‘ಅಮೆರಿಕಾ ಹುಡುಗೀ ಬೆಸ್ಟ್ ಸೆಕ್ರಟರಿಅಷ್ಟೆ, ನಮ್ಮ ಹುಡುಗೀರು ಆಲ್‌ರೌಂಡರ್ಸ್’
ಬೆಂಗಳೂರು : ಹಿಂದೂ- ಮುಸ್ಲಿಂ, ಕನ್ನಡಿಗ- ತಮಿಳ ಇವರ ನಡುವೆ ಕೇರಿಂಗ್ ಇರಬೇಕು. ಆಗ ಮಾತ್ರ ಬಾಂಧವ್ಯಕ್ಕೆ ಅರ್ಥ ಬರುತ್ತದೆ, ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತದೆ.
ಕರ್ನಾಟಕ ಲೇಖಕಿಯರ ಸಂಘ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ಶುಕ್ರವಾರ ನಡೆದ ಭಾಷೆ ಮೀರಿದ ಬಾಂಧವ್ಯ ವಿಚಾರ ಸಂಕಿರಣದ ಅಧ್ಯಕ್ಷ ಭಾಷಣದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಡಾ। ಯು.ಆರ್.ಅನಂತಮೂರ್ತಿ ಆಡಿದ ಮಾತಿದು. ಅಮೆರಿಕದ ಹುಡುಗಿಯರು ಕೇವಲ ಬೆಸ್ಟ್ ಸೆಕ್ರೆಟರಿಯಾಗಿ ಉಳಿಯುತ್ತಾರೆ. ನಮ್ಮ ದೇಶದ ಹೆಣ್ಣು ಮಕ್ಕಳು ಅಧಿಕಾರಿಗಳು, ಪೊಲೀಸರು, ಸಾಹಿತಿಗಳು, ಎಂಜಿನಿಯರುಗಳಾಗಿ ಬೆಳೆಯುತ್ತಾರೆ. ಬೆಂಗಳೂರಲ್ಲಿ ಬಹುಭಾಷಾ ಲೇಖಕಿಯರು ಸಾಕಷ್ಟಿದ್ದಾರೆ. ಇಲ್ಲಿರುವ ಉತ್ತಮ ವಾತಾವರಣ ಭಾಷಾ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಕಾರಣವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅತ್ತಿಮಬ್ಬೆ ಪ್ರಶಸ್ತಿ ವಿಜೇತ ಲೇಖಕಿ ಸಾರಾ ಅಬೂಬಕ್ಕರ್- ಮರಾಠಿ, ತೆಲುಗು, ತಮಿಳು ಭಾಷಾ ಜನರಲ್ಲಿ ಪರಸ್ಪರ ತಿಳಿವಳಿಕೆ ಮೂಡಬೇಕು. ಕೇರಳದ ನಂಬೂದರಿಗಳಲ್ಲಿನ ಲೈಂಗಿಕ ಕಿರುಕುಳದ ಬಗ್ಗೆ ಹೆಂಗಸರು ದನಿಯೆತ್ತಿದರೆ, ಅದನ್ನು ಹತ್ತಿಕ್ಕಿದ್ದು ದೊಡ್ಡ ದುರಂತ. ಮಹಿಳಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು ಎಂದು ಕರೆ ಕೊಟ್ಟರು.
ಒಂದು ಭಾಷೆಯ ಪುಸ್ತಕ ದೇಶದ ಬೇರೆ ಭಾಷೆಗಳಿಗೆ ಅನುವಾದವಾಗಬೇಕು. ಹಾಗಾದಾಗ ಭಾಷೆಗಳ ನಡುವೆ ಪರಸ್ಪರ ಬಾಂಧವ್ಯ ಬೆಳೆಯುತ್ತದೆ. ಹೆಂಗಸರಿಗೆ ಬೆನ್ನು ತಟ್ಟುವ ಗಂಡಸರು ಈಗ ಸಾಕಷ್ಟಿದ್ದಾರೆ. ಅಡುಗೆಮನೆಯ ಕೆಲಸದಲ್ಲಿ ಗಂಡಸರೂ ನೆರವಾಗುತ್ತಿದ್ದಾರೆ. ಹೆಂಗಸರು ಸಾಹಿತ್ಯ ರಚಿಸಲು ಇನ್ನಷ್ಟು ಪ್ರೋತ್ಸಾಹವನ್ನೂ ಗಂಡಸರು ಕೊಡಬೇಕು. ತನ್ನ ಮೇಲೆ ದೌರ್ಜನ್ಯ ನಡೆದರೆ, ಹೆಂಗಸು ದನಿಯೆತ್ತುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂಕಿರಣ ಉದ್ಘಾಟಿಸಿದ ರಾಜ್ಯಪಾಲೆ ವಿ.ಎಸ್.ರಮಾದೇವಿ ಹೇಳಿದರು.
ಪಾಂಡಿಚೆರಿ ಸರ್ಕಾರದ ಲೆಫ್ಟಿನೆಂಟ್ ಗವರ್ನರ್ ಡಾ.ರಂಜನಿ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಡಾ.ನಿರುಪಮಾ, ಎಚ್.ಎಸ್.ಪಾರ್ವತಿ, ಶಶಿ ದೇಶಪಾಂಡೆ ಮೊದಲಾದವರು ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications