Pepper Rice Recipe: ನಿಮಿಷದಲ್ಲೇ ತಯಾರಿಸಿ ರುಚಿರುಚಿಯಾದ ಪೆಪ್ಪರ್ ರೈಸ್..!
ಬೆಳಗಿನ ತಿಂಡಿ ರುಚಿಕರವಾಗಿರಬೇಕು, ಆರೋಗ್ಯಕರವಾಗಿರಬೇಕು ಎಂದುಕೊಂಡವರು ಈ ಪೆಪ್ಪರ್ ರೈಸ್ ಟ್ರೈ ಮಾಡಿ. ಅನ್ನದ ಜೊತೆಗೆ ಕಾಳು ಮೆಣಸಿನ ಘಮ, ಜೊತೆಗೆ ಗೋಡಂಬಿ ಬಾಯಿಗೆ ಸಿಗುತ್ತಿದ್ದರೆ, ಒಂದು ಚಮಚ ತಿನ್ನುವವರು ನಾಲ್ಕು ಚಮಚ ತಿನ್ನಬೇಕು ಅಷ್ಟು ರುಚಿಯಾಗಿರುತ್ತದೆ. ಬಹಳ ಸರಳವಾಗಿ ಮಾಡುವ ಈ ಅನ್ನದ ಖಾದ್ಯ ಮಕ್ಕಳಿಗೂ ಸಹ ಇಷ್ಟವಾಗುತ್ತದೆ.
ಜೊತೆಗೆ ಇನ್ನೇನು ಮಳೆಗಾಲ ಆರಂಭವಾಯ್ತು ಜೊತೆಗೆ ಶೀತ-ಕೆಮ್ಮು ಅಂತಹ ಕಾಯಿಲೆಗಳು ಶುರುವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಕಾಳು ಮೆಣಣು ಬಳಸಿ ಮಾಡುವ ಖಾದ್ಯಗಳನ್ನು ಹೆಚ್ಚಾಗಿ ತಿನ್ನಬೇಕು. ಇದರಲ್ಲಿ ಪೆಪ್ಪರ್ ರೈಸ್ ನಿಮಗೆ ಬೆಸ್ಟ್ ಆಯ್ಕೆಯಾಗಿರುತ್ತದೆ. ಬೆಳಗಿನ ತಿಂಡಿಗೆ ಪೆಪ್ಪರ್ ರೈಸ್ ತಿಂದರೆ ಗಂಟಲು ಕಿಚಿಕಿಚಿ, ಕೆಮ್ಮು ಸೇರಿದಂತೆ ಮಳೆಗಾಲದಲ್ಲಿ ಬರುವ ಕಾಯಿಲೆಗಳಿಂದ ದೂರ ಇರಬಹುದು. ಹೀಗಾಗಿ ಸುಲಭವಾಗಿ ಪೆಪ್ಪರ್ ರೈಸ್ ಮಾಡುವ ವಿಧಾನ ಇಲ್ಲಿದೆ.

ಪೆಪ್ಪರ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಅನ್ನ- 1 ಕಪ್
ಸಾಸಿವೆ-1/2 ಚಮಚ
ಜೀರಿಗೆ-1/2 ಚಮಚ
ಉದ್ದಿನ ಬೇಳೆ-1 ಚಮಚ
ಗೋಡಂಬಿ-2 ಚಮಚ
ಈರುಳ್ಳಿ-1
ಕಾಳು ಮೆಣಸು-2 ಚಮಚ
ಕರಿಬೇವಿನ ಎಲೆಗಳು
ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು

ಪೆಪ್ಪರ್ ರೈಸ್ ತಯಾರಿಸುವ ವಿಧಾನ
ಮೊದಲು ಅನ್ನವನ್ನು ಸಿದ್ಧಪಡಿಸಿಕೊಳ್ಳಿ. ಸೋನಾ ಮಸೂರಿ ಅಕ್ಕಿಯಾಗಿದ್ದರೆ ಉತ್ತಮ. ಅನ್ನ ಸಿದ್ಧವಾದ ಬಳಿಕ ಕಾಳು ಮೆಣಸನ್ನು ಪುಡಿ ಮಾಡಿ ಸಿದ್ಧಪಡಿಸಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಸಾಸಿವೆ ಕಾಳುಗಳು ಸಿಡಿಯಲು ಪ್ರಾರಂಭವಾಗುವವರೆಗೆ ಚೆನ್ನಾಗಿ ಹುರಿಯಿರಿ, ಈ ಒಗ್ಗರಣೆಗೆ ಗೋಡಂಬಿ ಸೇರಿಸಿ. ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಎಲೆಗಳನ್ನು ಸೇರಿಸಿ ಮತ್ತು ಮೃದುವಾಗುವವರೆಗೆ ಹುರಿಯಿರಿ.
ಬಳಿಕ ಪುಡಿಮಾಡಿದ ಕರಿಮೆಣಸು ಮತ್ತು ಉಪ್ಪು ಸೇರಿಸಿ ಗೋಡಂಬಿ ಒಗ್ಗರಣೆಯೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಈ ಮಿಶ್ರಣಕ್ಕೆ ಅನ್ನ ಸೇರಿಸಿ ಕಲಸಿದರೆ ರುಚಿ-ರುಚಿಯಾದ ಬಿಸಿ ಬಿಸಿಯಾದ ಪೆಪ್ಪರ್ ರೈಸ್ ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications