ಬದುಕಿನಲ್ಲಿ ಗೆಲುವಿನ ಗುರಿ ತಲುಪುವುದು ಹೇಗೆ? ಈ ವಿಚಾರಗಳನ್ನು ಎಂದೂ ಮರೆಯಬೇಡಿ

ಜೀವನದಲ್ಲಿ ಮೇಲಿಂದ ಮೇಲೆ ಬರುವ ಸೋಲು, ಕಷ್ಟ ಕಾರ್ಪಣ್ಯಗಳು, ನನ್ನಿಂದ ಇನ್ನು ಮುಂದೆ ಏನೂ ಸಾಧ್ಯವಾಗಲಾರದೆಂಬ ಭಾವನೆ, ಅಸಹಾಯಕತೆ, ಇಲ್ಲಿಗೆ ಬದುಕು ಮುಗಿದೇ ಬಿಟ್ಟಿತೆಂಬ ನಿರಾಸೆ.. ಇದು ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ಕಾಪಾಡುವುದು ಆಶಾಭಾವನೆ ಮಾತ್ರ.

ಒಮ್ಮೆ ನಮ್ಮನ್ನು ನಿರಾಸೆ ಕಾಡಿತೆಂದರೆ ಮತ್ತೆ ನಾವು ಮೇಲೇಳುವುದು ಕಷ್ಟ ಸಾಧ್ಯ. ಬಹಳಷ್ಟು ಮಂದಿಯ ಬದುಕಿನ ಇತಿಶ್ರೀಗೂ ನಿರಾಸೆ ಕಾರಣವಾಗಿ ಬಿಡುತ್ತದೆ. ಬದುಕಿನಲ್ಲಿ ನಿರಾಸೆ ಇಣುಕಿತೆಂದರೆ ಏನೇನು ಮಾಡಲು ಮಾಡಲು ಸಾಧ್ಯವಾಗುವುದಿಲ್ಲ. ಒಂದೊಂದು ಕ್ಷಣವೂ ನರಕವಾಗಿ ಪರಿಣಮಿಸುತ್ತದೆ. ಮುಂದೆ ನಡೆಯಲು ಮಾರ್ಗ ಇಲ್ಲವೇನೋ ಎಂಬ ಭಾವ ಕಾಡುತ್ತದೆ. ನಿರಾಸೆ ಕಾಡಿದ ವ್ಯಕ್ತಿ ಜೀವವಿದ್ದರೂ ಜೀವಂತ ಹೆಣವಾಗಿ ಬಿಡುತ್ತಾರೆ.

How To Reach The Goal Of Victory In Life

ಹಾಗಾದರೆ ನಿರಾಸೆಗೆ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಆಧ್ಯಾತ್ಮಿಕ ಚಿಂತಕರು ಅಜ್ಞಾನವೇ ಕಾರಣ ಎಂಬ ಉತ್ತರವನ್ನು ನೀಡುತ್ತಾರೆ. ಅಷ್ಟೇ ಅಲ್ಲ. ನಮ್ಮಲ್ಲಿರುವ ಅಪಾರವಾದ ಪ್ರತಿಭೆ, ಸೃಜನಶೀಲತೆ ಇವುಗಳನ್ನು ಗುರುತಿಸಿಕೊಳ್ಳದಿರವುದೂ ನಿರಾಸೆಗೆ ಕಾರಣವಾಗಿ ಬಿಡುತ್ತದೆ.

ನಗು ನಗುತ್ತಾ ಬದುಕುತ್ತಿರಬೇಕು

ನಮ್ಮನ್ನು ಅನಾರೋಗ್ಯ ಕಾಡಬಹುದು. ಅದು ಭಯಂಕರ ರೋಗವೂ ಆಗಿರಬಹುದು. ರೋಗ ಬಂದಿದೆ ಎಂದ ತಕ್ಷಣ ಜೀವನದಲ್ಲೇನಿದೆ? ನಾನು ಸಾಯುವುದು ಖಂಡಿತಾ ಎಂಬ ನಿರಾಸೆ ನಮ್ಮನ್ನು ಕಾಡಿದರೆ ಬಹಳಷ್ಟು ಬೇಗನೇ ಆರೋಗ್ಯ ಹದಗೆಟ್ಟು ಸಾವಿಗೆ ಶರಣಾಗಿ ಬಿಡುತ್ತೇವೆ. ಅದರ ಬದಲಿಗೆ ಆ ಬಗ್ಗೆ ಯೋಚಿಸದೆ ನಗು ನಗುತ್ತಾ ಇರಬೇಕು. ಏಕೆಂದರೆ ಆರೋಗ್ಯ ಹದಗೆಟ್ಟಿದ್ದರೂ ಜೀವನದಲ್ಲಿ ನಗು ನಗುತ್ತಾ ಬದುಕುತ್ತಿರುವವರು ಇದ್ದಾರೆ ಎಂಬುದನ್ನು ನಾವು ಮರೆಯಬಾರದು.

ಬದುಕೆಂದ ಮೇಲೆ ಕಷ್ಟಗಳು ಬರುತ್ತವೆ. ನೋವುಗಳಿರುತ್ತವೆ. ಆತಂಕ, ತಂಟೆ, ತಕರಾರು, ಸಮಸ್ಯೆ ಎಲ್ಲವೂ ಇದ್ದೇ ಇರುತ್ತದೆ. ಆದರೆ ಅದನ್ನೇ ಯೋಚಿಸುತ್ತಾ ನರಳಾಡಿದರೆ ಯಾವುದೇ ಪರಿಹಾರ ಸಿಗದು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಬೆಳಕಿನ ದಾರಿ ಇದ್ದೇ ಇದೆ. ಬುದ್ದಿವಂತರು ತಮ್ಮ ಬುದ್ದಿವಂತಿಕೆಯನ್ನು ಬಳಸಿಕೊಂಡು ಬೆಳಕಿನ ದಾರಿ ಹಿಡಿಯುತ್ತಾರೆ, ಮುನ್ನಡೆಯುತ್ತಾರೆ, ಸಮಸ್ಯೆ ಪರಿಹರಿಸಿಕೊಳ್ಳುತ್ತಾರೆ.

How To Reach The Goal Of Victory In Life

ಆಶಾಭಾವನೆಯೇ ನಮ್ಮ ಜೀವನ

ಬುದ್ದಿವಂತನಾದವನು, ವಿವೇಕಿಯಾದವನು, ಚತುರನಾದವನು, ಕ್ರಿಯಾಶೀಲ ನಾದವನು, ಜ್ಞಾನಿಯಾದವನು ಒಂದು ಸಮಸ್ಯೆಗೆ ನೂರಾರು ಪರಿಹಾರದ ದಾರಿಗಳನ್ನು ಕಂಡು ಹಿಡಿಯುತ್ತಾನೆ. ಆ ಮೂಲಕ ಸಮಸ್ಯೆ ಪರಿಹರಿಸಿ ಕೊಳ್ಳುತ್ತಾನೆ. ಜೀವನದಲ್ಲಿ ಆಶಾಭಾವನೆ ಬೇಕು. ಏಕೆಂದರೆ ಬದುಕಿನಲ್ಲಿ ಆಶಾಕಿರಣಗಳ ಹೊಂಬಿಸಿಲು ತುಂಬಿರಬೇಕು. ನಿರಾಶವಾದಿ ಯಾಗಬಾರದು. ಆಶಾಭಾವನೆಯೇ ಜೀವನ, ನಿರಾಸಭಾವನೆಯೇ ಮರಣ ಎಂದರೆ ತಪ್ಪಾಗಲಾರದು.

ಏನೇ ಬಂದರೂ ಹೆಜ್ಜೆ ಮುಂದಿಡುತ್ತೇನೆ. ಸೋಲನ್ನು ಗೆಲ್ಲುತ್ತೇನೆ. ಸೋಲು ಗೆಲುವಿಗೆ ಪ್ರೇರಣೆಯಾಗುತ್ತದೆ. ಸೋಲಿಗೆ ಕಾರಣವನ್ನು ಅವಲೋಕಿಸಿ ಗೆಲುವಿನ ಗುರಿಯನ್ನು ತಲುಪುತ್ತೇನೆ. 'ಸಾಧಿಸಿದರೆ ಸಿದ್ದಿ' ಎಂಬ ಗೆಲುವನ್ನು ಪಡೆದೇ ತೀರುತ್ತೇನೆ ಎಂಬ ಆತ್ಮವಿಶ್ವಾಸದಿಂದ ಬದುಕನ್ನು ಸವಾಲಾಗಿ ಸ್ವೀಕರಿಸಿದರೆ ನಿರಾಸೆಗೆ ಸ್ಥಳವಿಲ್ಲದೆ ಅದು ಪಲಾಯನಗೈಯ್ಯುತ್ತದೆ.

ನಿರಾಸೆಗೆ ಶರಣಾಗಬಾರದು

ಯಾವ ರೀತಿಯ ವ್ಯಕ್ತಿತ್ವವುಳ್ಳವರು ನಿರಾಸೆಗೆ ಶರಣಾಗುವುದಿಲ್ಲ ಎಂಬುವುದನ್ನು ಆಧ್ಯಾತ್ಮಿಕ ಚಿಂತಕರು ಹೀಗೆಯೇ ವಿವರಿಸಿದ್ದಾರೆ. ಸಮಯ ಪರಿಪಾಲನೆ ಮಾಡುವವರಿಗೆ ನಿರಾಸೆಗೆ ಅವಕಾಶವಿಲ್ಲ. ಸಮಸ್ಯೆಗಳು ವಕ್ಕರಿಸಿದರೂ ಸಮಯ ಪರಿಪಾಲನಾಶೀಲವುಳ್ಳವರು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ಸಮಯ ನಿಯೋಜನೆಯ ಗುಣಶೀಲನು ಉನ್ನತ ಮನೋಬಲವುಳ್ಳವ ನಾಗಿರುತ್ತಾನೆ. ಸಮಯಶೀಲನಿಗೆ ಜೀವನದಲ್ಲಿ ಆತ್ಮವಿಶ್ವಾಸದ ಭರವಸೆಯಿರುತ್ತದೆ.

How To Reach The Goal Of Victory In Life

ಆಶಾಭಾವನೆಯು ರೂಪುಗೊಳ್ಳಲು ಸಮಯಪ್ರಜ್ಞೆ ಮುಖ್ಯವಾಗಿದ್ದು, ಸಮಯ ಪರಿಪಾಲನೆ, ಸದುಪಯೋಗ ಕಾಪಾಡುತ್ತದೆ. ಸಮಯ ಪ್ರಜ್ಞೆಯು ಆಶಾಜ್ಯೋತಿಯನ್ನು ಬೆಳಗಿಸುತ್ತದೆ. ಸೋಮಾರಿ ಯಾಗಿರದೆ ನಿರಂತರ ಕ್ರಿಯಾಶೀಲ ಚಟುವಟಿಕೆಯಿಂದ ಆಸಕ್ತಿಯಿಂದ ಎಲ್ಲರೊಂದಿಗೆ ಬೆರೆಯುವವರು ನಿರಾಸೆಗೆ ಬಲಿಯಾಗುವುದಿಲ್ಲ.

ನೆನಪಿರಲಿ ಅದು ಜೀವನದ ಟಾನಿಕ್!

ನೆನಪಿರಲಿ ನಮ್ಮ ದೈಹಿಕ ಶಕ್ತಿಯನ್ನು ಮನೋಬಲದೊಂದಿಗೆ ಬಳಸಿಕೊಂಡರೆ ಸೋಲು ಖಂಡಿತಾ ಬರಲಾರದು. ಸೋಲೇ ಇಲ್ಲ ಎಂದ ಮೇಲೆ ನಿರಾಸೆ ತಾನೆ ಹೇಗೆ ಕಾಡೀತು? ಬದುಕು ಅನುಭವಗಳ ಸಂತೆ. ಇಲ್ಲಿ ಸುಖ, ದುಃಖ, ನೋವು, ನಲಿವು, ಸೋಲು, ಗೆಲುವು ಹೀಗೆ ಯಾವುದು ಇಲ್ಲ ಹೇಳಿ? ಪ್ರತಿಯೊಬ್ಬರೂ ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ.

ಕೆಲವು ಸಮಸ್ಯೆಗಳು ಆಕಸ್ಮಿಕವಾಗಿ ಬಂದು ನಮ್ಮನ್ನು ತಟ್ಟಬಹುದು. ಮತ್ತೆ ಕೆಲವು ಸಮಸ್ಯೆಗಳನ್ನು ನಾವೇ ಮೈಮೇಲೆ ಎಳೆದುಕೊಂಡಿರುತ್ತೇವೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ. ಹೀಗಿರುವಾಗ ಸಣ್ಣಪುಟ್ಟ ಸಮಸ್ಯೆಗೆ ಹೆದರಿ ಅದಕ್ಕೆ ಬದುಕನ್ನೇ ಬಲಿಕೊಡುವ ಬದಲು ಎದುರಿಸಿ ಗೆಲ್ಲಬೇಕು. ಎಂತಹದ್ದೇ ಸಂದರ್ಭದಲ್ಲೂ ಜಯಿಸಿ ಮುನ್ನಡೆಯುತ್ತೇನೆ ಎಂಬ ಆಶಾಭಾವನೆ ನಮ್ಮಲ್ಲಿರಬೇಕು. ನೆನಪಿರಲಿ ಅದು ಜೀವನದ ಟಾನಿಕ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+