ಹುಷಾರ್..! ಗ್ಲಾಕೋಮಾ ನಿಮ್ಮ ದೃಷ್ಠಿಯನ್ನೇ ಸಂಪೂರ್ಣ ನಾಶ ಮಾಡಬಹುದು ಎಚ್ಚರ
ನಮ್ಮ ದೇಹದ ಎಲ್ಲ ಅಂಗಗಳು ಮುಖ್ಯವೇ. ಅದರಲ್ಲೂ ಕಣ್ಣು ಪ್ರಮುಖ. ಇಂತಹ ಕಣ್ಣನ್ನು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಬಹುಮುಖ್ಯ. ಆದರೆ ಬದಲಾದ ನಮ್ಮ ಜೀವನ ಶೈಲಿಯಲ್ಲಿ ಕಣ್ಣಿಗೆ ಹೆಚ್ಚಿನ ಒತ್ತಡ ನೀಡುತ್ತಿದ್ದೇವೆ. ಸದಾ ಕಂಪ್ಯೂಟರ್, ಮೊಬೈಲ್, ಟಿವಿ ಹೀಗೆ ಕಣ್ಣನ್ನು ಅದರತ್ತ ಬೀರುತ್ತಲೇ ಇರುತ್ತೇವೆ. ಕಣ್ಣಿಗೆ ವಿಶ್ರಾಂತಿ ನೀಡುವುದೇ ಇಲ್ಲ. ಬಹಳಷ್ಟು ಮಂದಿ ವಿಶ್ರಾಂತಿಗಾಗಿ ಮಲಗಿದರೂ ಕಣ್ಣನ್ನು ಮೊಬೈಲ್ ನತ್ತ ನೆಡುವವರೂ ಇಲ್ಲದಿಲ್ಲ. ಇಂತಹವರೆಲ್ಲರೂ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ.
ಸಾಮಾನ್ಯವಾಗಿ ಪ್ರಕೃತಿ ನಡುವೆ ಬದುಕುವ ಮಂದಿ ಆರೋಗ್ಯವಾಗಿಯೇ ಇರುತ್ತಾರೆ. ಆದರೆ ಆಧುನಿಕ ಬದುಕಿಗೆ ಮಾರು ಹೋಗುತ್ತಿರುವ ಇತ್ತೀಚಿಗಿನ ದಿನಗಳಲ್ಲಿ ನಮ್ಮ ಆರೋಗ್ಯ ಕೂಡ ಸದ್ದಿಲ್ಲದೆ ಕ್ಷೀಣಿಸುತ್ತಿದೆ. ದೇಹ ರೋಗ ರುಜಿನಗಳ ಗೂಡಾಗುತ್ತಿದೆ. ನಾವು ಹಣ ಸಂಪಾದನೆ ಮಾಡುವ ಭರದಲ್ಲಿ ಎಲ್ಲೋ ಒಂದು ಕಡೆ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸುತ್ತಾ ರೋಗಿಗಳಾಗುತ್ತಿದ್ದೇವೆ. ಕಡೆಗೊಮ್ಮೆ ನಮ್ಮೊಳಗಿನ ರೋಗ ಉಲ್ಭಣವಾಗಿ ಮಾಡಿದ ಸಂಪಾದನೆಯನ್ನೆಲ್ಲ ಆಸ್ಪತ್ರೆಗೆ ಸುರಿದು ಜೀವನ ಪೂರ್ತಿ ಪಧ್ಯದಲ್ಲೇ ಜೀವನ ಕಳೆಯುತ್ತಿದ್ದೇವೆ.

ಇದೆಲ್ಲವನ್ನು ತಪ್ಪಿಸಬೇಕಾದರೆ ನಮ್ಮ ಜೀವನಶೈಲಿಯಲ್ಲಿ ಒಂದಷ್ಟು ಮಾರ್ಪಾಡು ಅಗತ್ಯವಿದೆ. ಇವತ್ತಿನ ದಿನಗಳಲ್ಲಿ ಯಾವಾಗ ಯಾವ ರೋಗ ನಮ್ಮನ್ನು ಅಪ್ಪಳಿಸುತ್ತದೆ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ಕಣ್ಣಿನ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಹೆಚ್ಚಿನವರು ಇವತ್ತು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕ್ಕಮಕ್ಕಳು ಕನ್ನಡಕ ಬಳಸುವಂತ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಾದ್ಯಂತ ಇವತ್ತು ಗ್ಲಾಕೋಮಾ ಮನುಷ್ಯನನ್ನು ಕಾಡುತ್ತಿದೆ. ಈ ಗ್ಲಾಕೋಮಾದಿಂದ ವ್ಯಕ್ತಿ ಅಂಧನಾಗುತ್ತಾನೆ. ವೈದ್ಯರು ನೀಡುವ ಮಾಹಿತಿ ಪ್ರಕಾರ ಗ್ಲಾಕೋಮಾವನ್ನು ನಿಯಂತ್ರಿಸಬಹುದಂತೆ ಆದರೆ ನಿವಾರಿಸಲು ಸಾಧ್ಯವಿಲ್ಲವಂತೆ.
ಕಣ್ಣಿನ ತಪಾಸಣೆ ಮಾಡುವುದು ಅಗತ್ಯ
ಇಷ್ಟಕ್ಕೂ ಗ್ಲಾಕೋಮಾ ಎಂದರೇನು ಎಂದು ತಿಳಿಯುತ್ತಾ ಹೋದರೆ ಒಂದಷ್ಟು ವಿಚಾರಗಳು ತಿಳಿದು ಬರುತ್ತವೆ. ಇದೊಂದು ರೀತಿಯಲ್ಲಿ ರೋಗಿಯ ಅರಿವಿಗೆ ಬಾರದೆ ಅಂಧತ್ವವನ್ನುಂಟು ಮಾಡುವ ಕಾಯಿಲೆಯಂತೆ. ತಕ್ಷಣಕ್ಕೆ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ಕಣ್ಣಿನ ನರ ಕ್ಷೀಣಿಸಿ ದೃಷ್ಠಿ ಕುಂದಿ ಬಿಡುತ್ತದೆ. ಇದು ಶಾಶ್ವತ ಅಂಧತ್ವಕ್ಕೆ ಕಾರಣವಾಗಿಬಿಡುತ್ತಿದೆ. ಏಕೆಂದರೆ ನರ ಕ್ಷೀಣಿಸುವುದರಿಂದ ನಶಿಸಿಹೋದ ದೃಷ್ಠಿಯನ್ನು ಮತ್ತೆ ಪಡೆಯುವುದು ಅಸಾಧ್ಯ. ಆದ್ದರಿಂದ ಗ್ಲಾಕೋಮಾ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.
ನಮ್ಮಲ್ಲಿ ಕಂಡು ಬರುವ ಕೆಲವು ತೊಂದರೆಗಳು ಗ್ಲಾಕೋಮಾ ಬರಲು ಕಾರಣವಾಗಬಹುದು. ಅದು ಯಾವುದೆಂದರೆ ಸಕಾರಣವಿಲ್ಲದೆ ಬರುವ ತಲೆನೋವು, ಕಣ್ಣುನೋವು, ಆರದ ಕೆಂಪುಕಣ್ಣು, ಪದೇ ಪದೇ ಬದಲಾಗುವ ಕನ್ನಡಕಗಳು, ಮಧುಮೇಹ, ಬೆಳಕಿನ ಸುತ್ತ ಕಾಮನಬಿಲ್ಲಿನ ಬಣ್ಣದ ಬಳೆಗಳು ಕಾಣಿಸಿಕೊಳ್ಳುವುದು, ದೃಷ್ಠಿ ಕ್ಷೇತ್ರದಲ್ಲಿ ಕಪ್ಪು ಕಲೆಗಳು ಗೋಚರಿಸುವುದು, ದೃಷ್ಠಿದೋಷ, ಕಣ್ಣಿಗೆ ಪೆಟ್ಟು ಬಿದ್ದಿದ್ದರೆ, ಪೊರೆಗೆ ಶಸ್ತ್ರಚಿಕಿತ್ಸೆ ಮಾಡಿಯೂ ಕಣ್ಣು ಕಾಣಿಸದಿರುವುದು, ದಮ್ಮು ಸೂಲಿನ ತೊಂದರೆಯಿದ್ದರೆ ತಕ್ಷಣ ವೈದ್ಯರನ್ನು ಕಂಡು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳ ಬೇಕಾಗುತ್ತದೆ.
ವಂಶಪಾರಂಪರ್ಯವಾಗಿಯೂ ಬರಬಹುದು
ವೈದ್ಯರು ಹೇಳುವ ಪ್ರಕಾರ ಗ್ಲಾಕೋಮಾ ಅಧಿಕ ಕಣ್ಣಿನ ಒತ್ತಡದಿಂದ, ಸ್ಟೀರಾಯ್ಡ್ ಉಪಯೋಗಿಸುವುದರಿಂದ, ಕಣ್ಣಿನ ನರಕ್ಕೆ ತೊಂದರೆಯಾಗುವುದರಿಂದ, ವಂಶಪಾರಂಪರ್ಯವಾಗಿಯೂ ಬರುವ ಸಾಧ್ಯತೆ ಇರುತ್ತದೆಯಂತೆ. ಗ್ಲಾಕೋಮಾ ಕಂಡು ಹಿಡಿಯಲು ಸಾಮಾನ್ಯ ಕಣ್ಣಿನ ಪರೀಕ್ಷೆ ಜೊತೆಗೆ ಕಣ್ಣಿನ ಒತ್ತಡ ಪರೀಕ್ಷೆ, ಗೋನಿಯೋಸ್ಕೋಪಿ, ಪೆರಿಮೆಟ್ರಿ(ದೃಷ್ಠಿಕ್ಷೇತ್ರ ಪರೀಕ್ಷೆ), ಸಿಸಿಟಿ(ಕೃಷ್ಣಪಟಲದ ಗಾತ್ರದ ಮಾಪನ), ಹೆಚ್ಆರ್ಟಿ, ಜಿಡಿಎಕ್ಸ್, ಓಸಿಟಿ ಮೊದಲಾದ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಗ್ಲಾಕೋಮಾದ ಜಾಡು ಹಿಡಿದು ನಿಯಂತ್ರಿಸಬಹುದು. ಆದರೆ ಶಾಶ್ವತವಾಗಿ ವಾಸಿ ಮಾಡಲು ಸಾಧ್ಯವಿಲ್ಲವಂತೆ. ಆದ್ದರಿಂದ ಪ್ರತಿಯೊಬ್ಬರು 40ವರ್ಷ ಬಳಿಕ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವಂತೆ. ಒಂದು ವೇಳೆ ಗ್ಲಾಕೋಮಾದ ಲಕ್ಷಣಗಳಿದ್ದರೆ ವೈದ್ಯರ ಸಲಹೆಯಂತೆ ಜೀವನ ಪರ್ಯಂತ ಔಷಧೋಪಚಾರ ಅಗತ್ಯವಾಗುತ್ತದೆ.
ಕಣ್ಣಿನ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ
ಯಾರಿಗೂ ಇಂತಹ ಕಾಯಿಲೆ ಬಾರದಿರಲಿ. ಆದರೆ ಯಾರೂ ಕೂಡ ಕಣ್ಣಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಚಿಕ್ಕ ಸಮಸ್ಯೆ ಕಾಣಿಸಿದರೂ ನೇತ್ರತಜ್ಞರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ. ಬಹಳಷ್ಟು ಸಾರಿ ಮತ್ತೆ ತೋರಿಸಿದರಾಯಿತು ಎಂಬ ಉದಾಸೀನತೆ ಅಥವಾ ಸ್ವಯಂ ಚಿಕಿತ್ಸೆಗಳು ಕಣ್ಣಿನ ದೃಷ್ಠಿಗೆ ಕುತ್ತು ತರಬಹುದು. ಯಾವುದಕ್ಕೂ ಎಚ್ಚರವಾಗಿರುವುದು ಒಳಿತು.












Click it and Unblock the Notifications