ನಮ್ಮ ಸುಂದರ ಬದುಕಿಗೆ ಸಂಸ್ಕಾರ ಎಷ್ಟು ಮುಖ್ಯ ಗೊತ್ತಾ?
ನಾವು ಬದುಕಲು ಮೂಲ ಸೌಕರ್ಯಗಳು ಹೇಗೆ ಬೇಕಾಗುತ್ತವೆಯೋ? ಹಾಗೆಯೇ ನಮ್ಮ ಬದುಕಿಗೆ ಸಂಸ್ಕಾರವೂ ಅಷ್ಟೇ ಮುಖ್ಯ ಎಂಬುದನ್ನು ನಾವು ಅರಿಯಬೇಕಾಗುತ್ತದೆ. ಸಂಸ್ಕಾರವಿಲ್ಲದ ಬದುಕಿನಿಂದ ಕೇವಲ ಮನೆಗೆ ಮಾತ್ರವಲ್ಲ ಸಮಾಜಕ್ಕೂ ತೊಂದರೆಯಾಗುತ್ತದೆ. ನಮ್ಮ ಬದುಕಿನಲ್ಲಿ ಸಂಸ್ಕಾರ ಅಳವಡಿಸಿಕೊಳ್ಳದೆ ಹೋದರೆ ಬದುಕು ಪೂರ್ಣವಾಗುವುದಿಲ್ಲ. ಅಷ್ಟೇ ಅಲ್ಲದೆ ಹಲವು ಸಂಕಷ್ಟಗಳಿಗೂ ಕಾರಣವಾಗಿ ಬಿಡುತ್ತದೆ.
ಬೆತ್ತಲೆಯಾಗಿ ಭೂಮಿಗೆ ಬರುವ ಮಗು ನಂತರ ಹೆತ್ತವರ ಆರೈಕೆಯಲ್ಲಿ ಬೆಳೆದು ಅವರ ಆಚಾರ, ವಿಚಾರ, ನಡೆ, ನುಡಿಯನ್ನು ಅನುಕರಣೆ ಮಾಡುವುದು ಸಾಮಾನ್ಯ. ಮಗು ಬೆಳೆಯುವ ಹಂತದಲ್ಲಿ ಅದಕ್ಕೆ ಸಂಸ್ಕಾರ ಕಲಿಸಬೇಕಾಗುತ್ತದೆ. ನಾವು ಮಗುವಿಗೆ ಚಿಕ್ಕಂದಿನಿಂದಲೇ ಸಂಗೀತ, ನೃತ್ಯ, ಕರಾಟೆ ಹೀಗೆ ಎಲ್ಲವನ್ನೂ ಕಲಿಸುತ್ತಿದ್ದೇವೆ ಅದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕಾಗುತ್ತದೆ. ಮಗು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಿದರೆ ಮುಂದೆ ಸಂಸ್ಕಾವಂತರಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಮಗುವಿಗೆ ಮನೆಯೇ ಮೊದಲ ಪಾಠ ಶಾಲೆಯಾದರೂ ಅದು ಬೆಳೆಯುತ್ತಿದ್ದಂತೆಯೇ ಸುತ್ತಲಿನ ಪರಿಸರ ಮತ್ತು ವಾತಾವರಣ ಎಲ್ಲವೂ ಅದರ ಮೇಲೆ ಪರಿಣಾಮ ಬೀರುತ್ತದೆ. ಪೋಷಕರ ಹಿಡಿತದಲ್ಲಿ ಬೆಳೆಯುವ ಮಗು ನಂತರ ಪ್ರೌಢಾವಸ್ಥೆಗೆ ಕಾಲಿಟ್ಟಾಗ ಅಥವಾ ಆ ನಂತರದ ಬದುಕನ್ನು ಸಾಗಿಸುವಾಗ ಧರ್ಮದ ಮಾರ್ಗಕ್ಕಿಂತ ಅಧರ್ಮದ ಬಾಗಿಲನ್ನು ಬಹುಬೇಗ ಬಡಿಯಬಹುದು. ತಮ್ಮ ಮಕ್ಕಳು ಎಲ್ಲಿ ಹಾದಿ ತಪ್ಪುತ್ತಿದ್ದಾರೆ ಎಂಬುದನ್ನು ಅರಿತು ಅಲ್ಲಿಯೇ ಸರಿಪಡಿಸಿದರೆ ಮಕ್ಕಳು ಒಂದೊಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಅಧರ್ಮದ ಹಾದಿ ತುಂಬಾ ಆಕರ್ಷಕ
ಕೆಲವೊಮ್ಮೆ ಬಾಲ್ಯದಿಂದಲೇ ಧರ್ಮದ ಬಗ್ಗೆ ಅರಿತು ಸುಸಂಸ್ಕೃತ ಮನೆತನದಲ್ಲಿಯೇ ಬೆಳೆದಿದ್ದರೂ ಕೆಲವೊಮ್ಮೆ ಸಹವಾಸ ದೋಷದಿಂದಲೂ ಅಧರ್ಮದ ಹಾದಿಯತ್ತ ಆಕರ್ಷಿತವಾಗಿ ಬಿಡಬಹುದು. ನಂತರ ಮನವರಿಕೆಯಾಗಿ ತಾನು ಮಾಡಿದ್ದು ತಪ್ಪು ಎಂಬುದು ಅರಿವಾದಾಗ ಅದನ್ನು ದೂರ ತಳ್ಳಿ ಸನ್ಮಾರ್ಗದತ್ತ ನಡೆಯಬಹುದು. ಒಂದು ವೇಳೆ ತಪ್ಪುದಾರಿ ಹಿಡಿದಾಗ ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಪೋಷಕರು ಮಾಡಬೇಕಾಗುತ್ತದೆ.
ನಿಜ ಹೇಳಬೇಕೆಂದರೆ ಒಮ್ಮೆ ಅಧರ್ಮದ ಹಾದಿ ಹಿಡಿದವನು ಅದರ ಹಿಡಿತದಿಂದ ಅಷ್ಟು ಸುಲಭವಾಗಿ ಹೊರ ಬರಲಾರ. ಏಕೆಂದರೆ ಅದು ನೀಡುವ ಸುಖ ಮತ್ತಿನ ಸುಖವಾಗಿರುತ್ತದೆ. ಆದರೆ ಅದು ಹೆಚ್ಚು ದಿನ ಉಳಿಯದ, ಬದುಕನ್ನೇ ನಾಶಗೊಳಿಸುವ ಸುಖ ಎಂಬುದು ಆ ಕ್ಷಣಕ್ಕೆ ನಮಗೆ ತಿಳಿಯಲಾರದು. ಹಾಗೆ ತಿಳಿಯುವ ವೇಳೆಗೆ ಬದುಕು ಸರ್ವ ನಾಶದ ಅಂಚಿಗೆ ತಲುಪಿರುತ್ತದೆ. ಹೀಗಾಗಿ ಅಧರ್ಮದ ಹಾದಿ ಹಿಡಿದವರ ಮನಸ್ಸು ಬದಲಿಸಿ ಧರ್ಮದ ಹಾದಿಗೆ ಎಳೆದು ತರುವುದು ಸುಲಭವಲ್ಲ.
ಎಲ್ಲರ ಬದುಕಲ್ಲಿ ಏಳುಬೀಳು ಸಾಮಾನ್ಯ
ಪ್ರತಿ ವ್ಯಕ್ತಿಯೂ ತನ್ನ ಬದುಕಿನಲ್ಲಿ ಏಳು-ಬೀಳುಗಳನ್ನು ಕಂಡಿರುತ್ತಾನೆ. ಧರ್ಮದ ಹಾದಿಯಲ್ಲಿ ಹೊರಟವನಿಗೆ ತಕ್ಷಣಕ್ಕೆ ಜಯವಾಗಲೀ, ಸುಖವಾಗಲೀ ಸಿಗಲಾರದು. ಆದರೆ ನೆಮ್ಮದಿಗೆ ಎಂದೂ ಕೊರತೆಯಾಗದು. ಬಹಳಷ್ಟು ಮಂದಿ ಸುತ್ತಲಿನವರು ಏಳಿಗೆಯಾದ ಬಗ್ಗೆ ತಮ್ಮಲ್ಲಿಯೇ ಹೀಗಳೆದುಕೊಳ್ಳುತ್ತಾರೆ. ನಾನೇನು ಮಾಡಿದ್ದೇನೆ? ಧರ್ಮದ ಹಾದಿಯಲ್ಲಿ ಸಾಗಿದ್ದೇ ತಪ್ಪಾಯಿತಾ? ಹೀಗೆ ಸಮಯ ಸಿಕ್ಕಾಗ ತಮ್ಮಷ್ಟಕ್ಕೆ ತಾವೇ ಪ್ರಶ್ನಿಸಿಕೊಳ್ಳುತ್ತಾರೆ.

ತಮ್ಮ ಬದುಕಿನಾವಧಿಯಲ್ಲಿ ಏನು ಸಂಪಾದಿಸಿದ್ದೇವೆ ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದ್ದೇವೆ ಎನ್ನುವುದೇ ಮುಖ್ಯವಾಗಿರುತ್ತದೆ. ಅನೈತಿಕ ಮಾರ್ಗದಿಂದ ಗಳಿಸಿದ ಸಂಪತ್ತಿಗೆ ಕ್ರಮೇಣ ದೊಡ್ಡ ಮೊತ್ತದ ಕಂದಾಯ ಕಟ್ಟಬೇಕಾಗಬಹುದು. ಸಂಸ್ಕಾರವಂತರು ಏನೇ ಕಷ್ಟಬಂದರೂ ಅಧರ್ಮದ ಹಾದಿ ಹಿಡಿಯುವುದಿಲ್ಲ. ಜತೆಗೆ ಇರುವುದರಲ್ಲಿ ತೃಪ್ತಿ ಪಡುವುದು ಅಭ್ಯಾಸವಾಗಿರುತ್ತದೆ.
ಸತ್ಯಮೇವ ಜಯತೇ ವಾಕ್ಯ ಪರಿಪಾಲಿಸಿ
ಸತ್ಯಮೇವ ಜಯತೇ ಎಂಬ ವಾಕ್ಯದ ಪರಿಪಾಲನೆಯಲ್ಲಿ ನಡೆದರೆ ಶೀಘ್ರವಾಗಿ ಪ್ರಾಪ್ತಿ ದೊರೆಯದಿದ್ದರೂ, ಮಂದಗತಿಯ ಬರಡು ಬದುಕು ಸಿಕ್ಕರೂ ಆತ್ಮ ಸಂತೋಷ ಸದಾ ಉಳಿದಿರುತ್ತದೆ. ದುರ್ಮಾರ್ಗದಲ್ಲಿ ಹೊರಟವನಿಗೆ ಹೊರಗಿನ ಬೆಡಗಿನ ಪ್ರಪಂಚದ ಎಲ್ಲ ಸುಖಗಳು ದೊರೆತರೂ ಅಂತರಂಗದ ಅತೃಪ್ತಿ ಸದಾ ತಾಂಡವವಾಡುತ್ತಿರುತ್ತದೆ. ಹೀಗಾಗಿ ಮನಃಶಾಂತಿಯಿಲ್ಲದೆ, ಕೊರಗಿನಲ್ಲಿಯೇ ದಿನ ಕಳೆಯಬೇಕಾಗುತ್ತದೆ.
ನಾವು ಹಿಡಿದ ಮಾರ್ಗ ಸನ್ಮಾರ್ಗದಾಗಿದ್ದು, ಅದರಿಂದಲೇ ಸಾಧಿಸಬೇಕು. ನಾವು ಸಾಧಿಸಿರುವುದು ಅದು ವಿದ್ಯೆಯೂ ಅಥವಾ ಇನ್ಯಾವುದೋ ಆಗಿರಲಿ ಅದನ್ನು ತುಂಬಾ ಜಾಗ್ರತೆಯಿಂದ ರಕ್ಷಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಹೆಚ್ಚು ಕಾಲ ನಮ್ಮೊಂದಿಗಿದ್ದು, ನಮ್ಮನ್ನು ಕಾಪಾಡುತ್ತವೆ. ಇಲ್ಲಾಂದ್ರೆ ಸಾಧನೆ, ಯಶಸ್ಸು, ಶ್ರೇಯಸ್ಸು, ಹಣ, ಸಂಪತ್ತು, ಎಲ್ಲವೂ ನಮ್ಮಿಂದ ನಿರ್ಗಮಿಸಲು ಹೆಚ್ಚು ಕಾಲವಿರಲಾರದು.
ಬಾಲ್ಯದಿಂದಲೇ ಸಂಸ್ಕಾರ ಕಲಿಯಬೇಕು
ಇದೆಲ್ಲವನ್ನು ಅರಿತು ನಾವು ನಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕಾಗಿದೆ. ನಾವು ಮನೆಯಲ್ಲಿ ಹೇಗೆಯೇ ಬೆಳೆಸಿದರೂ ಮುಂದೆ ಸಮಾಜದಲ್ಲಿ ಬದುಕಬೇಕಾಗಿದೆ. ಆದ್ದರಿಂದ ಸಮಾಜದ ಜತೆಗೆ ಹೇಗೆ ಬದುಕಬೇಕು? ಯಾವುದನ್ನು ಆಯ್ದುಕೊಳ್ಳಬೇಕು? ಯಾವುದನ್ನು ತಿರಸ್ಕರಿಸಬೇಕು ಎಂಬುದನ್ನು ಕಲಿಸಬೇಕಾಗಿದೆ. ಆಗ ಮಾತ್ರ ಅವರು ಮುಂದೆ ತಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಲು ಸಾಧ್ಯವಾಗಲಿದೆ.












Click it and Unblock the Notifications