ಬೇಸಿಗೆಯಲ್ಲಿ ಶರೀರದತ್ತ ಹೆಚ್ಚಿನ ಗಮನವಿರಲಿ ಯಾಕೆ ಗೊತ್ತಾ?
ಬೇಸಿಗೆಯ ದಿನಗಳು ಕಳೆದರೆ ಸಾಕಪ್ಪಾ ಎಂಬಷ್ಟರ ಮಟ್ಟಿಗೆ ಈ ಬಾರಿಯ ಬೇಸಿಗೆ ಕಾಟ ನೀಡಿದೆ. ಬಿಸಿಲಿಗೆ ಹೊರಗೆ ಹೋದರೆ ಸಾಕು ಬೆವರಿಂದ ಮೈ ತೊಯ್ದು ಹೋಗುತ್ತಿದೆ. ಅದರಲ್ಲೂ ಬಿಸಿಲಿಗೆ ಕೆಲಸ ಮಾಡುವವರ ಗೋಳು ಹೇಳತೀರದಂತಾಗಿದೆ. ಎಷ್ಟೇ ಮುತುವರ್ಜಿ ವಹಿಸಿ ಡ್ರೆಸ್ ಮಾಡಿಕೊಂಡು ಹೋದರೂ ಬೆವರಿನ ದುರ್ವಾಸನೆ ಮುಜುಗರ ತರುವಂತೆ ಮಾಡುತ್ತಿದೆ. ಇದರ ಜೊತೆಗೆ ನೆತ್ತಿ ಸುಡುವ ಬಿಸಿಲು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಮಳೆಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳು ಬಾಧಿಸಿದರೆ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಇನ್ನಿಲ್ಲದಂತೆ ಕಾಡುತ್ತವೆ. ಅದಕ್ಕಿಂತ ಹೆಚ್ಚಾಗಿ ನೆಮ್ಮದಿಯಾಗಿ ಓಡಾಡಲು, ಕೆಲಸ ಮಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ. ಅದರಲ್ಲೂ ಶರೀರದಿಂದ ಹೊರಬರುವ ದುರ್ಗಂಧ ಬೇರೆಯವರಿಗೆ ಅಸಹ್ಯ ಹುಟ್ಟಿಸುತ್ತದೆ. ಹೀಗಾಗಿ ಎಷ್ಟೇ ಸುಗಂಧವನ್ನು ಮೈಮೇಲೆ ಸುರಿದುಕೊಂಡರೂ ದುರ್ಗಂಧ ಬೀರುವುದನ್ನು ತಪ್ಪಿಸುವುದೇ ಸವಾಲ್ ಆಗುತ್ತಿದೆ.

ಈ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದೆ ಹೋದರೆ ಮುಜುಗರ ಖಚಿತ. ಹೀಗಾಗಿ ಶರೀರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಇದನ್ನು ತಡೆಯಲು ಮುಂದಾಗಬೇಕಾಗಿದೆ. ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಹೆಚ್ಚಿನ ಜನರಿಗೆ ಕಂಕುಳಿನಿಂದಲೇ ದುರ್ವಾಸನೆ ಬರುತ್ತದೆ. ಕಾರಣ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯದಿರುವುದು. ಇದನ್ನು ಆಗಾಗ್ಗೆ ತೆಗೆದು ಸ್ವಚ್ಛಗೊಳಿಸುವತ್ತ ಗಮನಹರಿಸಬೇಕಾಗುತ್ತದೆ.
ಹಲ್ಲಿನ ಶುಚಿತ್ವಕ್ಕೂ ಆದ್ಯತೆ ನೀಡಿ
ಇಷ್ಟೇ ಅಲ್ಲದೆ ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಕನಿಷ್ಟ ಎರಡು ಲೀಟರ್ನಷ್ಟು ನೀರನ್ನು ಕುಡಿಯಬೇಕು. ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಳ್ಳುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು.
ಇನ್ನು ಬಿಸಿಲು ನೇರವಾಗಿ ಮೈಮೇಲೆ ಬೀಳುವುದರಿಂದ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಕಾಡಬಹುದು ಹೀಗಾಗಿ ಬೇಸಿಗೆಯ ದಿನಗಳಲ್ಲಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ತುಳಸಿ, ಬೇವಿನ ಫೇಸ್ ಪ್ಯಾಕ್ ಬಳಸುವುದು ಸೂಕ್ತ. ನಂತರ ತಣ್ಣೀರಿನಿಂದ ರೋಸ್ ವಾಟರ್ನಿಂದ ಮುಖ ತೊಳೆದುಕೊಂಡರೆ ಚರ್ಮದ ಕಾಂತಿಯುತವಾಗುತ್ತದೆ. ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುತ್ತಾ ಕೆಲಸ ಮಾಡುವ ಮಹಿಳೆಯರು ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬಾರದು. ಮುಖದ ಜತೆಗೆ ಕೂದಲಿನ ಬಗ್ಗೆಯೂ ಆಸ್ಥೆ ವಹಿಸುವುದು ಅಗತ್ಯ.

ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ
ಬಿಸಿಲಿನ ಹೊಡೆತಕ್ಕೆ ಕೂದಲು ಉದುರುವಿಕೆ ಕಾಣಿಸಬಹುದು ಹೀಗಾಗಿ ಕೂದಲನ್ನು ನೀಟಾಗಿ ಬಾಚಿ ಜಡೆ ಹೆಣೆಯುವುದು ಒಳ್ಳೆಯದು. ಕೂದಲಿಗೆ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಎಣ್ಣೆಗಳು ಸಿಗುತ್ತವೆ. ಇದರಲ್ಲಿ ಯಾವುದು ಕೂದಲಿಗೆ ಹೊಂದುತ್ತದೆಯೋ ಅದನ್ನೇ ಬಳಸಬೇಕು. ಶಾಂಪೂ ಕೂಡ. ಆಗಾಗ್ಗೆ ಎಣ್ಣೆ ಮತ್ತು ಶಾಂಪೂವನ್ನು ಬದಲಾಯಿಸುವುದು ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಬಿಸಿಲಿಗೆ ಬೆವರಿನಿಂದಾಗಿ ಕೂದಲು ಮಂದವಾಗುವುದು, ತಲೆಯಲ್ಲಿ ಕೆರೆತ ಕಾಣಿಸಿಕೊಳ್ಳಬಹುದು ಹೀಗಾಗಿ ತಲೆ ಮತ್ತು ಕೂದಲಿನ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ.
ಉಗುರು ಬೆಳೆಸುವ ಹವ್ಯಾಸ ಹೊಂದಿದ್ದರೆ ಅಂತಹವರು ಎಚ್ಚರವಹಿಸಬೇಕಾಗುತ್ತದೆ. ಉಗುರಿನಲ್ಲಿ ಕೊಳೆ ತುಂಬದಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಬೇಸಿಗೆಯ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಮಹಿಳೆಯರು ಎಚ್ಚರ ವಹಿಸುವುದು ಅಗತ್ಯ.












Click it and Unblock the Notifications