ನಿಜವಾಗಿಯೂ ಕರ್ಮ ಮರಳಿ ಬರುತ್ತಾ..? ಬುದ್ಧ ಹೇಳಿದ್ದೇನು?
ನಾವು ತಂತ್ರಜ್ಞಾನದ ಯುಗದಲ್ಲಿದ್ದೇವೆ... ಏನು ಅಸಾಧ್ಯವೋ ಅದೆಲ್ಲವನ್ನು ಸಾಧ್ಯ ಮಾಡಿ ಬೀಗುತ್ತಿದ್ದೇವೆ... ಆದರೂ ಎಲ್ಲೋ ಕಡೆ ಕರ್ಮಫಲವನ್ನು ನಂಬುತ್ತೇವೆ. ಒಂದು ವೇಳೆ ಕರ್ಮಫಲ ಎನ್ನುವುದು ಇಲ್ಲದೆ ಹೋಗಿದ್ದರೆ ಅದರ ಭಯ ನಮಗಂತು ಇರುತ್ತಿರಲಿಲ್ಲ. ನಾವು ಏನೇ ಮಾಡಿದರೂ ಅದಕ್ಕೊಂದು ಫಲವಂತು ಸಿಕ್ಕೇ ಸಿಗುತ್ತದೆ. ಹೀಗಿರುವಾಗ ಕೆಟ್ಟದನ್ನು ಮಾಡಿದರೆ ಕೆಟ್ಟದು ಆಗಲೇ ಬೇಕಲ್ಲವೆ? ಕರ್ಮ ತಿರುಗಿ ಬರುತ್ತದೆ ಎಂಬುದು ಜನಜನಿತ. ಹೀಗಾಗಿಯೇ ಹಿರಿಯರು, ಜ್ಞಾನಿಗಳು, ಆಧ್ಯಾತ್ಮಿಕ ಚಿಂತಕರು ಒಳ್ಳೆಯದನ್ನು ಮಾಡು ನಿನ್ನನ್ನು ಕಾಪಾಡುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ.
ಇವತ್ತಿನ ಕಲಿಯುಗದಲ್ಲಿ ಅನ್ಯಾಯ, ಅಧರ್ಮದ ದಾರಿ ಹಿಡಿದವರೆಲ್ಲರೂ ಸುಖವಾಗಿದ್ದಾರೆ ಎಂಬ ವಿಷಾಧದ ಮಾತನಾಡುತ್ತಾ ಕಾಲ ಕಳೆಯುತ್ತಿದ್ದೇವೆ. ಪ್ರಾಮಾಣಿಕವಾಗಿ ಜೀವನ ನಡೆಸುವವನು ಅಧರ್ಮದ ಹಾದಿಯಲ್ಲಿ ಅಭಿವೃದ್ಧಿ ಹೊಂದಿದವನನ್ನು ನೋಡಿ ಹಲಬುವುದು ನಡೆಯುತ್ತಲೇ ಇದೆ. ಹಾಗೆಯೇ ಅನ್ಯಾಯ, ಅಹಂಕಾರದಿಂದ ಮೆರೆದ ಕೆಲವರ ಬದುಕು ಏನಾಗಿದೆ ಎಂಬುದನ್ನು ಕೂಡ ನಾವು ನೋಡಿದ್ದೇವೆ. ಬಹಳಷ್ಟು ಜನರ ಬದುಕಿನಲ್ಲಿ ಕರ್ಮ ವಾಪಾಸ್ ಬಂದ ನಿದರ್ಶನಗಳಿವೆ.

ಕರ್ಮದಿಂದ ಅಧಿಕಾರ, ಆಸ್ತಿ, ಅಂತಸ್ತು ಹೀಗೆ ಸಂಪತ್ತನ್ನೆಲ್ಲ ಕೂಡಿ ಹಾಕಿಕೊಳ್ಳಬಹುದಷ್ಟೆ. ಆದರೆ ಅದು ತಿರುಗಿಬಂದಾಗ ಅದಕ್ಕೆ ತಕ್ಕ ಕಂದಾಯ ಕೇಳಿಯೇ ಕೇಳುತ್ತದೆ. ನ್ಯಾಯ, ಧರ್ಮವನ್ನೆಲ್ಲ ಮೀರಿ ಬದುಕಿದವರು ಉದ್ದಾರವಾದ ಉದಾಹರಣೆಗಳು ಕಡಿಮೆಯೇ.. ಇದಕ್ಕೆ ಉದಾಹರಣೆಗಳು ಪುರಾಣದಲ್ಲಿ ಮಾತ್ರವಲ್ಲದೆ, ಇತಿಹಾಸ ಪುಟಗಳಲ್ಲಿಯೂ ದಾಖಲಾಗಿವೆ. ಬುದ್ಧ ಕೂಡ ದಾನ ಧರ್ಮದಿಂದ ಮನುಷ್ಯನ ಬದುಕು ನೆಲೆಗೊಳ್ಳಬೇಕು ಎಂದಿದ್ದಾನೆ.
ಬುದ್ಧನ ಮಾತು ಸರ್ವರಿಗೂ ಅನ್ವಯ
ಪ್ರಾಪಂಚಿಕ ವೈಭವಗಳೆಲ್ಲವೂ ನಶ್ವರ. ಪಾರಮಾರ್ಥಿಕ ಆನಂದ ಮಾತ್ರ ಶಾಶ್ವತ. ಲೋಭ ಇಂದ್ರಿಯ ಭೋಗಗಳ ಪರಿಣಾಮವಾಗಿ ಜೀವ ಸೋತಾಗ, ಸೊರಗಿದಾಗ ಮನುಷ್ಯನ ಮನಸ್ಸು ವಿನಮ್ರವಾಗುತ್ತದೆ. ಇಂತಹ ಸಂದರ್ಭವೇ ಬೋಧನೆಗೆ ಸಕಾಲವಾಗಿದೆ ಎಂದಿರುವ ಬುದ್ಧ ತಾನು ಮಾಡುವ ಒಳ್ಳೆಯ ಅಥವಾ ಕೆಟ್ಟ ಕರ್ಮಗಳು ನೆರಳಿನಂತೆ ಹಿಂಬಾಲಿಸಿ ಬರುತ್ತವೆ. ತಂದೆಯಾದವನು ತನ್ನ ಮಕ್ಕಳನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತಾನೋ, ಅದೇ ಕಾಳಜಿಯನ್ನು ಮಕ್ಕಳು ತೋರಿಸಬೇಕು ಎಂಬ ಉಪದೇಶವನ್ನು ನೀಡಿದ್ದಾನೆ.
ಇದು ಎಲ್ಲ ಆಡಳಿತಗಾರರಿಗೂ ಅನ್ವಯವಾಗುತ್ತದೆ. ಅಧಿಕಾರದಲ್ಲಿ ಇರುವವರು ಯಾವುದೇ ಕಾರಣಕ್ಕೂ ತಮಗಿಂತ ಕೆಳಗಿನವರನ್ನು ತುಳಿಯಬಾರದು. ಆಡಳಿತಗಾರನ ಹೃದಯದಲ್ಲಿ ಪ್ರೇಮವಿರಬೇಕು. ನಿಸ್ವಾರ್ಥ ಪ್ರೇಮವಿಲ್ಲದಿದ್ದರೆ ಯಾವ ಸೇವಾ ಕಾರ್ಯವೂ, ಆಡಳಿತವೂ ಯಶಸ್ವಿಯಾಗುವುದಿಲ್ಲ. ಅಷ್ಟೇ ಅಲ್ಲದೆ, ನಿನ್ನ ಇಂದ್ರಿಯಗಳನ್ನು ಹತೋಟಿಗೆ ತಂದುಕೋ, ನಿನ್ನ ದೊರೆತನದ ಹಿರಿಮೆಯನ್ನೇ ಮನಸ್ಸಿನಲ್ಲಿ ಮೆಲುಕಾಡುತ್ತಿರಬೇಕು, ನಿನ್ನನ್ನು ಸ್ತುತಿಸುವ ಹೊಗಳುಭಟ್ಟರ ಮಾತಿಗೆ ಕಿವಿಗೊಡಬೇಡ ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾನೆ.
ಉರಿಯುವ ಮರದತ್ತ ಹಕ್ಕಿಗಳು ಬರಲ್ಲ
ಆಧ್ಯಾತ್ಮಿಕ ಸಾಧಕರು ಇಂದ್ರಿಯ ನಿಗ್ರಹ ಮಾಡಬೇಕೆಂಬುವುದು ಸರ್ವರಿಗೂ ತಿಳಿದಿರುವ ಸಂಗತಿ. ಆದರೆ, ಬುದ್ಧನು ಇಂದ್ರಿಯ ನಿಗ್ರಹವನ್ನು ಅಧಿಕಾರಸ್ಥಾನದಲ್ಲಿರುವ ಎಲ್ಲರಿಗೂ ಹೇಳಿದ್ದಾನೆ. ಅಧಿಕಾರಸ್ಥರಿಗೆ ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಹೆಚ್ಚಾಗಿರುತ್ತದೆ. ಅಂತಹವನಲ್ಲಿ ಇಂದ್ರಿಯ ಸಂಯಮವೂ ಇಲ್ಲದೇ ಹೋದರೆ, ಅಂಕುಶವಿಲ್ಲದ ಕಾಡಾನೆಯಾಗಿ ಬಿಡುತ್ತದೆ. ಇದು ಬರೀ ಆತನಿಗೆ ಮಾತ್ರ ಕೆಡುಕು ತರುವುದಿಲ್ಲ ಇದರ ಪರಿಣಾಮಗಳು ಆತನ ಸುತ್ತಮುತ್ತಲಲ್ಲಿ ಇರುವವರ ಮೇಲೂ ಬೀರುತ್ತದೆ.

ಇನ್ನಷ್ಟು ಉಪದೇಶಗಳು ನಮ್ಮೆಲ್ಲರ ಕಣ್ಣು ತೆರೆಸುವಂತಿದೆ. ನಮ್ಮ ಸುತ್ತಮುತ್ತ ಜನನ-ಮರಣ, ರೋಗ, ಮುಪ್ಪು ಎಂಬ ಬೆಟ್ಟಗಳು ನಿಂತಿವೆ. ಯಾರೂ ಧರ್ಮ ಮಾರ್ಗದಲ್ಲಿ ನಡೆಯುತ್ತಾರೋ ಅವರು ಮಾತ್ರ ಈ ದುಃಖಗಳ ಬೆಟ್ಟಗಳನ್ನು ದಾಟಿ ಪಾರಾಗುತ್ತಾರೆ. ವಿವೇಕಿಗಳಾದವರು ಶರೀರ ಸುಖದ ಚೌಪಲ್ಯವನ್ನು ತಿರಸ್ಕರಿಸುತ್ತಾರೆ. ಅವರು ಕಾಮವನ್ನು ತ್ಯಜಿಸಿ ಆಧ್ಯಾತ್ಮಿಕ ಸಾಧನೆಯಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಾರೆ. ಹೊತ್ತಿ ಉರಿಯುವ ಮರದ ಮೇಲೆ ಹೇಗೆ ಹಕ್ಕಿಗಳು ಕುಳಿತು ಚಿಪಿಲಿಪಿಗುಟ್ಟುವುದಿಲ್ಲವೋ ಹಾಗೆ ಕಾಮ ತುಂಬಿಕೊಂಡವರಲ್ಲಿ ಸದ್ಗುಣಗಳು ಸೇರಿಕೊಳ್ಳುವುದಿಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳುತ್ತಾನೆ.
ಸತ್ಕಾರ್ಯದಿಂದಷ್ಟೇ ಕರ್ಮದಿಂದ ಮುಕ್ತಿ
ವಿಷಯ ಸುಖದ ಚಾಪಲ್ಯ ಸರ್ವರಿಗೂ ಅಪಾಯಕಾರಿ. ಅದು ಇಡೀ ಜಗತ್ತನ್ನೇ ಕೊಚ್ಚಿಕೊಂಡು ಹೋಗುತ್ತದೆ. ವಿಷಯ ಸುಖದ ಸುಳಿಯಲ್ಲಿ ಸಿಕ್ಕಿಕೊಂಡವನು ಅದರಿಂದ ಪಾರಾಗುವ ಸಂಭವವಿಲ್ಲ. ವಿವೇಕನೆಂಬ ದೋಣಿ ಆತ್ಮ ಶೋಧನೆಯೆಂಬ ಚುಕ್ಕಾಣಿ ಇದ್ದರೆ ಪಾರಾಗಬಹುದು. ನಮ್ಮ ಕರ್ಮದ ಫಲಗಳಿಂದ ಬಿಡಿಸಿಕೊಳ್ಳುವುದು ಅಸಾಧ್ಯವಾದುರಿಂದ ನಾವು ಯಾವಾಗಲೂ ಸತ್ಕಾರ್ಯಗಳನ್ನೇ ಮಾಡುತ್ತಿರಬೇಕು ಎಂಬ ಎಚ್ಚರಿಕೆಯನ್ನು ನೀಡಿದ್ದಾನೆ.
ನಮ್ಮಿಂದ ಎಂದಿಗೂ ಕೆಟ್ಟ ಕೆಲಸ ನಡೆಯದಂತೆ ನಮ್ಮ ಆಲೋಚನೆಗಳ ಮೇಲೆ ಸದಾ ಎಚ್ಚರಿಕೆಯ ಕಣ್ಣಿಟ್ಟಿರಬೇಕು. ಕತ್ತಲೆಯಿಂದ ಬೆಳಕಿಗೂ ದಾರಿಗಳಿವೆ. ಬೆಳಕಿನಿಂದ ಕತ್ತಲೆಗೂ ದಾರಿಗಳಿವೆ. ಹಾಗಾಗಿ ಬುದ್ಧಿವಂತರು ಬೆಳಕಿನೆಡೆಗೆ ಹೆಜ್ಜೆಯಿಡುತ್ತಾನೆ. ಪರಮ ಸತ್ಯದೆಡೆಗೆ ಮುನ್ನಡೆಯುತ್ತಾನೆ. ಶ್ರದ್ಧೆಯಿಂದ ಕರ್ತವ್ಯ ಪಾಲನೆ ಮಾಡಿದರೆ ಹೆಸರು ಚಿರಕಾಲ ಉಳಿಯುತ್ತದೆ. ಬುದ್ಧನ ಈ ಧರ್ಮ ಭೋಧನೆಯ ಮಾತುಗಳಿಗೆ ತಕ್ಕಂತೆ ನಮ್ಮ ಬದುಕನ್ನು ನಡೆಸಿಕೊಂಡರೆ ಕರ್ಮ ಮರಳಿ ಬರುವ ಮಾತೇ ಇರುವುದಿಲ್ಲ.












Click it and Unblock the Notifications