• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹನಿಹನಿ ಮಳೆ ಹೊಯ್ದು ಹೂವಂಥ ಮನ ತೊಯ್ದು

By Staff
|
 • ವಿಶಾಖ ಎನ್‌.

feedback@thatskannada.com

The Rain memoriesಕಾಡು ಮಳೆ ಬರಿಸುತ್ತೆ ಅಂತಾರಲ್ಲ , ಹೇಗೆ ?

ಮಳೆ ನೀರು ಆವಿಯಾಗಿ ಮೋಡವೇ ಯಾಕಾಗುತ್ತೆ ?

ಹಿಮಾಲಯ ಪರ್ವತದ ಮೇಲೆ ನಿಂತುಕೊಂಡು ಬೆಂಕಿ ಕಾಸಿದರೆ ಹತ್ತಿರದ ಮೋಡ ಕರಗುತ್ತ ?

ಕಾಮನ ಬಿಲ್ಲಿಗೇಕೆ ಏಳೇ ಬಣ್ಣ ?

ಮಳೆ ಬಂದಾಗ ಕಪ್ಪೆ ಯಾಕೆ ವಟಗುಟ್ಟುತ್ತೆ ?

ಮೋಡದ ಮೇಲೆ ಬಾಂಬ್‌ ಎಸೆದು, ಮಳೆ ಬರಿಸಬಹುದೆ ?

ಕ್ಲೌಡ್‌ ಸೀಡಿಂಗ್‌ ಹೇಗೆ ಮಾಡ್ತಾರೆ ಗೊತ್ತ ?

ಕಬ್ಬಿಣ ನೀರಲ್ಲಿ ಮುಳುಗುತ್ತೆ, ಆದರೆ ಕಬ್ಬಿಣದ ಹಡಗು ಸಮುದ್ರದ ಮೇಲೆ ಯಾಕೆ ತೇಲುತ್ತೆ ?...

Memories to Cherishಬಂದಂತೆ ಮಾಡಿ, ಮಣ್ಣಿನಿಂದ ಪುಳಕಗೊಳ್ಳುವಂಥ ವಾಸನೆಯೆಬ್ಬಿಸಿದ ಸೋಮಾರಿ ಮಳೆಯ ನೋಡುತ್ತಲೇ ಪುಟ್ಟಿ ತ್ರಾಸೇ ಆಗದವಳಂತೆ ಪ್ರಶ್ನೆಗಳನ್ನು ಎಸೆಯುತ್ತಿದ್ದಳು. ಯಾವುದಕ್ಕೂ ಸಮರ್ಥವಾಗಿ ಉತ್ತರ ಕೊಡಲಾಗದೆ ಮಾತು ಬದಲಿಸುವ ಬುದ್ಧಿವಂತಿಕೆಯೂ ಪುಟ್ಟಿಯ ಮುಂದೆ ನಡೆಯಲಿಲ್ಲ.

ನಾವು ಚಿಕ್ಕ ವಯಸ್ಸಿನಲ್ಲಿ ಬಿಟ್ಟಂತೆ ಪುಟ್ಟಿ ಮಳೆ ನೀರಿನಲ್ಲಿ ಕಾಗದದ ದೋಣಿ ಬಿಡೋದಿಲ್ಲ. ಪುಸ್ತಕ ಹರಿಯಬಾರದಪ್ಪ ಅಂತ ಗಂಭೀರವಾಗಿ ಕೂರುವ ಅವಳಿಗೆ, ಮಳೆ ಕಚಗುಳಿ ಇಡುವುದೂ ಅಷ್ಟಕ್ಕಷ್ಟೆ . ನಮ್ಮೂರ ದೊಡ್ಡ ಕೆರೆ ಹೊಟ್ಟೆ ತುಂಬ ತುಂಬಿಕೊಂಡಿದ್ದನ್ನ ಅವಳು ನೋಡೇ ಇಲ್ಲ. ಕೆಸರಲ್ಲಿ ನಡೆಯೋಕೆ ಅವರಮ್ಮ ಬಿಡೋದಿಲ್ಲ. ಅದಕ್ಕೇ ಅವಳಿಗೆ ನಮ್ಮ ಹಳೆಯ ದಿನಗಳು ಅಂದರೆ ಕೇಳೋಕೆ ಇಷ್ಟ. ನೀನೂ ಹಾಗೆ ಮಾಡು ಅಂದರೆ ಮಾತ್ರ ಕಷ್ಟಕಷ್ಟ.

 • ನಾವು ಮಳೆಯಲ್ಲೂ ಕ್ರಿಕೆಟ್‌ ಆಡುತ್ತಿದ್ದೆವು. ಆಗ ನಾನು ಕೆಟ್ಟ ಫೀಲ್ಡರ್‌ ಆಗಿದ್ದೆ. ಕೆಸರು ಮುದ್ದೆಯ ಮಳೆಯಲ್ಲೂ ಆಟ ಮುಂದುವರೆಯಿತು. ನಾಗರಾಜನ ಭರ್ಜರಿ ಹೊಡೆತಕ್ಕೆ ಸಿಕ್ಕಿದ ಚೆಂಡು ಕೆಸರಲ್ಲಿ ಜರ್ರನೆ ಜಾರಿದ ನನ್ನ ಕೈಯಲ್ಲಿ ತಂತಾನೇ ಬಂದು ಕೂತಿತು. ಅದು ನನ್ನ ಜೀವಮಾನದ ಬೆಸ್ಟ್‌ ಕ್ಯಾಚ್‌. ಅವತ್ತಿನ ಮಟ್ಟಿಗೆ ನಾನೇ ಹೀರೋ. ಹಾಗೆ ಮಾಡಿದ ಮಳೆರಾಯನಿಗೆ ನಾನು ಇವತ್ತಿಗೂ ಆಭಾರಿ !
 • ಒಂದು ರಾತ್ರಿಯಿಡೀ ಮಳೆ ಧೋ ಅಂತ ಸುರೀತಾನೇ ಇತ್ತು. ಹೊರಗೆ ಭಾರೀ ಮಿಂಚು- ಗುಡುಗು. ನಿದ್ರೆಯಲ್ಲೂ ಆಗಾಗ ಬೆಚ್ಚುತ್ತಿದ್ದೆ. ಮನೆಯ ವೆಂಟಿಲೇಟರಿನಿಂದ ಹನಿಗಳು ಸಿಂಚನ ಮಾಡಿ, ಮಳೆಯ ಅಬ್ಬರದ ಪ್ರಮಾಣವನ್ನು ಮನದಟ್ಟು ಮಾಡಿಸುತ್ತಿದ್ದವು. ಆಗ ಮಂಚ ಇರಲಿಲ್ಲ. ನೆಲ ಕೊರೆಯುತ್ತಿತ್ತು. ಹೊದಿಕೆ ಹಿಮಚಾದರವೋ ಎಂಬಂತಾಗಿತ್ತು. ನಿದ್ರೆ ಯಾವಾಗ ಬಂತೋ ಗೊತ್ತಿಲ್ಲ. ಬೆಳಗ್ಗೆ ಎದ್ದು ನೋಡಿದರೆ, ಮನೆ ಮುಂದಿನ ಚರಂಡಿ ಭಾರೀ ಕ್ಲೀನು. ನಿತ್ಯಕರ್ಮಕ್ಕೆ ಕೆರೆ ಬಯಲಿಗೆ ಹೋಗುವ ಅಭ್ಯಾಸ ಇದ್ದ ನನಗೆ ಹಾಗೂ ಗೆಳೆಯರಿಗೆ ಅವತ್ತು ನೀರಿನಲ್ಲಿ ಅಲೆಯ ಉಂಗುರ. ಕೆರೆ ಒಂದೇ ರಾತ್ರಿಯ ಮಳೆಯಿಂದ ಭರ್ತಿ ತುಂಬಿ ನಗುತ್ತಿತ್ತು. ಈಗ ಇಡೀ ರಾತ್ರಿ ಯಾಕೋ ಮಳೆ ಬರೋದೇ ಇಲ್ಲ.
 • ನಾವು ಹೊಸ ಮನೆ ಕಟ್ಟಿದ ನಂತರದ ಮೊದಲ ಮಳೆ. ನಮ್ಮ ಮನೆ ತಗ್ಗಲ್ಲಿತ್ತು. ಡ್ರೆೃನೇಜಿನ ಪರಿಕಲ್ಪನೆಯೇ ಆಗ ನಮ್ಮೂರಲ್ಲಿ ಇರಲಿಲ್ಲವಾದ್ದರಿಂದ ಹಾಗೂ ತಗ್ಗಿಗೆ ನಮ್ಮ ಮನೆ ಅಡ್ಡವಾದ್ದರಿಂದ ಪಕ್ಕದ ಮನೆಯಾಳಕ್ಕೆ ರಾತ್ರೋ ರಾತ್ರಿ ನೀರು ನುಗ್ಗಿತು. ಅವರ ಮನೆಯ ಅಕ್ಕಿ ಚೀಲಗಳು ನೆಂದು ತೊಪ್ಪೆಯಾಗಿದ್ದವು. ಮಂಚದ ಮೇಲೆ ಮಲಗಿದ್ದ ಸುಮಿತ್ರ ಆ್ಯಂಟಿ ನೀರು ಕುಡಿಯೋಕೆ ಅಂತ ನೆಲದ ಮೇಲೆ ಕಾಲಿಟ್ಟರೆ ಮೊಳದುದ್ದ ನೀರು. ನೀರು ಕುಡಿಯುವುದನ್ನೂ ಮರೆತು, ನೇರವಾಗಿ ಗಂಡನನ್ನೂ ಕರೆದುಕೊಂಡು ನಮ್ಮ ಮನೆಗೆ ಬಂದು, ‘ನೀವು ಮನೆ ಕಟ್ಟಿದಿರಿ. ಅದಕ್ಕೇ ನಮ್ಮ ಮನೆಗೆ ನೀರು ನುಗ್ಗಿತು’ ಅಂತ ದಬಾಯಿಸಿದರು. ನನಗೆ ಅವರ ಮನೆಯಲ್ಲಿನ ನದಿ ಸ್ವರೂಪ ನೋಡುವ ಆಸೆ. ಓಡಿಹೋಗಿ, ಅವರ ಮನೆಯ ಮಕ್ಕಳೊಡನೆ ಅದೇ ನೀರಿನಲ್ಲಿ ಕಾಚದಲ್ಲೇ ನಿಂತು ಆಡಿದಷ್ಟೂ ಆಟ. ಹಾಗೆಯೇ ಮನೆಯ ಸಾಮಾನು ಸರಂಜಾಮುಗಳನ್ನು ನೀರಿನಿಂದ ಕಾಪಾಡುವ ಕೆಲಸವೂ ಆಯಿತು. ಮಾರನೆಯ ದಿನ ಅದೇ ದಂಪತಿಗಳು ಬಂದು, ‘ಆತುರದಲ್ಲಿ ಒರಟಾಗಿ ಮಾತಾಡಿದೆವು. ನಿಮ್ಮ ಮಗನಿಂದ ಬಹಳ ಸಹಾಯವಾಯಿತು’ ಅಂದಾಗ ಅಪ್ಪನನ್ನು ‘ನೋಡಿದ್ರಾ ಹೆಂಗೆ’ ಎಂಬಂತೆ ನೋಡಿ, ಇನ್ನೊಮ್ಮೆ ಅವರ ಮನೆಗೆ ಆಡಲು ಹೋಗಿದ್ದೆ. ಅದಾದ ಕೆಲವೇ ದಿನಗಳಲ್ಲಿ ಪಕ್ಕದ ಮನೆಯವರು ಮೂವತ್ತು ಟ್ರ್ಯಾಕ್ಟರ್‌ ಲೋಡು ಮಣ್ಣು ಹೊಡೆಸಿ ತಮ್ಮ ಮನೆ ಮುಂದಿನ ಅಂಗಳವನ್ನು ತೀರಾ ಎತ್ತರ ಮಾಡಿಬಿಟ್ಟರು. ನಮ್ಮ ಕಾಂಪೌಂಡಿನ ಪಕ್ಕದಲ್ಲೇ ಮಜಾ ಕೊಡುತ್ತಿದ್ದ ಕಪ್ಪೆ ಆಟಗಳನ್ನು ನೋಡುವ ಭಾಗ್ಯ ರದ್ದಾಯಿತು.
 • ಈಗ ಹೊಳೆಯಲ್ಲಿ ಹರಿವ ಗಾಡಿಯದೇ (ಎತ್ತಿನ ಗಾಡಿಯಲ್ಲ, ನಾವು ಓಡಿಸುವ ಮೋಟಾರು ಗಾಡಿ) ಒಂದು ಮಜಾ. ಬರಗಾಲದಲ್ಲೂ ಇದ್ದಕ್ಕಿದ್ದ ಹಾಗೆ ಧೋ ಎಂದು ಸುರಿಯುವ ಮಳೆಯಲ್ಲಿ ತೋಯುತ್ತಾ, ನಾನು ಎಷ್ಟು ಚೆನ್ನಾಗಿ ಸ್ಕಿಡ್‌ ಮಾಡದೆ ಗಾಡಿ ಓಡಿಸುತ್ತೇನೆ ಎಂಬ ಜಂಭ ನನಗೆ. ಆ ಜಂಭದಲ್ಲಿ ಬೀಗುತ್ತಾ ಸಾಗುವಾಗ ಹೆಲ್ಮೆಟ್ಟಿನೊಳಗೆ ಬಚ್ಚಿಟ್ಟುಕೊಂಡ ಮನಸ್ಸಿನಲ್ಲಿ ಬಾಲ್ಯದಲ್ಲಿ ಕೆಸರಲ್ಲಿ ಜಾರುವ ಆಟ ಹಾಗೂ ತುಂಬಿದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಸತ್ತ ಗೆಳೆಯ ರಾಜನ ನೆನಪು. ಹಾಗಾಗುವ ಹೊತ್ತಿಗೇ ಅಕ್ಕ- ಪಕ್ಕದಲ್ಲಿ ಗಾಡಿ ಜಾರಿ ಬಿದ್ದು, ಮಳೆಗೇ ಶಾಪ ಹಾಕುವ ಮಂದಿ !
 • ಮೊನ್ನೆ ಮಳೆಯಿಂದ ತಪ್ಪಿಸಿಕೊಂಡು ಬಸ್‌ ಶಲ್ಟರ್‌ ಅಡಿಯಲ್ಲಿ ನಿಂತಿದ್ದಾಗ ಗೆಳೆಯ ತನ್ನ ಒಂದು ಅನುಭವ ಹೇಳಿಕೊಂಡ-

‘ಅವತ್ತು ಗಾಡೀಲಿ ಬರ್ತಿದ್ದೆ ಮಗ. ಒಂದು ಹುಡುಗಿ ಸ್ಕೂಟಿ ಸರ್ರನೆ ಜಾರಿತು. ಹುಡುಗಿ ಅಲ್ವಾ.. ಮನಸ್ಸು ತಡೀಲಿಲ್ಲ. ನನ್ನ ಗಾಡಿ ನಿಲ್ಲಿಸಿ ಏನಾಯ್ತು ಅಂತ ವಿಚಾರಿಸಿದೆ. ಅಕ್ಕ- ಪಕ್ಕದಲ್ಲಿ ಯಾರೂ ಇರಲಿಲ್ಲ. ನಾನೇ ಹೀರೋ ಅಂದುಕೊಂಡೆ. ಜಾರಿ ಬಿದ್ದರೂ, ಅವಳ ಮುಖ ನೋಡ್ಬೇಕಿತ್ತು ನೀನು... ನೋವಿನಲ್ಲೂ ಕೆನ್ನೆ ಆ್ಯಪಲ್ಲು . ! ಅವಳ ಭುಜ ಹಿಡಿದು ಎತ್ತಿ ನಿಲ್ಲಿಸಿದೆ. ನನಗೇನೂ ಆಗಿಲ್ಲ ಗಾಡಿ ಎತ್ತಿ ಪ್ಲೀಸ್‌ ಅಂತ ಗೋಳಿಟ್ಟಳು. ಗಾಡಿಯನ್ನು ಎತ್ತಿ ನಿಲ್ಲಿಸಿದೆ. ಮಂಡಿ ತರಚಿದ್ದ ಆ ಸುಮ ಬಾಲೆಯ ಗಾಡಿಯ ಒತ್ತುಗುಂಡಿ ಸ್ಟಾರ್ಟ್‌ ಮಾಡದಂತೆ ಕೆಟ್ಟು ಹೋಗಿತ್ತು. ಕಿಕ್‌ ಮಾಡಿಕೊಡ್ತೀರಾ ಪ್ಲೀಸ್‌ ಅಂತ ಅಲವತ್ತುಕೊಂಡಳು. ಮಳೆ ನೀರಲ್ಲೂ ಬೆವರು ಹರಿಯುವತನಕ ಕಿಕ್‌ ಮಾಡಿ ಮಾಡಿ ಸುಸ್ತಾದೆ. ಕೊನೆಗೆ ಮೂರು ಕಿಲೋಮೀಟರು ದೂರದ ಗ್ಯಾರೇಜ್‌ವರೆಗೆ ತಳ್ಳಿಕೊಂಡು ಹೋಗಬೇಕೆಂಬ ರಿಕ್ವೆಸ್ಟನ್ನು ಅವಳ ಮುದ್ದುಮುಖ ಒಪ್ಪಿಕೊಳ್ಳುವಂತೆ ಮಾಡಿತು. ನನ್ನ ಗಾಡಿಯನ್ನು ಜನ್ಮದಲ್ಲೇ ಅಷ್ಟು ದೂರ ತಳ್ಳಿರಲಿಲ್ಲ. ಗ್ಯಾರೇಜಿಗೆ ಗಾಡಿ ತಳ್ಳುವಷ್ಟರಲ್ಲಿ ನನ್ನ ನಟ್ಟು- ಬೋಲ್ಟುಗಳೇ ಲೂಸಾಗಿದ್ದವು. ಅವಳ ಮುದ್ದುಮುಖಕ್ಕೆ ಅಷ್ಟೆಲ್ಲ ಮಾಡಿದ್ದಕ್ಕೆ ಸಿಕ್ಕಿದ್ದು ಬರೀ ಒಂದು ದೊಡ್ಡ ಥ್ಯಾಂಕ್ಸ್‌. ಹ್ಯಾಪುಮೋರೆ ಹಾಕಿಕೊಂಡು ನನ್ನ ಗಾಡಿ ಬಿಟ್ಟ ಜಾಗಕ್ಕೆ ಬಂದು ನೋಡಿದರೆ, ಗಾಡಿ ಮಾಯ. ಟೈಗರ್‌ ಹೊತ್ತುಕೊಂಡು ಹೋಯಿತು ಅಂತ ಎದುರಿನ ನನ್ನ ಖಾಯಂ ಸಿಗರೇಟು ಅಂಗಡಿಯವ ಹೇಳಿದಾಗ ನನ್ನ ಪಾಡು ನಾಯಿಪಾಡು!’

 • ನಮ್ಮಂಥ ಬಯಲುಸೀಮೆಯ ಹುಡುಗರಿಗೆ ಮಲೆನಾಡಿನ ಮಳೆ ಅನುಭವಿಸುವುದು ಒಂದು ದೊಡ್ಡ ಕನಸು. ಯಾರ್ಯಾರದೋ ಬಾಯಿಂದ ಕೇಳುವ ರಚ್ಚೆ ಮಳೆಯನ್ನ ಮುಟ್ಟಿ ಬರೋಣ ಅಂತ ಮಳೆಗಾಲದಲ್ಲೇ ದೊಡ್ಡ ಟೂರ್‌ ಹೋಗಿದ್ದೆವು. ಆವಾಗ ತಾನೆ ಬಂದಿದ್ದ ‘ನಮ್ಮೂರ ಮಂದಾರ ಹೂವೆ’ ಸಿನಿಮಾದಲ್ಲಿ ಚೆನ್ನಾಗಿ ಕಂಡಿದ್ದ ಯಾಣ ಕೂಡ ಪ್ರವಾಸದ ಪಟ್ಟಿಯಲ್ಲಿತ್ತು. ನಾವು ಹೋಗುವಷ್ಟರಲ್ಲಿ ಅಲ್ಲಿ ಸಿನಿಮಾ ಪ್ರಭಾವದಿಂದ ದಾರಿಯನ್ನೂ ಮಾಡಿಬಿಟ್ಟಿದ್ದರು (ಮುಂಚೆ ಯಾಣ ನೋಡೋಕೆ ಕಡ್ಡಾಯವಾಗಿ ನಾಲ್ಕು ಕಿಲೋಮೀಟರು ನಡೆಯಬೇಕಿತ್ತು). ಅಂಥಾದರಲ್ಲೂ ‘ನಾವು ನಡೆದೇ ಹೋಗಬೇಕು. ಜಿಗಣೆ ನಮ್ಮ ಕಾಲಿಗೆ ಅಂಟಿಕೊಳ್ಳಬೇಕು. ಅವನ್ನು ಸಿಗರೇಟು ಕೆಂಡದಿಂದ ಬಿಡಿಸುವಂತೆ ಮಾಡಬೇಕು’ ಅನ್ನೋದು ಗೆಳೆಯ ಸುಧೀರನ ಹಟ. ಸರಿ, ಕಾಲುನಡಿಗೆಯಲ್ಲೇ ಸಾಗಿದೆವು. ಯಾವಾಗಲೂ ಸಿಗರೇಟು ಕೈಲೇ ಇರಬೇಕು ಅಂತ ಸುಧೀರ ಬರೋಬ್ಬರಿ ಏಳು ಸಿಗರೇಟನ್ನು ನಿಧಾನವಾಗಿ ದಾರಿಯುದ್ದಕ್ಕೂ ಸೇದಿದ. ಪಾಪ, ಅವನಾಸೆಯ ಜಿಗಣೆ ನಮ್ಮ ಯಾರೊಬ್ಬರಿಗೂ ಅಂಟಲೇ ಇಲ್ಲ. ಕೊನೆಗೆ ಯಾಣದ ಒಬ್ಬ ಸ್ಥಳೀಕರು ಇವನ ಮೊರೆ ಕೇಳಿ ಬಾಟಲಿಯಾಂದರಲ್ಲಿ ಇಟ್ಟುಕೊಂಡಿದ್ದ ಜಿಗಣೆಯನ್ನು ಇವನ ಕಾಲ ಮೇಲೆ ಬಿಟ್ಟರು. ಆಗ ಜೇಬು ಮುಟ್ಟಿಕೊಂಡ ಸುಧೀರ ಚೀರತೊಡಗಿದ... ಸಿಗರೇಟು ಖಾಲಿಯಾಗಿತ್ತು. ನಮಗೆಲ್ಲ ಫ್ರೀ ಎಂಟರ್‌ಟೇನ್‌ಮೆಂಟ್‌ !
 • ನಮ್ಮ ಮೇಷ್ಟ್ರು ಆಗ ತಾನೆ ಶುರುವಾಗಿದ್ದ ಮುಂಗಾರು ಜೋರಾಗಲಿ ಅಂತ ಬಯಸಿ ಮನೆಯ ಟೇಪ್‌ ರೆಕಾರ್ಡರಿನಲ್ಲಿ ಮೇಘ ಮಲ್ಹಾರ ರಾಗದ ಆಲಾಪನೆಯ ಕ್ಯಾಸೆಟ್‌ ಹಾಕಿದ ತಕ್ಷಣ ಮಳೆ ಮಟಾಮಾಯ.
 • - ಹೀಗೆ ಮಳೆ ಕಟ್ಟಿಕೊಟ್ಟಿರುವ ತೇವದ ಅನುಭವಗಳು ನೆನೆದಷ್ಟೂ ಎದೆಯನ್ನು ಮತ್ತೂ ನೆನೆಸುತ್ತವೆ. ನಾನು, ನನ್ನ ಮನೆ, ನನ್ನ ಕೆಲಸ, ನನ್ನ ಓಡಾಟ... ಇಷ್ಟಕ್ಕೇ ಯೋಚಿಸುತ್ತಾ ತಮ್ಮನ್ನು ತಾವೇ ಕರ್ಮಜೀವಿಗಳೆಂದುಕೊಳ್ಳುವ ಮಂದಿ ಇಂಟರ್ನೆಟ್ಟಿನಲ್ಲಿ ಬರದ ತೀವ್ರತೆಯ ಸುದ್ದಿ ಓದುತ್ತಲೇ ಹೊರಗಡೆ ಇನ್ನೂ ಬರಲೋ ಬೇಡವೋ ಅನ್ನುವ ಮಳೆಯನ್ನು ಯದ್ವಾ ತದ್ವಾ ಬಯ್ಯುತ್ತಾರೆ. ತಮ್ಮ ಗಾಡಿ ನೆನೆಯುತ್ತದೆ, ನೆಗಡಿ ಬರುತ್ತದೆ, ನೆಗಡಿ ನ್ಯುಮೋನಿಯಾಗೆ ತಿರುಗುತ್ತದೆ. ಡೆಂಗ್ಯೂ ಭೀತಿ ಬೇರೆ. ಈಗ ನೆಂದು ಮನೆಗೆ ಹೋದರೆ ನಾಳೆ ಆಫೀಸಿಗೆ ಬರುವುದು ಹೇಗೆ. ಅವಳಿಗೆ 6 ಗಂಟೆಗೆ ಮೆಜೆಸ್ಟಿಕ್ಕಲ್ಲಿ ಕಾಯುತ್ತಿರು ಅಂತ ಹೇಳಿದ್ದೆ, ಹಾಳು ಮಳೆ ಎಲ್ಲ ಹಾಳು ಮಾಡಿತು... ಹೀಗೆ ಒದರುತ್ತಿರುವವರ ನಡುವೆಯೇ ಇರುವ ಪುಟ್ಟಿ ಮೊನ್ನೆ ಮಳೆಯಲ್ಲಿ ಕುಣಿದಾಡುತ್ತಿದ್ದ ಕೂಲಿ ಹೈಕಳ ಕಂಡು ‘ನನಗೂ ಕುಣೀಬೇಕು ಅನ್ನಿಸ್ತಿದೆ’ ಅಂತ ಸುಖಾ ಸುಮ್ಮನೆ ಹೇಳಿದಾಗ ಕೊಂಚ ಸಮಾಧಾನವಾಯಿತು.

  ಮುಖಪುಟ / ಮೇಘ ಮಲ್ಹಾರ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more