ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಲಗಳನ್ನು ನಾವು ಉಳಿಸಿಕೊಳ್ಳಬೇಕು ...

By Staff
|
Google Oneindia Kannada News

*ಮೊಹಮ್ಮದ್‌ ಶಫೀಕ್‌

ಹೈದರಾಬಾದ್‌ : ನಮ್ಮ ಭಾಷಾ ಮೂಲಗಳನ್ನು ಅದರಲ್ಲೂ ಸಮಾಜದ ಕನಿಷ್ಠ ವರ್ಗಗಳ ಅಭಿವ್ಯಕ್ತಿ ಭಾಷೆಗಳನ್ನು ಅವುಗಳ ಮೂಲರೂಪದಲ್ಲೇ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಯು.ಆರ್‌. ಅನಂತಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಬಹುಭಾಷೆಗಳ ಹಿನ್ನೆಲೆಯಲ್ಲಿ ವಿಶ್ವ ಭಾಷೆಗಳು - 5 ದಿನಗಳ ಸಮ್ಮೇಳನವನ್ನು ಬುಧವಾರ (ಜ.3) ಹೈದರಾಬಾದ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಣ್ಣ ಸಣ್ಣ ಭೂ ಭಾಗಗಳ, ಸಂಸ್ಕೃತಿ ಪಂಗಡಗಳ ಭಾಷೆಗಳು ಜಾಗತೀಕರಣದ ಪ್ರಭಾವದಿಂದ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಸಂಕಿರಣದಲ್ಲಿ ಭಾಗವಹಿಸಿರುವ ತಜ್ಞರ ಆತಂಕಕ್ಕೆ ಅನಂತಮೂರ್ತಿ ದನಿಗೂಡಿಸಿದರು.

ಇಂಗ್ಲೀಷ್‌ ಅಥವಾ ಯಾವುದೇ ಪ್ರಬಲವಾದ ಭಾಷೆಯ ನಡುವೆಯೂ ಮೂಲಭಾಷೆಗಳನ್ನು ಉಳಿಸಿಕೊಳ್ಳಲೇ ಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಅವರು ಸಣ್ಣ ಸಣ್ಣ ಭಾಷೆಗಳು ಜಾಗತೀಕರಣದ ಪ್ರಭಾವದಿಂದ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮಕ್ಕಳು ಇಂಗ್ಲೀಷಿನಲ್ಲಿ ಕಲಿಯುವುದರಿಂದಲೇ ಅವರ ಭವಿಷ್ಯ ಉಜ್ವಲವಾಗುವುದೆಂದು ಅನೇಕ ಪೋಷಕರು ನಂಬಿದ್ದಾರೆ. ಆದರೆ, ನಾವು ಮನೆಯಲ್ಲಿ ಮಾತನಾಡುವ ಅಥವಾ ಬೀದಿಯಲ್ಲಿ ಮಾತನಾಡುವ ಭಾಷೆಯ ರಕ್ಷಣೆ ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಹತ್ವವಾದುದು ಎಂದು ಅನಂತಮೂರ್ತಿ ಹೇಳಿದರು.

ಸಾವಿನ ಅಂಚಿನತ್ತ ಸಾಗುತ್ತಿರುವ ಅನೇಕ ಭಾಷೆಗಳನ್ನು ರಕ್ಷಿಸುವುದು ಹೇಗೆ?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಚಿಂತನೆ, ಪ್ರಯತ್ನಗಳಲ್ಲಿ ಜಗತ್ತಿನ ವಿವಿಧ ಭಾಗಗಳ ಭಾಷಾ ತಜ್ಞರು ನಿರತರಾಗಿದ್ದಾರೆ. ಸಾಯುವ ಅಂಚಿನತ್ತ ಸಾಗುತ್ತಿರುವ ಭಾಷೆಗಳನ್ನು ಆ ಭಾಷೆಗಳ ವೈವಿಧ್ಯತೆಯ ಹಿನ್ನೆಲೆಯಲ್ಲಿಯೇ ಅಭಿವೃದ್ಧಿ ಪಡಿಸಿ ಬೆಳಿಸುವುದು ಅವರ ಉದ್ದೇಶ. ಈ ಕುರಿತು ಸಮ್ಮೇಳನದಲ್ಲಿ ಅವರುಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ.

ದಕ್ಷಿಣ ಏಷ್ಯಾದ ಭಾರತ, ನೇಪಾಳ, ಬಾಂಗ್ಲಾ ಹಾಗೂ ಪಾಕಿಸ್ತಾನ ಮೂಲದ ಅನೇಕ ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಬಗ್ಗೆ ಭಾಷಾ ತಜ್ಞರು ಆತಂಕ ವ್ಯಕ್ತ ಪಡಿಸಿದ್ದಾರೆ. ಅಂದಹಾಗೆ ಸಂಕಿರಣವನ್ನು ಏರ್ಪಡಿಸಿದ್ದುದು ಅಲ್ಯುಮಿನಿ ಅಸೋಸಿಯೇಷನ್‌ ಆಫ್‌ ಇಂಗ್ಲಿಷ್‌ ಅಂಡ್‌ ಫಾರಿನ್‌ ಲಾಂಗ್ವೇಜಸ್‌(ಸಿಐಇಎಫ್‌ಎಲ್‌). ಆಸ್ಟ್ರೇಲಿಯಾ, ಬ್ರಿಟನ್‌, ಹಾಂಕಾಂಗ್‌, ಇರಾಕ್‌, ಇಸ್ರೇಲ್‌, ಜಪಾನ್‌ ಹಾಗೂ ಅಮೆರಿಕೆಗೆ ಸೇರಿದ ಸುಮಾರು 40 ಭಾಷಾತಜ್ಞರು ಸಂಕಿರಣದಲ್ಲಿ ಭಾಗಿಯಾಗಿದ್ದಾರೆ. ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳೂ ಅಲ್ಲಿದ್ದಾರೆ.

ಸಂಪರ್ಕದಲ್ಲಿರುವ ಭಾಷೆಗಳು, ಭಾಷೆಯ ಸಂವಹನೆ, ಭಾಷೆಯ ಸಹಕಾರ, ಅಲ್ಪ ಸಂಖ್ಯಾತ ಮತ್ತು ಬಹು ಸಂಖ್ಯಾತ ಭಾಷೆಗಳು, ಭಾಷೆಗಳ ಮೇಲೆ ಜಾಗತೀಕರಣದ ಪ್ರಭಾವ, ವರ್ಗಾವಣೆಯಿಂದ ಭಾಷೆಗಾಗುವ ನಷ್ಟ, ಭಾಷಾ ನೀತಿ, ಶಿಕ್ಷಣ ಹಾಗೂ ಹೊಸ ತಂತ್ರಜ್ಞಾನದಲ್ಲಿ ಭಾಷೆಯ ಪಾತ್ರ ಮುಂತಾದ ವಿಷಯಗಳ ಬಗ್ಗೆ ಸುಮಾರು 130 ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗುತ್ತವೆ.

ಭಾಷೆಯ ಸಾವು ಮತ್ತು ಪುನರ್ಜನ್ಮ : ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದ ಇಲಿನಾಯ್ಸ್‌ ವಿಶ್ವ ವಿದ್ಯಾಲಯದ ಪ್ರೊ. ಬ್ರಜ್‌ ಬಿ. ಕಚ್ರು, ಕಾಶ್ಮೀರಿ ಸೇರಿದಂತೆ ಸುಮಾರು ಪ್ರತಿಶತ 50 ಜಾಗತಿಕ ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದರು. ವಿಶ್ವದಲ್ಲಿ ಸುಮಾರು 6 ಸಾವಿರ ಭಾಷೆಗಳಿವೆ. ಆದರೆ ಅವುಗಳಲ್ಲಿ ಬಹು ಪಾಲು ಅಲ್ಪ ಸಂಖ್ಯಾತ ಭಾಷೆಗಳು. ಉತ್ತರ ಆಸ್ಟ್ರೇಲಿಯಾದ ಆಲವಾ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವವರ ಸಂಖ್ಯೆ 17 ರಿಂದ 20 ಮೀರುವುದಿಲ್ಲ . ಅಂತೆಯೇ ಉತ್ತರ ಕ್ಯಾಲಿಫೋರ್ನಿಯಾದ ಅಚುಮವಿಯನ್ನು ಮಾತನಾಡುವವರ ಸಂಖ್ಯೆ ಕೇವಲ 10 ಮಾತ್ರ ಎಂದು ಉದಾಹರಣೆಗೆ ನೀಡಿದರು.

380 ಭಾಷೆಗಳನ್ನು ಹೊಂದಿರುವ ಭಾರತ, ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಭಾಷೆಗಳಿಗೆ ತವರಾಗಿರುವ ನಾಲ್ಕನೇ ದೊಡ್ಡ ರಾಷ್ಟ್ರವೆನಿಸಿದೆ. ಉಳಿದಂತೆ ನೈಜೀರಿಯಾದಲ್ಲಿ 410, ಇಂಡೋನೇಷಿಯಾದಲ್ಲಿ 650 ಹಾಗೂ ಪಪುವ ನ್ಯೂ ಗ್ಯುನಿಯಾ 850 ಭಾಷೆಗಳನ್ನು ಹೊಂದಿದೆ ಎಂದು ಬ್ರಜ್‌ ಹೇಳಿದರು. ಭಾಷೆಗಳ ಸಾವಿಗೆ ಕೇವಲ ಇಂಗ್ಲೀಷ್‌ ಮಾತ್ರ ಕಾರಣವಲ್ಲ . ವಿದ್ಯುನ್ಮಾನ ಮಾಧ್ಯಮಗಳ ಅಪ್ಪಳಿಸುವಿಕೆ, ಭಾಷಾ ನೀತಿ ಮುಂತಾದ ವಿಷಯಗಳು ಕೂಡ ಭಾಷೆಯ ಸಾವಿನಲ್ಲಿ ಮುಖ್ಯವಾಗುತ್ತವೆ ಎಂದರು.

ಒಡೆದು ಆಳುವ ಇಂಗ್ಲೀಷ್‌ : ಇಂಗ್ಲೀಷ್‌ ಬಲ್ಲವರು ಹಾಗೂ ಇಂಗ್ಲೀಷ್‌ ಗೊತ್ತಿಲ್ಲದ ಭಾರತೀಯರು ಎಂದು ಸಾಂಸ್ಕೃತಿಕ ವಿಭಜನೆಯನ್ನು ಇಂಗ್ಲೀಷ್‌ ಮಾಡುತ್ತಿದೆ ಎಂದು ಸಿಐಇಎಫ್‌ಎಲ್‌ನ ಉಪ ಕುಲಪತಿ ಪ್ರಮೋದ್‌ ತಲ್‌ಗೇರಿ ಅಭಿಪ್ರಾಯ ಪಟ್ಟರು.

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X