ರೀಲ್ಸ್, ಟ್ರಿಪ್, ಶಾಪಿಂಗ್: ಅತ್ತೆ-ಸೊಸೆ ಉತ್ತಮ ಸಂಬಂಧಕ್ಕೆ ಇಲ್ಲಿದೆ ಸರಳ ಸೂತ್ರ
ಇತ್ತೀಚಿಗೆ ಅವಿಭಕ್ತ ಕುಟುಂಬಗಳಿಗಿಂತ ವಿಭಕ್ತ ಕುಟುಂಬಗಳೇ ಹೆಚ್ಚಾಗಿದೆ. ಕೆಲಸದ ಅನಿವಾರ್ಯತೆಯಿಂದ ನಗರದಲ್ಲಿ ವಾಸಿಸುವವರು ಹೆಚ್ಚಾಗಿ ವಿಭಕ್ತ ಕುಟುಂಬಗಳಾಗಿರುವುದು ಒಂದುಕಡೆಯಾಗಿದ್ದರೆ, ಮತ್ತೊಂದುಕಡೆ ಮುಖ್ಯವಾಗಿ ಕುಟುಂಬಸ್ಥರಲ್ಲಿ ಹೊಂದಾಣಿಕೆ ಇಲ್ಲದೇ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅತ್ತೆ ಸೊಸೆ ಜಗಳ ಎನ್ನುವ ಆರೋಪಗಳು ಸಹ ಇದೆ.
ವಯಸ್ಸಾದ ಅತ್ತೆ ಮಾವನನ್ನು ಹೊಂದಿಕೊಳ್ಳಲಾಗದೇ ಬೇರೆ ಮನೆ ಮಾಡುವ ಸೊಸೆಯರು ಇದ್ದಾರೆ. ಅಲ್ಲದೇ ಮಗನ ಮೇಲಿನ ಅತಿಯಾದ ಪ್ರೀತಿಗೆ ಅಥವಾ ಸ್ಯಾಡಿಸ್ಟ್ ಮನೋಭಾವದಿಂದ ಸೊಸೆಯನ್ನು ದೂರ ಮಾಡಿಕೊಳ್ಳುವ ಅತ್ತೆಯಂದಿರೂ ಇದ್ದಾರೆ. ಅತ್ತೆ-ಸೊಸೆಯ ಜಟಾಪಟಿಯಿಂದ ಮನೆ ನೆಮ್ಮದಿ ಹಾಳಾಗುವ ಸಂಭವ ಜಾಸ್ತಿ ಇರುತ್ತದೆ.

ವೈವಾಹಿಕ ಜೀವನ ಉತ್ತಮವಾಗಿರಬೇಕೆಂದರೆ ಪತಿ ಮಾತ್ರವಲ್ಲ, ಆತನ ಮನೆಯವರಿಗೂ ಹೊಂದಿಕೊಳ್ಳುವುದು ಹೆಣ್ಣಿಗೆ ಅನಿವಾರ್ಯ. ಮುಖ್ಯವಾಗಿ ಅತ್ತೆ ಸೊಸೆ ಸಂಬಂಧ ಸರಿಯಾಗಿ ನಿರ್ವಹಣೆಯಾದರೆ ಮಾತ್ರ ಸಂಸಾರ ಸುಂದರವಾಗಿರಲು ಸಾಧ್ಯ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಹಿರಿತನ ಸಾಧಿಸುವ ಅತ್ತೆ ಹೊಸತನಕ್ಕೆ ಹೊಂದಿಕೊಳ್ಳುವ ಸೊಸೆಗೆ ಜೊತೆಯಾಗಬೇಕು. ವಯಸ್ಸಿನ ಅಂತರ ಮರೆತು ಇಬ್ಬರ ಮಧ್ಯೆ ಸ್ನೇಹ ಸಂಬಂಧ ಬೆಳೆಯಬೇಕು. ಹೀಗಾಗಿ ಅತ್ತೆ ಸೊಸೆ ಸಂಬಂಧ ಉತ್ತಮವಾಗಿರಲು ಇಲ್ಲಿ ಕೆಲವು ಸರಳ ಸಲಹೆಯನ್ನು ನೀಡಲಾಗಿದೆ.
ಸಮಯ ನೀಡಿ
ಮದುವೆಯಾಗಿ ಹೊಸದಾಗಿ ಗಂಡನ ಮನೆಗೆ ಬಂದ ಹೆಣ್ಣಿಗೆ ಅವಳದ್ದೇ ಆದ ನಿರೀಕ್ಷೆಗಳಿರುತ್ತದೆ. ಜೊತೆಗೆ ಮನೆಯವರಿಗೆ ಹೊಂದಿಕೊಳ್ಳುವ ಅನೀವಾರ್ಯತೆ ದೊಡ್ಡದಾಗಿರುತ್ತದೆ. ಹೀಗಾಗಿ ಆಕೆಗೆ ನಿಮ್ಮ ಕುಟುಂಬಕ್ಕೆ ಹೊಂದಿಕೊಳ್ಳಲು ಸಮಯ ನೀಡಿ. ಬದುಕಿನ ಮತ್ತೊಂದು ಭಾಗದ ಸಂಪೂರ್ಣ ಚಿತ್ರ ಬದಲಾದಾಗ ವಿಚಲಿತಳಾಗುವ ಸೊಸೆಗೆ ಸಮಯ ನೀಡಿ. ಹೊಸ ಮನೆಯಲ್ಲಿ ಆಕೆಗೆ ಬೆಂಬಲವಾಗುವ ಮೊದಲ ಸದಸ್ಯೆ ಅತ್ತೆಯಾಗಿರಲಿ.

ಮಗನನ್ನು ಅತಿಯಾಗಿ ಪ್ರೀತಿಸುವ ಅತ್ತೆಯ ಭಾವನೆಗಳಿಗೆ ಸೊಸೆ ಬೆಲೆ ನೀಡಬೇಕು. ಹೊಸದಾಗಿ ಗಂಡನ ಮನೆಗೆ ಬಂದು ಏಕಾಏಕಿ ಆ ಮನೆಯ ಚಿತ್ರಣ ಬದಲಾಗಬೇಕು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಾರದು. ಅತ್ತೆಯ ಹಿರಿತನಕ್ಕೆ ಗೌರವ ನೀಡಿ. ಅತ್ತೆಯೊಂದಿಗೆ ಸಮಯ ಕಳೆದು ಮನೆಯ ದಿನನಿತ್ಯದ ಪರಿಪಾಠಗಳು, ಆಚಾರ ವಿಚಾರಗಳನ್ನು ಕಲಿತುಕೊಳ್ಳಿ. ಮನೆಯಲ್ಲಿ ಅತ್ತೆ-ಮಾವನನ್ನು ಕಡೆಗಣಿಸದೇ ಅವರಿಗೂ ಸಮಯ ನೀಡಿ. ಅವರೊಂದಿಗೆ ಸಮಯ ಕಳೆಯಿರಿ. ಇದರಿಂದ ಒಬ್ಬರನ್ನು ಮತ್ತೊಬ್ಬರು ಅರಿಯಲು ಅವಕಾಶ ಸಿಕ್ಕಿದಂತಾಗುತ್ತದೆ.
ಭಾವನೆಗಳನ್ನು ಗೌರವಿಸಿ
ಸಂಬಂಧಗಳಲ್ಲಿ ಭಾವನೆಗಳನ್ನು ಗೌರವಿಸುವುದು ಬಹಳ ಮುಖ್ಯ. ಅಮ್ಮನ ಮನೆಯಲ್ಲಿ ಮುದ್ದಾಗಿ ಬೆಳೆದ ಹೆಣ್ಣು ಮಗಳು ಅತ್ತೆಯ ಮನೆಯಲ್ಲಿ ನಿಬಂಧನೆಗಳಿಗೆ ಬೀಳಬಾರದು. ಅಥವಾ ಸೊಸೆಯ ವರ್ತನೆಯಿಂದ ಅತ್ತೆ ಮುಜುಗರವಾಗಬಾರದು. ಹೀಗಾಗಿ ಅತ್ತೆ-ಸೊಸೆ ಇಬ್ಬರು ಪರಸ್ಪರ ಭಾವನೆಗಳಿಗೆ ಬೆಲೆ ಕೊಡುವುದು ಮುಖ್ಯ.
ಅದರಲ್ಲಿ ಪ್ರಮುಖವಾಗಿ ಡ್ರೆಸ್, ಆಚಾರ-ವಿಚಾರಕ್ಕೆ ಸಂಬಂಧಿಸಿದಂತೆ ವ್ಯತ್ಯಾಸಗಳು ಬರುವುದು ಸಾಮಾನ್ಯ ಹೀಗಾಗಿ ಇಂತಹ ವಿಚಾರದಲ್ಲಿ ಹೊಂದಿಕೊಳ್ಳಲೇ ಬೇಕಾಗುತ್ತದೆ. ಅತ್ತೆ-ಮಾವನಿಗೆ ಮುಜುಗರವಾಗುವಂತಹ ಬಟ್ಟೆಯನ್ನು ಧರಿಸುವುದು, ಅವರ ಭಾವನೆಗಳನ್ನು ಗೌರವಿಸದೇ ಆಚಾರ ವಿಚಾರ, ಶಾಸ್ತ್ರ ಸಂಪ್ರದಾಯಗಳನ್ನು ನಿರ್ಲಕ್ಷಿಸುವುದು ಇಂತಹ ಉದ್ಧಟನದ ವರ್ತನೆ ಮಾಡಬಾರದು. ಇದರಿಂದ ಭಾವನೆಗಳಿಗೆ ಪೆಟ್ಟು ಬಿದ್ದು, ಸಂಬಂಧಗಳು ಹಾಳಾಗುತ್ತದೆ. ಹೀಗಾಗಿ ಅತ್ತೆ-ಸೊಸೆ ಇಬ್ಬರು ಭಾವನೆಗಳಿಗೆ ಬೆಲೆ ಕೊಡಬೇಕು.
ರೀಲ್ಸ್, ಶಾಪಿಂಗ್, ಟ್ರಿಪ್
ಕಾಲ ಬದಲಾದಂತೆಲ್ಲ ಅದಕ್ಕೆ ಹೊಂದಿಕೊಳ್ಳುವುದು ಅನೀವಾರ್ಯ. ಹೀಗಾಗಿ ಅತ್ತೆ-ಸೊಸೆಯ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯ ಬೇಕಾದರೆ ಇಬ್ಬರೇ ವಿವಿಧ ಸ್ಥಳಗಳಿಗೆ ಭೇಟಿ ನೀಡಿ. ಆಗ ನಿಮಗಾಗಿ ಸಮಯ ನೀಡಿದಂತಾಗಿರುತ್ತದೆ. ಅತ್ತೆಯ ಆಸೆಯಂತೆ ದೇವಸ್ಥಾನಗಳಿಗೆ ತೆರಳಿದರೆ, ಸೊಸೆಯ ಆಸೆಯಂತೆ ಸಿನಿಮಾಗಳಿಗೆ ಜೊತೆಯಾಗಿ ಹೋಗಿ. ಜೊತೆಯಾಗಿ ಶಾಪಿಂಗ್ ಹೋಗಿ. ಇದರಿಂದ ಇಬ್ಬರ ಅಭಿರುಚಿ ತಿಳಿದಂತಾಗುತ್ತದೆ. ಇನ್ನು ಇತ್ತೀಚಿಗೆ ರೀಲ್ಸ್ ತುಂಬಾನೇ ಫೇಮಸ್, ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿ ಇರುವ ಅತ್ತೆಯಾಗಿದ್ದರೆ ಅವರೊಂದಿಗೆ ರೀಲ್ಸ್ ಮಾಡಿ. ಮೊಬೈಲ್ ಸೇರಿದಂತೆ ಇತರ ಹೊಸ ಅಪ್ಡೇಟ್‌ಗಳ ಬಗ್ಗೆ ತಿಳಿಸಿಕೊಡಿ. ಇದರಿಂದ ಅವರಿಗೆ ಖುಷಿಯಾಗುತ್ತದೆ.
ಜೊತೆಯಾಗಿ ಅಡುಗೆ ಮಾಡಿ
ಅತ್ತೆ-ಸೊಸೆ ಮಧ್ಯೆದಲ್ಲಿ ಭಿನ್ನಾಭಿಪ್ರಾಯಕ್ಕೆ ಮೊದಲ ಕಾರಣವೇ ಮನೆಯ ಕೆಲಸ. ಮುಖ್ಯವಾಗಿ ಅಡುಗೆ. ಅತ್ತೆ ಮನೆಯವರ ಅಭಿರುಚಿ ಆಕೆಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ಸೊಸೆ ಅಡುಗೆ ಮಾಡುವ ಸಂದರ್ಭದಲ್ಲಿ ಆಕೆಯ ಜೊತೆಗೆ ನಿಂತು ನೋಡಿ ಕಲಿತುಕೊಳ್ಳಬೇಕು. ಅಲ್ಲದೇ ಆಕೆಯನ್ನೇ ಗುರುವಿನಂತೆ ಕಂಡರೂ ತಪ್ಪಿಲ್ಲ. ಎಲ್ಲವನ್ನು ಕೇಳಿ ತಿಳಿದುಕೊಳ್ಳಬಹುದು. ಇನ್ನು ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಮನೆಗೆಲಸ ಮಾಡುವುದರಿಂದ ಬೇಗೆನೆ ಕೆಲಸಗಳು ಮುಗಿಯುತ್ತದೆ. ಬಳಿಕ ಜೊತೆಯಾಗಿ ವಿಶ್ರಾಂತಿ ಮಾಡಬಹುದು. ಹಬ್ಬದಂತಹ ಬಿಡುವಿಲ್ಲ ಸಮಯದಲ್ಲಿಯೂ ಕೂಡ ಇದನ್ನೇ ಅನುಸರಿಸುವುದು ಉತ್ತಮ
ಚರ್ಚೆಗೆ ಅವಕಾಶ ಇರಲಿ
ಮನೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲಿಯೂ ಅತ್ತೆ ಹಾಗೂ ಸೊಸೆಗೆ ಚರ್ಚೆಗೆ ಅವಕಾಶ ಇರಲಿ. ಕೇವಲ ಒಬ್ಬರ ಅಭಿಪ್ರಾಯ ಮೇಲುಗೈಯಾಗುವುದು ಕೂಡ ಸರಿಯಲ್ಲ. ಇಬ್ಬರ ಅಭಿಪ್ರಾಯ ಒಂದೇ ಆಗಿದ್ದರೆ ಅತ್ಯುತ್ತಮ. ಒಂದು ವೇಳೆ ಭಿನ್ನಾಭಿಪ್ರಾಯವಾಗಿದ್ದರೆ ನೇರವಾಗಿ ಚರ್ಚೆ ಮಾಡಿ ಯಾವುದು ಒಳಿತು, ಯಾವುದು ಕೆಡುಕು ಎನ್ನುವುದನ್ನು ಮಾತನಾಡಿಕೊಳ್ಳಲಿ. ಯಾವುದೇ ಸಂಬಂಧವಾಗಿರಲಿ ಹೊಂದಿಕೊಳ್ಳುವುದು ತುಂಬಾ ಮುಖ್ಯ.












Click it and Unblock the Notifications