• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

80ರ ಜಗಲಿಯಲ್ಲಿ ಬಲ್ಲಾಳ

By Staff
|

*ವಿಶಾಖ. ಎನ್‌

Vyasaraya Ballala 80 with his wife and grand daughter - A file photo‘ಚಿಕ್ಕಮಗಳೂರಿನ ಮುಸ್ಲಿಂ ಹುಡುಗಿಯಾಬ್ಬಳು ವ್ಯಾಸರಾಯ ಬಲ್ಲಾಳರ ‘ವಾತ್ಸಲ್ಯ ಪಥ’ ಓದಿ ಪ್ರಭಾವಿತಳಾಗಿದ್ದಾಳೆ. ಆಕೆಗೆ ಶಾಲೆಗೆ ಹೋಗಿ ಓದಲು ಕಷ್ಟ. ಗೋಜಗೋಜಲು ಸಮಸ್ಯೆಗಳು. ಪರಿಹಾರಕ್ಕೆ ದಿಕ್ಕು ತೋಚಿಲ್ಲ. ತನ್ನೆಲ್ಲಾ ಕಷ್ಟವನ್ನು ಹೇಳಿಕೊಂಡು ಬಲ್ಲಾಳರಿಗೇ ಒಂದು ಪತ್ರ ಬರೆದಿದ್ದಾಳೆ. ಬಲ್ಲಾಳರು ಅದನ್ನು ಬೆಂಗಳೂರು ಪೊಲೀಸರ ಅವಗಾಹನೆಗೆ ತಂದಿದ್ದಾರೆ. ಬೆಂಗಳೂರು ಪೊಲೀಸರಿಂದ ಚಿಕ್ಕಮಗಳೂರು ಠಾಣೆಗೆ ಮಾಹಿತಿ ತಲುಪಿದೆ. ಇವತ್ತು ಆ ಹುಡುಗಿ ನಿರಾತಂಕವಾಗಿ ಶಾಲೆಗೆ ಹೋಗಿ, ಜಾಣೆಯಾಗಿ ಓದುತ್ತಿದ್ದಾಳೆ.

‘ಒಬ್ಬ ಸಾಹಿತಿಯ ಬರಹ ಹೀಗೆ ಇನ್ನೊಬ್ಬರ ಬದುಕಿಗೂ ಅರ್ಥ ದಕ್ಕಿಸಬಲ್ಲುದು. ಈ ಶಕ್ತಿ ಬಲ್ಲಾಳರ ಬರಹಗಳಿಗಿವೆ’ ಎಂದು ಜನಪ್ರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಶಹಭಾಸ್‌ಗಿರಿ ಕೊಟ್ಟಾಗ, ಬಲ್ಲಾಳರ ಕಣ್ಣಂಚಿನಲ್ಲಿ ಹನಿ!

ಬಲ್ಲಾಳರಿಗೆ 80 ತುಂಬಿದ ಡಿ.1ರ ಭಾನುವಾರ, ಬೆಂಗಳೂರಿನ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ನಡೆದ ಸಮಾರಂಭದಲ್ಲಿ ‘ವ್ಯಾಸರಾಯ ಬಲ್ಲಾಳರ ಸಮಗ್ರ ಕಥೆಗಳು’ ಪುಸ್ತಕ ಬಿಡುಗಡೆ ಮಾಡಿ ಭೈರಪ್ಪ ಮಾತಾಡಿದರು. ಅಧ್ಯಕ್ಷ ಗಾದಿಯಲ್ಲಿ ಜಿ.ಎಸ್‌.ಶಿವರುದ್ರಪ್ಪ ಹಾಗೂ ಬಲ್ಲಾಳರ ಕತೆಗಳ ಕುರಿತು ಮಾತಾಡಲು ವಿಮರ್ಶಕ ಪ್ರೊ.ಎಲ್‌.ಎಸ್‌.ಶೇಷಗಿರಿ ರಾವ್‌- ವೇದಿಕೆ ಮೇಲಿದ್ದರು. ಒಬ್ಬೇ ಒಬ್ಬ ರಾಜಕಾರಣಿ , ಕನ್ನಡ ಸ್ವಯಂಘೋಷಿತ ಚಳವಳಿಕಾರರು ಇಲ್ಲದಿದ್ದುದು, ಸಮಾರಂಭದಲ್ಲಿ ಸಾಹಿತ್ಯಿಕ ವಾತಾವರಣ ಮೈದುಂಬಿಕೊಳ್ಳಲು ಕಾರಣವಾಗಿತ್ತು.

ನಿವೃತ್ತ ಮುಖ್ಯ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾಯರು, ಪತ್ರಕರ್ತ ಹಾಗೂ ಸಾಹಿತಿ ಜಿ.ಎನ್‌.ರಂಗನಾಥ ರಾವ್‌, ಶ್ರೀನಿವಾಸ ಹಾವನೂರು ಮೊದಲಾದ ಹಿರೀಕರು ಸಭಿಕರ ಸಾಲಿನಲ್ಲಿದ್ದರು.

‘ಸಗಟು ಪುಸ್ತಕ ಮಾರಾಟ ರದ್ದಾಗಲಿ’

ಭೈರಪ್ಪನವರ ಮಾತು ಶುರುವಾದದ್ದೇ ಪುಸ್ತಕ ಮಾರಾಟ ಹಾಗೂ ಗ್ರಂಥಾಲಯ ಚಳವಳಿಯ ಕಳಕಳಿಯಿಂದ. ಪುಸ್ತಕ ಮಾರುಕಟ್ಟೆ ಉದ್ಧಾರವಾಗಬೇಕಾದರೆ ಸರ್ಕಾರ ಸಗಟು ಪುಸ್ತಕ ಮಾರಾಟವನ್ನು ನಿಷೇಧಿಸಬೇಕು ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿದ ಭೈರಪ್ಪನವರು ಈ ನಿಲುವಿಗೆ ಸಮರ್ಥನೆಗಳನ್ನೂ ಕೊಟ್ಟರು.

ಒಂದು ಪುಸ್ತಕ ತರಲು 25 ರುಪಾಯಿ ಖರ್ಚಾದರೆ 100 ರುಪಾಯಿಗೆ ಮಾರಲಿ. ಅದು ಬಿಟ್ಟು ಸಗಟು ಮಾರಾಟದಾರರು 200 ರುಪಾಯಿಗೆ ಮಾರುತ್ತಾರೆ. ಪುಸ್ತಕ ವ್ಯಾಪಾರದಲ್ಲಿ 35% ರಿಂದ 60% ಕಮಿಷನ್‌ ಹೊಡೆಯುತ್ತಿದ್ದಾರೆ. ಇದು ಸಿಗರೇಟು, ಕಬ್ಬಿಣ ಮೊದಲಾದ ವಸ್ತುಗಳಿಗಿಂಲೂ ಭಾರೀ ಹೆಚ್ಚು. ಸರ್ಕಾರ ಸಗಟು ಮಾರಾಟವನ್ನು ಒಳ್ಳೆಯ ಉದ್ದೇಶ ಇಟ್ಟುಕೊಂಡೇ ಶುರು ಮಾಡಿರಬಹುದು. ಆದರೆ ಇವತ್ತು ಸಗಟು ಮಾರಾಟ ಪುಸ್ತಕ ಮಾರುಕಟ್ಟೆಗೆ ಮಾರಕ ಎಂದ ಭೈರಪ್ಪ , ಗ್ರಂಥಾಲಯ ವಿಕೇಂದ್ರೀಕರಣದ ವಿಚಾರವನ್ನು ಪುನರುಚ್ಚರಿಸಿದರು.

ಭೈರಪ್ಪನವರು ಕಂಡಂತೆ Morally Neutral ಬಲ್ಲಾಳ

‘ಅ.ನ.ಕೃ., ಬಸವರಾಜ ಕಟ್ಟೀಮನಿ ಮತ್ತಿತರರು ಶುರುಮಾಡಿದ ಪ್ರಗತಿಶೀಲ ಸಾಹಿತ್ಯದಲ್ಲಿ ಸಿದ್ಧಾಂತಗಳಿದ್ದವೇ ಹೊರತು ಅನುಭವ ಇರಲಿಲ್ಲ. ಆದರೆ ಬಲ್ಲಾಳರ ಪ್ರಗತಿಶೀಲ ಸಾಹಿತ್ಯದಲ್ಲಿ ಅನುಭವವಿದೆ. ಕೈಗಾರಿಕಾ ವಲಯದ ‘ಬಂಡಾಯ’ಗಳನ್ನು ಹೇಳುತ್ತಲೇ ಅವರು ಪಾತ್ರಗಳ ಅಂತರಂಗವನ್ನೂ ಹೊಕ್ಕಿಬಿಡುತ್ತಾರೆ. ಮೇಲಾಗಿ ಅವರು Morally Neutral ಆಗಿ ಬರೆಯುತ್ತಾರೆ.

‘ನನ್ನ ‘ಸಾಕ್ಷಿ’ ಇಂಗ್ಲಿಷ್‌ಗೆ ಅನುವಾದವಾದಾಗ ಇಂಗ್ಲೆಂಡ್‌ಗೆ ಹೋಗಿದ್ದೆ. ಅಲ್ಲಿನ ಒಂದು ಹೆಂಗಸಿನ ಜೊತೆ ಎರಡು ತಿಂಗಳು ಕೆಲಸ ಮಾಡಿದೆ. ಕಾದಂಬರಿಯನ್ನು ಓದಿದಾಗ ಆಕೆ ಹೇಳಿದಳು- ‘you are morally committed. You should be morally neutral’. ಹಾಗೆ ಹೇಳಿದ ನಂತರ ಆಕೆಯನ್ನು ಕೇಳಿದೆ- ಹಾಗಾದರೆ ‘ಸಾಕ್ಷಿ’ಯನ್ನು ಹೆಚ್ಚು ಜನ ಓದೋಲ್ವಾ? ‘ಇಲ್ಲ ಅನ್ಸುತ್ತೆ’ ಅಂತ ಆಕೆ ನೇರವಾಗಿ ಹೇಳಿದಳು !’

ಮತ್ತೆ ಭೈರಪ್ಪನವರ ತರಾಟೆಗೆ ಸಿಕ್ಕ ವಿಮರ್ಶಕರು

ವಿಮರ್ಶಕರಿಗೆ ಭೈರಪ್ಪನವರು ಶಾಲಿನಲ್ಲಿ ಕಲ್ಲು ಸುತ್ತಿ ಹೊಡೆಯೋದನ್ನ ಇನ್ನೂ ಬಿಟ್ಟಿಲ್ಲ. ಅವರ ಮಾತಲ್ಲೇ ಕೇಳಿ- ‘ವಿಮರ್ಶಕರೆನ್ನುವ ಅಭಿಪ್ರಾಯ ನಿರ್ಮಾಪಕರು (ಣಟಜ್ಞಿಜಿಟ್ಞ ಕ್ಟಟಛ್ಠ್ಚಛ್ಟಿಠ) ಏನೇ ಬರೆದುಕೊಳ್ಳಲಿ, ಬರವಣಿಗೆ ಜೀವನ ಪ್ರೀತಿ ಕೊಡಬೇಕು. ರಸವತ್ತಾಗಿರಬೇಕು. ಟಾಲ್‌ಸ್ಟಾಯ್‌ ಕೃತಿಗಳಾಗಲೀ, ರಾಮಾಯಣ- ಮಹಾಭಾರತಗಳಾಗಲೀ ಇವತ್ತಿಗೂ ಮೆಚ್ಚಾಗಿರುವುದು ಇದಕ್ಕೇ’.

ಅರೆರೆ... ಇದೇನು ಬಲ್ಲಾಳರ ವಾದಕ್ಕೆ ಜಿಎಸ್ಸೆಸ್‌ ಪ್ರತಿವಾದ !

ಅ.ನ.ಕೃ, ಕಟ್ಟೀಮನಿಯವರು ಸಿದ್ಧಾಂತಕ್ಕೆ ಕಟ್ಟುಬಿದ್ದ ಪ್ರಗತಿಶೀಲ ಸಾಹಿತಿಗಳು ಎಂದು ಭೈರಪ್ಪ ಖಂಡಾತುಂಡಾಗಿ ಹೇಳಿದರೆ, ಜಿ.ಎಸ್‌.ಶಿವರುದ್ರಪ್ಪನವರಿಗೆ ಬಲ್ಲಾಳರ ಜೊತೆಜೊತೆಗೇ ಇವರೂ ಮುಖ್ಯರಾಗಿದ್ದಾರೆ. ಕಟ್ಟೀಮನಿಯವರ ಆವೇಶಭರಿತ ಬರಹ, ಅ.ನ.ಕೃ. ಹಾಗೂ ನಿರಂಜನರ ಕಾವ್ಯಾತ್ಮಕ ಬರಹ, ಬಲ್ಲಾಳರ ತಣ್ಣಗಿನ ಬರಹ- ಜಿಎಸ್ಸೆಸ್‌ ಪ್ರಕಾರ ಇವೆಲ್ಲಾ ಪ್ರಗತಿಶೀಲ ಚಳವಳಿಯ ಮಜಲುಗಳು, ಇವೆಲ್ಲವೂ ಮುಖ್ಯ.

ಏಳು ವರ್ಷಗಳ ಹಿಂದೆ ಅಂಕಿತ ಪ್ರಕಾಶನದ ಮೊದಲನೇ ಪುಸ್ತಕ ಬಿಡುಗಡೆ ಮಾಡಿದ್ದ ಜಿಎಸ್ಸೆಸ್‌ ಈಗ ನೂರನೇ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಕ್ಕೆ ಹೆಮ್ಮೆ ಪಟ್ಟರು. ತಮ್ಮ ಮುಗ್ಧತೆಗೆ ಆಘಾತವಾಗಿ ಮುಂಬಯಿ ಮಹಾನಗರ ಪರಿಣಮಿಸಿದ್ದು, ಅದೇ ಕಾರಣಕ್ಕೆ ತಾವು ‘ಮುಂಬೈ ಜಾತಕ’ ಪದ್ಯ ಬರೆದದ್ದನ್ನು ಅವರು ನೆನಪಿಸಿಕೊಂಡರು.

ಸಾಹಿತಿಗಳಿಗೆ ನಗರ ಜೀವನ ಅನಿವಾರ್ಯವೇ ಹೊರತು ಆಪ್ತವಲ್ಲ ಎಂದ ಜಿಎಸ್ಸೆಸ್‌, ಮೈಸೂರಲ್ಲಿದ್ದರೂ ಕುವೆಂಪು ಮನಸ್ಸು ಮಲೆನಾಡಿನ ಹಸುರೇ ಆಗಿತ್ತು ಎಂಬ ಸಮರ್ಥನೆ ಕೊಟ್ಟರು.

ಬಲ್ಲಾಳರ ಬರವಣಿಗೆಗಳಲ್ಲಿ ಆಯ್ದ ಕೆಲವನ್ನು ಜಿಎಸ್ಸೆಸ್‌ ಓದಿದರು. ಈ ಪೈಕಿ ಒಂದು ಹೀಗಿದೆ- ‘ಮುಂಬಯಿ ನನಗೆ ಸಂತೋಷ ಕೊಟ್ಟ ನಗರ, ನೋವೂ ಕೊಟ್ಟ ಶಹರ!’

50 ವರ್ಷಗಳಿಂದ ಬಲ್ಲಾಳರ ಬಲ್ಲ ಶೇಷಗಿರಿರಾಯರು

ಬಲ್ಲಾಳರ ‘ಸಂಪಿಗೆ ಹೂ’ ಎಂಬ ಕತೆಗೆ 50 ವರ್ಷಗಳ ಹಿಂದೆ ಸ್ಪರ್ಧೆಯಾಂದರಲ್ಲಿ ಮೊದಲ ಬಹುಮಾನ ಬಂತು. ಆಗಿನಿಂದ ಬಲ್ಲಾಳರ ಜೊತೆಗಿನ ತಮ್ಮ ಕೃತಿ ಸಂಬಂಧದ ಬಗ್ಗೆ ಪುಂಖಾನುಪುಂಖ ಹೇಳುತ್ತಲೇ, ಅವರ ಕತೆಗಳ ಸಂಕ್ಷಿಪ್ತ ವಿಮರ್ಶೆಯನ್ನು ಶೇಷಗಿರಿರಾಯರು ಬಿಚ್ಚಿಟ್ಟರು. ‘ತಾಯಿಯನ್ನು ಮಗು ಹಿಂಬಾಲಿಸುವಂತೆ ಬಲ್ಲಾಳರ ಕತೆ- ಕಾದಂಬರಿಗಳ ಪಾತ್ರಗಳನ್ನು ಅವರ ಪ್ರೀತಿ ಹಿಂಬಾಲಿಸುತ್ತದೆ’ ಎಂದರು. ಶೇಷಗಿರಿರಾಯರ ಪ್ರಕಾರ- ಬಲ್ಲಾಳರ ‘ಸಂಪಿಗೆ ಹೂ’ ಹಾಗೂ ‘ತ್ರಿಕಾಲ’ ಕತೆಗಳು ಕನ್ನಡದ ಶ್ರೇಷ್ಠ ಕತೆಗಳ ಯಾದಿಗೆ ಸೇರುತ್ತವೆ.

ಎಂಬತ್ತು ತುಂಬಿದರೂ ಬಾಗದೆ ನಿಲ್ಲುವ, ನೇರನಡೆಯ ಮಿತ ಮಾತುಗಾರ ಬಲ್ಲಾಳರು ತಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನೆರೆದ ಜನರನ್ನು ಕಂಡು ಆಶ್ಚರ್ಯ ಚಕಿತರಾದರು. ಇದಕ್ಕೆ ಕಾರಣವೂ ಇತ್ತು. ಕಾರ್ಯಕ್ರಮಕ್ಕೆ ಮುನ್ನ ಬಲ್ಲಾಳರ ಹೆಂಡತಿ- ‘ಎಷ್ಟು ಜನ ಬರಬಹುದು’ ಅಂತ ಕೇಳಿದರಂತೆ. ‘ಒಂದೈವತ್ತು ಜನ ಬರಬಹುದು’ ಅಂತ ಬಲ್ಲಾಳರು ಹೇಳಿದ್ದರಂತೆ. ಆದರೆ, ಸಭಾಂಗಣ ಖಚಾಖಚಿ ತುಂಬಿತ್ತು. ಪುಸ್ತಕ ಹೊರ ತರಲು ಕಾರಣರಾದ ವಿಮರ್ಶಕ ನರಹಳ್ಳಿಬಾಲಸುಬ್ರಹ್ಮಣ್ಯ ಮತ್ತು ಅಂಕಿತ ಪುಸ್ತಕದ ಪ್ರಕಾಶ್‌ ಕಂಬತ್ತಳ್ಳಿಯವರಿಗೆ ಬಲ್ಲಾಳರು ಧನ್ಯವಾದ ಹೇಳಿದರು. ಪ್ರಕಾಶ್‌ ಕಂಬತ್ತಳ್ಳಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಬಲ್ಲಾಳರಿಗೆ ಇದು ಮರೆಯಲಾಗದ ಜನ್ಮದಿನ. ಸಮಾರಂಭ ಮುಗಿದ ಇಪ್ಪತ್ತು ನಿಮಿಷಗಳ ಕಾಲ ಅವರತ್ತ ಅಭಿಮಾನಿಗಳ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿತ್ತು !

ಅಂದಹಾಗೆ ಬಲ್ಲಾಳರ ಬರಹ ಚೇತನ ಇನ್ನೂ ಜೋರಾಗಿದೆ. ಇದಕ್ಕೆ ಅವರ ಈ ಮಾತೇ ಸಾಕ್ಷಿ- ‘ನನಗೆ ಈಗಲೂ ಕಥೆ ಬರೆಯುವ ಆಸೆಯಿದೆ, ವಯಸ್ಸು -ದೇಹಶಕ್ತಿಯ ಬಗ್ಗೆ ಚಿಂತೆಯಿಲ್ಲ’.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X