Jackfruit Sambar: ಮನೆಯಲ್ಲಿ ಹಲಸಿನಕಾಯಿ ಇದ್ಯಾ? ಹಾಗ್ರಿದೆ ಈಗಲೇ ಮಾಡಿ ಈ ಸುಲಭ ಸಾಂಬಾರ್
ಇನ್ನೇನು ಬೇಸಿಗೆಗಾಲ ಆರಂಭವಾಯ್ತು, ಬೇಸಿಗೆಯ ಹಣ್ಣಿನ ಸುಗ್ಗಿಯೂ ಶುರುವಾಯ್ತು, ಮಾವಿನ ಹಣ್ಣು, ಹಲಸಿನ ಹಣ್ಣು ಹೀಗೆ ಬೇಸಿಗೆಯಲ್ಲೇ ಬೆಳೆಯುವ ಬೇಸಿಗೆಯಲ್ಲೇ ಸೇವಿಸಬೇಕಾದ ಹಣ್ಣುಗಳ ಸೀಜನ್ ಈಗಾಗಲೇ ಆರಂಭವಾಗಿದೆ. ಅದರಲ್ಲೂ ಹಲಸಿನ ಹಣ್ಣು, ನಾಲಿಗೆಗೆ ಎಷ್ಟು ರುಚಿಯೋ..ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಆದ್ರೆ ಅದನ್ನು ಬಿಡಿಸುವ ಪರಿ ಮಾತ್ರ ಕೊಂಚ ಕಷ್ಟ.
ಹಲಸಿನ ಹಣ್ಣು ಮಾತ್ರವಲ್ಲ ಹಲಸಿನ ಕಾಯಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಹಲಸಿನ ಕಾಯಿಯನ್ನು ಸಾಂಬಾರ್ ಅಥವಾ ಪಲ್ಯ ಮಾಡಿ ಈ ಬೇಸಿಯಲ್ಲಿ ಒಮ್ಮೆ ಸವಿಯಿರಿ. ಕೆಲವೊಂದು ಹಲಸು ಹಣ್ಣಾದ ಮೇಲೆ ತಿನ್ನಲು ರುಚಿ ಇರುವುದಿಲ್ಲ, ಅಂತಹ ಹಲಸನ್ನು ಸಾಂಬಾರ್ ಮಾಡಿ ತಿನ್ನಿ. ಸರಳವಾಗಿ ಹಲಸಿನ ಕಾಯಿ ಸಾಂಬಾರ್ ಮಾಡುವ ವಿಧಾನ ಇಲ್ಲಿದೆ.

ಹಲಸಿನ ಕಾಯಿ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಚಿಕ್ಕ ಹಲಸಿನ ಹಣ್ಣು- 1/2 ಭಾಗ
ತೊಗರಿ ಬೇಳೆ- 4 ಚಮಚ
ಅರಿಶಿನ ಪುಡಿ- ದೊಡ್ಡ ಚಿಟಿಕೆ
ಉಪ್ಪು-ನಿಮ್ಮ ರುಚಿಗೆ ತಕ್ಕಂತೆ
ಬೆಲ್ಲ- 1/2 ಚಮಚ
ಹುಣಸೆಹಣ್ಣು-ಒಂದು ನೆಲ್ಲಿಕಾಯಿ ಗಾತ್ರ
ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು
ತುರಿದ ತೆಂಗಿನಕಾಯಿ-1/2 ಕಪ್
ಕೆಂಪು ಮೆಣಸಿನಕಾಯಿ-4-5
ಉದ್ದಿನ ಬೇಳೆ-1 ಚಮಚ
ಕೊತ್ತಂಬರಿ ಬೀಜಗಳು- 2 ಚಮಚ
ಜೀರಿಗೆ-1/2 ಚಮಚ
ಸಾಸಿವೆ ಬೀಜಗಳು-1/4 ಚಮಚ
ಮೆಂತ್ಯ ಬೀಜಗಳು-7-8
ಇಂಗು-ಒಂದು ಚಿಟಿಕೆ
ಅಡುಗೆ ಎಣ್ಣೆ-1/2 ಚಮಚ
ಕರಿಬೇವಿನ ಎಲೆಗಳು

ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
ಕೆಂಪು ಮೆಣಸಿನಕಾಯಿ-1
ಕರಿಬೇವಿನ ಎಲೆಗಳು-5-6
ಸಾಸಿವೆ ಬೀಜಗಳು-1/2 ಚಮಚ
ಅಡುಗೆ ಎಣ್ಣೆ-1 ಚಮಚ
ಪುಡಿಮಾಡಿದ ಬೆಳ್ಳುಳ್ಳಿ-4-5
ಹಲಸಿನ ಕಾಯಿ ಸಾಂಬಾರ್ ಮಾಡುವ ವಿಧಾನ
ಮೊದಲು ತೊಗರಿ ಬೇಳೆಯನ್ನು 15 ನಿಮಿಷಗಳ ಕಾಲ ನೆನೆಸಿಡಿ. ಹಸಿ ಹಲಸಿನ ಕಾಯಿ ಕತ್ತರಿಸಿ. ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ. ಬಳಿಕ ಕುಕ್ಕರ್‌ನಲ್ಲಿ ಕತ್ತರಿಸಿದ ಹಲಸಿನ ಕಾಯಿ, ನೆನೆಸಿಟ್ಟ ಬೇಳೆ, ಚಿಟಿಕೆ ಅರಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಮಸಾಲೆಗೆ ಬೇಕಾಗುವ ಸಾಮಾಗ್ರಿಗಳನ್ನು ಬೆರೆಸಿ ರುಬ್ಬಿಕೊಳ್ಳಿ. ಬಳಿಕ ಬೇಯಿಸಿದ ಹಲಸಿನ ಕಾಯಿ ಹಾಗೂ ರಬ್ಬಿದ ಮಸಾಲೆಯನ್ನು ಸೇರಿಸಿ, ಬಳಿಕ ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಕೊನೆಯಲ್ಲಿ ಒಗ್ಗರಣೆ ಸೇರಿಸಿದರೆ ರುಚಿ-ರುಚಿಯಾದ ಹಲಸಿನ ಕಾಯಿ ಸಾಂಬಾರ್ ಸವಿಯಲು ಸಿದ್ಧ.












Click it and Unblock the Notifications