Peanut Laddu: ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ಈ ಆರೋಗ್ಯಕರ ತಿನಿಸು ತಯಾರಿಸಿ
ಆರೋಗ್ಯಕರ ಮತ್ತು ರುಚಿಕರ ತಿಂಡಿ ತಯಾರಿಸಲು ಕೆಲವೊಮ್ಮೆ ಅನೇಕ ಪದಾರ್ತಗಳ ಅವಶ್ಯಕತೆಯಿದೆ. ಆದರೆ, ನಾವಿಲ್ಲಿ ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ದೇಹಕ್ಕೆ ಆರೋಗ್ಯ ಮತ್ತು ಶಕ್ತಿ ನೀಡುವ ವಿಶೇಷ ತಿನಿಸನ್ನು ಮಾಡುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ. ಈ ಪದಾರ್ಥಗಳು ಕೂಡ ಅಡುಗೆ ಮನೆಯಲ್ಲಿಯೇ ಆರಾಮಾವಾಗಿ ಸಿಗಲಿವೆ.
ಹೌದು... ಆರೋಗ್ಯಕರ ಕಾಳುಗಳಲ್ಲಿ ಕಡಲೆಕಾಯಿಗೂ ಮಹತ್ವದ ಸ್ಥಾನವಿದೆ. ದಿನನಿತ್ಯದ ಅಡುಗೆಯಲ್ಲಿ ಬಳಸಲಾಗುವ ಈ ಪದಾರ್ಥ ಪ್ರೋಟಿನ್ ಅಂಶಗಳಿಂದ ತುಂಬಿದೆ. ಶೇಂಗಾ ಎಂದು ಹಲವು ಭಾಗಗಳಲ್ಲಿ ಕರೆಯಲಾಗುವ ಕಡಲೆಕಾಯಿಯನ್ನು ಬಳಸಿ ಅನೇಕ ತಿನಿಸುಗಳನ್ನು ಮಾಡಬಹುದು. ಇಲ್ಲಿ ಕೇವಲ 2 ಪದಾರ್ಥಗಳನ್ನು ಬಳಸಿ ಮಾಡಬಹುದಾದ ಲಡ್ಡು ರೆಸಿಪಿಯ ವಿವರಣೆ ಹಂಚಿಕೊಳ್ಳಲಾಗಿದೆ.

ಕಡಲೆಕಾಯಿಯ ಉಂಡೆ ಪ್ರೋಟೀನ್ ಭರಿತ ರೆಸಿಪಿಯಾಗಿದ್ದು ಬೆಳೆಯುವ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಡಲೆಕಾಯಿ ಲಡ್ಡು ಅಥವಾ ಕಡಲೆಕಾಯಿ ಉಂಡೆಯಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಉತ್ತಮ ಕೊಬ್ಬಿನಂಶವಿದೆ. ಬೆಳೆಯುವ ಮಕ್ಕಳಿಗೆ ಇದು ಸೂಪರ್ ಫುಡ್ ಎನ್ನಬಹುದು. ಅದರಲ್ಲೂ ಇದನ್ನು ಸುಲಭವಾಗಿ ತಯಾರಿಸಬಹುದು. ದೊಡ್ಡವರು ಮತ್ತು ಮಕ್ಕಳು ಎಂಜಾಯ್ ಮಾಡುತ್ತಾ ತಿನ್ನುತ್ತಾರೆ.
ಕಡಲೆಕಾಯಿ ಉಂಡೆ ತಯಾರಿಸಲು ಬೇಕಾದ ಪದಾರ್ಥಗಳು
1. ಅರ್ಧ ಕಪ್ ಕಡಲೆಕಾಯಿ ಬೀಜ ಅಥವಾ ಶೇಂಗಾ
2. ಕಾಲು ಕಪ್ ಪುಡಿ ಮಾಡಿದ ಬೆಲ್ಲ (ನಿಮ್ಮ ರುಚಿಗೆ ತಕ್ಕಂತೆ ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು)
ಕಡಲೆಕಾಯಿ ಉಂಡೆ ತಯಾರಿಸುವ ವಿಧಾನ
ಮೊದಲು ಒಂದು ದಪ್ಪ ತಳವಿರುವ ಬಾಣಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಕಡಲೆಕಾಯಿ ಬೀಜಗಳನ್ನು ಹಾಕಿ ತೆಗೆದುಕೊಳ್ಳಿ. ಮಧ್ಯಮ ಉರಿಯಲ್ಲಿ ಗರಿಗರಿಯಾಗಿ ಅಥವಾ ತಿಳಿ ಕಂದು ಬರುವವರೆಗೆ ಹುರಿಯಿರಿ. ಸ್ವಲ್ಪ ತಣ್ಣಗಾಗುವವರೆಗೆ ಬಿಟ್ಟು ಕೈಯಿಂದ ಉಜ್ಜಿ ಅದರ ಮೇಲಿನ ಸಿಪ್ಪೆ ತೆಗೆಯಿರಿ. ಸಿಪ್ಪೆ ತೆಗೆದು ಬೀಜಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ.

ಅದೆ ಮಿಕ್ಸ್ ಜಾರ್‌ಗೆ ಬೆಲ್ಲ ಸೇರಿಸಿ ಮತ್ತೆ ಎರಡು ಮೂರು ಸುತ್ತು ರುಬ್ಬಿಕೊಳ್ಳಿ. ಹೀಗೆ ಕಡಲೆಕಾಯಿ ಬೀಜಗಳು ಎಣ್ಣೆ ಬಿಡಲು ಪ್ರಾರಂಭವಾಗುವವರೆಗೆ ರುಬ್ಬುತ್ತಿರಿ. ಬಳಿಕ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮಿಶ್ರಣವ್ನನು ಕೈಗೆ ತೆಗೆದುಕೊಂಡು ಉಂಡೆಗಳನ್ನು ಕಟ್ಟಿದರೆ ಕಡಲೆಕಾಯಿ ಉಂಡೆ ಸವಿಯಲು ಸಿದ್ಧ.
ಇನ್ನು, ಕಡಲೆಕಾಯಿ ಬೀಜಗಳನ್ನು ಬಳಸಿ ಚಟ್ನಿ ಪುಡಿ, ಶೇಂಗಾ ಹೋಳಿಗೆ, ಉಪ್ಪು ಹಾಕಿದ ಕಡಲೆಕಾಯಿ, ಕಡಲೆಕಾಯಿ ಲಡ್ಡು, ಎಳ್ಳು-ಬೆಲ್ಲ, ಕಡ್ಲೆಕಾಯಿ, ಮಸಾಲೆ ಕಡಲೆಕಾಯಿ ಮುಂತಾದ ತಿನಿಸುಗಳನ್ನು ತಯಾರು ಮಾಡಬಹುದು. ಪೀನಟ್ ಬಟರ್ ಅನ್ನು ಬ್ರೆಡ್ ಅಥವಾ ಚಪಾತಿ ಜೊತೆಗೆ ಬಳಸಬಹುದು.












Click it and Unblock the Notifications