ಜಂಜಾಟಗಳ ನಡುವೆ ಖುಷಿಯಾಗಿರಲು ಓಂಕಾರವನ್ನು ಜಪಿಸಿ
ನಮ್ಮ ಲೈಫ್ ಸ್ಟೈಲ್ ಬದಲಾಗಿದೆ. ಬರೀ ಹಣ ಸಂಪಾದಿಸುವುದರತ್ತ ನಿಗಾವಹಿಸುತ್ತಿರುವ ನಾವು ನಮಗೆ ಗೊತ್ತಿಲ್ಲದಂತೆ ನೆಮ್ಮದಿ ಕಳೆದುಕೊಂಡು ಖುಷಿಯಾಗಿ ಬದುಕುವುದನ್ನೇ ಮರೆತು ಬಿಟ್ಟಿದ್ದೇವೆ. ನಾವು ಎಲ್ಲವನ್ನು ಸಂಪಾದಿಸಿಕೊಳ್ಳುತ್ತಿದ್ದೇವೆ. ಆದರೆ ಖುಷಿಯಾದ ಬದುಕುವುದನ್ನು ಮಾತ್ರ ಮರೆತಿದ್ದೇವೆ. ಪ್ರತಿದಿನವೂ ತಲೆಮೇಲೆ ಏನೋ ಮಾನಸಿಕ ನೆಮ್ಮದಿಯೇ ಇಲ್ಲದಂತೆ ಬದುಕುತ್ತಿದ್ದೇವೆ.
ಯಂತ್ರಗಳ ಮಧ್ಯೆ, ಜನಗಳ ಮಧ್ಯೆ ಕೆಲಸ ಮಾಡಿ ನಮಗೂ ಬೇಸರ ಎನಿಸುತ್ತದೆ. ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಒತ್ತಡದ ಬದುಕನ್ನು ಕಟ್ಟಿಕೊಂಡಿರುವುದರಿಂದ ನಮ್ಮ ದೇಹ ಮತ್ತು ಮನಸ್ಸು ಒಂದಷ್ಟು ಏಕಾಂತತೆಯನ್ನು ಬಯಸುವುದು ಸಹಜ. ಆದರೆ ನಾವು ಅದ್ಯಾಕೋ ಗೊತ್ತಿಲ್ಲ ಏಕಾಂತತೆಯನ್ನು ಅನುಭವಿಸುವ ಮನಸ್ಸೇ ಮಾಡುತ್ತಿಲ್ಲ. ಹಿಂದಿನ ಕಾಲದಲ್ಲಿ ಒಂದಷ್ಟು ಸಮಯವನ್ನು ದೇವರ ಧ್ಯಾನ, ಭಜನೆ ಮಾಡುವ ಮೂಲಕ ಕಳೆಯುತ್ತಿದ್ದರು.

ಈಗ ಕೈತುಂಬಾ ಹಣ ಸಂಪಾದಿಸುವುದನ್ನು ಕಲಿತಿದ್ದೇವೆ. ಜತೆಗೆ ಹಣವನ್ನು ನಮಗೆ ಬೇಕಾದಂತೆ ಖರ್ಚು ಮಾಡುವುದೇ ಮೋಜು ಮಸ್ತಿ ಎಂದು ಕೊಂಡಿದ್ದೇವೆ. ಅದೇ ರಿಲ್ಯಾಕ್ಸ್ ಎನ್ನುವಂತೆ ಮಾತನಾಡುತ್ತಿದ್ದೇವೆ. ಹಿಂದೆ ಪ್ರಶಾಂತ ವಾತಾವರಣದಲ್ಲಿರುವ ಯಾವುದಾದರೊಂದು ದೇವಾಲಯಕ್ಕೆ ಹೋಗಿ ಒಂದಷ್ಟು ಹೊತ್ತು ಹಸಿರು ಪರಿಸರದ ನಡುವೆ ಕಳೆದು ಬರುವ ಮೂಲಕ ಮಾನಸಿಕ ನೆಮ್ಮದಿ ಪಡೆದುಕೊಳ್ಳುತ್ತಿದ್ದರು. ಈಗ ಎಲ್ಲವೂ ಬದಲಾಗಿದೆ.
ಧ್ಯಾನದಿಂದ ಸಂಕಲ್ಪ ಶಕ್ತಿ ವೃದ್ಧಿ
ಒತ್ತಡದ ಬದುಕಿನಲ್ಲಿ ಕುಳಿತರೂ ನಿಂತರೂ ಏನಾದರೊಂದು ಯೋಚನೆ ಮಾಡುತ್ತಲೇ ಇರುತ್ತೇವೆ. ಅದು ಅನಿವಾರ್ಯವೂ ಹೌದು. ಆದರೆ ಅದರಲ್ಲೂ ಆಗಾಗ್ಗೆ ರಿಂಗಣಿಸುವ ಮೊಬೈಲ್, ಜತೆಗೆ ಸಾಮಾಜಿಕ ಜಾಲತಾಣಗಳ ಕಿರಿಕಿರಿ, ಇನ್ನೇನೋ ಒತ್ತಡಗಳು ನಮ್ಮನ್ನು ಏಕಾಂತವಾಗಿ ಇರಲು ಬಿಡುತ್ತಿಲ್ಲ. ಹಾಗಾಗಿ ಒತ್ತಡದ ಮಧ್ಯೆ ಆರೋಗ್ಯಕರ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡಬೇಕಾಗಿದೆ. ದೈಹಿಕವಾಗಿ ಆರೋಗ್ಯವಾಗಿರಬೇಕಾದರೆ ಮಾನಸಿಕ ನೆಮ್ಮದಿ ಅಗತ್ಯ ಎಂಬುದನ್ನು ಹೆಚ್ಚಿನವರು ತಿಳಿದೇ ಇಲ್ಲ.
ನಿಜ ಹೇಳಬೇಕೆಂದರೆ ದಿನದಲ್ಲಿ ಒಂದಷ್ಟು ಹೊತ್ತು ಧ್ಯಾನ ಮಾಡುವುದು ನಿಜಕ್ಕೂ ಒಳ್ಳೆಯ ಅಭ್ಯಾಸ. ಓಂಕಾರದ ಮತ್ರದೊಂದಿಗೆ ಧ್ಯಾನ ಮಾಡಿದ್ದೇ ಆದರೆ ನಮ್ಮೊಳಗಿನ ಸಂಕಲ್ಪ ಶಕ್ತಿಯು ಹೆಚ್ಚುವುದಲ್ಲದೆ ಮಾನಸಿಕ ಹಾಗೂ ದೈಹಿಕ ತೊಂದರೆಯೂ ಶಮನಗೊಳ್ಳುತ್ತದೆ ಎಂಬುದನ್ನು ಮೊದಲಿಗೆ ನಾವು ಅರಿಯಬೇಕಾಗಿದೆ.

ಓಂ ಎಂದು ಉದ್ಘಾರ ಮಾಡುತ್ತಾ ಭಗವಂತನನ್ನು ಧ್ಯಾನಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಓಂ ಬಳಿಕ ನಮಗಿಷ್ಟವಾದ ಭಗವಂತನ ಸ್ಮರಣೆ ಮಾಡುತ್ತೇವೆ. ಹಾಗಾದರೆ ಓಂ ಪದವನ್ನೇ ಏಕೆ ಉಚ್ಛಾರಣೆ ಮಾಡಬೇಕು ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳಬಹುದು. ಅದಕ್ಕೆ ಉತ್ತರವೂ ಇದೆ. ಓಂ ಪದದಿಂದ ಸೃಷ್ಠಿಯಲ್ಲಿ ರಚಿತವಾಗಿದೆ.
ಸ್ವಾಮಿ ವಿವೇಕಾನಂದರು ಹೇಳುವುದೇನು?
ಓಂ ಬಗ್ಗೆ ಆಧ್ಯಾತ್ಮ ಚಿಂತಕರು ಹೀಗೆಯೇ ಹೇಳಿದ್ದಾರೆ. ಅ, ಉ, ಮ ಎಂಬ ಅಕ್ಷರಗಳನ್ನು ಒಟ್ಟಿಗೆ ಓಂಕಾರದಂತೆ ಉಚ್ಛಾರ ಮಾಡಿದರೆ ಈ ಎಲ್ಲ ಶಬ್ದಗಳಿಗೆ ಓಂ ಚಿಹ್ನೆಯಾಗುತ್ತದೆ. ಆ ಕಾರದಲ್ಲಿ ಎಲ್ಲಕ್ಕಿಂತ ಕಡಿಮೆ ವಿಶೇಷಣವಿದೆ. ಇಷ್ಟೇ ಅಲ್ಲ ಭಗವದ್ಗೀತೆ ಬೋಧಿಸುತ್ತಾ ಕೃಷ್ಣ ಅಕ್ಷರಗಳಲಿ ಆ ಕಾರ ನಾನೇ ಎಂದಿದ್ದಾನೆ. ಆ ಕಾರ ಗಂಟಲಿನ ಒಳಗಿನಿಂದ ಬಂದರೆ, ಮ ಕಾರ ಕೊನೆಗೆ ತುಟಿಯ ಮೂಲಕ ಉ ಕಾರ ನಾಲಿಗೆಯ ಆದಿಯಲ್ಲಿ ಪ್ರಾರಂಭವಾಗಿ ತುಟಿಯಲ್ಲಿ ಕೊನೆಗಾಣುವವರೆಗೂ ಇರುತ್ತದೆ. ಓಂಕಾರದಲ್ಲಿ ವರ್ಣೋತ್ಪತ್ತಿಯ ಸ್ವರವೆಲ್ಲ ಅಡಕವಾಗಿರುವುದನ್ನು ತಳ್ಳಿ ಹಾಕುವಂತಿಲ್ಲ.
ಓಂಕಾರದ ಕುರಿತಂತೆ ಹಿಂದಿನ ಕಾಲದಿಂದಲೂ ಮಹರ್ಷಿಗಳು, ಆಧ್ಯಾತ್ಮಿಕ ಚಿಂತಕರು ತಮ್ಮದೇ ಆದ ವ್ಯಾಖ್ಯಾನ ನೀಡಿರುವುದನ್ನು ನಾವು ಕಾಣಬಹುದು. ಅದರ ಮಹಿಮೆಯನ್ನು ಅರಿತು ಸಾರ್ಥಕತೆಯನ್ನು ಕಂಡಿದ್ದಾರೆ. ಸ್ವಾಮಿ ವಿವೇಕಾನಂದರು ಓಂಕಾರದ ಕುರಿತಂತೆ ಹೇಳುತ್ತಾ ಜೀವದ ಮೇಲೆ ಅನೇಕ ಜನ್ಮ ಸಂಪ್ರದಾಯವಾದ ಸಂಸ್ಕಾರ ಎಂಬುವುದೊಂದೇ ಎಂಬುವುದನ್ನು ನಾವು ಮರೆಯಬಾರದು. ಈ ಸಂಸ್ಕಾರಗಳು ಹೆಚ್ಚು ಹೆಚ್ಚಾಗಿ ಅಂತರ್ಗತವಾಗಿದ್ದುಕೊಂಡು ಒಂದಿಷ್ಟು ಪ್ರಚೋದನೆ ಸಿಕ್ಕಾಗ ಹೊರಕ್ಕೆ ಕಾಣಿಸುತ್ತವೆ. ದ್ರವ್ಯರೂಪದ ಈ ಅಣುಗಳ ಸ್ಪಂದನವಿಲ್ಲ.
ಓಂಕಾರ ಜಪದಿಂದ ಏಕಾಗ್ರತೆ ಸಾಧ್ಯ
ಈ ಜಗತ್ತು ಪ್ರಳಯಕ್ಕೊಳಗಾದ ಎಲ್ಲ ಬ್ರಹತ್ ಸ್ಪಂದನಗಳೂ ಕಾಣದೆ ಇದ್ದಾಗ ಸೂರ್ಯ, ನಕ್ಷತ್ರ, ಚಂದ್ರ ಮತ್ತು ಈ ಭೂಮಿಯೇ ಕರಗಿ ಹೋದರೂ ಅಣುಗಳ ಸ್ಪಂದನ ಮಾತ್ರ ನಿಲ್ಲುವುದೇ ಇಲ್ಲ. ಪ್ರತಿಯೊಂದು ಅಣುವೂ ಈ ದೊಡ್ಡ ದೊಡ್ಡ ಜಗತ್ತುಗಳು ಮಾಡುವ ಕೆಲಸವನ್ನೇ ಮಾಡುತ್ತವೆ. ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ ಓಂಕಾರ ಜಪ ದೈನಂದಿನ ಚಟುವಟಿಕೆಗಳ ನಡುವೆ ಚಕ್ರದಂತೆ ತಿರುಗುತ್ತಲೇ ಇರಬೇಕು. ಆಗ ಹೃದಯದ ಬೇಗೆಯೆಲ್ಲವೂ ತಣ್ಣಗಾಗುತ್ತದೆ. ಭಗವಂತನ ಆಶ್ರಯ ಪಡೆದು ಎಷ್ಟೋ ಪಾಪಿಗಳು ಪವಿತ್ರರೂ, ಮುಕ್ತರೂ ಆಗಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಮನಸ್ಸಿನೊಳಗೆ ಅನಪೇಕ್ಷಣೀಯ ವಿಚಾರಗಳು, ಚಾಂಚಲ್ಯಗಳು ಪ್ರವೇಶಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಓಂಕಾರದ ಜಪ ಮಾಡುವುದರಿಂದ ಅವುಗಳನ್ನು ತಡೆಯಬಹುದಾಗಿದೆ ಎಂದಿದ್ದಾರೆ. ಪತಂಜಲಿಯ ಪ್ರಕಾರ ಓಂಕಾರವನ್ನು ಜಪಿಸಬೇಕು ಮತ್ತು ಅದರ ಅರ್ಥವನ್ನು ಪರಿಭಾವಿಸಬೇಕು. ಹೀಗೆ ಅದನ್ನು ಜಪಿಸುವ ಯೋಗಿಗೆ ಏಕಾಗ್ರತೆಯುಂಟಾಗುತ್ತದೆ. ಆ ಮೂಲಕ ಆತನ ಮನಸ್ಸು ಅಂತರಾತ್ಮದ ಕಡೆ ಹೊರಳಿ ಚಿತ್ತದ ಏಕಾಗ್ರತೆಗೆ ಅಡೆತಡೆಯಾದ ತೊಂದರೆಯಿಂದ ಬಿಡುಗಡೆ ಹೊಂದುತ್ತದೆ.
ಮಾನಸಿಕ ತೊಂದರೆಗಳು ನಿವಾರಣೆ
ಓಂಕಾರದ ನಿರಂತರ ಜಪದಿಂದ ಹಾಗೂ ಚಿಂತನೆಯಿಂದ ನಮ್ಮೊಳಗಿನ ಸಂಕಲ್ಪ ಶಕ್ತಿಯು ಹೆಚ್ಚುತ್ತದೆ. ಅಷ್ಟೇ ಅಲ್ಲ ಮಾನಸಿಕ ಮತ್ತು ದೈಹಿಕ ತೊಂದರೆಗಳು ಸದ್ದಿಲ್ಲದೆ ನಿವಾರಣೆಯಾಗುತ್ತದೆ ಎಂದು ಹೇಳಿದ್ದಾರೆ. ಒಂದಷ್ಟು ಹೊತ್ತನ್ನು ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಓಂಕಾರದ ಜಪದಲ್ಲಿ ತೊಡಗಿಸಿಕೊಂಡಿದ್ದೇ ಆದರೆ ಒಂದಷ್ಟು ಮನಶಾಂತಿ, ನೆಮ್ಮದಿ ಪಡೆಯಬಹುದು ಎಂಬುವುದರಲ್ಲಿ ಎರಡು ಮಾತಿಲ್ಲ. ನಾವು ತಿಳಿದೋ ತಿಳಿಯದೆಯೋ ಒಳ್ಳೆಯದಕ್ಕಿಂತ ಕೆಟ್ಟದನ್ನೇ ಹೆಚ್ಚು ಅಳವಡಿಸಿಕೊಳ್ಳುತ್ತಿದ್ದೇವೆ.
ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಆದ್ದರಿಂದ ಒಳ್ಳೆಯದರತ್ತ ಮುಖ ಮಾಡಿದರೆ ಒಳ್ಳೆಯದೇ ಆಗುತ್ತದೆ. ಒಂದಷ್ಟು ಸಮಯವನ್ನು ಧ್ಯಾನಕ್ಕೆ ಮೀಸಲಿಟ್ಟು ತದೇಕಚಿತ್ತದಿಂದ ಓಂಕಾರಮಂತ್ರ ಜಪಿಸಿದರೆ ಮನಸ್ಸು ಹಗುರವಾಗಿ ಖುಷಿಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications