Good Things: ನಾವೇಕೆ ಸದಾ ಒಳ್ಳೆಯದನ್ನೇ ಧ್ಯಾನಿಸಬೇಕು ಗೊತ್ತಾ..?
ನಾವು ಒಳ್ಳೆಯವರಾಗ ಬೇಕಾದರೆ ಸದಾ ಒಳ್ಳೆಯದನ್ನೇ ಧ್ಯಾನಿಸಬೇಕು ಎಂಬ ಮಾತಿದೆ. ಇದು ನಿಜವೂ ಹೌದು. ಏಕೆಂದರೆ ನಮ್ಮ ಮನಸ್ಸು ಸಾಮಾನ್ಯವಾಗಿ ಒಳ್ಳೆಯದಕ್ಕಿಂತ ಕೆಟ್ಟದನ್ನು ಬೇಗ ಆಕರ್ಷಿಸುತ್ತದೆ. ಹೀಗಾಗಿ ಒಳ್ಳೆಯದರ ಕಡೆಗೆ ಮನಸ್ಸನ್ನು ಕೊಂಡೊಯ್ಯುತ್ತಾ ಹೋದರೆ ಒಂದೊಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ನಾವು ಏನೇ ಕೆಲಸ ಮಾಡಿದರೂ ಅದರತ್ತ ಮನಸ್ಸನ್ನು ಸಂಪೂರ್ಣ ಕೇಂದ್ರೀಕರಿಸದೆ ಹೋದರೆ ಅದು ಪರಿಪೂರ್ಣವಾಗುವುದಿಲ್ಲ. ಏಕೆಂದರೆ ನಮಗೆ ಗೊತ್ತಿಲ್ಲದ ಹಾಗೆ ನಾವು ಏನಾದರೊಂದು ಎಡವಟ್ಟು ಮಾಡಿರುತ್ತೇವೆ. ತಪ್ಪ್ಪಿನ ಅರಿವಾದ ನಂತರವೇ ಅಯ್ಯೋ ನಾನು ತಪ್ಪು ಮಾಡಿಬಿಟ್ಟೆ ಮನಸ್ಸಿಟ್ಟು ಮಾಡಬೇಕಿತ್ತು. ಅದರತ್ತ ನಿಗಾ ವಹಿಸಬೇಕಿತ್ತೆಂದು ಹಲಬುತ್ತೇವೆ. ನಿಜ ಹೇಳಬೇಕೆಂದರೆ ನಮಗೆ ಯಾರಿಗೂ ಈಗ ಒಳ್ಳೆಯದನ್ನು ಧ್ಯಾನಿಸೋದಕ್ಕೂ ಸಮಯವಿಲ್ಲದ ಸ್ಥಿತಿಯಲ್ಲಿದ್ದೇವೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದು ರಾತ್ರಿ ಮತ್ತೆ ಅದೇ ಹಾಸಿಗೆಗೆ ಹೋಗುವ ತನಕವೂ ಒಂದಲ್ಲ ಒಂದು ಒತ್ತಡ ನಮ್ಮನ್ನು ಕಾಡುತ್ತಿರುತ್ತದೆ.

ನೆಮ್ಮದಿ ತರುವ ಕೆಲಸಕ್ಕಿಂತ ನಾವು ಹಣ ತರುವ ಕೆಲಸವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಅದರಲ್ಲಿ ಒತ್ತಡ, ಉದ್ವೇಗ ಎಲ್ಲವೂ ಇದ್ದೇ ಇರುತ್ತದೆ. ಹೀಗಿರುವಾಗ ನಾವು ನೆಮ್ಮದಿಯಾಗಿ ಬದುಕಲು ಹೇಗೆ ಸಾಧ್ಯ? ಹಣ ಕೈತುಂಬಾ ಬರುತ್ತಿದೆ. ಅದರಿಂದ ಐಷಾರಾಮಿ ವಸ್ತುಗಳನ್ನೆಲ್ಲ ತಂದು ಗುಡ್ಡೆ ಹಾಕಿಕೊಂಡಿದ್ದೇವೆ. ಈ ವಸ್ತುಗಳು, ಸವಲತ್ತುಗಳು ನಮ್ಮ ದೈಹಿಕ ಶ್ರಮವನ್ನು ಒಂದಷ್ಟು ತಗ್ಗಿಸಬಹುದಾದರೂ ಮಾನಸಿಕ ನೆಮ್ಮದಿಯನ್ನು ಅವು ತಂದುಕೊಡಲಾರವು.
ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ
ದೈಹಿಕ ಶ್ರಮಕ್ಕಿಂತ ಮಾನಸಿಕ ಶ್ರಮವೇ ಜಾಸ್ತಿಯಾಗಿರುವುದರಿಂದ ಆರೋಗ್ಯ ಹದಗೆಡುತ್ತಿದೆ. ನಮಗೆ ಅರಿವಿಲ್ಲದೆ ಕಾಯಿಲೆಗಳು ನಮ್ಮನ್ನು ಮುತ್ತಿಕೊಳ್ಳುತ್ತಿವೆ. ಕಷ್ಟಪಟ್ಟು ದುಡಿದರೂ ಇಷ್ಟಪಟ್ಟಿದನ್ನು ತಿನ್ನಲಾಗದೆ ಒದ್ದಾಡುತ್ತಿದ್ದೇವೆ. ಇಂತಹದೊಂದು ಬದುಕು ಬೇಕಾ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಏನೇ ಮಾಡಬೇಕಾದರೂ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ.
ನಮಗೆ ಮಾನಸಿಕ ಆರೋಗ್ಯ ಬೇಕೆಂದರೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು. ನಮ್ಮ ವೈರುದ್ಧಗಳ ನಡುವೆಯೂ ಅಂಥ ಬದುಕನ್ನು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಅದನ್ನು ಅಭ್ಯಸಿಸುತ್ತಾ ಹೋದರೆ ಸುಲಭವಾಗಿ ಕಾಣುತ್ತದೆ. ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುವ ಮಾನಸಿಕ ವಿಕಾರತೆ, ತುಮುಲ ಇವುಗಳನ್ನಲ್ಲ ಬದಿಗೊತ್ತಿ ಪರಿಶುದ್ಧ ಮನಸ್ಸನ್ನು ನೆಲೆಗೊಳಿಸಬೇಕು. ಇದು ಅಷ್ಟು ಸುಲಭವಲ್ಲ. ಆದರೆ ಕಷ್ಟವೂ ಅಲ್ಲ.

ಆಧ್ಯಾತ್ಮಿಕ ಚಿಂತಕರ ಉಪದೇಶ ಏನು?
ಕೆಲವರು ಸುಮ್ಮನೆ ಕುಳಿತಾಗಲೂ ದೇವರ ನಾಮ ಜಪ ಮಾಡುತ್ತಿರುತ್ತಾರೆ. ಅದು ನಮಗೆ ವಿಚಿತ್ರವಾಗಿ ಕಂಡು ಬಂದರೂ ಅದು ಎಲ್ಲೆಂದರಲ್ಲಿ ಹರಡಿ ಹೋಗುವ ಮನಸ್ಸನ್ನು ಎಳೆದು ತಂದು ಒಂದೆಡೆ ಕಟ್ಟಿಹಾಕುವ ಯತ್ನವಾಗಿರುತ್ತದೆ. ಒಳ್ಳೆಯದನ್ನು ಧ್ಯಾನ ಮಾಡೋದಕ್ಕೆ ಧ್ಯಾನ ಕೇಂದ್ರಕ್ಕೆ ಹೋಗ ಬೇಕಾಗಿಲ್ಲ. ಇದ್ದಲ್ಲೇ ಒಳ್ಳೆಯ ವಿಚಾರಗಳ ಬಗ್ಗೆ ಆಲೋಚಿಸುವುದು ಮತ್ತು ಒಳ್ಳೆಯದನ್ನೇ ಬಯಸಿದರೆ ಸಾಕು ಎನ್ನುವುದು ಆಧ್ಯಾತ್ಮಿಕ ಚಿಂತಕರ ಉಪದೇಶವಾಗಿದೆ.
ಸದಾ ಒತ್ತಡದಲ್ಲಿ ಚಂಚಲವಾಗಿರುವ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿಯಾದ ಮಾರ್ಗ ಎಂದು ಆಧ್ಯಾತ್ಮದಲ್ಲಿ ವಿವರಿಸಲಾಗಿದೆ. ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಏಕಚಿತ್ತವಾಗಿ ಭಗವಂತನ ಧ್ಯಾನದಲ್ಲಿ ತೊಡಗುವುದರಿಂದ ಮಾನಸಿಕ ನೆಮ್ಮದಿ ಕಂಡು ಕೊಳ್ಳಬಹುದಾಗಿದೆ. ಮುಂಜಾನೆ ಅಥವಾ ಸಂಜೆ ದೇವರ ಸನ್ನಿಧಿಯಲ್ಲಿ (ದೇವಾಲಯ) ಒಂದಷ್ಟು ಹೊತ್ತು ಇದ್ದು ಬರುವುದು ಕೂಡ ನೆಮ್ಮದಿ ನೀಡುತ್ತದೆ.
ಅನಗತ್ಯ ಗೊಂದಲ ನುಸುಳದಂತೆ ನೋಡಿಕೊಳ್ಳಬೇಕು
ಆಧ್ಯಾತ್ಮ ಚಿಂತಕರು ಯಾರು ಯಾವುದನ್ನು ಕುರಿತು ಧ್ಯಾನಿಸುತ್ತಾರೆಯೋ ಅವರು ಅದೇ ಆಗುತ್ತಾರೆ ಎಂದು ಹೇಳಿದ್ದಾರೆ. ಆದ್ದರಿಂದ ಕೆಟ್ಟದನ್ನು ಧ್ಯಾನಿಸುವ ಬದಲು ಒಳ್ಳೆಯದನ್ನೇ ಧ್ಯಾನಿಸಿದರೆ ಅದರಿಂದ ಉಪಯುಕ್ತವಾಗುವುದರಲ್ಲಿ ಎರಡು ಮಾತಿಲ್ಲ. ಇದೆಲ್ಲದರ ನಡುವೆ ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ ನೀನು ಧ್ಯಾನಕ್ಕೆ ತೊಡಗದಿದ್ದರೆ ನಿನ್ನ ಮನಸ್ಸು ನಿಯಂತ್ರಣಕ್ಕೆ ಸಿಕ್ಕದು. ಮನಸ್ಸನ್ನು ಹತೋಟಿಗೆ ತಂದುಕೊಳ್ಳದಿದ್ದರೆ ನಿನಗೆ ಧ್ಯಾನ ಸಿದ್ದಿಸದು.

ನೀನು ಈ ಎರಡನ್ನೂ ಏಕಕಾಲಕ್ಕೆ ನಿರ್ವಹಿಸಬೇಕು. ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಳ್ಳಬೇಕು, ಧ್ಯಾನವನ್ನು ಮಾಡಬೇಕು. ಇದು ಕಾರ್ಯರೂಪಕ್ಕೆ ಬರಬೇಕಾದರೆ ಮನಸ್ಸನ್ನು ಕಠಿಣ ಅಭ್ಯಾಸದಿಂದ ಭಗವಂತನಲ್ಲಿ ನೆಲೆಗೊಳಿಸಬೇಕು. ಮನಸ್ಸಿನೊಳಗೆ ಅನಪೇಕ್ಷಣೀಯವಾದ ಬಯಕೆಗಳು ಅಥವಾ ಗೊಂದಲಗಳು ನುಸುಳಿ ಬರದಂತೆ ಸದಾ ನೋಡಿಕೊಳ್ಳಬೇಕು.
ಒಳ್ಳೆಯದನ್ನು ಧ್ಯಾನಿಸುವುದು ಅಭ್ಯಾಸವಾಗಲಿ
ಅಂತಹ ವಿಚಾರಗಳು ನಮ್ಮ ಮನಸ್ಸನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಏಕಚಿತ್ತದಿಂದ ಪ್ರಾರ್ಥಿಸಬೇಕು. ಇಂತಹ ಅಭ್ಯಾಸಗಳಿಂದ ಮನಸ್ಸು ನಮ್ಮ ವಶಕ್ಕೆ ಬರುವುದಲ್ಲದೆ, ಅದು ಶುದ್ಧವೂ ಆಗುತ್ತದೆ. ಹೀಗಾದಾಗ ನಮ್ಮ ಧ್ಯಾನಕ್ಕೆ ಅರ್ಥ ಬರುತ್ತದೆ. ಇದೆಲ್ಲದರ ನಡುವೆ ನಾವು ಒಳ್ಳೆಯದನ್ನೇ ಧ್ಯಾನಿಸುವ ಅಭ್ಯಾಸವನ್ನು ಮಾತ್ರ ಬಿಡಬಾರದು.












Click it and Unblock the Notifications