ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಚ್ಚಿ ಮೊಲೆ ಬಂದು ಗುದ್ದಾಡಿದವು ಎದೆಗೆ..

By Super
|
Google Oneindia Kannada News

Kabiniya Dandeyalli Lingadevaru, K.M.Veeresh, Sham, Jogi and Udaya Marakini
ಪ್ರಿಯ ಶಾಮ್‌,

ಕಳೆದ ತಿಂಗಳು ನಾವೆಲ್ಲ ಮಾನಂದವಾಡಿ ರಸ್ತೆಯ ಮತ್ತೊಂದು ತುದಿಯಲ್ಲಿರುವ ಒಂದು ಊರಲ್ಲದ ಊರಿಗೆ ಹೋಗಿದ್ದು ನೆನಪುಂಟಲ್ಲ ? ಹೋಗಿ ಬರುವಷ್ಟು ಕಾಲವೂ ಆಕಾಶ ಜಿನುಗುತ್ತಲೇ ಇತ್ತು. ಆಗ ನೆನಪಾದದ್ದು ಉಪ್ಪಿನಂಗಡಿ. ಅಲ್ಲಿ ನಾನು ಸ್ಕೂಲಿಗೆ ಹೋಗುತ್ತಿದ್ದ ಹಸಿರು ನೆಲದ ಕಾಡು ಹಾದಿ. ಮಳೆಗಾಲದಲ್ಲಿ ಬಾನಿಂದ ಸುರಿವ ಮಳೆ ನಖಶಿಖಾಂತ ತೋಯಿಸಿದರೆ, ಚಳಿಗಾಲದಲ್ಲಿ ಗದ್ದೆಯಲ್ಲಿ ಬೆಳೆದು ನಿಂತ ಬತ್ತದ ಸಸಿಗಳ ತೆನೆಯಲ್ಲಿ ಕೆನೆಗಟ್ಟಿದ ಕಾಳುಗಳ ಮೇಲೆ ಕೂತ ಇಬ್ಬನಿ ಕಾಲಿಗೆ ಕಚಗುಳಿ ಇಡುತ್ತಿದ್ದವು. ಆಗಷ್ಟೇ ಗಂಗಾಧರ ಚಿತ್ತಾಲರ 'ಕಾಮಸೂತ್ರ" ಓದಿದ್ದೆವು. '" ಅನ್ನುವ ಸಾಲುಗಳ ಅರ್ಥ ಇನ್ನೂ ಸಂಪೂರ್ಣ ದಕ್ಕಿರಲಿಲ್ಲ. ಈಗಲೂ ದಕ್ಕಿದೆ ಎಂದು ಹೇಳಲಾರೆ.

ಆವತ್ತು ಆ ಹೆಸರಿಲ್ಲದ ಮೂರೇ ಮೂರು ಮನೆಯ ಪುಟ್ಟ ಊರಲ್ಲಿ ನಾವೇ ತಪ್ಪಲೆಗೆ ನೀರು ಸುರಿದು ಬಿಸಿನೀರು ಕಾಯಿಸಿ ಸ್ನಾನ ಮಾಡಿದೆವಲ್ಲ ? ಅದಾದ ನಂತರ ನೀವು ಮತ್ತು ಉದಯ ಮರಕಿಣಿ ಆಗಷ್ಟೆ ನಾವು ಕೆರೆಯಿಂದ ಹಿಡಿದು ತಂದ ಕ್ಯಾಟಲ್‌ ಫಿಷ್‌ನ ಸಾರು ಮಾಡುವುದು ಹೇಗೆಂದು ಯೋಚಿಸುತ್ತಿದ್ದಿರಿ. ನಾನು ಜೊತೆಗೆ ಒಯ್ದಿದ್ದ ಕೆನೆತ್‌ ಆ್ಯಂಡರ್‌ಸನ್ನನನ್ನು ಓದಲು ಕುಳಿತೆ. ಹೊರಗೆ ಅಗಾಧ ಬಯಲು. ಹಿನ್ನೀರಿನಲ್ಲಿ ಮುಳುಗಡೆಯಾಗುತ್ತೆ ಅಂತ ಸಾವಿರಾರು ಮರಗಳನ್ನು ಕಡಿದಿದ್ದರು. ಅವುಗಳ ಮೋಟು ಮಾತ್ರ ಗೇಣೆತ್ತರಕ್ಕೆ ಉಳಿದುಬಿಟ್ಟು ವಿಚಿತ್ರ ಸೌಂದರ್ಯ ಕೊಟ್ಟಿತ್ತು. ಆ ಮೋಟುಮರವನ್ನು ಕೂಡ ಚಿಗುರಿಸಬಲ್ಲೆ ಎಂಬ ಅಹಂಕಾರದಿಂದಲೋ ಎಂಬಂತೆ ಮಳೆ ಸುರಿಯುತ್ತಲೇ ಇತ್ತು. ನೀನೊಲಿದರೆ ಕೊರಡು ಕೊನರುವುದಯ್ಯ ಅನ್ನುವ ಸಾಲು ಈಗ ನೆನಪಾಗುತ್ತಿದೆ. ಶ್ಯಾಮ್‌, ಬಹುಶಃ ನಾನು ಬಸವಣ್ಣನನ್ನು ಓದದೇ ಇರುತ್ತಿದ್ದರೆ ನನಗೇ ಬೇರೆಯೇ ಸಾಲು ಹೊಳೆಯುತ್ತಿತ್ತೋ ಏನೋ? ಕೆಲವೊಮ್ಮೆ ಓದಿ ಕೆಡುತ್ತೇವೆ. ಓದು ನಮ್ಮೊಳಗೇ ಹೊಳೆಯಬಹುದಾಗಿದ್ದ ಒಂದು ರೂಪಕವನ್ನು ಹುಟ್ಟುವ ಮೊದಲೇ ಕೊಲ್ಲುತ್ತದೆ.

The Beautiful Kabiniಅಲ್ಲಿಂದ ಬಂದ ನಂತರ ಏನೂ ಬರೆಯಬಾರದು ಅನ್ನಿಸಿತ್ತು. ನಾಗರಿಕ ಜಗತ್ತಿನ ಯಾವ ಸಂಪರ್ಕವೂ ಇಲ್ಲದ ಆ ಹಸಿರು ಬಯಲಿನ ನಡುವೆ ಇಷ್ಟೇ ಇಷ್ಟಗಲ ಎನ್ನಿಸುವಂತೆ ಅಷ್ಟಗಲ ನಿಂತ ಕಬಿನಿಯ ಹಿನ್ನೀರು. ಅದರ ಪಕ್ಕ ವೀರೇಶ್‌ ಕಾರು ನಿಲ್ಲಿಸಿ ತೊಳೆಯುವಾಗ ಸಣ್ಣಗೆ ಮಳೆ ಶುರುವಾಯಿತು. ಅಲ್ಲಿಂದ ಓಡಬೇಕು ಅನ್ನಿಸಲಿಲ್ಲ. ಎಲ್ಲಿ ವೈರಲ್‌ ಫೀವರ್‌ ಬರುತ್ತದೋ ಅನ್ನುವ ಭಯವಾಗಲಿಲ್ಲ. ಅಂಥ ಅಭಯವನ್ನು ನಾನು ಹಿಂದೆಂದೂ ಅನುಭವಿಸಿರಲಿಲ್ಲ. ನಮ್ಮ ಉದ್ಯೋಗ, ಬ್ಯಾಂಕು ಬ್ಯಾಲೆನ್ಸು, ಕಂಪೆನಿಯ ಷೇರಿನ ರೇಟು ಏರುತ್ತಿದೆ ಎಂಬ ಭರವಸೆ- ಇವ್ಯಾವುವೂ ಕೊಡದೊಂದು ಭರವಸೆಯನ್ನು ಪ್ರಕೃತಿ ಕೊಡುತ್ತದೆ ಅಂತ ಆವತ್ತು ಮತ್ತೊಮ್ಮೆ ಅನ್ನಿಸಿತು.

Jogi with Cattle fishನೀವು ಬಂದಿರಲಿಲ್ಲ , ಲಿಂಗದೇವರೂ ಬಂದಿರಲಿಲ್ಲ. ನಾವೊಂದಷ್ಟು ಮಂದಿ, ಜೊತೆಗೆ ನಿರಂಜನ, ಚಾರ್ಮುಡಿ ಘಾಟ್‌ನಲ್ಲಿರುವ ಫಾರೆಸ್ಟು ಗೆಸ್ಟ್‌ಹೌಸು 'ಮಲಯಮಾರುತ"ಕ್ಕೆ ಹೋಗಿದ್ದೆವು. ಅದರ ತುತ್ತತುದಿಯ ಪುಟ್ಟ ರೂಮಿನಲ್ಲಿ ಅಗ್ಗಿಷ್ಟಿಕೆಯ ಮುಂದೆ ಕೂತು ತುಂಬ ರಾತ್ರಿಯ ತನಕ ಹಾಡುತ್ತಿದ್ದೆವು. ಅದು ಮಳೆಯ ಮಾರುತ ಎನ್ನಿಸುವಂತೆ ಗಾಳಿಯೂ ಮಳೆಯ ಜಪ್ಪುತ್ತಿತ್ತು. ಅಲ್ಲಿ ಪುಣ್ಯಕ್ಕೆ ಕರೆಂಟಿರಲಿಲ್ಲ. ದೀಪದ ಮಿಣುಕು ಬೆಳಕೂ ಆರಿಹೋಗಿ ಕೊನೆಗೆ ಉಳಿದದ್ದು ಕೇವಲ ಕೆಂಡದ ಮಂದ ಬೆಳಕು. ಆಗ ನೆನಪಾದದ್ದು ಅಲ್ಲಿಗೆ ಹದಿನಾಲ್ಕು ಮೈಲಿ ದೂರದಲ್ಲಿರುವ ಪೂರ್ಣಚಂದ್ರ ತೇಜಸ್ವಿ. ಅವರ ನಿಗೂಢ ಮನುಷ್ಯರು ನೀಳ್ಗತೆ. ನಮ್ಮೂರಲ್ಲಿ ಥಂಡಿ ಜಗಲಿಯಲ್ಲಿ ಬೆಚ್ಚಗೆ ಹೊದ್ದುಕೊಂಡು ಕುಳಿತು ಕರಿದ ಹಪ್ಪಳ ತಿನ್ನುತ್ತಲೋ ಅಪ್ಪನ ಬೀಡಿಯನ್ನು ಕದ್ದು ಸೇದುತ್ತಲೋ ನಿಗೂಢ ಮನುಷ್ಯರು ಓದಿದ್ದೆ. ಅದನ್ನು ಪ್ರತಿ ಮಳೆಗಾಲದಲ್ಲೂ ಮತ್ತೆ ಮತ್ತೆ ಓದುತ್ತೇನೆ.

ಆಮೇಲೆ ಅಲ್ಲಿಂದ ನಿಮಗೂ ಗೆಳೆಯರಾದ ಸುಕುಮಾರ್‌ ಮನೆಗೆ ಹೋಗಿದ್ದೆವು. ಗುಡ್ಡದ ಮೇಲಿರುವ ಆ ಒಂಟಿಮನೆಯನ್ನು ನಡಕೊಂಡೇ ತಲುಪಿದಾಗ ಅಲ್ಲಿ ಬಿಸಿಬಿಸಿ ಕುಚ್ಚಲಕ್ಕಿಯ ಗಂಜಿ ಮತ್ತು ಉಪ್ಪಿನಕಾಯಿ. ಜೊತೆಗೆ ನೆಲ್ಲಿಕಾಯಿಯಿಂದ ಮಾಡಿದ ವೈನು. ಹೊರಗೆ ಕಾಲಿಟ್ಟರೆ ಆಕಾಶ ಎನ್ನುವಂತಿದ್ದ ಆ ಮನೆಯ ಜಗಲಿಯಲ್ಲಿ ಕುಳಿತು ಊಟ ಮಾಡಿದ್ದು ಇವತ್ತಿನ ತನಕ ಉಂಡ ಸೊಗಸಾದ ಊಟ.

ಮಳೆಯ ಬಗ್ಗೆ ಆಕಾಶ ಮಾರ್ಗದಲ್ಲಿ ಪುರವಣಿ ತರುತ್ತಿದ್ದೇವೆ ಎಂದು ನೀವು ಹೇಳಿದಾಕ್ಷಣ ಇವೆಲ್ಲ ನೆನಪುಗಳು ಹೀಗೆ ಒಟ್ಟಿಗೆ ಧುಮುಕಿದವು. ಈಗಲೂ ಮಳೆಯ ಧೋಯೆಂಬ ಸದ್ದು ಕಿವಿತುಂಬಿದೆ. ಮಳೆ ಮನತುಂಬಿದೆ.

ನಿಮ್ಮ,

- ಜೋಗಿ

English summary
Thy fate is the common fate of all; Into each life some rain must fall. - Henry Wadsworth Longfellow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X