• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮನಬಿಲ್ಲುಗಳು ಮತ್ತು ಕಾಳಿದಾಸ

By Staff
|

ನನ್ನನ್ನು ಈ ಪ್ರವಾಸಕ್ಕೆ ಒಪ್ಪಿಸಲು ನನ್ನ ಮೈದುನ ಸ್ವಲ್ಪ ಕಷ್ಟಪಡಬೇಕಾಯಿತು. ಅವನು ಮೊದಲು ನನ್ನ ಪುಟ್ಟ ಮಗಳನ್ನು ಮಾತ್ರ ಕರೆದುಕೊಂಡು ಹೋಗುತ್ತೇನೆ ಎಂದಿದ್ದ. ನಂತರ ನಾವೆಲ್ಲರೂ, ಅಂದರೆ ನನ್ನ ಮಗ ಮತ್ತು ನಾನೂ ಕೂಡ ಹೋಗುವುದೆಂದಾಯಿತು. ಏಕೆಂದರೆ, ಮಕ್ಕಳ ಅಮ್ಮ ಊರಲ್ಲಿಲ್ಲದಿರುವಾಗ ನಾನು, ನನ್ನ ಮಗ ಇಬ್ಬರೇ ಮನೆಯಲ್ಲಿ ಶನಿವಾರ ಭಾನುವಾರವೆಲ್ಲಾ ಕುಳಿತು ಏನು ಮಾಡಬೇಕಾಗಿತ್ತು ?

ನನಗೇನೋ, ವಾರವೆಲ್ಲಾ ಮಾಡಿಯೂ ಮಿಕ್ಕಿದ್ದ ಕೆಲಸ, ನನ್ನ ದಿನಚರಿಯ ಪ್ರಕಾರ ಮಾಡಲೇಬೇಕಾದ ವೀಕೆಂಡಿನದೇ ಇನ್ನೊಂದಷ್ಟು ಕೆಲಸ, ಅಮ್ಮ ಊರಿನಲ್ಲಿಲ್ಲದಿದ್ದಾಗ ಮಕ್ಕಳನ್ನು ಮನಸ್ಸಿಗೆ ಬಂದಂತೆ ಓಡಾಡಲು ಬಿಟ್ಟು , ಬಹಳ ಕಷ್ಟಪಟ್ಟು ಅವರಲ್ಲಿ ಅಭ್ಯಾಸ ಮಾಡಿಸಿದ್ದ ಶಿಸ್ತು ಹಾಳಾಗುವ ಭಯ, ಎಲ್ಲಾ ಮನಸ್ಸಿನಲ್ಲಿ ಇತ್ತು. ಆದರೂ, ನಾನು ಪ್ರವಾಸಕ್ಕೆ ಕಡೆಗೆ ಒಪ್ಪಿದೆ. ಒಪ್ಪಿ , ಶುಕ್ರವಾರ ಮಧ್ಯಾಹ್ನದ ಮಳೆಯಲ್ಲಿ ಮನೆಯಿಂದ ಉತ್ತರ ದಿಕ್ಕಿಗೆ ಮುಖ ಮಾಡಿ ಎಲ್ಲರೂ ಹೊರಟೆವು.

Rainbows and Kalidasa !ಪ್ರಾರಂಭದಲ್ಲಿ ಪ್ರವಾಸ ಅಷ್ಟೇನೂ ಚೆನ್ನಾಗಿ ನಡೆಯುವ ಹಾಗೆ ಕಾಣಿಸಲಿಲ್ಲ. ಆಕಾಶದಲ್ಲಿ ಮೋಡಗಳು ಒಂದರ ಹಿಂದೆ ಒಂದು ಬಂದು, ಅವುಗಳ ನೀರನ್ನು ಜಡಿಮಳೆಯ ರೂಪದಲ್ಲಿ ಸುರಿದು ಮುಂದೆ ಹೋಗುತ್ತಿದ್ದವು. ರಸ್ತೆಯಲ್ಲಿ ಕಾರುಗಳು, ಒಂದರ ಹಿಂದೆ ಒಂದು ನಿಧಾನವಾಗಿ ಸಾನ್‌ಫ್ರಾನ್ಸಿಸ್ಕೋ ಕಡೆಗೆ ತೆವಳುತ್ತಿದ್ದವು. ಊರಿನವರೆಲ್ಲರೂ, ನಮ್ಮಂತೆಯೇ ಶುಕ್ರವಾರ ಮಧ್ಯಾಹ್ನವೇ, ಕೆಲವರು ಸಾನ್‌ಫ್ರಾನ್ಸಿಸ್ಕೋಗೆ, ಇನ್ನು ಕೆಲವರು ಅದಕ್ಕೆ ಉತ್ತರದ ಮರಿನ್‌ ಕೌಂಟಿಗೆ, ಮತ್ತು ಕೆಲವರು ಅದಕ್ಕೂ ಉತ್ತರದ ತಾಣಗಳಿಗೆ ಹೊರಡುವ ಯೋಚನೆ ಮಾಡಿದಂತಿತ್ತು. ಆದರೆ, ಗೋಲ್ಡನ್‌ ಗೇಟ್‌ ಸೇತುವೆಯನ್ನು ದಾಟಿ, ಮರಿನ್‌ ಕೌಂಟಿಗೆ ಹೊರಟ ಜನರನ್ನು ಹಿಂದೆ ಬಿಟ್ಟು, ಸೊನೋಮ ಕೌಂಟಿ, ಅದರ ನಂತರ ಮೆಂಡೆಸೀನೊ ಕೌಂಟಿ ತಲುಪುವ ವೇಳೆಗೆ, ಆಕಾಶ ಮತ್ತು ರಸ್ತೆ ಎರಡೂ ಖಾಲಿಯಾಗುತ್ತಾ ಬಂದವು. ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯ ನಡುವೆ ಸೂರ್ಯನ ಕಿರಣಗಳು ತೋರುತ್ತಾ , ನಮ್ಮೆದುರಿಗೆ ಅದ್ಭುತವಾದ ಕಾಮನಬಿಲ್ಲುಗಳು ಒಂದಾದ ಮೇಲೆ ಒಂದು ಕಾಣಿಸುತ್ತಾ, ನಾವು ಹೊರಟುಬಂದದ್ದು ಸಾರ್ಥಕವಾಯಿತು ಎಂದು ಅನ್ನಿಸುವಂತೆ ಮಾಡಿದವು.

ತಿಳಿಬಣ್ಣದ ಕಾಮನಬಿಲ್ಲುಗಳು, ಕಡುಬಣ್ಣದವು, ದಿಗಂತದ ಹತ್ತಿರ ಇದ್ದವು, ಮೇಲಕ್ಕಾಗಿದ್ದವು, ಆಕಾಶದಲ್ಲಿ ಮೂಡುತ್ತಾ ಕಣ್ಣಿಗೆ ಹಬ್ಬ ಮಾಡಿದವು. ಒಂದೇ ಸಲ ಎರಡೆರಡಾಗಿ ಬಂದು, ಒಳಗಿನದು ಚೆನ್ನಾಗಿ ಕಾಣುತ್ತಾ, ಹೊರಗಿನದು ಬಹಳ ಅಸ್ಪಷ್ಟವಾಗಿರುತ್ತಾ ನನ್ನ ಸೋಡಾಗ್ಲಾಸಿನ ಹಿಂದಿನಿಂದ ಇಣಕುತ್ತಿದ್ದ ಕಣ್ಣುಗಳಿಗೆ ತ್ರಾಸ ಕೊಟ್ಟವು. ಆದರೆ ಈ ಎಲ್ಲವಕ್ಕಿಂತಲೂ ಆಕರ್ಷಕವಾದ, ನಾನು ಹಿಂದೆ ಯಾವಾಗಲೂ ನೋಡಿರದ ಒಂದು ಬಿಲ್ಲು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತು. ಇದು ಒಂದು ಗುಡ್ಡದ ಮುಂದಕ್ಕೆ ಬಂದು ಎಳೆಬಿಸಿಲಿನಲ್ಲಿ ಹೊಳೆಯುತ್ತಿದ್ದ ಪಚ್ಚೆ ಹುಲ್ಲುಗಾವಲಿನ ಮಧ್ಯೆ ನೆಲ ಮುಟ್ಟಿತ್ತು. ಈವರೆಗೆ ನಾನು ಕಾಮನಬಿಲ್ಲುಗಳು ದಿಗಂತದಿಂದ ದಿಗಂತಕ್ಕೆ ಹೋಗುತ್ತವೆ ಎಂದುಕೊಂಡಿದ್ದೆ. ಇದಕ್ಕೆ ಇದುವರೆಗೂ ನೋಡಿದ್ದ ಒಂದೇ ಒಂದು ಅಪವಾದ ಬಹಳ ಹಿಂದೆ ಬೆಂಗಳೂರಿನಲ್ಲಿ ನೋಡಿದ್ದು. ಮಳೆ ಮತ್ತು ಬಿಸಿಲು ಹದವಾಗಿ ಬೆರೆಯುವ ಇನ್ನೊಂದು ಜಾಗವಾದ ಬೆಂಗಳೂರಿನ ಹತ್ತಿರ ನಾನು ಒಂದು ಸಲ ತುಮಕೂರು ರಸ್ತೆಯಲ್ಲಿ , ಆ ರಸ್ತೆಯಲ್ಲಿ ನಡೆಯುವುದು ಇನ್ನೂ ಸಂತೋಷಕರವಾಗಿದ್ದ ಕಾಲದಲ್ಲಿ ನಡೆಯುತ್ತಿದ್ದೆ. ಮಧ್ಯಾಹ್ನದ ಸಮಯ. ಚಿಕ್ಕ ಒಂದು ಮೋಡ ಸ್ವಲ್ಪ ಮಳೆ ಹುಯ್ದು, ಪಕ್ಕಕ್ಕೆ ಸರಿದು ಸೂರ್ಯನಿಗೆ ಆಕಾಶವನ್ನು ಬಿಟ್ಟುಕೊಟ್ಟಿತ್ತು. ಗಾಳಿಯಲ್ಲೆಲ್ಲಾ ತೇವ ಇತ್ತು. ಇದ್ದಕ್ಕಿದ್ದ ಹಾಗೆ ದೈವಿಕವಾದ ಒಂದೆರಡು ನಿಮಿಷ ಸೂರ್ಯನ ಸುತ್ತಲೂ ಒಂದು ಚಿಕ್ಕ ಕಾಮನಬಿಲ್ಲು ತೋರಿ ಮಾಯವಾಯಿತು. ಇದೊಂದನ್ನು ಬಿಟ್ಟರೆ ನಾನು ಇದುವರೆಗೆ ನೋಡಿದ್ದ ಎಲ್ಲಾ ‘ನಿಜವಾದ’ (ನಾನು ಜಲಪಾತಗಳಲ್ಲಿ , ಫೌಂಟನ್ಗಳಲ್ಲಿ ಯಾವಾಗ ಬೇಕಾದರೆ ಆವಾಗ ಕಾಣುವವನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ) ಕಾಮನಬಿಲ್ಲುಗಳೂ ದಿಗಂತದಿಂದ ದಿಗಂತಕ್ಕೆ ಹರಡಿಕೊಂಡಿರುತ್ತಿದ್ದವು, ಅಥವಾ ದಿಗಂತದಿಂದ ಹೊರಟು ಎಲ್ಲೋ ಮೇಲೆ ಆಕಾಶದಲ್ಲಿ ಮಾಯವಾಗುತ್ತಿದ್ದವು.

ಇದು ಆಗಿದ್ದು ಹೋದ ಶುಕ್ರವಾರ. ಇವತ್ತು ನನ್ನ ದೈನಂದಿನ ವ್ಯಾಯಾಮಕ್ಕಾಗಿ ಓಡಲು ಹೋಗಿದ್ದೆ. ಓಡಿದ ನಂತರ, ಒಂದೈದು ನಿಮಿಷ ನಿಧಾನವಾಗಿ ನಡೆಯುವುದು ನನ್ನ ಅಭ್ಯಾಸ. ಈ ಸಮಯದಲ್ಲಿ ಸಾಮಾನ್ಯವಾಗಿ ತಲೆ ಒಂದಕ್ಕೊಂದಕ್ಕೆ ಸಂಬಂಧವಿಲ್ಲದ ಯೋಚನೆಗಳನ್ನು ಯೋಚಿಸುತ್ತಾ ಅಲೆದಾಡುತ್ತಿರುತ್ತದೆ. ಇವತ್ತು , ಬೇರೆ ಏನೇನೋ ಯೋಚನೆಗಳೊಡನೆ ಮೇಘದೂತದ ‘ವಲ್ಮೀಕಾಗ್ರಾತ್‌ ಪ್ರಭವತಿ ಧನುಃ ಖಂಡಮಾಖಂಡಲಸ್ಯ’ (ಹುತ್ತದ ಮೇಲಿಂದ ಇಂದ್ರನ ಧನುಸ್ಸಿನ ತುಂಡು ಹೊಳೆಯುತ್ತಿದೆ) ಎಂಬ ತುಣುಕು ಎಲ್ಲಿಂದಲೋ ತೇಲುತ್ತಾ ಬಂದಿತು. ಶುಕ್ರವಾರಕ್ಕೆ ಮೊದಲು ಇದು ನನ್ನ ಗಮನಕ್ಕೆ ಬಂದಿದ್ದರೆ ಬಹುಶಃ, ಇದು ನಮ್ಮ ಸಂಸ್ಕೃತದಲ್ಲಿ, ಮತ್ತು ಲಿಥೋಗ್ರಾಫ್‌ ಕಾಲೆಂಡರುಗಳಲ್ಲಿ ಬರುವ ಕಾಮನಬಿಲ್ಲು , ಕಮಲ, ಜಿಂಕೆ, ನದಿ ಮತ್ತು ಬೆಟ್ಟಗಳ ಕಾಲ್ಪನಿಕ ಚಿತ್ರಣಗಳಲ್ಲಿ ಒಂದು ಎಂದೆಂದುಕೊಳ್ಳುತ್ತಿದ್ದೆನೋ ಏನೋ. ಆದರೆ ಕಾಳಿದಾಸನಲ್ಲಿ ನಾವು ಸ್ವಲ್ಪ ಹೆಚ್ಚು ನಂಬಿಕೆಯಿಟ್ಟುಕೊಳ್ಳಬೇಕೆಂದು ಕಾಣುತ್ತದೆ. ಅವನು, ಈ ಮೇಘದೂತದಲ್ಲೇ ಇನ್ನೊಂದು ಸಂದರ್ಭದಲ್ಲಿ ‘ಮೂಲೇ ಬದ್ಧಾ ಮಣಿಭಿರನತಿ ಪ್ರೌಢವಂಶಪ್ರಕಾಶೈಃ’ ಎಂದವನಲ್ಲವೇ?

ವರ್ಣಿಸುತ್ತಿರುವ ಕಂಬದ ಬುಡದ ಮಣಿಯ ಹಸಿರು, ಹಸಿರು ಎಂದು ಹೇಳಿ ಕಾಳಿದಾಸ ತೃಪ್ತನಾಗಲಿಲ್ಲ . ಆ ಹಸಿರು ಎಳೆಯ ಬೊಂಬಿನ ಕಾಂಡದ ಹಸಿರೇ ಆಗಿರಬೇಕಿತ್ತು ಅವನಿಗೆ. ಈ ರೀತಿ ಸೂಕ್ಷ್ಮವಾಗಿ ನೋಡುವ ದೃಷ್ಟಿ ಇದ್ದವನು, ಯಾವಾಗಲೋ ಒಂದು ಸಾರಿ ಅವನ ಕಣ್ಣೆದುರಿಗೆ ಹುತ್ತದ ಮೇಲಿಂದ ಮೇಲೇರುತ್ತಿದ್ದ ಕಾಮನಬಿಲ್ಲನ್ನು ನೋಡಿದ್ದಿರಬಹುದು. ಅದನ್ನು ಅಸಾಮಾನ್ಯವಾದದ್ದು ಎಂದು ಗುರುತಿಸಿರಬಹುದು. ಗುರುತಿಸಿ, ಅದಕ್ಕೆ ತನ್ನ ಕವಿತೆಯ ಮೂಲಕ ಅಮರತ್ವವನ್ನು ಕೊಟ್ಟು, ನೂರಾರು ವರ್ಷಗಳ ನಂತರ, ಸಾವಿರಾರು ಮೈಲಿ ದೂರದಲ್ಲಿ, ಅದೇ ತರಹದ ದೃಶ್ಯವನ್ನು ನೋಡಿ, ಅವನ ಕವನದ ಸಾಲುಗಳನ್ನು ಜ್ಞಾಪಿಸಿಕೊಂಡು ಸಂತೋಷಪಡುವ ಅನುಭವವನ್ನು ನನಗೆ ಕೊಟ್ಟದ್ದಕ್ಕೆ ಕೃತಜ್ಞನಾಗಿ ಅವನಿಗೆ ನನ್ನ ಹಿರಿಯರು ಅನೇಕರು ಹಾಕಿರುವ ನಮಸ್ಕಾರಗಳಿಗೆ ಇದೋ ನನ್ನದೂ ಒಂದು ಸೇರಿಸುತ್ತಿದ್ದೇನೆ.

ಮುಖಪುಟ / ಮೇಘ ಮಲ್ಹಾರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more