ವೃದ್ಧಾಪ್ಯದ ಶಿಸ್ತು ಬದ್ಧ ಜೀವನ ಹೇಗಿರಬೇಕು..? ಬಾಳಿನ ಸಂಧ್ಯಾಕಾಲ ಹೇಗಿದ್ದರೆ ಚೆನ್ನ..?
ಬಾಳಿನ ಸಂಧ್ಯಾಕಾಲವೆನ್ನುವುದು ನೆಮ್ಮದಿಯಾಗಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲಕಳೆಯುವ ಸಮಯವಾಗಿದೆ. ಇಂತಹ ಕಾಲದಲ್ಲಿ ಆರೋಗ್ಯವನ್ನು ಸರಿಯಾಗಿ ನೋಡಿಕೊಂಡರೆ ಬದುಕು ಸುಖಮಯವಾಗಲು ಸಾಧ್ಯವಾಗುತ್ತದೆ. ಇದು ಸಾಧ್ಯವಾಗಲು ಬದುಕಿನಲ್ಲಿ ತಮ್ಮದೇ ಆದ ಶಿಸ್ತುಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ.
ಇವತ್ತಿನ ಬದುಕಿನಲ್ಲಿ ಆರೋಗ್ಯವೇ ಬಲು ಮುಖ್ಯವಾಗಿದ್ದು, ಅದಿದ್ದರೆ ಮಾತ್ರ ಜೀವನವನ್ನು ನೆಮ್ಮದಿಯಾಗಿ ಕಳೆಯಲು ಸಾಧ್ಯವಾಗುತ್ತದೆ. ಆದರೆ ಕೆಲವೊಮ್ಮೆ ನಮ್ಮ ಅಶಿಸ್ತಿನ ಜೀವನವೇ ಆರೋಗ್ಯ ಕೆಡಲು ಕಾರಣವಾಗುತ್ತದೆ. ಹೀಗಾಗಿ ವಯಸ್ಸಾಗುತ್ತಿದ್ದಂತೆಯೇ ತಮ್ಮ ಲೈಫ್ ಸ್ಟೈಲ್ ನಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು, ಶಿಸ್ತುಬದ್ಧ ಜೀವನಕ್ಕೆ ಆದ್ಯತೆ ನೀಡಿದರೆ ವೃದ್ಧಾಪ್ಯದಲ್ಲಿಯೂ ಹ್ಯಾಪಿಯಾಗಿರಲು ಸಾಧ್ಯವಾಗುತ್ತದೆ.

ಮನುಷ್ಯ ಜನ್ಮವೆತ್ತಿದ ಮೇಲೆ ಬಾಲ್ಯ, ಯೌವನವನ್ನು ಮುಗಿಸಿಕೊಂಡು ಅಂತಿಮವಾಗಿ ಮುಪ್ಪಿಗೆ ಕಾಲಿಟ್ಟು ಮುಂದೆ ಬದುಕಿಗೆ ವಿದಾಯ ಹೇಳುವುದು ಪ್ರಕೃತಿ ನಿಯಮವಾಗಿದೆ. ಹೀಗಾಗಿ ಇದ್ದಷ್ಟು ದಿನ ಖುಷಿಯಾಗಿ, ನೆಮ್ಮದಿಯಾಗಿ ಕಾಲ ಕಳೆಯುವುದಕ್ಕೆ ಸಜ್ಜಾಗಬೇಕಾಗುತ್ತದೆ. ಅದಕ್ಕೆ ಆರೋಗ್ಯವೂ ಮುಖ್ಯವಾಗುತ್ತದೆ. ನಾವು ಎಷ್ಟೇ ಹಣ ಆಸ್ತಿ ಅಂತಸ್ತು ಬಯಸಿದರೂ ಎಲ್ಲವನ್ನು ಮೀರಿ ಆರೋಗ್ಯವೂ ಬೇಕಾಗುತ್ತದೆ. ಆರೋಗ್ಯವಿಲ್ಲದ ಜೀವನ ಅದು ಜೀವನವೇ ಅಲ್ಲ.
ಆರೋಗ್ಯಕಾರಿ ಕ್ರಮ ಅಳವಡಿಸಿಕೊಳ್ಳಿ
ನಮಗೆ ನಿಮಗೆ ಎಲ್ಲರಿಗೂ ಗೊತ್ತಿರುವಂತೆ ಮುಪ್ಪು ಎನ್ನುವುದು ಸಾವಿಗೆ ಸಾಮೀಪ್ಯದ ಹಂತವಾಗಿರುವುದರಿಂದ ಇದ್ದಷ್ಟು ದಿನ ಆರೋಗ್ಯಕರ, ಉತ್ಸಾಹಭರಿತ ಮತ್ತು ಸ್ವತಂತ್ರ್ಯ ಜೀವನ ನಡೆಸಲು ಅನುಕೂಲವಾಗುವಂತೆ ಕೆಲವೊಂದು ಆರೋಗ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಆ ಸಮಯದಲ್ಲಿ ಆರೋಗ್ಯ ಕೆಟ್ಟು ಹಾಸಿಗೆ ಹಿಡಿದರೆ ಅದಕ್ಕಿಂತ ನರಕ ಮತ್ತೊಂದು ಇಲ್ಲವೇನೋ?
ವಯಸ್ಸಾಗುತ್ತಿದ್ದಂತೆಯೇ ಶಾರೀರಿಕವಾಗಿ ಮತ್ತು ದೇಹದಲ್ಲಿ ನಡೆಯುವ ಕ್ರಿಯೆಗಳಲ್ಲಿ ಒಂದಷ್ಟು ಬದಲಾವಣೆಗಳು ಕಂಡು ಬರುವುದರಿಂದ ಜತೆಗೆ ಕೆಲವೊಂದು ರೋಗಗಳು ಬಾಧಿಸುವುದರಿಂದ ಒಂದಷ್ಟು ಮಟ್ಟಿಗೆ ಆರೋಗ್ಯದ ಕಡೆಗೆ ಮತ್ತು ಆಹಾರ ಕ್ರಮಗಳತ್ತವೂ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯ ಕಂಡುಬರುತ್ತದೆ. ಹೆಂಗಸರಲ್ಲಿ ಋತುಚಕ್ರ ನಿಂತ ಬಳಿಕ ಶರೀರರದಲ್ಲಿ ಈಸ್ಟ್ರೋಜನ್ ಉತ್ಪಾದನೆ ಕಡಿಮೆಯಾಗುವುದು ಮೂಳೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.
ಆಹಾರ ಸೇವನೆಯಲ್ಲಿ ಎಚ್ಚರವಿರಲಿ
ಕರುಳಿನಲ್ಲಿ ಕ್ಯಾಲಿಯಂ ಹೀರುವಿಕೆ ಡಿ ಜೀವಸತ್ವದ ಉತ್ಪಾದನೆ ಹಾಗೂ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುವುದು ಕೂಡ ಮೂಳೆಗಳು ಸವೆಯಲು ಕಾರಣವಾಗುತ್ತದೆ. ಇದನ್ನು ಕ್ಯಾಲ್ಸಿಯಂ ಹಾಗೂ ಡಿ ಜೀವಸತ್ವವಿರುವ ಮಾತ್ರೆಗಳನ್ನು ಸೇವಿಸುವುದರಿಂದ ನಿಯಂತ್ರಣಕ್ಕೆ ತರಬಹುದಾಗಿದೆ. ವಯಸ್ಸಾದಂತೆಲ್ಲ ಜೀವಕೋಶಗಳ ಆಂತರಿಕ ಕ್ರಿಯೆ ಕುಗ್ಗುವುದರಿಂದ ದೈಹಿಕ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಖನಿಜಾಂಶದ ಕೊರತೆಯಿಂದ ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ. ಹಲ್ಲು ಮತ್ತು ವಸಡುಗಳು ದುರ್ಬಲಗೊಳ್ಳುತ್ತವೆ. ಇದರಿಂದ ಹಲ್ಲು ಉದುರುತ್ತದೆ.
ಇನ್ನು ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗದೆ ಬಾಯಿ ಒಣಗುತ್ತಿರುತ್ತದೆ. ಇದರಿಂದ ಆಹಾರವನ್ನು ಅಗೆಯಲು ಮತ್ತು ನುಂಗಲು ಕಷ್ಟವಾಗುತ್ತದೆ. ನಾಲಿಗೆಯ ಮೇಲಿರುವ ರುಚಿಗ್ರಂಥಿಗಳ ಶಕ್ತಿ ಕುಗ್ಗುವುದರಿಂದ ಆಹಾರದಲ್ಲಿರುವ ಉಪ್ಪು, ಹುಳಿ, ಖಾರ ಸೇರಿದಂತೆ ಒಟ್ಟಾರೆ ರುಚಿಯನ್ನು ಗ್ರಹಿಸುವ ಶಕ್ತಿಯೂ ಕಡಿಮೆಯಾಗಿ ಹಸಿವಾಗುವುದಿಲ್ಲ. ಹಸಿವೇ ಇಲ್ಲದಿದ್ದಾಗ ಊಟ ಮಾಡುವುದಾದರೂ ಹೇಗೆ? ಹೀಗಾಗಿ ಆಹಾರ ಸೇವನೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ.

ಬೊಜ್ಜು ಬರದಂತೆ ನೋಡಿಕೊಳ್ಳಿ
ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆಯೇ ಬೊಜ್ಜಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಾರಣ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು, ವ್ಯಾಯಾಮ ಮಾಡದಿರುವುದು, ಪಥ್ಯಗಳಿಲ್ಲದ, ಶರೀರಕ್ಕೆ ಹೊಂದದ ಆಹಾರ ಮತ್ತು ಅಗತ್ಯಕ್ಕಿಂತ ಹೆಚ್ಚು ಸೇವನೆಯೂ ಬೊಜ್ಜು ಬರಲು ಸಹಕರಿಸುತ್ತದೆ. ಬೊಜ್ಜು ದೇಹ ಮಧುಮೇಹ ಬರಲು ದಾರಿ ಮಾಡಿಕೊಡುತ್ತದೆ.
ವಯಸ್ಸಾದವರಲ್ಲಿ ನಿದ್ರೆ ಬಾರದಿರುವುದು, ಸುಸ್ತು, ಏನೋ ಒಂದು ರೀತಿಯ ಕಳವಳ ಕಂಡು ಬರುತ್ತದೆ. ಇದು ರಕ್ತ ಹೀನತೆಯಿಂದ ಬರುವ ಸಮಸ್ಯೆಗಳು. ಕಬ್ಬಿಣ ಮತ್ತು ಸಿ ಜೀವಸತ್ವ ಸಮರ್ಪಕವಾಗಿ ಸಿಗದಿದ್ದಾಗ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸೊಪ್ಪು ತರಕಾರಿ, ಕಾಳುಗಳು, ಅತ್ತಿಹಣ್ಣು, ಲಿವರ್, ಮೊಟ್ಟೆ, ಸೋಯಾಬಿನ್ ಮೊದಲಾದವುಗಳನ್ನು ಸೇವಿಸಬೇಕು.
ಹಿತ ಮಿತ ಆಹಾರ ಸೇವಿಸಿ
ವಯಸ್ಸಾದವರನ್ನು ಕಾಡುವ ಮತ್ತೊಂದು ಸಮಸ್ಯೆ ಎಂದರೆ ಮಲಬದ್ಧತೆ. ಮಲಗಟ್ಟಿಯಾಗಿ ಮಲ ವಿಸರ್ಜಿಸಲು ಕಷ್ಟವಾಗುವುದು ಮತ್ತು ಅನಿಯಮಿತವಾಗಿ ವಿಸರ್ಜನೆಯಾಗುವುದೇ ಮಲಬದ್ಧತೆಯ ಲಕ್ಷಣಗಳು. ಇದರೊಂದಿಗೆ ಹೊಟ್ಟೆ ಉಬ್ಬರ, ಆಲಸ್ಯ ಮತ್ತು ಹೊಟ್ಟೆ ತುಂಬಿದಂತೆ ಇರುತ್ತದೆ.
ಇದನ್ನು ಹೋಗಲಾಡಿಸಲು ನಾರಿನ ಅಂಶ ಹೆಚ್ಚಿರುವ ತರಕಾರಿಗಳನ್ನು ಮತ್ತು ಹೆಚ್ಚು ಪ್ರಮಾಣದಲ್ಲಿ ನೀರು ಸೇವಿಸುವುದು ಉತ್ತಮ. ನಿಯಮಿತ ಆಹಾರ ಸೇವನೆ, ವ್ಯಾಯಾಮ ಮಾಡಬೇಕಾಗುತ್ತದೆ. ವಯಸ್ಸಾದ ಬಳಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಅಗತ್ಯ. ವೈದ್ಯರ ಸಲಹೆ ಪಡೆದು ಅವರು ಹೇಳುವ ಕೆಲವು ಆಹಾರ ಕ್ರಮಗಳನ್ನು ಅಳವಡಿಸಿಕೊಂಡರೆ ಮುಪ್ಪು ಕಾಲದಲ್ಲೂ ಆರೋಗ್ಯವಾಗಿ, ಆನಂದವಾಗಿ ಬದುಕಲು ಸಾಧ್ಯವಾಗುತ್ತದೆ.












Click it and Unblock the Notifications