು ವಿವೇಕ್‌ ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡರು.

ದೇಸೀ ಕಾಟನ್‌ ಶರಟು, ಜೀನ್ಸ್‌ ಪ್ಯಾಂಟು ಹಾಕ್ಕೊಂಡಿದ್ದ ಜಯಂತ್‌ ಕಾಯ್ಕಿಣಿ ಮುಖದಲ್ಲಿ ಖುಷಿ. ಪ್ರಶಸ್ತಿ ವಿಜೇತ ಮೂರೂ ಕಥಾ ಸಂಕಲನಗಳ ಪ್ರಕಟಣೆಗೆ ನೆರವಾದ ವಿವೇಕ್‌ ಶಾನುಭೋಗ್‌ರಿಗೆ ಜಯಂತ್‌ ಕೃತಜ್ಞತೆ ಹೇಳಿದರು. ಲೇಖಕನ ತಲೆಯಿಂದ ಹೊರಬಿದ್ದ ಕತೆಗಳಿಗೆ ಸಮಾನ ಮನಸ್ಸಿನ ಸಂವೇದಿ ಸಿಕ್ಕಾಗ ಆಗುವ ರಿಲೀಫ್‌ ಅನ್ನು ಒದಗಿಸಿದ ಕ್ರೆಡಿಟ್‌ ವಿವೇಕ್‌ಗೆ ಸಲ್ಲಬೇಕೆಂದರು.

ತಮ್ಮ ಹೀರೋ ರಾಜೀವ್‌ ತಾರಾನಾಥ್‌ ತಮ್ಮ ಸರೋದ್‌ ಹಸ್ತದಿಂದ ಪುಸ್ತಕ ಕೊಂಡ ಕುರಿತು ಖುಷಿಪಟ್ಟ ಜಯಂತ್‌- ರಾಜೀವ್‌ರ ಸರೋದ್‌ ಹಸ್ತದ ಸ್ಪರ್ಶದಿಂದಾಗಿ ತಮ್ಮ ಕಥೆಗಳ ಸ್ವರಗಳಿಗೆ ಮತ್ತಷ್ಟು ವಿಸ್ತಾರ ಸಿಕ್ಕಂತಾಗಿದೆ ಎಂದು ಧನ್ಯತಾಭಾವ ಅನುಭವಿಸಿದರು. ಈ ಪ್ರತ್ಯೇಕ ಸಂಪುಟವನ್ನು ಅನಾವರಣಗೊಳಿಸುವ ಹೊಣೆ ಹೊತ್ತ ಅಂಕಿತಕ್ಕೂ ್ಫಜಯಂತ್‌ರ ಥ್ಯಾಂಕ್ಸ್‌ ಸಂದಿತು.

ರಾಜೀವ ತಾರಾನಾಥ್‌ ಮಾತಿಗೆ ಶುರುವಿಟ್ಟದ್ದೇ ಜಯಂತ್‌ ಅಗ್ದೀ ಚೂಟೀ ಬರಹಗಾರ ಎಂದು ಹೊಗಳುವ ಮೂಲಕ. ಜಯಂತ್‌ರ ‘ಬೊಗಸೆಯಲ್ಲಿ ಮಳೆ’ ಅಂಕಣ ಬರಹ ಸಂಗ್ರಹದ ಹೊರತಾಗಿ ಅವರ ಕಥೆಗಳನ್ನು ಹೆಚ್ಚು ಓದಿಲ್ಲ ಎಂದ ತಾರಾನಾಥ್‌- ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ಕಲಿಯುವ ಮೊದಲೇ ಪರಿಸರದಿಂದ ಹೀರಿಕೊಳ್ಳುವುದು ಮುಖ್ಯ. ಅದು ಬರಹದಲ್ಲಿ ದೇಸೀತನದ ಛಾಪನ್ನು ಮೂಡುತ್ತದೆ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ಪುಸ್ತಕದಂಗಡಿಗಳ ಪಾತ್ರ ದೊಡ್ಡದು. ಈಗೀಗ ಹಿಗ್ಗಿನ್‌ ಬಾಥಮ್ಸ್‌ನಂತಹ ಪುಸ್ತಕದಂಗಡಿಯಲ್ಲಿ ಸ್ಟೇಷನರಿಗಳೇ ಇರುತ್ತವೆ. ಗಂಭೀರ ಓದಿನತ್ತ ಕಡಿಮೆ ಒಲವು ಕಾಣಿಸುತ್ತಿದೆ ಎಂದು ಬೇಜಾರು ಮಾಡಿಕೊಂಡು, ಜಯಂತ್‌ರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದ ಗಂಭೀರ ಓದುಗರು ಮತ್ತು ಬರಹಗಾರರನ್ನು ಕಂಡು ಸಂತಸಗೊಂಡರು.

ಜಯಂತ್‌ರ ಅಂಕಿತಾ !

ಅಂಕಿತ ಪುಸ್ತಕದಂಗಡಿಯಾಳಗೆ ಸಾಸಿವೆ ಕಾಳು ನೆಲಕ್ಕೆ ಬೀಳದಷ್ಟು ಗಿಜಿ ಗಿಜಿ ಜನ. ಅಂಗಡಿಯ ಮೆಟ್ಟಿಲ ಮೇಲೆ, ಫೂಟ್‌ ಪಾತಿನ ಮೇಲೆ ಜನರು ಇಣುಕಿ ಇಣುಕಿ ಒಂದಿಷ್ಟಾದರೂ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವ ತವಕದಿಂದ ನಿಂತಿದ್ದರು. ಸೆಕೆಯನ್ನು ಸಹಿಸಿಕೊಂಡಿದ್ದರು. ಅಂಕಿತದ ಪ್ರಕಾಶ್‌ ಕಂಬತ್ತಳ್ಳಿ ಮತ್ತು ಪ್ರಭಾ ಬಂದವರಿಗೆ ಕಾಫಿ ಹಾಗೂ ಧಾರವಾಡ ಪೇಡೆ ನೀಡಿ ಅಕ್ಕರೆಯಿಂದ ವಿಚಾರಿಸಿಕೊಳ್ಳುತ್ತಿದ್ದರು.

ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ, ಚಿಂತಾಮಣಿ ಕೊಡ್ಲೆಕೆರೆ, ಕತೆಗಾರ ವಸುಧೇಂದ್ರ, ಬೇಳೂರು ಸುದರ್ಶನ, ಮಹಾಬಲ ಮೂರ್ತಿ ಕೊಡ್ಲೆಕೆರೆ, ಕವಿ ಜರಗನಹಳ್ಳಿ ಶಿವಶಂಕರ್‌, ಸಿನಿಮಾ ನಟ ದತ್ತಾತ್ರೇಯ, ಕನ್ನಡ ಸಾಹಿತ್ಯ.ಕಾಮ್‌ನ ಶೇಖರ್‌ ಪೂರ್ಣ, ಸಂಚಯ ಪತ್ರಿಕೆಯ ಪ್ರಹ್ಲಾದ್‌, ವಿಮರ್ಶಕ ಸಿ. ಎನ್‌. ರಾಮಚಂದ್ರನ್‌, ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್‌, ಕವಯಿತ್ರಿ ಪ್ರತಿಭಾ ನಂದಕುಮಾರ್‌, ಸಂಯುಕ್ತ ಕರ್ನಾಟಕದ ಹುಣಸವಾಡೀ ರಾಜನ್‌, ಶಿವಮೊಗ್ಗ ಸುಬ್ಬಣ್ಣ, ಜಿ. ಕೆ. ಗೋವಿಂದ ರಾವ್‌, ಕತೆಗಾರ ಗೋಪಾಲ ಕೃಷ್ಣ ಪೈ, ಅಶೋಕ ಹೆಗಡೆ, ನರಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಬಂದಿರುವ ಕ್ವಾಲಿಟಿ ಆಡಿಯನ್ಸ್‌ ನೋಡಿಯಾದರೂ ಜಯಂತ್‌ ಎಷ್ಟು ಜನಪ್ರಿಯ ಕತೆಗಾರ ಎಂದು ಗುರುತಿಸಿ ಎಂದು ಯಾರೋ ಜೋಕು ಹಾರಿಸುತ್ತಿದ್ದರು. ಅಂಕಿತದವರು ಕಂಜೂಸ್‌ತನ ತೋರಿಸದೇ ಯಾವುದಾದರೂ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಬೇಕಿತ್ತು ಎಂದು ಕಾರ್ಯಕ್ರಮದಲ್ಲಿ ಕೂರಲು ಸೀಟು ಸಿಕ್ಕದವರು ರೇಗಿಕೊಂಡರು.

ವಂದನಾರ್ಪಣೆ ಮುಗಿಯುತ್ತಲೇ ಜಯಂತ್‌ ಅಂಕಿತದ ಗಲ್ಲಾಪೆಟ್ಟಿಗೆಯಲ್ಲಿ ನಿಂತುಕೊಂಡರು. ಜಯಂತ್‌ರ ಸಹಿ ಸಹಿತ ಪುಸ್ತಕಕ್ಕೆ ಬೇಡಿಕೆ ದೊಡ್ಡದಿತ್ತು .

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more