ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮಳೆ ಹುಯ್ದಾಗ

By Staff
|
Google Oneindia Kannada News
ಏನೆಂದು ಬರೆಯಲಿ ?

ಅಂದೂ ಇಂದಿನ ಹಾಗೇ. ಕಲ್ಲು ಮಳೆ ಕರೆಯುತ್ತಿತ್ತು. ಒದ್ದೆಯಾದ ನಸುಗಪ್ಪು ಗಗನದ ಅಂಚಿಂದ ಗುಡುಗುಡುಗುಡು. ಸಳಸಳಾರೆಂದು ಮಿಂಚಿ ಮಾಯವಾಗುವ ಬೆಳ್ಳಿರೇಖೆಗಳು. ಅದೇ ಕಿಟಕಿ, ಬಾಗಿಲುಗಳು. ಅದೇ ಪಟಪಟನೆ ಬಡಿದುಕೊಳ್ಳುವ ಪರದೆಗಳು!

ಆದರೂ.... ಅಂದು ಎಂದಿನ ಹಾಗಲ್ಲವೇ ಅಲ್ಲ !

ಅಂದು ‘ಆ’ ಸುದ್ದಿ ಹೊತ್ತು ತಂದುದು ‘ಈ’ ಮಳೆಯೇ ಅಲ್ಲವೇ? ಅಂದಿನಿಂದ ಬೆಚ್ಚನೆಯ ಗೂಡಿನ ಹಕ್ಕಿಗಳ ಜೀವನ ದಿಕ್ಕಾಪಾಲಾಗಿ ಚೆದುರಿಹೋಗಲಿಲ್ಲವೇ? ಹೊರಗಿನ ಚಂಡಮಾರುತದ ರಭಸಕ್ಕೆ ಸಾಟಿಯಾದ ಬಿರುಗಾಳಿ ನನ್ನ ಪುಟ್ಟ ಮನಸಿನಲ್ಲೂ ಎದ್ದುಬಿಡಲಿಲ್ಲವೇ? ನನ್ನೆದೆ ಹೊಡೆದುಕೊಳ್ಳುವುದನ್ನೇ ಮರೆತ ಕ್ಷಣಗಳು! ಇದೇನು? ಏನಿದು? ಏಕೆ ಹೀಗಾಯ್ತು ? ಏನೂ ಅರಿಯದ ಹಾಗೆ ಬೆಪ್ಪಾದ ಮನಸ್ಸುಗಳಿಗೆ ... but, Still I love Rain ಕಾರ್ಮೋಡಗಳು ಮುಸುಕಿದ ಹೊತ್ತು ! ಮನೆಯಾಳಗೆ ಮೆತ್ತಗೆ ಕಾಲಿಡುತ್ತಿದ್ದ ಕತ್ತಲನ್ನು ಮನಸ್ಸಿನೊಳಗೂ ಹರಿಯಗೊಡುತ್ತಾ ಕಿಟಕಿಯಾಚೆ ಮುಖ ಹೊರಳಿಸಿದಾಗ ಕಣ್ಣುಗಳಿಗೆ ಕಂಡದ್ದು ರಪರಪನೆಂದು ಎರಚುತ್ತಿದ್ದ ಇದೇ ಮಳೆಯಲ್ಲವೇ ? ಒಂದೊಂದು ಹನಿಯನ್ನೂ ಎಣಿಸುತ್ತಿದ್ದೆ ಕಲ್ಲಿನಂತೆ ನಿಂತು. ಹಾಗಾದರೂ ಹೃದಯ ಹಿಂಡುವ ಆ ವೇದನೆ ಶಮನವಾದೀತೆಂದು. ಈ ಕ್ಷಣವನ್ನು ದಾಟಿ ನಡೆದುಬಿಟ್ಟರೆ ಹೇಗೋ ಈ ಘಟನೆಯನ್ನು ಇಲ್ಲವಾಗಿಸಬಹುದೆಂಬ ಹುಚ್ಚುತನ !

ಅಂದಿಗೆ ಮಳೆಯ ಕುರಿತಾದ ನನ್ನ ಗೆಳೆತನ, ಪ್ರೇಮ, ಬಾಲ್ಯದ ನಂಟು, ಹದಿವಯಸಿನ ಆಸೆ, ಸಿಟ್ಟು, ಸೆಡವು, ಕಾತರ, ನಿರೀಕ್ಷೆ ಎಲ್ಲವೂ, ಮುಖಕ್ಕೆ ರಾಚಿ ರಾಚಿ ನೆಲಕ್ಕುರುಳಿ, ಓಣಿಯ ಕೆರೆಯಾಗಿ ಹರಿವ ಆ ನೀರಿನ ಹನಿಗಳೊಂದಿಗೇ ಕೊಚ್ಚಿಹೋದಂತೆನಿಸಿತು. ಇನ್ನೆಂದೂ ಇದೇ ಮಳೆಯನ್ನು ಅದೇ ತನ್ಮಯತೆಯಿಂದ, ಪ್ರೀತಿಯಿಂದ ನೋಡಲಾರೆ, ಅದರೊಂದಿಗೆ ಆಡಲಾರೆ ಎನ್ನಿಸಿತಲ್ಲ ! ನೀನಲ್ಲಿ ಇರಲಿಲ್ಲ, ಅದಕ್ಕೇ ನನ್ನ ಕಣ್ಣಿಂದ ಅಂದು ಹರಿದ ಕೋಡಿ ಒಣಗಿದ ಮೇಲೆ ಮನಸಿನ ಮೇಲೆ ಎಳೆದ ಕಹಿಗೆರೆಗಳನ್ನು, ಕಾಣಲು ಸಾಧ್ಯವೇ ಇಲ್ಲ !

ವರುಷಗಳ ನಂತರ ಇಂದೂ ಅದೇ ಮಳೆ. ಹೊಸದೇನಲ್ಲ. ಆದರೂ ಅದೇಕೊ ಅಂದಿನ ನಂತರ ಬಿದ್ದ ಮೊದಲನೆಯ ಮಳೆಯೇನೋ ಎಂಬಂತೆ. ನಡುವಿನ ಮಳೆಗಳೆಲ್ಲ ಎಲ್ಲಿ ಹೋದವು? ಅವೆಲ್ಲಾ ನನ್ನ ಕಣ್ಣು ತಪ್ಪಿಸಿದುದು ಹೇಗೆ? ನನಗೆ ಅರಿವಿಲ್ಲ. ಅಂತೂ ಒಂದು ಹೊಸತಾದ ಮಳೆ. ಸಂಜೆ ಮೂರಕ್ಕೆ ಹಿಡಿದ ಜಡಿ. ಇನ್ನು ಎಂದೆಂದಿಗೂ ನಿಲ್ಲುವುದಿಲ್ಲವೇನೋ ಎಂಬಂತೆ ಧಾರಾಕಾರವಾಗಿ ಸುರಿಯುತ್ತಿದೆ. ಕೊಂಚ ಬೇಗನೆ ಕೆಲಸದಿಂದ ಬಿಡುಗಡೆ ಪಡೆಯಬೇಕೆನಿಸಿ ಮೇಲೆದ್ದಾಗ ಸಂಜೆಯ ಐದು ದಾಟಿತ್ತು. ಅದೇ ಆ ಕ್ಷಣವೇ ನಿಂತಿದೆ ಮಳೆ. ತಣ್ಣನೆಯ ಗಾಳಿ. ಮಣ್ಣಿನ ಮೆದು ವಾಸನೆ. ಹೌದೋ ಅಲ್ಲವೋ ಎನ್ನುವಂತೆ ತೆಳ್ಳಗೆ ಮೂಡಿದ ಮಳೆಬಿಲ್ಲು , ನನ್ನ ಹಾಗೂ ಆಗಸದ ನಡುವಿನ ಸೇತುವೆಯಂತೆ. ನಡೆಯುತ್ತ ಹೊರತಾಗ ಕಾಲಿಗಂಟಿದ ಕೆಸರು, ಅದನ್ನು ತೊಳೆದುಕೊಳ್ಳಲು ಬೇಕು-ಬೇಕೆಂದೇ ರಸ್ತೆಯ ಪುಟ್ಟ ಹೊಂಡಗಳಲ್ಲಿ ಕಾಲಿಟ್ಟು ಎರಚಿಸಿಕೊಂಡ ತಿಳಿ ನೀರು.

ಮತ್ತೆ ಹೊಯ್ದುಬಿಡುತ್ತೇನೆ ಎಂದು ಹೆದರಿಸುವ ಹಾಗೆ ಸಣ್ಣ ದನಿಯ ಗುಡುಗು. ನಾನೆಲ್ಲಿದ್ದೆ ಇಷ್ಟು ದಿನ ? ಎಲ್ಲಿ ಕಣ್ಮರೆಯಾಗಿದ್ದೆ ? ನನಗೇ ಅರಿವಿಲ್ಲದೆ ಹೇಗೆ ಬದುಕಿದ್ದೆ? ಇಂದೆ ಜನ್ಮ ತಳೆದಂತೆ ಇದೆಯಲ್ಲಾ ? ಅಲ್ಲೊಂದು ಇಲ್ಲೊಂದು ಹನಿದ ಹನಿಗಳಿಗೆ ಮೊಗವೊಡ್ಡುತ್ತಲೇ ಸಾಗಿದೆ, ಆಗ ತಾನೇ ಮಲಗೆದ್ದ ಚಿಕ್ಕ ಮಗುವಿನ ಹಾಗೆ ಮನಸ್ಸೆಲ್ಲ ಖಾಲಿ, ಹಗುರ, ಸ್ವಚ್ಛ, ಸ್ನಿಗ್ಧ ! ಎಲ್ಲ ನೆನಪುಗಳೂ ನನ್ನಲ್ಲೇ ಇರುತ್ತವೆ, ಯಾವುದೂ ಅಳಿಯಲಾರದು. ಅಳಿಸುವ ಪ್ರಯತ್ನವೂ ವ್ಯರ್ಥ. ಆದರೂ....ಇಂದು ಮಳೆಯ ‘ಆ’ ನೆನಪು ಮಾತ್ರ ಅಳಿಸಿಹೋಗಿದೆ. ‘ಈ’ ಮಳೆ ‘ಆ’ ಮಳೆಯಲ್ಲವೇ ಅಲ್ಲ. ಇದು ಹೊಸದೇ! ಹಾಗನ್ನಿಸಲು ಅದೆಷ್ಟು ವರ್ಷಗಳು ಬೇಕಾದವು! ಮತ್ತೆ ನನ್ನ ಅಸ್ತಿತ್ವ. ಆ ಇರುವು, ಹಂಬಲ, ಪ್ರೀತಿ, ಎಲ್ಲವೂ ಜೀವ ಪಡೆದವೇ ? ನನಗೆ ಗೊತ್ತಿಲ್ಲ. ಇಷ್ಟು ಮಾತ್ರ ನಿಜ. ನಾನಂತೂ ಮಳೆಯನ್ನು ಮತ್ತೆ ಪ್ರೀತಿಸುವೆ!

ಮುಖಪುಟ / ಮೇಘ ಮಲ್ಹಾರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X