ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಲ್ಲೋ ನಿಲ್ಲೋ ಮಳೆರಾಯ

By Staff
|
Google Oneindia Kannada News

ಜಾಗರದ ಚುಮುಚುಮು. ನಸುಕಿನಲ್ಲೇ ಎದ್ದು ಕೆಲಸಕ್ಕೆ ಹೊರಡುತ್ತಾನೆ. ಹೋಗುವಾಗ ಕಾರಿನಲ್ಲಿ ದಿನದಂತೆ ರೇಡಿಯೋ ಹಚ್ಚುತ್ತಾನೆ. ರಾಜ್ಯದ ‘ಗವರ್ನರ್‌’ ರಾಜ್ಯವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದಾರೆ, ಎಂದು ರೇಡಿಯೋ ರೂವಾರಿ ಹೇಳುತ್ತಾನೆ. ಅರೆ, ಗೊತ್ತಾಗಲೇ ಇಲ್ಲವಲ್ಲ ಅಂದುಕೊಳ್ಳುತ್ತಾನೆ. ನೆಲದ ತೇವಾಂಶವನ್ನು ತೋರಿಸುವ ತೇವಾಂಶ ಮಾಪಕ ನೆಲವನ್ನು ಒಣಗಿದೆ, ಎಂದು ತೋರಿಸುತ್ತಿರುವುದರಿಂದ ಈಗ ಬರ ಎಂದು ರೇಡಿಯೋದಲ್ಲಿ ಮತ್ತೆ ಬಿತ್ತರಿಸಲಾಗುತ್ತದೆ. ರೇಡಿಯೋದಲ್ಲಿ ಕೇಳಿದ ನಂತರ ಗೊತ್ತಾಗುವ ಬರವೇ ಬರವಪ್ಪ, ಅಂದುಕೊಳ್ಳುತ್ತಾನೆ. ಕಕ್ಕಸ್ಸಿಗೆ ಕಡಿಮೆನೀರು ಬೀಳುವ ಫ್ಲಶ್‌ ಹಾಕಿಸುವುದರಿಂದ ನೀರನ್ನು ಉಳಿಸಬಹುದೆಂದು ರೇಡಿಯೋದವ ‘ಟಿಪ್‌’ ಕೊಡುತ್ತಾನೆ. ಆಸ್ಪತ್ರೆಗೆ ಬಂದು ‘ಏನು ಬರವಂತೆ, ಹೌದಾ’ ಎಂದು ಜೊತೆಗಾರರಲ್ಲಿ ವಿಚಾರಿಸುತ್ತಾನೆ. ‘ಹೌದಾ, ನನಗೆ ಗೊತ್ತಿರಲಿಲ್ಲ‰ ಆದರೆ, ತೀರ ಒಣಹವೆಯಂತೂ ಇದೆ’ ಎಂದು ಆತ ನಿರ್ವಿಕಾರವಾಗಿ ಹೇಳುತ್ತಾನೆ. ಬರೇ ಬೇಸಿಗೆಯಲ್ಲಿ ಟೊಮೇಟೊ ಬೆಳೆಸುವ ‘ಹವ್ಯಾಸಿ ಕೃಷಿಕಿ’ ನರ್ಸೊಬ್ಬಳು ಸಾಯುತ್ತಿರುವ ತನ್ನ ಟೊಮೇಟೋ ಗಿಡಗಳ ಬಗ್ಗೆ ಪೇಚಾಡಿಕೊಳ್ಳುತ್ತಾಳೆ. ಬಳ್ಳಾರಿ ಬಿಜಾಪುರಗಳು ಜ್ಞಾಪಕಕ್ಕೂ ಬರದ ಬರವೆಂತದದು ಎಂದು ಬೇಜಾರುಮಾಡಿಕೊಳ್ಳುತ್ತಾನೆ. ‘ಇವತ್ತು ಮಳೆ ಬರಬಹುದು, ಹಾಗಂತ ಆ ಟೀವಿಯ ಹವಾ ಮನುಷ್ಯ ಹೇಳಿದ’ ಅನ್ನುತ್ತಾಳೆ. ‘ಓ ದೇವರೇ, ಮಳೆಬರಲಿ, ನನ್ನ ಟೊಮೇಟೋ ಗಿಡಗಳು ಉಳಿಯಲಿ’ ಅನ್ನುತ್ತಾಳೆ. ಅವಳಂದ ಆ ಓ ದೇವರು ಓ ಗಾಡ್‌ ಅಥವಾ ಓ ಗಾಷ್‌ ಇರಬಹುದೆಂದು ಆತ ಅಂದುಕೊಳ್ಳುತ್ತಾನೆ.

ಕೆಲಸ ಆರಂಭವಾಗುತ್ತದೆ. ಹೊರಗೆ ಮೋಡವೂ ದಟ್ಟವಾಗುತ್ತಿದೆ. ಬಿಸಿಲಿಳಿಯುತ್ತಿರುವ, ಮಳೆಬರಬಹುದಾದ , ಶಾಲಾರಜೆಗಳು ಮುಗಿಯುತ್ತಿರುವ ಈ ದಿನಗಳಲ್ಲಿ ಆಸ್ಪತ್ರೆಗೆ ಬರುವವರ್ಯಾರು? ನಿಜವಾದ ರೋಗಿಗಳೇ ತಾನೇ? ಮಗು ಮೂರು ಬಾರಿ ಸೀನಿತೆಂದು ಎಮರ್ಜನ್ಸಿಗೆ ಬರುವ ಅಮ್ಮಂದಿರ ಬೀಸು ಸ್ವಲ್ಪ ಕಡಿಮೆಯಾಗಿದೆ, ಮನೆಯಲ್ಲಿ ಕೂತಿರಲಾಗದ ಮುದುಕಿಯರ ಸೌಹಾರ್ದ ಭೇಟಿಯೂ ಇಲ್ಲ , ಹಳೆ ಮುದುಕರ್ಯಾರಿಗೂ ಮೂತ್ರ ಕಟ್ಟಿಲ್ಲ, ಹತ್ತಿರದ ಫ್ಯಾಕ್ಟರಿಯಲ್ಲ್ಯಾರಿಗೂ ಕೈಕಾಲು ಮುರಿದಿಲ್ಲ. ಮಳೆ ಬರಬೇಕು, ಕನಿಷ,್ಠ ರಸ್ತೆಯಲ್ಲಿ ಒಂದು ಅಪಘಾತವಾದರೂ ಆಗಬೇಕು, ಯಾರೂ ಸಾಯಬಾರದು. ಆದರೆ ಆಸ್ಪತ್ರೆಗಾದರೂ ಬರಬೇಕು‰‰.. ಎಲ್ಲರ ಹಾಗೆ ಅವನ ಕೆಲಸವೂ ಅವನಿಗೆ ಮುಖ್ಯವಲ್ಲವೇ ?

ವರಕೊಡುವನೊಬ್ಬನಿದ್ದಾಗ ಕೇಳಿದರೆ ಕಷ್ಟವೇ? ಮಳೆಯೂ ಬಂತು. ಅದೂ ಅಂತಿಂತ ಮಳೆಯಲ್ಲ. ಧಾರಾಕಾರವಾಗಿ, ಗುಡುಗು ಸಿಡಿಲುಗಳೊಂದಿಗೆ ಬಂತು. ಮೊದಲೇ ಬಂದು ಕೂತಿದ್ದ ಸಣ್ಣಪುಟ್ಟ ಖಾಯಿಲೆಯವರುಗಳನ್ನು ನೋಡಿ ಕಳಿಸಿದ ಮೇಲೆ ಬೇರೇನೂ ಹೆಚ್ಚು ಕೆಲಸವಿಲ್ಲದ್ದರಿಂದ ಕಿಟಕಿಯ ಹೊರಗೆ ನೋಡುತ್ತಾನೆ. ಕರಿಯ ಮೋಡಗಳು ರಾಚಿಕೊಂಡಿವೆ. ಬೆಳಿಗ್ಗೆ ಹತ್ತಕ್ಕೇ ಸಂಜೆ ಏಳರಂತೆ ಗ್ರಹಣ ಹಿಡಿದಿದೆ. ಗುಡುಗು ಗಡಗಡ ಅನ್ನುತ್ತಿದೆ. ಕೆಳಗೆ ಈಗತಾನೆ ಸಾರಿಸಿ ರಂಗೋಲಿ ಹಾಕಿದಂತೆ ಆಸ್ಪತ್ರೆಯ ಹೆಲಿಪ್ಯಾಡಿನ H ಕಾಣುತ್ತಿದೆ. ಅಲ್ಲಲ್ಲಿ ಫ್ಲ್ಯಾಶ್‌ಲೈಟಿನಂತೆ ಮಿಂಚುತ್ತಿದೆ. ಅರೆರೆ, ಇದೇನು ಮಿಂಚು ಕೆಂಪು, ನೀಲಿಬಣ್ಣಕ್ಕೆ ತಿರುಗುತ್ತಿದೆಯಲ್ಲ ! ನೋಡನೋಡುತ್ತಿದ್ದಂತೆ ಹತ್ತಿರವಾಗೇಬಿಟ್ಟಿತಲ್ಲ- ಓಹೋ ಅದು ಮಿಂಚಲ್ಲ, ಬರುತ್ತಿರುವ ಆಂಬುಲೆನ್ಸಿನ ದೀಪ. ಮೊದಲು ಮಿಂಚು ತಾನೇ ಕಾಣುವುದು- ನಂತರ ಕೇಳಿಸಿತು ಮಳೆಯ ಅಬ್ಬರದ ನಡುವೆ ಅದರ ಸೈರನ್ನು.

ಇದ್ದಕ್ಕಿದ್ದಂತೆ ಮನೆಯಲ್ಲಿ ಜ್ಞಾನತಪ್ಪಿ ಬಿದ್ದನಂತೆ. ನೋಡಿದ ತಕ್ಷಣ ಈತ ಸಾಯುತ್ತಾನೋ ಬದುಕುತ್ತಾನೋ ಹೇಳುವಷ್ಟು ಪರಿಣಿತಿಯನ್ನು ಪಡೆದಿದ್ದಕ್ಕೆ ಆತನ ಬಗ್ಗೆಯೇ ಹೆಮ್ಮೆಯಿತ್ತು. ಬಂದಾತನ ಗುರುತಿನ ಕಾರ್ಡಿನ ಮೇಲಿದ್ದ ಆತನ ಜನ್ಮ ದಿನಾಂಕವನ್ನೊಮ್ಮೆ ನೋಡಿದ. ತಾನಿನ್ನೂ ಆತನಿಗಿಂತ ಎರಡು ವರ್ಷ ಚಿಕ್ಕವನಿರುವುದನ್ನು ಕಂಡು ಕೊಂಚ ಸಮಾಧಾನವಾಯಿತು. ಅಪಘಾತಗಳಿಂದಷ್ಟೇ ಸಾಯಬೇಕಾದ ವಯಸ್ಸು ಮೀರಿಹೋಗುತ್ತಿರುವುದನ್ನು ಮತ್ತೆ ಮತ್ತೆ ಜ್ಞಾಪಿಸುವ ಈ ಕೆಲಸದ ಬಗ್ಗೆ ಮತ್ತೊಮ್ಮೆ ಬೇಸರವಾಯಿತು. ‘ಸರಿ, ಸರಿ. ಒಳಗೆ ಕಳಿಸಿ. ಡ್ರಿಪ್‌ ಶುರುಮಾಡಿ. ತಲೆಯದೊಂದು ಸೀಟಿ ಸ್ಕ್ಯಾನ್‌ ಮಾಡಿ’ ಹೀಗೆಲ್ಲ ರುಟೀನ್‌ ಆಗಿ ಹೇಳುತ್ತಾ ಕೆಲಸ ಮುಂದುವರೆಸಿದ. ಬಂದವರೆಲ್ಲಾ ನೆಂದಿದ್ದರು, ನೆಂದು ತೊಪ್ಪೆಯಾಗಿದ್ದರು. ಮಳೆ ಹೊಡೆಯುತ್ತಲೇ ಇತ್ತು.

ಆಗ ಬಂದಳು, ಬಾರ್ಬರಾ. ಆಸ್ಪತ್ರೆಯ ಅಡಿಗೆಮನೆಯಲ್ಲಿ ಕೆಲಸಮಾಡುವಾಕೆ. ಕಟ್ಟಾ ಸಸ್ಯಾಹಾರಿಯಾಗಿದ್ದ ಈತನಿಗೆ ಆಸ್ಪತ್ರೆಯ ಊಟವನ್ನೊಮ್ಮೆ ತಿನ್ನಿಸಲೇಬೇಕೆಂಬ ಪಂದ್ಯದಲ್ಲಿ ಸೋತಿದ್ದಾಕೆ. ಮೊದಲು ಗುರುತು ಸಿಗಲಿಲ್ಲ , ಆತನಿಗೆ. ತಪ್ಪು ಸಮಯದಲ್ಲಿ , ತಪ್ಪು ಜಾಗದಲ್ಲಿ ತಪ್ಪಾಗಿ ನೆಂದು ನಿಂತಿದ್ದಳು. ಎಪ್ಪತ್ತು ಮೈಲು ವೇಗದಲ್ಲಿ ಆಂಬುಲೆನ್ಸ್‌ ಹಿಂದೆಯೇ ಬಂದಿದ್ದಾಳಂತೆ. ಎರಡು ಮಕ್ಕಳನ್ನೂ ಅವಚಿಕೊಂದು ನಿಂತಿದ್ದಳು. ಮೂರೂಜನ ನೆಂದು ತೊಪ್ಪೆಯಾಗಿದ್ದರು. ಇವರುಗಳು ಮಳೆಯಲ್ಲಿ ನೆಂದಿರುವುದು ಮನೆಯಿಂದ ಕಾರಿಗೆ ಮತ್ತು ಕಾರಿನಿಂದ ಆಸ್ಪತ್ರೆಗೆ ನಡೆದು ಮಾತ್ರ ಎಂದೆನಿಸಿದರೂ ತೊಯ್ದಿರುವುದಕ್ಕಿಂತಲೂ ಹೆಚ್ಚಾಗಿ ತೇವವಾಗಿದ್ದಾರೆನ್ನಿಸಿತು. ‘ಏನು ಬಾರ್ಬರಾ’ ಅಂದ. ಕಣ್ಣಿನ ನೀರಿನ ನಡುವೆ ಅಂದಳು ‘ಕೆಲಸಕ್ಕೆ ಹೋಗುವ ಮುನ್ನ ಬಚ್ಚಲಲ್ಲಿ ಇದ್ದಕ್ಕಿದ್ದಂತೆ ಬಿದ್ದ. ನಾನೇ ಕರೆದುತರುತ್ತಿದ್ದೆ. ಈ ದರಿದ್ರ ಮಳೆ’ ಅಂದಳು. ‘ಈತ?’ ಅಂದ, ಪ್ರಶ್ನಾರ್ಥಕವಾಗಿ. ‘ನನ್ನ ಗಂಡ’ ಅಂದಳು. ಮಕ್ಕಳನ್ನು ನೋಡಿದ. ಎರಡೂ ತೊಯ್ದಿದ್ದವು. ‘ಎಷ್ಟು ವಯಸ್ಸು’ ಕೇಳಿದ. ‘ಎಂಟು ಮತ್ತು ನಾಲ್ಕು’. ಅಂದಳು. ‘ನನಗೊಬ್ಬ ಮಗಳಿದ್ದಾಳೆ, ವಯಸ್ಸು ಆರು’ ಅಂದ. ಯಾಕಂದನೋ ಗೊತ್ತಾಗಲಿಲ್ಲ.

ತಲೆಯ ಸೀಟಿ ಸ್ಕ್ಯಾನ್‌ ಮಾಡಿಯಾಗಿತ್ತು. ಒಳಗೆ ಕರ್ರಗಿರುವ ಜಾಗವೆಲ್ಲಾ ಬೆಳ್ಳಗಾಗಿತ್ತು. ಮೆತ್ತಗೆ ಜಾರುವ ಜೆಲ್ಲಿಯಂತೆ ಇರಬೇಕಾದ ಮಿದುಳಿನ ಜಾಗದಲ್ಲಿ ಇರಬಾರದ ರಕ್ತದ ಗಡ್ಡೆಯಾಂದಿತ್ತು. ಒಳಗೆ ರಕ್ತ ಹರಿದಿತ್ತು, ಹೊರಗೆ ಮಳೆ ಧಾರಾಕಾರವಾಗಿ ಬೀಳುತ್ತಿತ್ತು.

ಹೆದರಿದ ಅತ, ಡಾಕ್ಟರಾಗಿ ಹೆದರಿದ್ದ. ಯಾವುದು ಆಗಬಾರದು ಎಂದೆಣಿಸಿದ್ದನೋ ಅದೇ ಆಗಿತ್ತು. ‘ಮುಂದೇನು?’ ಕೇಳಿದಳು, ಬಾರ್ಬರಾ. ಮಕ್ಕಳೆರಡೂ ಹೊರಗಡೆಯ ನಿರೀಕ್ಷಣಾ ಕೊಠಡಿಯಲ್ಲಿ ಇದ್ದ ‘ಲೆಗೊ’ ಇಟ್ಟಿಗೆಗಳಿಂದ ಮನೆಕಟ್ಟುತ್ತಿದ್ದವು. ‘ಆತ ಏಳಬಹುದಲ್ಲ. ಆ ರಕ್ತದ ಗಡ್ಡೆಯನ್ನು ಹೊರಗೆ ತೆಗೆದ ತಕ್ಷಣ’ ಕೇಳಿದಳು. ‘ನೀನು ಒಳ್ಳೆಯ ಡಾಕ್ಟರು, ನೀನೇ ತೆಗೆದುಬಿಡು. ಮೊನ್ನೆ ಯಾರಿಗೋ ಎದೆಯ ಗೂಡಿನಿಂದ ರಕ್ತದ ಗಡ್ಡೆಯನ್ನು ತೆಗೆದೆಯಂತೆ, ನೀನು’ ಕೇಳಿದಳು. ಈತನಿಗೆ ಉತ್ತರ ಕೊಡಲಾಗಲಿಲ್ಲ. ಎಲ್ಲ ಬಲ್ಲವನಂತೆ ಸೋಗು ಹಾಕಲಾಗಲಿಲ್ಲ. ಗಳಿಸಿದ್ದ ಡಿಗ್ರಿ ಒಮ್ಮೆ ಹಾಸ್ಯಮಾಡಿತು.

ವಿಷಯ ತುಂಬಾ ಸರಳ. ಬಾರ್ಬರಾಳ ಗಂಡ ಸಾಯುತ್ತಿದ್ದಾನೆ. ಆತನನ್ನು ಬದುಕಿಸಬೇಕಾದರೆ ಆತನನ್ನು ನಲವತ್ತು ಮೈಲಿದೂರವಿರುವ ಇನ್ನೊಂದು ಆಸ್ಪತ್ರೆಗೆ ಸಾಗಿಸಬೇಕು. ಹೊರಗೆ ಮಳೆ ಬರುತ್ತಿದೆ.

ಸರಿ, ಹೆಲಿಕಾಪ್ಟರನ್ನು ಕರೆಯುತ್ತಾನೆ. ಆಗುವುದಿಲ್ಲವೆನ್ನುತ್ತಾರೆ. ಕಾರಣ, ಕೆಟ್ಟ ಹವಾ ಅನ್ನುತ್ತಾರೆ. ಹೊರಗೆ ನೋಡು ಎಂಥಾ ಮಳೆ ಬರುತ್ತಿದೆ. ನಾವು ಹೇಗೆ ಹಾರಬಲ್ಲೆವು? ಒಬ್ಬನ ಜೀವ ಉಳಿಸಲು ಹೋಗಿ ನಾವು ಹೆಲಿಕಾಪ್ಟರ್‌ನಲ್ಲಿರುವ ಇನ್ನು ಮೂರು ಜನರ ಜೀವವನ್ನು ಅಪಾಯಕ್ಕೆ ತಳ್ಳುವುದು ಹುಚ್ಚುತನ ಅನ್ನುತ್ತಾನೆ- ಅಲ್ಲಿಯವ. ಅವನ ಮಾತಲ್ಲ್ಲೂ ಸತ್ಯವಿದೆ. ಹಾಗಾದರೆ ಮುಂದೇನು? ಆಂಬುಲೆನ್ಸಿನಲ್ಲೇ ಕಳಿಸು. ಆತ ಬದುಕುಳಿಯುವುದಕ್ಕೆ ಇರುವುದೊಂದೇ ಅವಕಾಶವೆಂದರೆ ನ್ಯೂರೋಸರ್ಜನ್‌ ತಲೆಯಿಂದ ರಕ್ತದ ಗಡ್ಡೆಯನ್ನು ತೆಗೆಯುವುದು, ಅದೂ ಹೇಳಲಿಕ್ಕಾಗುವುದಿಲ್ಲ, ಅನ್ನುತ್ತಾನೆ. ‘ಹೇಗೆ ಕಳಿಸಲಿ, ಆಂಬುಲೆನ್ಸಿನಲ್ಲಿ , ಹೊರಗೆ ಮಳೆ ಬರುತ್ತಿದೆಯಲ್ಲ ? ನಲವತ್ತು ಮೈಲಿ ದೂರ ಈ ಮಳೆಯಲ್ಲಿ ಪ್ರಯಾಣ ಒಂದೂವರೆ ಗಂಟೆಗಿಂತ ಜಾಸ್ತಿಯಾಗಬಹುದಲ್ಲ ? ಅನ್ನುತ್ತಾನೆ. ನಿಮ್ಮ ಆಸ್ಪತ್ರೆಯಲ್ಲಿ ಯಾರಾದಾರೂ ಇದ್ದರೆ ನೋಡು’ ಅನ್ನುತ್ತಾನೆ.

ಆಸ್ಪತ್ರೆಯ ಎಲ್ಲ ಡಾಕ್ಟರಿಗೂ ಕೇಳುತ್ತಾನೆ. ಅರ್ಧಕ್ಕರ್ಧ ಜನ ಬಂದಿಲ್ಲ , ಅಥವಾ ತಡವಾಗಿ ಬರುತ್ತಿದ್ದಾರೆ. ಡ್ಯೂಟಿಯ ಮೇಲಿದ್ದ ಸರ್ಜನ್‌ ತನಗೆ ಎಲ್ಲ ಕಡೆಯಿಂದ ಗಡ್ಡೆ ತೆಗೆಯಲು ಬರುತ್ತದೆಯೆಂದೂ, ತಲೆಯಿಂದ ಮಾತ್ರ ಬಿಟ್ಟು ಎಂದು ಹೇಳುತ್ತಾನೆ. ಹೊರಗೆ ಮಳೆ ಬರುತ್ತಿದೆ.

ಒಳಗೆ ಬಂದು ನೋಡುತ್ತಾನೆ, ದೀರ್ಘವಾಗಿ ಉಸಿರಾಡುತ್ತಿದ್ದಾನೆ. ಇನ್ನು ಹೀಗೆ ಬಿಟ್ಟರೆ ಈತ ಉಸಿರು ನಿಲ್ಲಿಸುತ್ತಾನೆ ಎಂದೆನಿಸಿ ಉಸಿರಾಡಿಸಲು ಸಿದ್ಧ ಮಾಡುತ್ತಾನೆ. ಟ್ಯೂಬಿಲ್ಲದ ತುಟಿಗಳು ಮತ್ತೆ ಮುದ್ದಿಸಲು ಸಿಗಲಾರದೇನೋ ಎಂಬ ಅಪನಂಬಿಕೆಯಲ್ಲಿ ‘ಹನೀ, ನಂಬಿಕೆಯಿರಲಿ’ ಎಂದು ಮುದ್ದಿಸುತ್ತಾಳೆ, ಬಾರ್ಬರ. ಬಾಯಾಳಗೆ ಟ್ಯೂಬು ಹೋಗುತ್ತದೆ.

ಹೊರಗೆ ಬಂದು ನಿಲ್ಲುತ್ತಾನೆ. ಮಳೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಮಿಂಚಿನ ಬೆಳಕಲ್ಲಿ ಆಸ್ಪತ್ರೆಯ ಕಟ್ಟಡ ಭೂತಬಂಗಲೆಯಂತೆ ಕಾಣುತ್ತದೆ.

ಬಾರ್ಬರಾ ಹುಚ್ಚಳಂತಾಗಿದ್ದಾಳೆ. ನಾನೇ ಕಾರಲ್ಲಿ ಕರಕೊಂಡು ಹೋಗುತ್ತೇನೆ ಎಂದು ರಂಪ ಮಾಡುತ್ತಿದ್ದಾಳೆ. ಮಕ್ಕಳು ಮನೆಯ ತಾರಸಿಯ ತನಕ ಕಟ್ಟಿದ್ದಾರೆ. ಮುತ್ತಿಕ್ಕಿಸಿಕೊಂಡವನ ಹೃದಯದ ಬಡಿತ ಆಶ್ಚರ್ಯಕರವಾಗಿ ಕಡಿಮೆಯಾಗುತ್ತಿದೆ. ಅದನ್ನು ಹೆಚ್ಚಿಸುವ ಶಕ್ತಿ ಬಾರ್ಬರಾಳ ಮುತ್ತಿಗಿಲ್ಲವೆಂದು ಅಂದುಕೊಳ್ಳುತ್ತಾನೆ.

ಟಾಯ್ಲೆಟ್ಟಿಗೆ ಹೋಗಿ ಬರುತ್ತಾನೆ, ಹೊರಗೆ ಬಂದಾಗ ಕಣ್ಣು ಕೆಂಪಾಗಿರುತ್ತದೆ. ಹೊರಗೆ ಮಳೆಯಲ್ಲಿ ಹೋಗಿ ನಿಲ್ಲಬೇಕೆನಿಸುತ್ತದೆ. ಅಳಲ್ಯಾಕೆ ಕಷ್ಟ ತನಗೆ, ಎಂದು ಬಯ್ದುಕೊಳ್ಳುತ್ತಾನೆ.

ಮತ್ತೊಮ್ಮೆ ಹೊರಗೆ ಹೋಗುತ್ತಾನೆ. ‘ಮಕ್ಕಳು, ಬಾರ್ಬರಾ ಕೈಕೈ ಹಿಡಿದು ಕೂತಿದ್ದಾರೆ. ಏನೋ ಪಿಟಿಪಿಟಿ ಅನ್ನುತ್ತಿದ್ದಾಳೆ. ಮಕ್ಕಳು ರಾಗವಾಗಿ ಏನೋ ಹಾಡಿಕೊಳ್ಳುತ್ತಿವೆ. ಹತ್ತಿರ ಹೋದಾಗ ಕೇಳಿಸುತ್ತದೆ. ‘ರೈನ್‌ ರೈನ್‌ ಗೋ ಅವೇ’.

ಮತ್ತೆ ಟಾಯ್ಲೆಟ್ಟಿಗೆ ಬರುತ್ತಾನೆ. ತಾನೂ ಗುಣುಗುಣಿಸುತ್ತಾನೆ ‘’.

ಮನೆಗೊಮ್ಮೆ ಫೋನ್‌ ಮಾಡುತ್ತಾನೆ. ಹೆಂಡತಿಗೆ ‘ಹೇಗಿದ್ದೀ’ ಎಂದು ಕೇಳುತ್ತಾನೆ. ಮಗಳ ಜತೆ ಒಂದೈದು ನಿಮಿಷ ಮಾತಾಡುತ್ತಾನೆ. ‘ಯಾಕೆ, ಆಸ್ಪತ್ರೆಯಲ್ಲಿ ಜಾಸ್ತಿ ಕೆಲಸವಿಲ್ಲವಾ ಎಂದು ಕೇಳುತ್ತಾಳೆ, ಹೆಂಡತಿ. ಮಗಳು ತಾನು ಬಿಡಿಸಿದ ಹೊಸ ಕಾರ್ಟೂನನ್ನು ಫೋನಲ್ಲೇ ವಿವರಿಸಿ ಹೇಳುತ್ತಾಳೆ.

...ಹೊರಗೆ ಬೇಸಾಯಗಾರ್ತಿ ನರ್ಸು ಖುಷಿಯಾಗಿದ್ದಾಳೆ. ಈ ಬಾರಿ ಆಕೆ ಇವನಿಗೆ ಧಂಡಿಯಾಗಿ ಟೊಮೇಟೋ ಕೊಡುತ್ತಾಳೆ, ಈತ ಸಸ್ಯಾಹಾರಿ ತಾನೆ.

ಮಳೆ ನಿಲ್ಲುವ ಸೂಚನೆಯಿಲ್ಲವೆಂದು ಹವಾ ಮನುಷ್ಯ ಹೇಳುತ್ತಾನೆ.

ಮಕ್ಕಳು ತಾರಸಿಕಟ್ಟಿ ಮುಗಿಸಿವೆ. ‘ಕಮ್‌ ಅಗೈನ್‌ ಅನದರ್‌ ಡೇ’ ಹಾಡು ಮುಂದುವರೆದಿದೆ.

‰ಹೊರಗೆ ಮಳೆ ಬೀಳುತ್ತಲೇ ಇದೆ.

ಮುಖಪುಟ / ಮೇಘ ಮಲ್ಹಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X