Bellulli Tambuli: ಮಟ..ಮಟ ಬಿಸಿಲಿಗೆ ತಂಪು..ತಂಪು ಬೆಳ್ಳುಳ್ಳಿ ತಂಬುಳಿ: 5 ನಿಮಿಷದಲ್ಲಿ ಮಾಡಿ ತಿನ್ನಿ
ಈ ಬಾರಿ ಬೇಸಿಗೆ ಬಿಸಿ ವಿಪರೀತವಾಗಿದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದ್ದು, ಈ ಸಮಯದಲ್ಲಿ ನಮ್ಮ ಆಹಾರದಲ್ಲಿ ಕೂಡ ಪ್ರಮುಖ ಬದಲಾವಣೆ ಮುಖ್ಯವಾಗಿದೆ. ಬೇಸಿಗೆಯ ಸೆಕೆ, ಧಗೆಯಿಂದ ದೇಹದಲ್ಲಿ ನಿರ್ಜಲೀಕರಣ ಹೆಚ್ಚಾಗುತ್ತಿದೆ. ಹೀಗಾಗಿ ಹೆಚ್ಚು ಹೆಚ್ಚು ನೀರು ಕುಡಿಯಬೇಕು, ಪಾನೀಯಗಳನ್ನು ಸೇವಿಸಬೇಕು ನಿಜ. ಆದರೆ ಊಟದ ಸಮಯದಲ್ಲಿ ಕೂಡ ದೇಹಕ್ಕೆ ತಂಪು ನೀಡುವ ಆಹಾರವನ್ನು ಸೇವಿಸುವುದು ಕೂಡ ಅಷ್ಟೇ ಮುಖ್ಯ.
ಕೇವಲ ನೀರು ಕುಡಿಯುವುದರಿಂದ, ವಿವಿಧ ಬಗೆಯ ಪಾನೀಯಗಳನ್ನು ಸೇವಿಸುದರಿಂದ ದೇಹದ ಆಯಾಸ ಕಡಿಮೆಯಾಗುವುದಿಲ್ಲ. ಬದಲಿಗೆ ಬೇಸಿಗೆಯಲ್ಲಿ ಊಟದ ಆಹಾದರಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಿ. ಅತಿಯಾದ ಮಸಾಲೆ ಪದಾರ್ಥಗಳು, ಮಾಂಸಗಳನ್ನು ಸೇವಿಸುವುದನ್ನು ಈ ಬೇಸಿಗೆ ಸಮಯದಲ್ಲಿ ಕಡಿಮೆ ಮಾಡಿ, ಬದಲಿಗೆ ತರಕಾರಿ- ಸೊಪ್ಪಿನಿಂದ ಮಾಡಿದ ಆಹಾರ, ಮಜ್ಜಿಗೆ, ಮೊಸರಿನಿಂದ ಮಾಡಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.

ಬೇಸಿಗೆಗೆ ಸೂಕ್ತವಾದ, ತಯಾರಿಸಲು ಸುಲಭವಾದ, ಆರೋಗ್ಯಕ್ಕೆ ಹಿತವಾದ, ತಿನ್ನಲು ರುಚಿಯಾದ ಬೆಳ್ಳುಳ್ಳಿ ತಂಬುಳಿಯನ್ನು ಒಮ್ಮೆ ಮಾಡಿ ನೋಡಿ. ಕೇವಲ ಐದು ಹತ್ತು ನಿಮಿಷದಲ್ಲಿ ತಯಾರಾಗುವ ಈ ಬೆಳ್ಳುಳ್ಳಿ ತಂಬುಳಿ ಬೇಸಿಗೆಯ ಮಧ್ಯಾಹ್ನದ ಊಟಕ್ಕೆ ಸೂಕ್ತವಾದ ಖಾದ್ಯವಾಗಿದೆ. ಹಾಗಾದರೆ ಬೆಳ್ಳುಳ್ಳಿ ತಂಬುಳಿಯನ್ನು ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೆಳ್ಳುಳ್ಳಿ ತಂಬುಳಿಗೆ ಬಳಸುವ ಪದಾರ್ಥಗಳು
ಮಧ್ಯಮ ಗಾತ್ರದ ಬೆಳ್ಳುಳ್ಳಿ- 1
ಕೆಂಪು ಮೆಣಸಿನಕಾಯಿ- 1-2
ತುರಿದ ತೆಂಗಿನಕಾಯಿ- 1/4 ಕಪ್
ಮೊಸರು-1/4 ಕಪ್
ಮಜ್ಜಿಗೆ-1/2 ಕಪ್
ಅಡುಗೆ ಎಣ್ಣೆ- 1 ಟೀಸ್ಪೂನ್
ಉಪ್ಪು-ನಿಮ್ಮ ರುಚಿಗೆ ತಕ್ಕಂತೆ
ಒಗ್ಗರಣೆಗೆ ಬಳಸುವ ಪದಾರ್ಥಗಳು
ಕೆಂಪು ಮೆಣಸಿನಕಾಯಿ-1
ಸಾಸಿವೆ ಬೀಜಗಳು-1/2 ಟೀಸ್ಪೂನ್
ಕರಿಬೇವಿನ ಎಲೆಗಳು-4
ಅಡುಗೆ ಎಣ್ಣೆ-1 ಟೀಸ್ಪೂನ್

ಬೆಳ್ಳುಳ್ಳಿ ತಂಬುಳಿ ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ಸುಲಿದು, ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಬಿಸಿ ಮಾಡಿ, ಒಂದು ಚಮಚ ಎಣ್ಣೆ, ಕೆಂಪು ಮೆಣಸಿನಕಾಯಿಯನ್ನು ಸೇರಿಸಿ ಹುರಿದುಕೊಳ್ಳಿ. ಹುರಿದ ನಂತರ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಪದಾರ್ಥಗಳು ತಣ್ಣಗಾದ ಬಳಿಕ ತೆಂಗಿನಕಾಯಿ ಮತ್ತು ಹುರಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ರುಬ್ಬಿಕೊಂಡ ಪೇಸ್ಟ್‌ಅನ್ನು ಪಾತ್ರೆಗೆ ಹಾಕಿ ಅಗತ್ಯವಿರುವ ನೀರನ್ನು ಸೇರಿಸಿ, ನಂತರ ಮೊಸರು, ಮಜ್ಜಿಗೆ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲಿಸಿ. ಕೊನೆಯಲ್ಲಿ ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ ಮತ್ತು ಕರಿಬೇವಿನ ಎಲೆಗಳಿಂದ ಒಗ್ಗರಣೆ ಮಾಡಿ, ಈ ಮಿಶ್ರಣಕ್ಕೆ ಹಾಕಿ. ರುಚಿಯಾದ ಬೆಳ್ಳುಳ್ಳಿ ತಂಬುಳಿ ಸಿದ್ಧವಾಗುತ್ತದೆ. ಅನ್ನ ಅಥವಾ ಕುಚಲಕ್ಕಿ ಗಂಜಿ, ಇಡ್ಲಿ, ದೋಸೆಯೊಂದಿಗೆ ಇದನ್ನು ಸವಿಯಿರಿ.












Click it and Unblock the Notifications