ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿಗಳ ಪ್ರಾಮಾಣಿಕತೆ ಪ್ರಶ್ನಿಸುವ ನೈತಿಕ ಸ್ಥೈರ್ಯ ವಿಶ್ವನಾಥ್‌ಗೆ ಇದೆಯಾ?

By Staff
|
Google Oneindia Kannada News

Education Minister H.Vishwanathಮೈಸೂರು : ಸಾಹಿತಿಗಳ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ಹಂತದಲ್ಲಿ ಮಾತಾಡುತ್ತಿರುವ ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಈ ಬಾರಿದ ಸರದಿ ಮೈಸೂರಿನ ಸಾಹಿತಿಗಳದ್ದು.

ಪ್ರೊ.ಜಿ.ಹೆಚ್‌.ನಾಯಕ್‌, ಶಿವರಾಮ್‌ ಕಾಡನಕುಪ್ಪೆ, ಎನ್‌.ಎಸ್‌.ರಘುನಾಥ್‌ (ಭಾಷಾ ತಜ್ಞ), ಪ್ರೊ.ಪಂಡಿತಾರಾಧ್ಯ ಮತ್ತು ಪ್ರೊ.ಬೋರಲಿಂಗಯ್ಯ- ಇವರೆಲ್ಲರ ಭಾನುವಾರದ ಕಾರ್ಯಕ್ರಮ ಸುದ್ದಿಗೋಷ್ಠಿ. ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಎಗ್ಗು ಸಿಗ್ಗಿಲ್ಲದೆ ಮಾತಾಡುವ ಸಚಿವ ವಿಶ್ವನಾಥ್‌ ಸಚಿವ ಸಂಪುಟದಲ್ಲಿ ಇರಬೇಕೆ ಬೇಡವೇ ಅನ್ನುವುದನ್ನು, ಬುದ್ಧಿವಂತರು ಎನಿಸಿಕೊಂಡಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಸಮಯವಿದು ಎಂದರು.

ಯಾವ್ಯಾವ ಸಾಹಿತಿಗಳ ಮಕ್ಕಳು, ಮೊಮ್ಮಕ್ಕಳು ಇಂಗ್ಲಿಷ್‌ ಶಾಲೆಗಳಿಗೆ ಹೋಗುತ್ತಿದ್ದಾರೆ ಅನ್ನುವ ಪಟ್ಟಿಯೇ ಇದೆ. ಅದನ್ನು ತೋರಿಸುತ್ತೇನೆ ಅಂತ ಬೆದರಿಸುತ್ತಿರುವ ಸಚಿವರ ವಿರುದ್ಧ ಹರಿಹಾಯ್ದಿರುವ ಸಾಹಿತಿಗಳು, ಅದನ್ನು ಈಗಲೇ ಬಿಡುಗಡೆ ಮಾಡಲಿ. ನಾವು ಹೆದರುವುದಿಲ್ಲ. ತಮ್ಮ ಮೊಮ್ಮಕ್ಕಳು ಇಂಗ್ಲಿಷ್‌ ಶಾಲೆಗಳಲ್ಲಿ ಓದಲು ತಾತಂದಿರು ಹೇಗೆ ಕಾರಣರಾಗುತ್ತಾರೆ? ಅದು ಆ ಮಕ್ಕಳ ತಂದೆ- ತಾಯಿಯರ ನಿರ್ಣಯವಲ್ಲವೇ ಎಂದು ಪ್ರಶ್ನಿಸಿದರು.

ಸಾಹಿತಿಗಳು ತಾವು ಓದಿದ ಶಾಲೆಗಳಿಗಾದರೂ ಪುಕ್ಕಟೆಯಾಗಿ ತಮ್ಮ ಕೃತಿಗಳನ್ನು ಕೊಟ್ಟಿದ್ದಾರೆಯೇ ಎಂದು ವಿಶ್ವನಾಥ್‌ ಪ್ರಶ್ನಿಸಿದ್ದಾರೆ. ಶಾಲಾ ಗ್ರಂಥಾಲಯಗಳಲ್ಲಿನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಿಓಡಿ ತನಿಖೆಯಾಗಿದೆ. ಇದು ಅವರ ಖಾತೆಯಡಿಯಲ್ಲೇ ನಡೆದಿರುವುದು. ಇದಕ್ಕೆ ಯಾರು ಕಾರಣ ಅನ್ನವುದನ್ನು ಅವರೇ ಹೇಳಬೇಕು. ಸಚಿವರು ಇದೇ ರೀತಿ ಅತಿರೇಕದ ಹೇಳಿಕೆಗಳನ್ನು ನೀಡುತ್ತಾ ಹೋದರೆ, ಅವರ ಜೀವನದ ಪುಟಗಳನ್ನು ಜನರೆದುರಿಗಿಡಲು ನಾನೂ ಸಿದ್ಧ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಹೆಚ್‌.ನಾಯಕ್‌ ತರಾಟೆಗೆ ತೆಗೆದುಕೊಂಡರು.

ಸಾಹಿತಿಗಳು ಎಸೆದಿರುವ ಪ್ರಶ್ನೆಗಳು ಹೀಗಿವೆ....

  • ಬರುವ ಶೈಕ್ಷಣಿಕ ವರ್ಷದಿಂದ ಹೊಸ 300 ಇಂಗ್ಲಿಷ್‌ ಶಾಲೆಗಳನ್ನು ತೆರೆಯಲು ಶಿಕ್ಷಣ ಸಚಿವ ಎಚ್‌.ವಿಶ್ವನಾಥ್‌ ಒಬ್ಬರೇ ಅನುಮತಿ ಕೊಟ್ಟದ್ದು ಯಾಕೆ?
  • ಸಚಿವರ ನಿರ್ಧಾರಕ್ಕೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬೆಂಬಲ ಸೂಚಿಸಿದ್ದು ಯಾಕೆ?
  • ಕಾನ್ವೆಂಟ್‌ಗಳಲ್ಲಿ ಯಾವ್ಯಾವ ಸಾಹಿತಿಗಳ ಮಕ್ಕಳು- ಮೊಮ್ಮಕ್ಕಳು ಓದುತ್ತಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಲು ಸಚಿವರನ್ನು ತಡೆಯುತ್ತಿರುವುದಾದರೂ ಏನು?
  • ಬರಗೂರು ರಾಮಚಂದ್ರಪ್ಪ ಸಮಿತಿಯ ವರದಿಗೆ ಸಚಿವರ ನಿಲುವೇನು?
  • ಹೊಸ ಇಂಗ್ಲಿಷ್‌ ಶಾಲೆಗಳನ್ನು ತೆರೆಯಲು ಸಚಿವ ಸಂಪುಟ ಒಪ್ಪದಿದ್ದರೂ, ಸಚಿವರು ಅದಕ್ಕೆ ಪಟ್ಟು ಹಿಡಿರುವುದು ಯಾಕೆ?
  • ಕನ್ನಡದ ಅಭಿವೃದ್ಧಿಗಾಗಿಯೇ ಬಹುತೇಕ ಸಾಹಿತಿಗಳು ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಇಂಥವರ ಪ್ರಾಮಾಣಿಕತೆ ಪ್ರಶ್ನಿಸುವ ಯಾವ ನೈತಿಕ ಸ್ಥೈರ್ಯ ಸಚಿವ ವಿಶ್ವನಾಥ್‌ಗೆ ಇದೆ?
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X