ಅನ್ನ ಮೆತ್ತಗಾಗ್ತಾಯಿದಿಯಾ ಚಿಂತೆ ಬಿಡಿ... ಉದುರುದುರಾಗಿ ಅನ್ನ ಮಾಡುವುದು ಹೇಗೆ?
ಅನ್ನ ಮಾಡಲು ಯಾರಿಗೆ ತಾನೆ ಬರಲ್ಲ ಹೇಳಿ. ಅಡುಗೆ ಮಾಡಲು ಬರುವ ಬರದೇ ಇರುವಂತಹ ಪ್ರತಿಯೊಬ್ಬರಿಗೂ ಅನ್ನ ಮಾಡಲು ಬಂದೇ ಬರುತ್ತದೆ. ಅನ್ನ ಮಾಡೋದು ಅಂದರೆ ಅಷ್ಟೋದು ಸುಲಭ. ಒಂದು ಪಾತ್ರೆಯಲ್ಲಿ ಅಕ್ಕಿ ತೊಳೆದು ನೀರು ಹಾಕಿ ಇಟ್ಟರೆ ಅನ್ನ ರೆಡಿ ಆಗಿಬಿಡುತ್ತದೆ. ಇಷ್ಟು ಮಾಡಲು ಬಂದರೆ ಸಾಕು ಅನ್ನ ಪರಿಪೂರ್ಣವಾಗಿ ಬಂದಂತೆ ಅಂದುಕೊಂಡರೆ ನಿಮ್ಮ ತಿಳುವಳಿಕೆ ತಪ್ಪು.
ಯಾವುದೇ ಒಂದು ಅಡುಗೆ ಮಾಡಬೇಕಾದರೆ, ಅದರಲ್ಲಿನ ರುಚಿಯನ್ನು ನೀವು ಅನುಭವಿಸಿ ತೃಪ್ತಿಯಾಗಿ ಸವಿಯಬೇಕು ಅಂತಾದರೆ ಅದರ ಪಾಕ ವಿಧಾನ ಸರಿಯಾಗಿರಬೇಕು. ನೀವು ಮಾಡುವ ಅಡುಗೆ ರುಚಿಯಾಗಿರಬೇಕು ಅಂತಾದರೆ ಅದಕ್ಕೆ ನಿಯಮಗಳಿವೆ. ಅವುಗಳನ್ನು ಪಾಲಿಸಿದಲ್ಲಿ ಮಾತ್ರ ನೀವು ತಾಯರಿಸುವ ಆಹಾರವನ್ನು ನಿಮ್ಮ ಜೊತೆಗೆ ನಿಮ್ಮ ಕುಟುಂಬಸ್ಥರೂ ಮನಸ್ಪೂರ್ಥಿಯಾಗಿ ಸೇವಿಸುತ್ತಾರೆ.

ಇದು ಅನ್ನ ತಯಾರಿಸುವ ವಿಧಾನಕ್ಕೂ ಅನ್ವಯಿಸುತ್ತದೆ. ಕೆಲವರು ತುಂಬಾ ಮೆತ್ತಗಿರುವ ಅನ್ನವನ್ನು ಇಷ್ಟಪಡುತ್ತಾರೆ. ಇನ್ನೂ ಕೆಲವರು ಉದುರುದುರಾಗಿರುವ ಅನ್ನವನ್ನು ಬಯಸುತ್ತಾರೆ. ಇನ್ನೂ ಕೆಲವರಿಗೆ ಸಮಪ್ರಮಾಣದಲ್ಲಿ ಅನ್ನ ಬೆಂದಿರಬೇಕು ಅನ್ನುತ್ತಾರೆ. ಹೀಗೆ ಇಷ್ಟಕ್ಕನುಗುಣವಾಗಿ ಮನೆಯಲ್ಲಿ ಅನ್ನವನ್ನು ತಯಾರಿಸಲಾಗುತ್ತದೆ.
ಹೀಗೆ ಪ್ರತಿಯೊಬ್ಬರ ರುಚಿಗೆ ಅನುಗುಣವಾಗಿ ಅನ್ನ ತಯಾರಿಸುವುದು ಒಂದು ಕಲೆ. ಇದಕ್ಕೂ ಕೂಡ ಅನುಭವ ಬೇಕು. ಹಾಗಾದರೆ ಅನ್ನವನ್ನು ತಯಾರಿಸುವಾಗ ಗಮನಿಸಬೇಕಾದ ವಿಷಯಗಳು ಯಾವವು ಎನ್ನುವುದನ್ನು ತಿಳಿಯಿರಿ...
ಪಾತ್ರೆಯಲ್ಲಿ ಅನ್ನ ತಯಾರಿಸುವಾಗ ಗಮನಿಸಬೇಕಾದ ವಿಷಯಗಳು:-
*ಅಕ್ಕಿಯನ್ನು ತೊಳೆಯುವಾಗ ಅದು ತುಂಡಾಗದಂತೆ ಗಮನ ಹರಿಸಿ. ಇದರಿಂದ ಅನ್ನದಲ್ಲಿ ರವೆಯಂತೆ ಅಕ್ಕಿ ಕಾಣಿಸುವುದಿಲ್ಲ.
* ಅಕ್ಕಿ ಚೆನ್ನಾಗಿ ತೊಳಿದ ನಂತರ ಅದನ್ನು ನೆನಸಿಡಿ. ಈ ವೇಳೆ ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರನ್ನು ಹಾಕಿ. ಇದಕ್ಕೂ ಹೆಚ್ಚು ಪ್ರಮಾಣದಲ್ಲೂ ನೀರನ್ನು ಹಾಕಬಹುದು.
* ಬಳಿಕ ಆ ನೀರನ್ನು ತೆಗೆದು ಒಂದು ಲೋಟಕ್ಕೆ ಒಂದುವರೆ ಲೋಟದಷ್ಟು ನೀರು, ಉಪ್ಪು ಹಾಕಿ ಒಲೆಯ ಮೇಲೆ ಇಡಿ.
* ಅನ್ನವನ್ನು ಮಾಡುವಾಗ ಒಲೆಯ ಉರಿಯ ಬಗ್ಗೆಯೂ ಗಮನ ಹರಿಸಬೇಕು. ಇದು ಅನ್ನದಲ್ಲಿನ ಸ್ವಾದವನ್ನು ಹೆಚ್ಚಿಸುತ್ತದೆ.
* ಅನ್ನಕ್ಕೆ ಒಂದು ಕುದಿ ಬರುವವರೆಗೂ ಉರಿಯನ್ನು ಹೆಚ್ಚಾಗಿಡಿ. ಒಂದು ಕುದಿ ಬಂದ ಬಳಿಕ ಉರಿಯನ್ನು ಮಧ್ಯಮ ಪ್ರಮಾಣದಲ್ಲಿಡಿ.
* ನೀರು ಸಂಪೂರ್ಣವಾಗಿ ಆವಿಯಾದ ಬಳಿಕ. ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ.
* ಬಳಿಕ ಪಾತ್ರೆಯನ್ನು ಮುಚ್ಚಿ 10-15 ನಿಮಿಷ ಬಿಟ್ಟು ಬಳಿಕ ಒಲೆಯನ್ನು ಆಫ್ ಮಾಡಿ.
* ಒಲೆಯನ್ನು ಆಫ್ ಮಾಡಿದ ತಕ್ಷಣ ಅನ್ನವನ್ನು ತಟ್ಟೆಗೆ ಬಡಿಸಿಬಿಡಬೇಡಿ. ಆಗಲೂ 5ರಿಂದ 10 ನಿಮಿಷ ಬಿಡುವುದು ಅನ್ನದಲ್ಲಿನ ರುಚಿಯನ್ನು ಹೆಚ್ಚಿಸುತ್ತದೆ.

ಕುಕ್ಕರ್‌ನಲ್ಲಿ ಅನ್ನ ಮಾಡುವಾಗ ಗಮನಿಸಬೇಕಾದ ವಿಷಯಗಳು :-
* ಕುಕ್ಕರ್‌ನಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಯಲು ಇಡಬೇಡಿ.
* ಒಂದು ಲೋಟ ಅಕ್ಕಿಗೆ ಒಂದುವರೆ ಲೋಟದಷ್ಟು ನೀರು ಹಾಗೂ ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ.
* ಒಂದು ವಿಸಿಲ್ ಆಗುವವರೆಗೂ ಉರಿಯನ್ನು ಹೆಚ್ಚಾಗಿಡಿ. ನಂತರ ಉರಿಯನ್ನು ಮಧ್ಯಮದಲ್ಲಿಟ್ಟು ಎರಡು ವಿಸಿಲ್ ಆದ ಬಳಿಕ ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ.
* 10-15 ನಿಮಿಷ ಬಿಟ್ಟು ಗ್ಯಾಸ್ ಆಫ್ ಮಾಡಿ.
* 5ರಿಂದ 10 ನಿಮಿಷ ಬಿಟ್ಟು ಆವಿ ಹೋದ ಬಳಿಕ ಕುಕ್ಕರ್ ಮುಚ್ಚಳ ತೆಗೆದು ಅನ್ನ ತಿನ್ನಲು ಬಡಿಸಿ. ಇದರಿಂದ ಅನ್ನ ಉದುರಾಗಿರುತ್ತದೆ.
ಗಂಜಿ ತೆಗೆದು ಅನ್ನ ಮಾಡಬೇಕಾದರೆ ಗಮನಿಸಬೇಕಾದ ವಿಷಯಗಳು:-
* ಅಕ್ಕಿಯನ್ನು ತೊಳೆದು 10-15 ನಿಮಿಷ ನೆನೆಯಲು ಬಿಡಿ.
* ಬಳಿಕ ಒಂದು ಲೋಟ ಅಕ್ಕಿಗೆ ಮೂರರಿಂದ ನಾಲ್ಕು ಲೋಟ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
* ಒಂದು ಕುದಿ ಬರುವವರೆಗೆ ಉರಿ ಹೆಚ್ಚಾಗಿಡಿ. ಅಧಿಕ ಉರಿಯಲ್ಲಿ ಗಂಜಿ ಉಕ್ಕದಂತೆ ಎಚ್ಚರ ವಹಿಸಿ.
* ಅನ್ನ ಬೆಂದಿದೆ ಎಂದು ಗೊತ್ತಾದರೆ ಅದರಲ್ಲಿರುವ ಗಂಜಿಯನ್ನು ಒಂದು ಪಾತ್ರೆಯಲ್ಲಿ ತೆಗೆಯಿರಿ.
* ಬಳಿಕ 5ರಿಂದ 10 ನಿಮಿಷ ಮಂದ ಉರಿಯಲ್ಲಿ ಬಿಟ್ಟರೆ ಉದುರುದುರಾದ ಅನ್ನ ರೆಡಿ.
* ಒಂದು ವೇಳೆ ನೀವು ಅನ್ನ ಮೆತ್ತಗಾಗಲು (ಮುದ್ದೆ) ಬಯಸಿದರೆ ಗಜ್ಜಿ ತೆಗೆಯದೇ ಕೊಂಚ ಹೊತ್ತು ಹಾಗೇ ಬಿಟ್ಟು ಚೆನ್ನಾಗಿ ಕಲಸಿದರೆ ಬಿಸಿ ಬಿಸಿಯಾಗಿ ಅನ್ನ ಮುದ್ದೆ ಮಾಡಿಕೊಂಡೇ ತಿನ್ನಬಹುದು.
ಅನ್ನ ತಯಾರಿಸುವಾಗ ಅಕ್ಕಿ ಬಗ್ಗೆ ತಿಳಿದಿರಬೇಕಾದ ವಿಷಯಗಳು:-
* ಅನ್ನ ತಯಾರಿಸುವ ಮೊದಲು ನೀವು ಖರೀದಿಸಿ ತಂದ ಅಕ್ಕಿ ಯಾವುದು ಎಂದು ತಿಳಿದುಕೊಳ್ಳಿ. ಅದಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಹಾಕಿದರೆ ಅನ್ನ ಸರಿಯಾಗಿ ಆಗುತ್ತದೆ ಎಂದು ತಿಳಿಯಲು ಒಂದು ಚಿಕ್ಕಪಾತ್ರೆಯಲ್ಲಿ ಸ್ವಲ್ಪ ಅಕ್ಕಿಯಲ್ಲಿ ಅನ್ನ ಮಾಡಿ ನೋಡಿ.
* ಕೆಲವೊಂದು ಅಕ್ಕಿಗೆ ಹೆಚ್ಚು ನೀರು ಬಳಕೆ ಮಾಡಿದರೆ ಮಾತ್ರ ಅನ್ನು ಸರಿಯಾಗಿ ಬೆಂದಿರುತ್ತದೆ. ಇನ್ನು ಕೆಲವು ಅಕ್ಕಿ ಕಡಿಮೆ ನೀರಿನಲ್ಲಿ ಬೇಯುತ್ತದೆ. ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಹಾಕುವುದು ಸಾಮಾನ್ಯವಾದರೂ ಎಲ್ಲ ಅಕ್ಕಿಗೂ ಇದು ಅನ್ವಯವಾಗುವುದಿಲ್ಲ.
* ಹೀಗಾಗಿ ಅಕ್ಕಿ ಖರೀದಿಸಿ ತಂದ ಮೊದಲ ದಿನ ಈ ಪ್ರಯೋಗ ಮಾಡಿ ನೋಡುವುದು ಉತ್ತಮ. ಅಥವಾ ಮೊದಲಿನಿಂದಲೂ ಒಂದೇ ರೀತಿಯ ಅಕ್ಕಿ ಬಳಕೆ ಮಾಡುತ್ತಿದ್ದರೆ ಇದರ ಅಗತ್ಯ ಇರುವುದಿಲ್ಲ.












Click it and Unblock the Notifications