Tomato Recipe: 10 ನಿಮಿಷದಲ್ಲಿ ಮಾಡುವ ಈ ಟೊಮೇಟೊ ಸಾರು ಸಖತ್ ರುಚಿ
ಪ್ರತಿದಿನ ನಾನ್‌ವೆಜ್ ತಿಂದು ಬೋರ್ ಆಗಿದ್ಯಾ? ಇವತ್ತು ಒಂದು ದಿನ ರುಚಿಯಾದ ವೆಜ್ ಸಾರು ತಿನ್ನಬೇಕು ಎನಿಸಿದರೆ ಮಿಸ್ ಮಾಡದೇ ಈ ರೆಸಿಪಿ ಟ್ರೈ ಮಾಡಿ. ಯಾವುದೇ ತರಕಾರಿ ಬಳಸದೇ ಬರೀ ಟೊಮೇಟೊ ಹಾಗೂ ಈರುಳ್ಳಿ ಹಾಕಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಒಂದು ರುಚಿಕರವಾದ ಟೊಮೇಟೊ ಸಾರು ಮಾಡುವ ವಿಧಾನ ಇಲ್ಲಿದೆ.
ಈ ರೀತಿಯ ಟೊಮೇಟೊ ಸಾರು ಮಾಡಲು ಬೇಕಾಗುವ ಸಾಮಾಗ್ರಿಗಳು
ಟೊಮೇಟೊ- ಮೂರು
ಈರುಳ್ಳಿ- ಎರಡು (ಸಣ್ಣ ಗಾತ್ರ)
ಬೆಳ್ಳುಳ್ಳಿ- ಹತ್ತು ಎಸಳುಗಳು
ತೆಂಗಿನತುರಿ- ಅರ್ಧ ಕಪ್
ಹುಣಸೆಹಣ್ಣು
ಮೆಣಸಿನ ಕಾಯಿ- ಮೂರರಿಂದ ನಾಲ್ಕು
ಮೆಣಸಿನ ಕಾಳು- ಅರ್ಧ ಚಮಚ
ಖಾರದ ಪುಡಿ-ಒಂದು ಚಮಚ
ದನಿಯಾ ಪುಡಿ-ಒಂದು ಚಮಚ
ಜೀರಿಗೆ- ಒಂದು ಚಮಚ
ಕರಿ ಬೇವಿನ ಸೊಪ್ಪು
ಒಣಮೆಣಸಿನ ಕಾಯಿ-ಎರಡು
ಕೊತ್ತಂಬರಿ ಸೊಪ್ಪು

ಟೊಮೇಟೊ ಸಾರು ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಮೂರು ಟೊಮೇಟೊ, ಒಂದು ಈರುಳ್ಳಿ ಹಾಗೂ ಐದರಿಂದ ಆರು ಬೆಳ್ಳುಳ್ಳಿ ಎಸಳುಗಳು, ಮೆಣಸಿನ ಕಾಯಿ, ಹುಣಸೆಹಣ್ಣು, ಮೆಣಸಿನ ಕಾಳು, ಜೀರಿಗೆ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಬೇಯಿಸಿರಿ. ಟೊಮೇಟೊ ಚೆನ್ನಾಗಿ ಬೆಂದ ಮೇಲೆ ಒಲೆ ಆರಿಸಿ. ಬೆಂದಿರುವ ಎಲ್ಲಾ ಪದಾರ್ಥಗಳನ್ನು ಬೇಯಿಸಿದ ನೀರಿನಿಂದ ತೆಗೆದು ಆರಲು ಬಿಡಿ. ಟೊಮೇಟೊ ಹಾಗೂ ಈರುಳ್ಳಿ ತಣ್ಣಗಾದ ಮೇಲೆ ಬೆಂದಿರುವ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಮೊದಲು ರುಬ್ಬಿಕೊಳ್ಳಿ. ಕೊನೆಗೆ ತೆಂಗಿನತುರಿ ಹಾಕಿ ರುಬ್ಬಿಕೊಳ್ಳಿ.

ಬಳಿಕ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಕರಿ ಬೇವಿನ ಸೊಪ್ಪು, ಒಣಮೆಣಸಿನ ಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಬಳಿಕ ಚಿಕ್ಕದಾಗಿ ಹಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿಕೊಂಡು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಒಂದು ಚಮಚ ಖಾರದ ಪುಡಿ, ಒಂದು ಚಮಚ ದನಿಯಾ ಪುಡಿ, ಹಾಗೂ ಅರ್ಧ ಚಮಚ ಅರಶಿನ ಪುಡಿ ಹಾಕಿ ಚೆನ್ನಾಗಿ ಕಲಿಸಿ ಬಳಿಕ ಒಂದು ಕುದಿ ಬಂದ ಮೇಲೆ ಈ ಹಿಂದೆ ತೆಗೆದಿಟ್ಟಿರುವ ಟೊಮೇಟೊ ಹಾಗೂ ಈರುಳ್ಳಿ ಬೇಯಿಸಿದ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಕೊನೆಯಲ್ಲಿ ಅಗತ್ಯ ಇದ್ದರೆ ಇನ್ನಷ್ಟು ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಒಂದು ಐದು ನಿಮಿಷಗಳ ಕಾಲ ಕುದಿಸಿದರೆ ರುಚಿ ರುಚಿಯಾದ ಟೊಮೇಟೊ ಸಾರು ಸವಿಯಲು ಸಿದ್ಧವಾಗುತ್ತದೆ.












Click it and Unblock the Notifications