ಕಲ್ಲಂಗಡಿ ಸಿಪ್ಪೆ ವ್ಯರ್ಥವಲ್ಲ: ಇದನ್ನು ಈ ರೀತಿಯಲ್ಲಿ ಉಪಯೋಗಿಸಿ
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೆಚ್ಚಿದ ಬಿಸಿಲಿನ ಶಾಖದಿಂದಾಗಿ ನಿರ್ಜಲೀಕರಣ, ದಣಿವು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಸಾಮಾನ್ಯವಾಗುತ್ತವೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಕಲ್ಲಂಗಡಿ ಅತ್ಯುತ್ತಮ ಹಣ್ಣು. ಇದು ಸುಮಾರು 95 ಶೇಕಡಾ ನೀರಿನಿಂದ ಕೂಡಿದ್ದು ದೇಹದ ಹೈಡ್ರೇಶನ್‌ಗಾಗಿ ಸಹಾಯಕ. ಕೇವಲ ಒಳಗಿನ ಪಲ್ಪ್ ಮಾತ್ರವಲ್ಲ, ಅದರ ಸಿಪ್ಪೆ ಮತ್ತು ಬೀಜಗಳಲ್ಲಿಯೂ ಹಲವು ಪೋಷಕಾಂಶಗಳಿವೆ.
ಬಹುತೇಕ ಜನರು ಕಲ್ಲಂಗಡಿಯ ಕೆಂಪು ಭಾಗವನ್ನು ತಿಂದು ಸಿಪ್ಪೆಯನ್ನು ತಕ್ಷಣವೇ ಬಿಸಾಡುತ್ತಾರೆ. ಆದರೆ ನಿಜ ಹೇಳಬೇಕಂದರೆ ಕಲ್ಲಂಗಡಿಯ ಸಿಪ್ಪೆ ಸಂಪೂರ್ಣ ವ್ಯರ್ಥವಲ್ಲ. ಅದನ್ನು ಹಲವು ಆರೋಗ್ಯಕರ ಮತ್ತು ಕ್ರಿಯಾತ್ಮಕ ವಿಧಾನಗಳಲ್ಲಿ ನಾವು ಮರುಬಳಕೆಯನ್ನು ಮಾಡಬಹುದು.

ಕಲ್ಲಂಗಡಿ ಆರೋಗ್ಯಕ್ಕೆ ಏಕೆ ಒಳ್ಳೆಯದು?
ಬೇಸಿಗೆಯ ಬಿಸಿಲಿಗೆ ಕಲ್ಲಂಗಡಿ ಹಣ್ಣಿಗಿಂತ ಮಿಗಿಲಾದ ಅಮೃತ ಮತ್ತೊಂದಿಲ್ಲ ಎಂದು ಹೇಳುತ್ತಾರೆ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶದ ಪ್ರಮಾಣ ಹೆಚ್ಚು ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಕಡಿಮೆ ಕ್ಯಾಲೊರಿಗಳಿದ್ದು, ವಿಟಮಿನ್ C ಮತ್ತು A ಸಮೃದ್ಧವಾಗಿದೆ. ಜೊತೆಗೆ ಪೊಟ್ಯಾಸಿಯಂ ಮತ್ತು ಲೈಕೋಪಿನ್ ಕೂಡ ಹೊಂದಿದ್ದು, ದೇಹದ ಸಮಗ್ರ ಆರೋಗ್ಯವನ್ನು ಬೆಂಬಲಿಸುತ್ತದೆ.
ಕಲ್ಲಂಗಡಿ ಸಿಪ್ಪೆಯನ್ನು ಬಳಸುವ ಸುಲಭ ವಿಧಾನಗಳು
1. ಸಿಹಿ-ಹುಳಿ ಉಪ್ಪಿನಕಾಯಿ ತಯಾರಿಸಿ
ಸಿಪ್ಪೆಯ ಬಿಳಿ ಭಾಗವನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿದ ನಂತರ ಉಪ್ಪು, ಅರಿಶಿನ, ಸೋಂಪು ಮತ್ತು ಮಸಾಲೆ ಸೇರಿಸಿ ಸಾಸಿವೆ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಗಾಜಿನ ಬಾಟಲಿಯಲ್ಲಿ ಹಾಕಿ ಕೆಲವು ದಿನ ಸೂರ್ಯನ ಬೆಳಕಿನಲ್ಲಿ ಇಟ್ಟರೆ ರುಚಿಕರವಾದ ಉಪ್ಪಿನಕಾಯಿ ಸಿದ್ಧವಾಗುತ್ತದೆ.
2. ಕಲ್ಲಂಗಡಿ ಸಿಪ್ಪೆಯಿಂದ ಜ್ಯಾಮ್ ಮಾಡಿ
ಹಸಿರು ಮೇಲ್ಭಾಗವನ್ನು ತೆಗೆದು ಬಿಳಿ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬೇಯಿಸಿ. ನಂತರ ಸಕ್ಕರೆ ಪಾಕದಲ್ಲಿ ಬೇಯಿಸಿ ಏಲಕ್ಕಿ ಅಥವಾ ಕೇಸರಿ ಸೇರಿಸಿದರೆ ರುಚಿಯಾದ ಜ್ಯಾಮ್ ಸಿದ್ಧವಾಗುತ್ತದೆ. ಇದನ್ನು ಹೆಚ್ಚು ದಿನ ಸಂಗ್ರಹಿಸಿಡಬಹುದು.
3. ಆರೋಗ್ಯಕರ ಜ್ಯೂಸ್ ತಯಾರಿಸಿ
ಸಿಪ್ಪೆಯ ಹಸಿರು ಭಾಗ ತೆಗೆದು ಬಿಳಿ ಭಾಗವನ್ನು ಮಿಕ್ಸರ್‌ನಲ್ಲಿ ರುಬ್ಬಿ ಜ್ಯೂಸ್ ಮಾಡಬಹುದು. ಇದಕ್ಕೆ ಚಿಯಾ ಅಥವಾ ಸಬ್ಜಾ ಬೀಜಗಳನ್ನು ಸೇರಿಸಿದರೆ ರುಚಿ ಮತ್ತು ಪೋಷಕಾಂಶ ಹೆಚ್ಚಾಗುತ್ತದೆ.
ಇದಲ್ಲದೆ ಕಲ್ಲಂಗಡಿಯ ಸಿಪ್ಪೆಯನ್ನು ಚರ್ಮದ ಆರೈಕೆಯಲ್ಲಿಯೂ ಬಳಸಬಹುದು. ಸಿಪ್ಪೆಯ ಬಿಳಿ ಭಾಗವನ್ನು ಮುಖಕ್ಕೆ ಸವರಿದರೆ ಚರ್ಮಕ್ಕೆ ತಂಪು ನೀಡುತ್ತದೆ ಮತ್ತು ಸನ್‌ಬರ್ನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸಲಾಡ್ ಅಥವಾ ತರಕಾರಿಗಳ ಜೊತೆ ಸೇರಿಸಿ ಸೇವಿಸಿದರೂ ಆರೋಗ್ಯಕರವಾಗಿದೆ. ಈ ರೀತಿಯಾಗಿ ಕಲ್ಲಂಗಡಿ ಸಿಪ್ಪೆಯನ್ನು ವಿಭಿನ್ನವಾಗಿ ಬಳಸುವುದರಿಂದ ಆರೋಗ್ಯಕ್ಕೂ ಲಾಭವಾಗುವುದಷ್ಟೇ ಅಲ್ಲ, ಆಹಾರ ವ್ಯರ್ಥವನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗಿಯೂ ಬದುಕಬಹುದು.
ಸಾಮಾನ್ಯವಾಗಿ ಬಿಸಾಡುವ ಕಲ್ಲಂಗಡಿ ಸಿಪ್ಪೆಯನ್ನೇ ಈ ರೀತಿಯಲ್ಲಿ ಬಳಸಿದರೆ ಆರೋಗ್ಯಕ್ಕೂ ಲಾಭ, ಆಹಾರ ವ್ಯರ್ಥವೂ ಕಡಿಮೆ!












Click it and Unblock the Notifications