• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಂತುರು...... ಇದು ನೀರ ಹಾಡು!

By Staff
|

ಅವತ್ತು ರಾತ್ರಿ ನಾವೆಲ್ಲ ಕುಳಿತಿದ್ದುದು ಹಳೆಯ ಕಾಲದ ದೊಡ್ದ ಅಡಿಗೆ ಮನೆಯಲ್ಲಿ. ಅಮ್ಮ ನಮ್ಮೆಲ್ಲರನ್ನು ತನ್ನ ಸುತ್ತಲೂ ಕೂಡಿಸಿಕೊಂಡು ತನ್ನ ಇಂಪಾದ ಕಂಠದಲ್ಲಿ ಹಾಡು ಹೇಳಿಕೊಡುತಿದ್ದಳು. ಅವತ್ತು ನಾವು ಕಲಿಯುತ್ತಿದ್ದ ಹೊಸ ಹಾಡು ಅದು- ‘ಪರಮಾತ್ಮ ಬಾ ಜಗಕೆ, ಸಮಯವೀ ಕಾರ್ಯಕಿದು, ಕಾವುತಲೆ ಮನ್ನಿಸುವುದು ನೀನು’. ಅವತ್ತು ಅಮ್ಮ ಈ ಹಾಡು ಕಲಿಸುತ್ತಿದ್ದಂತೆಯೇ ಹೊರಗೆ ಮಿಂಚು, ಗುಡುಗು, ಸಿಡಿಲುಗಳ ಜೊತೆಯಲ್ಲೇ ಜಡಿಮಳೆ ಸುರಿಯತೊಡಗಿತು. ಫಕ್ಕನೆ ಕರೆಂಟು ಕೂಡ ಹೋಗಿಬಿಟ್ಟಿತು. ಹಠಾತ್ತನೆ ಆವರಿಸಿದ ಗಾಢ ಕತ್ತಲಿಗೆ, ಭಯಂಕರವಾಗಿದ್ದ ಆ ಬಿರುಮಳೆಯ ಅಬ್ಬರಕ್ಕೆ ತುಂಬಾ ಚಿಕ್ಕವರಾಗಿದ್ದ ನಾವೆಲ್ಲ ಹೆದರಿ ಚೀರಲಾರಂಭಿಸಿದೆವು.

ಅಮ್ಮ ನಮ್ಮೆಲ್ಲರನ್ನು ಸಂತೈಸುತ್ತಾ ಕಿಟಕಿಯ ಬಳಿ ಕರೆದುಕೊಂಡು ಹೋಗಿ ದೀಪ ಬೆಳಗುತ್ತಾ ಹೇಳಿದಳು. ‘ನಾವು ಪರಮಾತ್ಮ ಬಾ ಜಗಕೆ’ ಎಂದು ಕರೆದ ಕೂಡಲೇ ಅವನು ಕೇಳಿಸಿಕೊಂಡು ಕೂಡಲೇ ಮಳೆಯ ರೂಪದಲ್ಲಿ ಹೇಗೆ ಮೇಲಿನಿಂದ ನಮಗಾಗಿ ಇಳಿದು ಬರುತ್ತಿದ್ದಾನೆ, ನೋಡಿ.’ ಕೂಡಲೇ ಅಳು ನಿಲ್ಲಿಸಿ ನಾವೆಲ್ಲ ನೆಲಮುಗಿಲುಗಳನ್ನು The song of Rain Dropsಬೆಸೆಯುವಂತೆ ಸುರಿಯುತ್ತಿದ್ದ ಆ ವರ್ಷಧಾರೆಯನ್ನು ಬೆಕ್ಕಸ ಬೆರಗಾಗಿ ನೋಡತೊಡಗಿದೆವು. ಎದೆ ಢವಢವಗುಟ್ಟುವ ಆ ನೀರವ ರಾತ್ರಿಯಲ್ಲಿ ಮಳೆಗೆ ಅಂಜಿಕೊಳ್ಳುವ ಬದಲು ನಾನು ಅದನ್ನು ಪ್ರೀತಿಸಲು ಕಲಿತಿದ್ದು ಹೀಗೆ. ದೀಪದ ಬೆಳಕಿನಲ್ಲಿ ಹೊಳೆಯುತ್ತಿದ್ದ ಅಮ್ಮನ ನಗುಮುಖ ಕಂಡ ನಮಗೆ ಸಮಾಧಾನದ ಜೊತೆಗೆ ಅಭಯ ಪ್ರಧಾನ. ಅವತ್ತು ಅಮ್ಮ ಯಾವುದೇ ಉದ್ದೇಶವಿಲ್ಲದೆ ಅಳುತ್ತಿದ್ದ ನಮ್ಮನ್ನು ರಮಿಸಲೆಂದು ಮಾತ್ರ ಹೇಳಿದ ಆ ಮಾತು ನನ್ನ ಹಸಿಗೋಡೆಯಂತಹ ಎಳೆಯ ಹೃದಯದಲ್ಲಿ ಅದು ಹೇಗೆ ಅಚ್ಚಾಗಿದೆ ಎಂದರೆ, ಮಳೆ ಬರುವುದು ಋತುಮಾನಕ್ಕೆ ಅನುಗುಣವಾಗಿ ನಡೆಯುವ ಸಾಧಾರಣವಾದ ಒಂದು ಭೌತಿಕ ಪ್ರಕ್ರಿಯೆ ಮಾತ್ರ ಎಂದು ನನಗೇಕೋ ಇವತ್ತಿಗೂ ಅನ್ನಿಸುವುದೇ ಇಲ್ಲ.

ನೀಲಿಕೊಡೆಯಂತೆ ನಿರಾಳವಾಗಿ ಅರಳಿಕೊಂಡಿದ್ದ ಆಕಾಶದಡಿಯಲ್ಲಿ ಇದ್ದಕ್ಕಿದ್ದಂತೆ ಅದೆಲ್ಲಿಲ್ಲಿಂದಲೋ ಆಡಿ ಅಲೆದು ಬಂದ ತುಂಟ ಕಂದನಂತಹ ಪುಂಡು ಮೋಡಗಳು ಗದ್ದಲವೆಬ್ಬಿಸುತ್ತಾ ಜಮೆಯಾಗುವುದು, ತಾನೇ ಹಿರಿಯನೆಂದು ಮೆರೆಯುತ್ತಿದ್ದ ಸೂರ್ಯ ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡುವುದು, ನೀರಬಿಂದುವಿನೊಳಗೆ ಬಿಸಿಲ ಕಿರಣ ಹಾದು ಹೋದ ನೆಪ ಮಾತ್ರಕ್ಕೆ ಕಾಮನಬಿಲ್ಲಿನ ಕಮಾನು ಕಟ್ಟುವುದು, ತುಂತುರು ತುಂತುರಾಗಿ ಮುತ್ತಿನ ಮಣಿಗಳಂತೆ ಶುರುವಿಟ್ಟುಕೊಳ್ಳುವ ಹನಿಗಳು ಬರುಬರುತ್ತಾ ಯಾರೋ ಮೇಲೆ ಕುಳಿತು ಮುಗಿಲ ಮಾಡ ತೂತು ಕೊರೆದು ನೀರನೆರೆಯುತ್ತಿರುವಂತೆ ಧಾರೆ ಧಾರೆಯಾಗಿ ಮಳೆಯಾಗಿ ಸುರಿಯುವುದು.....ಇವೆಲ್ಲಾ ಅತಿ ಸಹಜವಾದ ಭೌಗೋಳಿಕ ಕಾರಣಗಳಿಂದ ಮಾತ್ರ ಸಂಭವಿಸುತ್ತಿದೆ ಎಂದು ನಾನೇಕೋ ಇಂದಿಗೂ ನಂಬಲಾರೆ.

ಇದಕ್ಕೆ ಸರಿಯಾಗಿ ಮಳೆಯ ಕುರಿತಾದ ನನ್ನ ಈ ನಂಬಿಕೆ ಅಥವಾ ಮೂಢನಂಬಿಕೆಗೆ ತಾಳೆಯಾಗುವಂತೆ ನಾನು ಚಿಕ್ಕಂದಿನಲ್ಲಿ ಕಂಠಪಾಠ ಮಾಡಿದ ಸಾಲುಗಳಿವು. ಮಳೆ ಬೀಳುವುದು ಹೇಗೆ ? ಎಂಬ ಪ್ರಶ್ನೆಗೆ ಇದಕ್ಕಿಂತ ಸರಿಯಾದ ಬೇರೆ ಉತ್ತರ ಇದೆಯಾ!?

‘ಮೋಡಗಳ ಜಡೆ ಬಿಚ್ಚಿ ಮೈ ತೊಳೆದುಕೊಳುತಿಹಳು

ಬಯಲ ಭಾಮಿನಿ ಜಗದ ಮಣೆಯ ಮೇಲೆ’

The rain and the rain of Memories...ಈ ಮೈಯಿಗೂ ಮನಸ್ಸಿಗೂ ಇರುವ ಅಂಟಿನಂತೆಯೇ, ಆ ಮಳೆಗೂ ಈ ಮನಸ್ಸಿಗೂ ಅದಾವ ನಂಟಿದೆಯೋ ಅರಿಯೆ, ಅಲ್ಲಿ ಹೊರಗೆ ದಬದಬ ಮಳೆ ಸುರಿಯುತ್ತಿದರೆ ಇಲ್ಲಿ ನೆನಪುಗಳ ಜೋಗ ಜಲಪಾತ. ಮತ್ತೆ ಮಳೆ ಹೊಯ್ಯುವುದಕ್ಕೂ ಎಲ್ಲ ನೆನಪಾಗುವುದಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯಾ? ಎಂದೋ ಮರೆತು ಮೂಲೆಗಟ್ಟಿದ ಹಳೆಯ ನೋವುಗಳೆಲ್ಲಾ ಹೊಸ ಜೀವ ದೊರಕಿಸಿಕೊಂಡು ಭೂತ ಕಾಲದ ಭ್ರೂಣ ಗೂಢಗಳಾಗಿ ಕಾಡತೊಡಗುವುದು ಮೋಡ ಕವಿದು ಮಂಕಾದ ಇಂತಹ ದಿನಗಳಲ್ಲೇ. ಬಿಸಿಲು ದಿನಗಳು ಹುರುಪಿಗೆ, ಉಲ್ಲಾಸಕ್ಕೆ ತಾನೇ ತಾನಾಗಿ ತೆರೆದುಕೊಂಡರೆ ತುಸು ವಿಷಾದ ಬೆರೆತ ಮೌನಗೀತಕ್ಕೆ ಆಗಿಬರುವುದು ಮಳೆಗಾಲವೇ. ನೀವು ಎಂದಾದರೂ ಗಮನಿಸಿದ್ದೀರಾ? ಸಂತಸ ತುಂಬಿ ಕುಲು ಕುಲುಕುಲು ನಗುವ ಮನಸ್ಥಿತಿಗೆ ಜುಳುಜುಳು ಹರಿವ ನದಿಯ ನೀರು ಉಪಮಾನವಾದರೆ ಅಂತರಂಗದ ತಬ್ಬಲಿತನಕ್ಕೆ ಶೃತಿ ಹಿಡಿಯಲು ಮಳೆ ನೀರಿನ ಟಪಟಪ ಉಪಮೇಯ.

ನನ್ನ ಬಾಲ್ಯಕಾಲದ ಅತಿ ಸುಂದರ ನೆನಪುಗಳಲ್ಲಿ ಒಂದು ಈ ಆಲಿಕಲ್ಲು ಮಳೆ. ಆಲಿಕಲ್ಲು ಎಂದರೆ ಇಲ್ಲಿ ಅಮೆರಿಕಾದಲ್ಲಿ ಬೀಳುವಂತೆ ಕಾರುಗಳ ಗಾಜನ್ನು ಪುಡಿಗುಟ್ಟಿಸುವ, ಯಾರದ್ದಾದರೂ ಜೀವವನ್ನೇ ತೆಗೆಯಬಲ್ಲಂತಹ ಬಿರುಸಾದ ಕಲ್ಲುಗಳಲ್ಲ . ಪುಟ್ಟ ಮಲ್ಲಿಗೆ ಮೊಗ್ಗುಗಳಂತಹ ಕೈಯಲ್ಲಿ ಹಿಡಿದೊಡನೆಯೇ ಕರಗಿಯೇ ಬಿಡುವಂತಹ ಕೋಮಲವಾದ ಹಿಮಗಲ್ಲುಗಳು. ಮಳೆ ವಿರಳವಾದ ಊರಿನವಳಾದ ನಾನು ಈ ಆಲಿಕಲ್ಲು ಬಿದ್ದ ದಿನ ಮುತ್ತು, ರತ್ನಗಳ ರಾಶಿಯೇ ನಮ್ಮ ಮನೆಯ ಮುಂದೆ ಸುರಿಯುತ್ತಿದೆಯೇನೋ ಎಂಬಷ್ಟು ಆನಂದದಿಂದ ಅವುಗಳನ್ನು ಬಾಚಿಕೊಳ್ಳಲು ಓಡುತ್ತಿದ್ದೆ. ಕಣ್ಣುಗಳನ್ನು ಸದಾಕಾಲ ಉಜ್ಜುತ್ತಾ, ನವೆಯಿಂದ ಎಂತದೋ ವಿಚಿತ್ರ ಯಾತನೆ ಅನುಭವಿಸುತ್ತಿದ್ದ ಅಮ್ಮ ಅವುಗಳಲ್ಲಿ ಒಂದು ಪುಟ್ಟ ಆಲಿಕಲ್ಲನ್ನು ತೆಗೆದುಕೊಂಡು ಕಣ್ಣಗಳಲ್ಲಿ ಹಾಕಿಕೊಂಡು ಆ ತಂಪಿನ ಹಿತ ಅನುಭವಿಸುತ್ತಿದ್ದಳು. ಆ ಮುದಿ ಕಣ್ಣುಗಳ ಕಿರಿಕಿರಿಯನ್ನು ಕ್ಷಣದ ಮಟ್ಟಿಗಾದರೂ ಕಳೆದು ನೆಮ್ಮದಿ ನೀಡಿದ ಓ, ಮುದ್ದು ಮಂಜು ಮಣಿಗಳೇ, ನಿಮಗೆ ನನ್ನ ನಮನ!

‘ಅಸೀಮ ರೂಪಿ ಅಂಬರದಲಿ ಮುಂಗಾರು ಮೂಡಿದೆ

ವಸುಂಧರೆಯ ಹೂಮೈಯಲ್ಲಿ ಹೊನ್ನಾರು ಹೂಡಿದೆ’

ಮೊದಲ ಮುಂಗಾರಿನ ಆಗಮನದ ಸೂಚನೆ ದೊರೆತೊಡನೆಯೇ ಸಮಸ್ತ ಜೀವಜಾಲವೂ ಅದರ ಸ್ವಾಗತಕ್ಕೆ ಸಡಗರದಿಂದ ಸಜ್ಜಾಗಿ ನಿಲ್ಲುತ್ತವೆ. ಈ ಮಳೆ ಹಾದು ಬರುವ ಹಾದಿಯೋ ಅಗಾಧ. ಹರಿಯ ಅಡಿಯಿಂದ, ಋಷಿಯ ತೊಡೆಯಿಂದ, ಹರನ ಜಡೆಯಿಂದ ಇಳಿದು ಬಂದ ದೇವಗಂಗೆಯ ಪಯಣಕ್ಕಿಂತ ಏನೇನೂ ಕಡಿಮೆ ಇರದ ಹಾದಿ ಮಳೆಯದು. ಗಿರಿ ಕಂದರ, ನದಿ ಬಯಲು, ಜಲಪಾತಗಳ ಮೇಲಾಡಿ, ಕಾಡು ಕಣಿವೆಗಳನ್ನು ಹೊಕ್ಕು, ಹೆಸರಿರದ ಹೂಬಳ್ಳಿಗಳನ್ನು ಮುತ್ತಿಟ್ಟುಕೊಂಡು ಬರುವ ಆ ಮೊದಲ ಮಳೆಗೆ, ಮೊದಲ ಹನಿ ತರುವ ಆ ಮಣ್ಣಿನ ಘಮಲಿಗೆ ಮತ್ತೇರದವರಾರು?

‘ಮಳೆಯು ಬಂದ ಮಾರನೇ ದಿನ ಮಿಂಚ ಹಂಚಿದೆ ಹೂಬನ

ಸಣ್ಣ ಚಿಗುರಿಗೆ ಮಣ್ಣ ಹೊಸತನ ಕಂಡು ಹಿಗ್ಗಿದೆ ಮೈಮನ’

‘ಸಂತೃಪ್ತಿ’ ಈ ಪದದ ನಿಜವಾದ ಅರ್ಥ ಅರಿವಾಗಲು ಮಳೆ ಬಂದ ಮರು ದಿನ ಹೊರಗೆ ಹೋಗಿ ನೋಡಬೇಕು. ಗಿಡ, ಮರ, ಕೆರೆ, ಕಟ್ಟೆಗಳೆಲ್ಲಾ ತುಂಬಿ ನಿಂತು ಪ್ರಫುಲ್ಲ ವದನದಿಂದ ಕೂಡಿರುತ್ತವೆ. ಎಷ್ಟೋ ದಿನದಿಂದ ಹಸಿದು ಹೊಟ್ಟೆ ತುಂಬಾ ಊಟ ಮಾಡಿದವನ ಮುಖದ್ದೇ ಕಳೆ ಇಲ್ಲೂ. ‘ಮಳೆ’ ಎಂಬ ಈ ಪದವನ್ನೇ ಮತ್ತೆ ಮತ್ತೆ ಹೇಳಿಕೊಳ್ಳುತ್ತಿದ್ದರೆ ಎಷ್ಟೊಂದು ಮೋಹಕವಾಗಿದೆಯಲ್ಲಾ ಈ ಪದ ಅನ್ನಿಸುತ್ತದೆ ನನಗೆ. ಮಳೆಯ ಜೊತೆ ಜೊತೆಗೂ ಒಡನಾಡಿಗಳಾಗಿ ಬರುವ ಇತರ ಪದಗಳೆಂದರೆ... ಮಳೆ... .ಇಳೆ.. ಬೆಳೆ... ಕೊಳೆ... ತೊಳೆ... ನೂರು ಸಾಲುಗಳು ವಿವರಿಸಬಹುದಾದ ಅರ್ಥವನ್ನು ಈ ಪದಗಳೇ ಹೇಳಿಬಿಡುತ್ತವೆ. ಇಳೆಯ ಮೈಯಲ್ಲಿ ಮಡುಗಟ್ಟಿರುವ ಕೊಳೆಯನ್ನು ತೊಳೆದು ಬೆಳೆ ಬೆಳೆಯಲು ಆ ಮಳೆಯಲ್ಲದೆ ಮತ್ತಾರು?

ಮಳೆ ಬರುತ್ತಿದೆ ಎಂದು ನಾವು ಸರಳವಾಗಿ ಒಂದೇ ಮಾತಿನಲ್ಲಿ ಹೇಳಿ ಮುಗಿಸಿಬಿಟ್ಟರೂ ಅದರ ಸ್ವರೂಪ ಮಾತ್ರ ಒಂದೇ ಬಗೆಯದಲ್ಲ. ಇತ್ತ ಜೋರೂ ಆಗದೆ, ನಿಂತೂ ಹೋಗದೆ ಚಿಕ್ಕ ಮಕ್ಕಳ ಕಿರಿಕಿರಿಯಂತೆ ಇಡೀ ದಿನ ಬಿಟ್ಟೂ ಬಿಡದೆ ಹನಿಯುವ ಪಿರಕಿ ಮಳೆ, ಎಷ್ಟೋ ದಿನ ತಡೆ ಹಿಡಿದ ದುಃಖವೆಲ್ಲಾ ಎಂದೋ ಒಮ್ಮೆ ಕೆಲವೇ ಕ್ಷಣಗಳು ದೊಡ್ಡ ಅಳುವಾಗಿ ಹರಿದು ಶಾಂತವಾಗಿ ಬಿಡುವ ಕಿರು ಮಳೆ, ಮದುಮಕ್ಕಳ ತಲೆಮೇಲೆ ಬೀಳುವ ಮಂತ್ರಾಕ್ಷತೆಯಂತ ಹರಕೆ ಮಳೆ, ಯಾರೋ ಒಂದೇ ಸಮನೆ ನಮ್ಮನ್ನು ಬೈಯುತ್ತಿದ್ದರೇನೋ ಅನ್ನಿಸಿಬಿಡುವ ಭೋರೆಂಬ ಬಿರು ಮಳೆ, ಯಾವುದೋ ಸಮಾರಂಭ ನಡೆಯುತ್ತಿದ್ದಾಗ ಅದನ್ನು ಕೆಡಿಸಲೆಂದೇ ಬರುವ ತುಂಟ ಮಳೆ, ಇನ್ನೇನು ಈಗ ನಿಂತೀತು ಎಂದು ಕಾಯುವಾಗ ಸವಾಲು ಹಾಕಿ ಸುರಿಯುವ ಜಗಳಗಂಟ ಮಳೆ, ಪ್ರತಿ ಬಾರಿ ಬರ ಬಂದು ಬಾಗಿಲು ಬಡಿದಾಗೆಲ್ಲಾ ಸರಕಾರಗಳ ಕಣ್ಣ ಮುಂದಿನ ಕಾಮನಬಿಲ್ಲಾಗುವ ಕೃತಕ ಮಳೆ, ಬಾಯಾರಿದ ಗಿಡ ಮರಗಳಿಗೆ ನೀರುಣಿಸಲೆಂದೇ ಬಂದು ಹದವಾಗಿ ಸುರಿವ ತಾಯಿ ಮಳೆ, ಕಾದು ನಿಂತ ನೆಲದೊಡಲಿಗೆ ಪುಲಕ ತರಿಸುವ ಹಾಯಾದ ಹೂಮಳೆ..........

ಮಳೆಯ ಬಗ್ಗೆ ಎರಡು ಸುಂದರವಾದ ಕವಿಸಮಯಗಳಿವೆ. ಚಕೋರನೆಂಬ ಪಕ್ಷಿ ಬೆಳದಿಂಗಳನ್ನೇ ಕುಡಿದು ಬದುಕು ಸಾಗಿಸಿದರೆ ಚಾತಕವೆಂಬ ಇನ್ನೊಂದು ಪಕ್ಷಿ ಇದೆ. ಅದು ಬರೀ ಮಳೆ ನೀರನ್ನು ಮಾತ್ರ ಕುಡಿಯುತ್ತದಂತೆ. ಬಾಯಾರಿ ಬಳಲಿರುವ ಈ ಚಾತಕ ತನ್ನ ಸುತ್ತ ಎಷ್ಟೇ ಅಪಾರ ಜಲರಾಶಿ ಇದ್ದರೂ ಕತ್ತು ಬಗ್ಗಿಸಿ ಆ ನೀರನ್ನು ಗುಟುಕರಿಸದು. ಯಾವಾಗಲೂ ಕತ್ತು ಮೇಲಕ್ಕೆತ್ತಿ ಮಳೆಗಾಗಿ ಕಾತರಿಸುವ ಈ ಜಗಮೊಂಡ ಪಕ್ಷಿ ಮಳೆ ನೀರಿನಿಂದ ಮಾತ್ರವೇ ತನ್ನ ದಾಹ ತಣಿಸಿಕೊಳ್ಳುವುದು. ಅಬ್ಬಾ! ಖಂಡಿತಾ ಇದರದು ಅಭಾವ ವೈರಾಗ್ಯವಲ್ಲ , ಸಕಲ ಸುಖಭೋಗಗಳನ್ನೂ ತ್ಯಜಿಸಿ ಹಟ ಹಿಡಿದು ಕುಳಿತೇ ಬಿಟ್ಟ ಭರತ ವೈರಾಗ್ಯವಿದು!

ಇನ್ನೊಂದು ಸ್ವಾತಿ ಮಳೆಯದು. ಸ್ವಾತಿ ಮಳೆಯಾದಾಗ ಎಷ್ಟೋ ಕೋಟಿ ಹನಿಗಳಲ್ಲಿ ಯಾವುದೋ ಒಂದು ನಿರ್ದಿಷ್ಟವಾದ ಹನಿ ಮಾತ್ರ ಬಾಯ್ತೆರೆದು ಕುಳಿತಿರುವ ಒಂದು ಕಪ್ಪೆಚಿಪ್ಪಿನೊಳಗೆ ಬೀಳುತ್ತದೆಯಂತೆ. ಅದೇ ಹನಿ ಅದೇ ಚಿಪ್ಪಿನೊಳಗೆ ಬಿದ್ದರೆ ಮಾತ್ರ ಆ ಚಿಪ್ಪಿನೊಳಗೆ ಬಿದ್ದ ಸ್ವಾತಿ ಮಳೆ ಹನಿ ಮುತ್ತಾಗಿ ರೂಪಾಂತರ ಹೊಂದುವುದಂತೆ. ಇದು ನಿಜವೋ ಅಥವಾ ಬರಿಯ ಕವಿ ಕಲ್ಪನೆಯೋ ಏನಾದರಾಗಿರಲಿ, ಇಂತಹ ರೋಚಕವಾದ ಸುಳ್ಳನ್ನು ಕೂಡ ವಿನಾಕಾರಣ ನಂಬಿಕೊಳ್ಳುವುದರಿಂದ ಯಾರಿಗಾದರೂ ಆಗುವ ನಷ್ಟವಾದರು ಏನಿದೆ, ಅಲ್ಲ ? ಬಾಲಮುರಳಿ ಸಂಗೀತ ಹಾಡಿ ಮಳೆ ತರಿಸುತ್ತಾರಂತಲ್ಲ, ಒಪ್ಪಿಕೊಳ್ಳೋಣವೇ?

ಈಗಾಗಲೇ ಮಳೆರಾಯ ತನ್ನ ನಿಗದಿತ ವೇಳಾಪಟ್ಟಿ ಕಳೆದುಕೊಂಡೇಬಿಟ್ಟಿದಾನೆ. ಉಡಾಫೆ ಮನೋಭಾವದ ಪಡ್ಡೆ ಹುಡುಗನ ಹಾಗೆ ಬಂದರೆ ಬಂದ, ಇಲ್ಲದಿದ್ದರೆ ಇಲ್ಲ. ಆದರೆ ತಡಮಾಡಿದರೂ ಸರಿ, ಸತಾಯಿಸಿದರೂ ಸರಿ, ಜನರನ್ನು ಗೋಳಾಡಿಸಿದರೂ ಸರಿಯೇ, ಸದ್ಯಕ್ಕಂತೂ ಎಂದಾದರೊಮ್ಮೆ ಬಂದು ಮುಖ ತೋರಿಸಿ ಹೋಗಲಾದರೂ ಮಳೆ ಬರುತ್ತಿದೆ. ನನಗೆ ಒಂದೊಂದು ಸಲ ವಿಪರೀತ ದಿಗಿಲಾಗುತ್ತದೆ, ಅಲ್ಲ, ಒಂದು ವೇಳೆ ಈ ಮಳೆ ತೀರಾ ಮುನಿಸಿಕೊಂಡು ಹೋಗಿ ಮತ್ತೆ ಬಾರದೇ ಇದ್ದು ಬಿಟ್ಟರೆ? ಹೋದ ಮೇಲೆ ತಿರುಗಿ ಬರುವ ಹಾದಿ ಮರೆತು ಅಲ್ಲೇ ಇದ್ದುಬಿಟ್ಟರೆ? ಯಾರಿಗೆ ಏನಾದರೂ ಆಗಲಿಬಿಡು ನನಗೇನು? ಎಂಬ ನಮ್ಮದೇ ಮನೋಭಾವ ಅದಕ್ಕೂ ಬಂದುಬಿಟ್ಟರೆ? ಈ ಭೂಮಿಯ ಮೆಲೆ ನಮ್ಮ ಗತಿ ಏನಾಗಬಹುದು? ಸೂರ್ಯನ ಬಿಸಿಲಿಗೆ ನಿಂತ ನೆಲ ಕಾದು ಕೆಂಡವಾಗಿ, ಗದ್ದೆ ಬಯಲುಗಳೆಲ್ಲಾ ಕತ್ತರಿಸಿಟ್ಟ ಕೇಕುಗಳಂತೆ ಭಾಗ ಭಾಗವಾಗಿ...... ಮುಂದೆ ಯೋಚಿಸಲಾರೆ.....

ಓ! ದೇವರೇ ಹಾಗಾಗದಿರಲಿ!

ಮಳೆಯೇ ನೀ ಬೇಕು....ಬಾ , ಬರ ಬೇಡ, ಬರದೆ ಇರಬೇಡ. ನೀ ಬಾ ಇಲ್ಲಿಗೆ... ತೂರಿ ಬಾ, ಜಾರಿ ಬಾ, ಮುಗಿಲ ಸರವಾಗಿ ಬಾ, ಶಿವನ ವರವಾಗಿ ಬಾ, ಜಲರೂಪಿ ಒಲವಾಗಿ ಇಳಿದು ಬಾ. ಬತ್ತಿದ ನೆಲದೆದೆಯ ಅಕ್ಷಯಪಾತ್ರೆಯಲ್ಲಿ ಅಂತರ್ಜಲ ತುಂಬಿಕೊಳ್ಳಲಿ, ನೂರಾರು ತಲೆಮಾರು ನೀರುಂಡು ನಲಿಯಲಿ....

ಮಳೆ ಬರಲಿ... ಬರುತ್ತಲೇ ಇರಲಿ....ಮಳೆ ಬರಲಿ ಇಂದಿನವರಿಗೂ.... ಮಳೆ ಇರಲಿ ಮುಂದಿನವರಿಗೂ......

ಮುಖಪುಟ / ಮೇಘ ಮಲ್ಹಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more