ಸಂಕಷ್ಟದ ಕಾಲದಲ್ಲಿ ನಮಗೆ ಬೇಕಾಗಿರುವುದು ಧೈರ್ಯ ಮಾತ್ರ..!
ನಮ್ಮ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಅಂಥ ಇದ್ದೇ ಇರುತ್ತದೆ. ಅದನ್ನು ಕಂಡುಕೊಳ್ಳುವ ಜಾಣ್ಮೆ ನಮ್ಮಲ್ಲಿ ಇರಬೇಕಷ್ಟೆ. ಬಹಳಷ್ಟು ಜನರು ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಲಾಗದೆ ಪರದಾಡುತ್ತಾರೆ. ಅಷ್ಟೇ ಅಲ್ಲದೆ ಮಾನಸಿಕವಾಗಿ ಕುಗ್ಗಿ ಹೋಗಿ ಬಿಡುತ್ತಾರೆ. ಹಾಗೆಂದು ನಾವಾಗಿಯೇ ನಾವು ಸಮಸ್ಯೆಗಳನ್ನು ಎಳೆದುಕೊಳ್ಳಬಾರದಷ್ಟೆ.
ಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡುವ ಬಹುತೇಕ ಮಂದಿ ಇಷ್ಟಾದ ಮೇಲೂ ನಾವು ಬದುಕಬೇಕಾ? ಎಂಬ ಹತಾಶೆಯ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಆದರೆ ಅಂಥವರು ಒಂದಿಷ್ಟು ಧೈರ್ಯ ತೆಗೆದುಕೊಳ್ಳಬೇಕು. ಬದುಕು ಮುಗಿದಿಲ್ಲ ಆರಂಭ ಮನೋಧೈರ್ಯವನ್ನು ತಂದುಕೊಳ್ಳಬೇಕು. ನಿಜ ಹೇಳಬೇಕೆಂದರೆ ಕಷ್ಟಕಾಲದ ಏಕೈಕ ನಮ್ಮ ಗೆಳೆಯ ಅಥವಾ ಗೆಳತಿ ನಮ್ಮೊಳಗಿನ ಧೈರ್ಯ.

ಒಂದು ಪರೀಕ್ಷೆಯಲ್ಲಿ ಫೇಲಾದರೇನಂತೆ ಮತ್ತೊಂದು ಮಾಡಿದರಾಯಿತು. ಕೆಲಸ ಕಳೆದು ಹೋದರೇನಂತೆ ಮತ್ತೊಂದು ಹುಡುಕಿದರಾಯಿತು. ಹೀಗೆಂಬ ಧೈರ್ಯವನ್ನು ನಮಗೆ ನಾವೇ ಹೇಳಿಕೊಳ್ಳಬೇಕು. ಸಾಮಾನ್ಯವಾಗಿ ನಾವು ತೊಂದರೆಯಲ್ಲಿದ್ದಾಗ ನಮಗೆ ಧೈರ್ಯ ಹೇಳುವ ಒಳ್ಳೆಯ ಮನಸ್ಸಿನವರು ಸಿಗುತ್ತಾರೆ. ಆದರೆ ಕೆಲವೊಮ್ಮೆ ನಮ್ಮನ್ನು ನೋಡಿ ನಗುವವರೂ ಇರುತ್ತಾರೆ. ಹೀಗಿರುವಾಗ ನಮ್ಮ ಕಷ್ಟವನ್ನು ನಾವೇ ಪರಿಹರಿಸಿಕೊಳ್ಳುವ ಸೂತ್ರವನ್ನು ನಾವೇ ಕಂಡು ಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಧೈರ್ಯವನ್ನು ತಂದುಕೊಳ್ಳಬೇಕು.
ನಿರಾಸೆಯನ್ನು ಮೆಟ್ಟಿ ನಿಲ್ಲುವ ಧೈರ್ಯ ಬೇಕು
ಇವತ್ತು ಕಷ್ಟವಿರಬಹುದು ನಾಳೆ ಸುಖ ಬಂದೇ ಬರುತ್ತೆ ಎಂಬ ನಂಬಿಕೆ ಮತ್ತು ಎಂಥ ಕಷ್ಟ ಬಂದರೂ ಅದನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೊಳೆಯ ಬೇಕು. ಅನೇಕ ಬಾರಿ ಆಗೋದೆಲ್ಲ ಒಳ್ಳೆಯದಕ್ಕೆ ಎಂಬ ಮಾತು ಮುಂದೆ ಸಾಗಲು ಧೈರ್ಯ ಮತ್ತು ಛಲ ನೀಡುತ್ತದೆ. ಇಷ್ಟಕ್ಕೂ ಮನುಷ್ಯನಾಗಿ ಹುಟ್ಟಿದ ಮೇಲೆ ನಾವೆಲ್ಲರೂ ಎಲ್ಲವನ್ನು ಪಡೆದುಕೊಳ್ಳೋಕೆ ಸಾಧ್ಯವಿಲ್ಲ. ಒಂದು ಪಡೆಯಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಬೇಕು ಎಂಬುವುದು ಪ್ರಕೃತಿ ನಿಯಮ.
ಸೋಲು ಅಥವಾ ಕಷ್ಟಗಳು ನಮ್ಮನ್ನು ಕಾಡಿದಾಗ ನಾವು ನಿರಾಶರಾಗಿಬಿಡುತ್ತೇವೆ. ಆದರೆ ಆ ಸಂದರ್ಭದಲ್ಲಿ ಧೃತಿಗೆಡದೆ ಮುಂದೆ ಸಾಗಬೇಕು. ಅಷ್ಟೇ ಅಲ್ಲ ನಿರಾಶೆಯನ್ನು ಮೆಟ್ಟಿ ನಿಲ್ಲುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೋಲಿನ ಜತೆ ನಿರಾಶೆಯೂ ಸೇರಿತೆಂದರೆ ಬದುಕೇ ಮುಗಿದಂತೆ. ಏಕೆಂದರೆ ನಿರಾಶೆ ನೋಡು ನೋಡುತ್ತಿದ್ದಂತೆಯೇ ನಮ್ಮ ಶಕ್ತಿ ಸಾಮರ್ಥ್ಯವನ್ನು ಕುಗ್ಗಿಸಿಬಿಡುತ್ತದೆ.

ಸ್ವಾಮಿ ವೀರಾಜನಂದರು ಹೇಳುವುದೇನು?
ಬಹಳಷ್ಟು ಸಾರಿ ನಮ್ಮ ಎಲ್ಲ ಕೆಲಸಗಳಿಗೂ ನಿರಾಶೆಯೆ ತಡೆಯೊಡ್ಡುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನಿರಾಶೆ ಎಂಬುವುದು ನಮ್ಮ ಶತ್ರು ಎಂದರೂ ತಪ್ಪಾಗುವುದಿಲ್ಲ. ಆ ಶತ್ರುವನ್ನು ಓಡಿಸಬೇಕಾದರೆ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಒಂದೆಡೆ ಸ್ವಾಮಿ ವೀರಾಜನಂದ ಅವರು ಹೇಳುತ್ತಾರೆ ಸೋತ ತಕ್ಷಣ ನಾವು ಅತ್ಯಂತ ಕುಗ್ಗಿದ ಸ್ಥಿತಿಯಲ್ಲಿರುತ್ತೇವೆ. ಆಗ ನಮ್ಮ ಭಾವನೆ, ಶಕ್ತಿ, ಸಾಮರ್ಥ್ಯ ಎಲ್ಲವೂ ಸಕರಾತ್ಮಕವಾಗಿರದೆ ನಕರಾತ್ಮಕವಾಗಿರುತ್ತದೆ.
ಇದನ್ನು ಹೋಗಲಾಡಿಸಿ ಮುನ್ನಡೆಯ ಬೇಕಾದರೆ ನಮ್ಮ ಸಮಸ್ತ ಶಕ್ತಿಯನ್ನು ಬಳಸಿ ನಿರಾಶೆಯನ್ನು ಹೊಡೆದೋಡಿಸಬೇಕು. ನಾನು ದಿವ್ಯ ಸ್ವರೂಪನಾದವನು. ನಾನು ಬ್ರಹ್ಮನು ಒಂದೇ. ಯಾವ ದುಃಖವೂ ನನ್ನನ್ನು ತಟ್ಟಲಾರದು. ನಾನು ನಿತ್ಯ ಮುಕ್ತ ಅನಂತ ಅಮೃತ ಹೀಗೆಂದು ಕೊಳ್ಳುತ್ತಾ ದೃಢನಿಷ್ಠೆಯಿಂದ ಕಾರ್ಯ ಆರಂಭಿಸಬೇಕು. ಆಗ ನಮ್ಮನ್ನು ಆವರಿಸಿದ ನಿರಾಶೆ ಸದ್ದಿಲ್ಲದೆ ದೂರ ಸರಿಯುತ್ತದೆ.
ಪರಿಸ್ಥಿತಿ ಅರ್ಥೈಸಿಕೊಂಡು ಬದುಕಬೇಕು
ಯಾವಾಗ ನಿರಾಶೆ ನಮ್ಮಿಂದ ದೂರವಾಗಿ ಆಸಕ್ತಿ ಹುಟ್ಟುತ್ತದೆಯೋ ಆಗ ನಾವು ಮಾಡಬೇಕಿರುವ ಕೆಲಸಗಳಿಗೆ ವೇಗ ಸಿಗುತ್ತದೆ. ಯಾವ ಸೋಲು ನಮ್ಮನ್ನು ಕಾಡಿತ್ತೋ ಅದೇ ಸೋಲು ನಮ್ಮಿಂದ ಕಳಚಿಕೊಂಡು ಗೆಲುವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಒಬ್ಬ ವ್ಯಕ್ತಿ ಒಂದೆರಡು ಬಾರಿ ಸೋಲಬಹುದು ಆದರೆ ಪ್ರತಿ ಬಾರಿಯೂ ಸೋಲುವುದಿಲ್ಲ. ಸೋತ ತಕ್ಷಣ ನಿರಾಶರಾಗುವುದರಿಂದಲೇ ನಮಗೆ ಗೆಲುವು ಮರೀಚಿಕೆಯಾಗುತ್ತದೆ. ಮೊದಲ ಸೋಲಿಗೆ ನಾವು ಬೆಚ್ಚಿ ಬಿದ್ದಿರುತ್ತೇವೆ.
ನಮ್ಮ ಮನಸ್ಸನ್ನು ಹೊಕ್ಕಿದ ನಿರಾಶೆ ಮತ್ತೆ ಅದೇ ಮಾರ್ಗದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಹೀಗಾಗಿ ನಾವು ಮತ್ತೆ ಅದರಲ್ಲಿ ಮುಂದುವರೆಯುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಪ್ರಯತ್ನವೇ ಮಾಡದಿದ್ದ ಮೇಲೆ ಸೋಲನ್ನು ಗೆಲ್ಲುವುದಾದರೂ ಹೇಗೆ? ಸೋಲಿಗೆ ಕುಗ್ಗುವುದು ಮಾನವ ಲಕ್ಷಣವಲ್ಲ. ಏಕೆಂದರೆ ಕುಗ್ಗುವುದು, ಹಿಗ್ಗುವುದು ಬದುಕಿನಲ್ಲಿ ಇದ್ದೇ ಇದೆ. ನಮಗೆ ಹಿಗ್ಗಿ ಅಭ್ಯಾಸ ಇರುವುದರಿಂದ ಕುಗ್ಗುವುದು ಕಷ್ಟವಾಗುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಧೈರ್ಯವಾಗಿ ಬದುಕುವುದು ಅಗತ್ಯ.
ಮನಸ್ಸಿನಿಂದಾಚೆ ಒಬ್ಬ ಪ್ರೇಕ್ಷಕನಂತೆ ನೋಡಿ
ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ. ಅದು ಕೆಲವೊಮ್ಮೆ ಕಷ್ಟವಾಗಿ ಕಾಣಬಹುದು. ಆದರೆ ಅದಕ್ಕೆ ಹೆದರಿ ನಮ್ಮ ಅಮೂಲ್ಯ ಬದುಕಿಗೆ ಸಂಚಕಾರ ತಂದುಕೊಳ್ಳುವುದು ಮಾತ್ರ ಒಳ್ಳೆಯ ತೀರ್ಮಾನವಲ್ಲ. ಸ್ವಾಮಿ ವೀರಾಜನಂದರು ಹೇಳುವಂತೆ ನಿರಾಶೆ ಮನಸ್ಸಿನಲ್ಲಿ ಬೇರೂರದಂತೆ ನೋಡಿಕೊಳ್ಳಿ ಅದನ್ನು ಕಿತ್ತು ಬಿಸಾಡುವ ಸಾಮರ್ಥ್ಯ ಬೆಳೆಸಿಕೊಳ್ಳಿ.
ನಮ್ಮನ್ನು ನೋಯಿಸುವ, ಅಪಮಾನಿಸುವ ಸೋಲನ್ನು ಅನುಭವಿಸುವ ಸಂದರ್ಭ ಬಂದಾಗ ನಾವು ಎದುರಿಸಲಾರೆವು ಎಂಬ ಮನಸ್ಸಿನ ತುಮುಲಗಳು ನಮ್ಮನ್ನು ಆವರಿಸಿದಾಗ ನಾವು ನಮ್ಮ ಮನಸ್ಸಿನಿಂದಾಚೆ ಒಬ್ಬ ಪ್ರೇಕ್ಷಕನಂತೆ ನಿಂತು ನೋಡುವುದನ್ನು ರೂಢಿಸಿಕೊಳ್ಳಬೇಕು. ಆಗ ಇಲ್ಲಿ ನಾನು ಏನೂ ಅಲ್ಲ ಎಂಬುವುದು ಗೊತ್ತಾಗುತ್ತದೆ. ಬದುಕಿನ ಹಾದಿಯೂ ಸುಗಮವಾಗುತ್ತದೆ. ಧೈರ್ಯ ಮನದಲ್ಲಿ ಜಾಗೃತವಾಗುತ್ತದೆ.












Click it and Unblock the Notifications