Rasam recipe: ಈ ಮಳೆಗಾಲದಲ್ಲಿ 2 ನಿಮಿಷಗಳಲ್ಲಿ ಚಟ್ ಪಟ್ ಅಂತ ರೆಡಿ ಮಾಡಿ ಬಿಸಿ ಬಿಸಿ ರಸಂ
ಮಳೆಗಾಲ ಶುರುವಾಗಿದೆ. ಥಂಡಿ ಥಂಡಿ ವಾತಾವರಣದಲ್ಲಿ ಬಿಸಿ ಬಿಸಿ ಮತ್ತು ರುಚಿ ರುಚಿಯಾದ ತಿನಿಸು ತಿನ್ನುವ ಮನಸ್ಸಾಗುತ್ತದೆ ಅಲ್ಲವೇ? ರುಚಿಯಾದ ಮತ್ತು ಆರೋಗ್ಯಕರ ರಸಂ ಎಲ್ಲರಿಗೂ ಇಷ್ಟ. ಅನ್ನದ ಜೊತೆಗೆ ತಿನ್ನುವವರು... ಹಾಗೆ ಕುಡಿಯುವವರು ಕೂಡ ಇದ್ದಾರೆ. ಇಂತಹ ಚುಮು ಚುಂಉ ಚಳಿಗೆ ಬಿಸಿ ಬಿಸಿ ರಸಂ ನಿಜಕ್ಕೂ ಆಹ್ಲಾದ.
ಹಾಗಾದರೆ, ಈ ರಸಂ ಅನ್ನು ಪಟ್ ಅಂತ ಮಾಡುವುದು ಹೇಗೆ ಗೊತ್ತಾ? ಎರಡೇ ಎರಡು ನಿಮಿಷಗಳಲ್ಲಿ ಚಟ್ ಪಟ್ ಅಂತ ರಸಂ ತಯಾರಿಸಬಹುದು. ಇದಕ್ಕೆ ಬೇಳೆ ಅಥವಾ ರಸಂ ಪೌಡರ್ ಕೂಡ ಬೇಕಾಗುವುದಿಲ್ಲ. ಕನಿಷ್ಟ, ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ರಸಂ ತಯಾರಿಸಬಹುದು.

ಮನೆಯಲ್ಲಿಯೇ ಇರುವ ಟೊಮೆಟೊ, ಉಪ್ಪು, ಅರಿಶಿನ, ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ರುಬ್ಬುವ ಮೂಲಕ ಈ ರಸವನ್ನು ತಯಾರಿಸಲಾಗುತ್ತದೆ. ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಕರಿಮೆಣಸು, ಜೀರಿಗೆ ಮತ್ತು ಹುಣಸೆಹಣ್ಣಿನ ಎಲ್ಲಾ ಪದಾರ್ಥಗಳನ್ನು ರುಬ್ಬಿಕೊಂಡು ಕಡಿಮೆ ಸಮಯದಲ್ಲಿಯೇ ಸುಲಭವಾಗಿ ತಯಾರಿಸಬಹುದು.
ಚಟ್ ಪಟ್ ಎಂದು ರಸಂ ತಯಾರಿಸಲು ಬೇಕಾದ ಪದಾರ್ಥಗಳು
1. 1/2 ಟೊಮೆಟೊ
2. 1/2 ಟೀಸ್ಪೂನ್ ಸಾಸಿವೆ ಬೀಜಗಳು
3. 7 - 8 ಕರಿಬೇವಿನ ಎಲೆಗಳು
4. 1/4 ಟೀಸ್ಪೂನ್ ಅರಿಶಿನ ಪುಡಿ
5. ಕೊತ್ತಂಬರಿ ಸೊಪ್ಪು
6. 1 ಟೀಸ್ಪೂನ್ ಅಡುಗೆ ಎಣ್ಣೆ
7. ರುಚಿಗೆ ತಕ್ಕಂತೆ ಉಪ್ಪು

ರಸಂ ತಯಾರಿಸಲು ರುಬ್ಬುವ ಪದಾರ್ಥಗಳು
1. 2 ಕೆಂಪು ಮೆಣಸಿನಕಾಯಿಗಳು
2. 1 ಹಸಿರು ಮೆಣಸಿನಕಾಯಿ
3. 1 ಟೀಸ್ಪೂನ್ ಕರಿಮೆಣಸು
4. 1 ಜೀರಿಗೆ ಬೀಜಗಳು
5. 1/2 ಟೊಮೆಟೊ
6. ಬೆಳ್ಳುಳ್ಳಿ 7 - 8 ಎಸಳು
7. ಕೊತ್ತಂಬರಿ ಸೊಪ್ಪು
8. ಒಂದು ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು
ರಸಂ ತಯಾರಿಸುವ ವಿಧಾನ
ಒಂದು ಮಿಕ್ಸಿ ಜಾರ್‌ನಲ್ಲಿ ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಕರಿಮೆಣಸು ಮತ್ತು ಜೀರಿಗೆ, ಟೊಮೆಟೊ ಮತ್ತು ಬೆಳ್ಳುಳ್ಳಿ ಹಾಕಿ. ಜೊತೆಗೆ ಕೊತ್ತಂಬರಿ ಸೊಪ್ಪು ಮತ್ತು ಹುಣಸೆಹಣ್ಣು ಸೇರಿಸಿ ಅದಕ್ಕೆ ಬೇಕಾದ ನೀರನ್ನು ಸೇರಿಸಿ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
ಬಾಣಲೆಯನ್ನು ಬಿಸಿ ಮಾಡಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಒಗ್ಗರೆಣೆಗೆ ಸಾಸುವೆ ಹಾಕಿ ನಂತರ ಕರಿಬೇವಿನ ಎಲೆಗಳನ್ನು ಸೇರಿಸಿ. ಟೊಮ್ಯಾಟೊ ಸೇರಿಸಿ ಮೆತ್ತಗಾಗುವ ವರೆಗೂ ಫ್ರೈ ಮಾಡಿ. ಬಳಿಕ ರುಬ್ಬಿದ ಪೇಸ್ಟ್ ಸೇರಿಸಿ. ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಫ್ರೈ ಮಾಡಿ ಒಂದು ನಿಮಿಷ ಅದನ್ನು ಕುದಿಸಿ. ಬೇಕಾಗುವಷ್ಟು ನೀರು ಸೇರಿಸಿ. ಕುದಿಯಲು ಆರಂಭಿಸಿದ ಬಳಿಕ ಕೊತ್ತಂಬರಿ ಸೊಪ್ಪನ್ನು ಹಾಕಿ. ಸ್ಟವ್ ಆಫ್ ಮಾಡಿ. ಇದನ್ನು ಬಿಸಿ ಬಿಸಿ ಅನ್ನದೊಂದಿಗೆ ಅಥವಾ ಸೂಪ್‌ನಂತೆ ಏಂಜಾಯ್ ಮಾಡಿ.












Click it and Unblock the Notifications