ವಯಸ್ಸು ಮೀರಿದ ಮದುವೆ, ಒತ್ತಡದ ಜೀವನ: ಮಹಿಳೆಯರಲ್ಲಿ ಗರ್ಭಾಪಾತ ಹೆಚ್ಚಲು ಕಾರಣವೇನು?
ಇತ್ತೀಚೆಗಿನ ದಿನಗಳಲ್ಲಿ ಗರ್ಭಾಪಾತದ ಪ್ರಕರಣ ಹೆಚ್ಚು ಹೆಚ್ಚಾಗಿ ಕಾಣಿಸುತ್ತಿದೆ. ಮದುವೆಯ ಬಳಿಕ ಮಗುವನ್ನು ಬಯಸುವ ದಂಪತಿಗೆ ಇದು ನಿರಾಸೆಯನ್ನು ತರುತ್ತಿದೆ. ಏಕೆ ಹೀಗಾಗುತ್ತಿದೆ ಎಂದು ಹುಡುಕುತ್ತಾ ಹೋದರೆ ಮುಖ್ಯವಾಗಿ ಹೆಣ್ಣು ಮಕ್ಕಳು ವಯಸ್ಸು ಮೀರಿ ಮದುವೆಯಾಗುತ್ತಿರುವುದು ಮತ್ತು ಬದಲಾದ ಲೈಫ್ ಸ್ಟೈಲ್‌ಗಳು ಕಾರಣ ಎಂಬುದು ಗೊತ್ತಾಗುತ್ತಿದೆ.
ಇವತ್ತು ಕಾಲ ಬದಲಾಗಿದೆ. ಪುರುಷನಷ್ಟೇ ಬದುಕಿನ ಬಗ್ಗೆ ಹೆಣ್ಣು ಮಕ್ಕಳು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಬದುಕಿಗೊಂದು ನೆಲೆ ಕಂಡುಕೊಂಡ ಬಳಿಕ ಮದುವೆ ಆಗುವ ನಿರ್ಧಾರ ಮಾಡುತ್ತಿದ್ದಾರೆ. ಹೀಗಾಗಿ ಮದುವೆ ಮಾಡಿಕೊಳ್ಳುವ ಹೊತ್ತಿಗೆ ಕನಿಷ್ಟ 25 ವರ್ಷ ದಾಟಿರುತ್ತದೆ. ಮತ್ತೊಂದೆಡೆ ಮದುವೆಯಾದ ತಕ್ಷಣ ಮಕ್ಕಳು ಬೇಡ ಒಂದೆರಡು ವರ್ಷ ಕಳೆದು ಆರಾಮಾಗಿ ಮಕ್ಕಳ ಬಗ್ಗೆ ಯೋಚನೆ ಮಾಡೋಣ ಎಂದು ಕೂಡ ದಂಪತಿ ಬಯಸುತ್ತಾರೆ.

ಇನ್ನು ಮಹಿಳೆಯರು ಪುರುಷರಿಗೆ ಸರಿಸಮಾನಾದ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು, ಜವಬ್ದಾರಿ ಮತ್ತು ಕೆಲಸದ ಒತ್ತಡಗಳ ನಡುವೆ ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಿದ್ದಾರೆ. ಹೀಗಾಗಿಯೂ ಆರೋಗ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲದರ ನಡುವೆ ಲೈಫ್ ಸ್ಟೈಲ್ ಗಳು ಬದಲಾಗಿದ್ದು, ಧೂಮಪಾನ, ಮದ್ಯಪಾನ, ಜಂಕ್ ಫುಡ್‌ಗಳ ಸೇವನೆಯೂ ಹೆಣ್ಮಕ್ಕಳ ಹಾರ್ಮೋನ್ ಮೇಲೆ ದುಷ್ಪಪರಿಣಾಮ ಬೀರುತ್ತಿದೆ.
ಆರೋಗ್ಯದತ್ತ ನಿರ್ಲಕ್ಷ್ಯ ವಹಿಸುವ ಮಹಿಳೆಯರು
ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವೂ ಮಹಿಳೆಯರಲ್ಲಿ ಎದ್ದು ಕಾಣಿಸುತ್ತಿದೆ. ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ವ್ಯಾಯಾಮ, ವಾಕಿಂಗ್ ಮಾಡದೆ, ಉತ್ತಮ ಆಹಾರವನ್ನು ಸೇವಿಸದೆ, ಹೊರಗಿನ ಆಹಾರಗಳಿಗೆ ಮಾರು ಹೋಗಿ ಬೊಜ್ಜು ಬೆಳೆಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ವೃತ್ತಿಪರ ಯುವತಿಯರು ತಮ್ಮ ಕುಟುಂಬದ ಹಿತದೃಷ್ಟಿಯಿಂದ ಮದುವೆಯನ್ನು ತಡ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಮದುವೆಯಾದರೂ ಒಂದಿಷ್ಟು ಸೇವಿಂಗ್ಸ್ ಮಾಡಿಕೊಂಡು ಮತ್ತೆ ಮಕ್ಕಳನ್ನು ಪಡೆಯೋಣ ಎಂದು ಚಿಂತಿಸುತ್ತಾರೆ.
ಒಂದು ವೇಳೆ ಹೀಗೆ ಆಲೋಚಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಲು ಅಗತ್ಯ. ಇಂತಹವರು ತಮ್ಮ ದೇಹಾರೋಗ್ಯವನ್ನು (ಫಲವತ್ತತೆಯನ್ನು) ಸರಿಯಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬೊಜ್ಜು ಬೆಳೆಸಿಕೊಳ್ಳಬಾರದು. ಏಕೆಂದರೆ ಬೊಜ್ಜು ಫಲವತ್ತತೆಯ ವೈರಿ. ಬೊಜ್ಜು ಇರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿ ಅದು ತಡವಾಗಿ ಮಗುವನ್ನು ಪಡೆಯಲು ಇಚ್ಛಿಸುವವರಿಗೆ ಅಡ್ಡಿಯನ್ನುಂಟು ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕೆಲವರಲ್ಲಿ ಅದೊಂದು ತಪ್ಪು ಕಲ್ಪನೆ
ಇದೆಲ್ಲದರ ನಡುವೆಯೂ ಕೆಲವು ಮಹಿಳೆಯರು ಮಗುವನ್ನು ಹೆರುವುದು ಮತ್ತು ಅದನ್ನು ನೋಡಿಕೊಳ್ಳುವುದು ಭಾರ ಎನ್ನುವ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಮಗುವನ್ನು ನೋಡಿಕೊಳ್ಳುವುದೆಂದರೆ ತಮ್ಮ ವೃತ್ತಿ ಜೀವನಕ್ಕೆ ತೊಂದರೆ ಹಾಗೂ ಆದಾಯಕ್ಕೂ ಕತ್ತರಿ ಎನ್ನುವ ಭಾವನೆ ಅವರಲ್ಲಿ ಹೆಚ್ಚುತ್ತಿದೆ. ಜತೆಗೆ ಮಗುವಿಗೆ ಹಾಲುಣಿಸುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಯೂ ಕೆಲವು ಮಹಿಳೆಯರಲ್ಲಿದೆ. ಇಂತಹವರು ಮಕ್ಕಳ ಪಡೆಯುವ ವಿಚಾರವನ್ನು ಮುಂದಕ್ಕೆ ತಳ್ಳುತ್ತಾ ಹೋಗುತ್ತಾರೆ.
ಮದ್ಯಪಾನ, ಧೂಮಪಾನ ಮಾಡಿಕೊಂಡು ಲೈಫ್ ಜಾಲಿಯಾಗಿದ್ದೇವೆ ಎಂದು ಭ್ರಮೆಯಲ್ಲಿರುವ ಕೆಲವು ಹೆಣ್ಣು ಮಕ್ಕಳು ಸಂತಾನೋತ್ಪತ್ತಿ ವಿಚಾರಕ್ಕೆ ಬಂದಾಗ ಎಚ್ಚರ ವಹಿಸಬೇಕಾಗುತ್ತದೆ. ಏಕೆಂದರೆ? ಧೂಮಪಾನ ಕೂಡ ಮಾರಕ. ಹಾಗೆಯೇ ಅತಿಯಾದ ಮದ್ಯ ಸೇವನೆಯೂ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಅತಿಯಾದ ಕಾಫಿ ಸೇವನೆಯೂ ಕೂಡ ತೊಂದರೆದಾಯಕ. ಇದೂ ಮಹಿಳೆಯರ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಪದೇ ಪದೇ ಗರ್ಭಪಾತ ಆದರೆ ಅಥವಾ ಮಾಡಿಸಿಕೊಂಡರೂ ಮುಂದೆ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ. ಅನೇಕ ಬಾರಿ ವೃತ್ತಿಪರ ಕಾರಣಗಳಿಗೆ ಮದುವೆಯನ್ನು ಮುಂದೂಡಿದರೆ ಅದು ವಿವಾಹೇತರ ಸಂಬಂಧಗಳಲ್ಲಿ ಅಂತ್ಯವಾಗುವ ಸಾಧ್ಯತೆಗಳಿರುತ್ತವೆ. ಇದು ಅನೇಕ ದೈಹಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಇವೆಲ್ಲ ಕಾರಣಗಳಿಗೆ ಗರ್ಭಧಾರಣೆ ಸಮಸ್ಯೆ ಎದುರಾಗಬಹುದು.
ವಯಸ್ಸಾದಷ್ಟು ಫಲವತ್ತತೆ ಕಡಿಮೆಯಾಗುತ್ತದೆ.
ಮಹಿಳೆಯರಲ್ಲಿ 25ವರ್ಷ ವಯಸ್ಸಿನ ನಂತರ ಉತ್ಪತ್ತಿಯಾಗುವ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತ ಬರುತ್ತದೆ. ಗರ್ಭದಲ್ಲಿನ ಭ್ರೂಣದ ಮೊದಲ ಹಂತವು ಋತುಚಕ್ರದಲ್ಲಿ ನಷ್ಟವಾಗುವ ಪ್ರಮಾಣ ಹೆಚ್ಚುತ್ತದೆ. ಇದೂ ಒಂದು ರೀತಿಯಲ್ಲಿ ಗರ್ಭಪಾತವೇ ಆಗಿರುತ್ತದೆ. ಋತುಮತಿಯಾದ ಸಂದರ್ಭದಲ್ಲಿ ರಕ್ತಸ್ರಾವದ ಜೊತೆಗೆ ಈ ಬಗೆಯ ಗರ್ಭಪಾತ ಸಂಭವಿಸಿರುತ್ತದೆ. ಸಾಮಾನ್ಯವಾಗಿ ಋತುಚಕ್ರದ 17-18 ನೇ ದಿನ ಈ ಪ್ರಕ್ರಿಯೆ ಸಂಭವಿಸಿರುತ್ತದೆ. ಮಹಿಳೆಯರ ಅರಿವಿಗೇ ಬಾರದಂತೆ ಇದು ನಡೆಯುತ್ತದೆ. ಉತ್ಪತ್ತಿಯಾದ ಭ್ರೂಣ ಗರ್ಭಪಾತವಾಗುವ ಅಪಾಯವು ಕಿರಿ ವಯಸ್ಸಿನ ಮಹಿಳೆಯರಲ್ಲಿ ಶೇ. 24 ರಷ್ಟು ಮತ್ತು 35 ವರ್ಷ ದಾಟಿದ ಮಹಿಳೆಯರಲ್ಲಿ ಶೇ. 38ರಷ್ಟು ಇರುತ್ತದೆ.
ಅಂಡಾಣುಗಳ ಅಂಶವಷ್ಟೇ ಅಲ್ಲದೇ, ಗರ್ಭದ ಅಂಶಗಳೂ ಕೂಡ ವಯಸ್ಸಾದ ಮಹಿಳೆಯರಲ್ಲಿನ ಬಂಜೆತನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂಡಾಣುಗಳನ್ನು ಕಿರಿ ವಯಸ್ಸಿನ ಮಹಿಳೆಯರಿಂದ ಪಡೆದು ವಿಭಿನ್ನ ವಯೋಮಾನದ ಮಹಿಳೆಯರ ಗರ್ಭಾಶಯಕ್ಕೆ ದಾನ ಮಾಡಿದಾಗ ಫಲಿತಾಂಶ ವಿಭಿನ್ನವಾಗಿಯೇ ಇರುತ್ತದೆ.
ಉದಾಹರಣೆಗೆ 40 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಶೇಕಡಾ 10ರಷ್ಟು ಗರ್ಭ ಕಟ್ಟುವವಿಕೆ ಯಶಸ್ವಿಯಾದರೆ, 35ಕ್ಕಿಂತ ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಇದರ ಯಶಸ್ಸಿನ ಪ್ರಮಾಣ ಶೇಕಡಾ 23ರಷ್ಟು. ರೂಢಿಗತವಾಗಿ ಹೇಳುವುದಾದರೆ, ಮಹಿಳೆ ಮೊದಲ ಬಾರಿ ಗರ್ಭ ಧರಿಸುವಾಗ 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು.
ತಜ್ಞ ವೈದ್ಯರ ಸಂಪರ್ಕಿಸುವುದು ಅಗತ್ಯ
ವಯಸ್ಸಾದಂತೆ ಗರ್ಭಧರಿಸಲು ಬೇಕಾದ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. 35 ವರ್ಷಕ್ಕಿಂತ ತಡವಾಗಿ ಮದುವೆಯಾಗುವ ಮಹಿಳೆಯರು ಕುಟುಂಬ ಯೋಜನೆಯ ಯಾವುದೇ ಕ್ರಮವನ್ನು ಅನುಸರಿಸದೇ ಇರುವುದು ಒಳ್ಳೆಯದು. ಇಂತಹ ಮಹಿಳೆಯರು ಮದುವೆಯಾದ 6 ತಿಂಗಳಲ್ಲಿ ಗರ್ಭವತಿಯರಾಗದೇ ಇದ್ದರೆ ಕೂಡಲೇ ತಜ್ಞರನ್ನು ಸಂಪರ್ಕಿಸಬೇಕು. ಇಂತಹ ಸನ್ನಿವೇಶದಲ್ಲಿ ಚಿಕಿತ್ಸೆ ಬೇಕಾಗಬಹುದು. ಈ ಸನ್ನಿವೇಶಗಳಲ್ಲಿ ಅಂಡಾಣು ವೃದ್ಧಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಬಿದ್ದರೆ ಕೃತಕ ಗರ್ಭಧಾರಣೆಯನ್ನೂ ಮಾಡುವ ಸಂದರ್ಭ ಬರಬಹುದು ಆದ್ದರಿಂದ ಹೆಣ್ಣು ಮಕ್ಕಳು ಈ ಬಗ್ಗೆ ನಿಗಾ ವಹಿಸುವುದು ಬಹು ಮುಖ್ಯವಾಗುತ್ತದೆ.












Click it and Unblock the Notifications