Yes or No: ಸಂಬಂಧಗಳಲ್ಲಿ ಕ್ಲಾರಿಟಿ ಬೇಕಿದ್ರೆ ಈ 5 ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ
ಯಾವುದೇ ಹೊಸ ಸಂಬಂಧದ ಆರಂಭದಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತದೆ. ಹೊಸಬರ ಪರಿಚಯ, ಪ್ರೀತಿ, ಕಾಳಜಿ ಎಲ್ಲವೂ ನಮ್ಮಲ್ಲಿ ರೋಮಾಂಚನವನ್ನು ಉಂಟುಮಾಡುತ್ತವೆ. ಇದನ್ನು 'ಹನಿಮೂನ್ ಹಂತ' (Honeymoon phase) ಎಂದು ಸಹ ಕರೆಯಲಾಗುತ್ತದೆ. ಆದರೆ ಕೆಲವು ತಿಂಗಳು ಕಳೆದ ನಂತರ, ಈ ಹಂತ ಮುಗಿದು ನೈಜ ಜೀವನದ ಚಿತ್ರಣ ತೆರೆದುಕೊಳ್ಳುತ್ತದೆ. ಆಗ ಪರಸ್ಪರ ಹೊಂದಾಣಿಕೆ, ಕೋಪ, ಸಣ್ಣಪುಟ್ಟ ತಪ್ಪುಗಳು ಎಲ್ಲವೂ ಕಾಣಲಾರಂಭಿಸುತ್ತವೆ. ಈ ಸಮಯದಲ್ಲಿ, "ಈ ಸಂಬಂಧವನ್ನು ಮುಂದುವರಿಸುವುದು ಸರಿಯೇ?" ಅಥವಾ "ನಾನು ಸರಿಯಾದ ವ್ಯಕ್ತಿಯೊಂದಿಗೆ ಇದ್ದೇನೆಯೇ?" ಎಂಬ ಗೊಂದಲಗಳು ಶುರುವಾಗುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧವು ಮುಂದುವರಿಸಲು ಯೋಗ್ಯವಾಗಿದೆಯೇ ಎಂಬ ಪ್ರಶ್ನೆ ಕಾಡುವುದು ಸಾಮಾನ್ಯ.
ಇಂತಹ ಗೊಂದಲದ ಪರಿಸ್ಥಿತಿಯಲ್ಲಿ ನಿಮ್ಮ ಸಹಾಯಕ್ಕೆ ಬರುವುದು ಕೆಲವು ಸ್ಪಷ್ಟ ಪ್ರಶ್ನೆಗಳು. ಪೋರ್ಟ್‌ಲ್ಯಾಂಡ್ ಮೂಲದ ವೃತ್ತಿಪರ ಆಪ್ತಸಲಹೆಗಾರರಾದ (Counsellor) ಜೆಫ್ ಗುಂಥರ್ (Jeff Guenther) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಸಂಬಂಧದ ಬಗ್ಗೆ ಅನುಮಾನ ಬಂದಾಗ ಪ್ರತಿಯೊಬ್ಬರೂ ತಮಗೆ ತಾವೇ ಕೇಳಿಕೊಳ್ಳಬೇಕಾದ 5 ಪ್ರಮುಖ ಪ್ರಶ್ನೆಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಈ ಸಂಬಂಧದ ಸಲಹೆ ನಿಮ್ಮ ಭವಿಷ್ಯದ ನಿರ್ಧಾರವನ್ನು ಸುಲಭಗೊಳಿಸುತ್ತವೆ.

1. ನನ್ನ ಇಡೀ ಜೀವನದಲ್ಲಿ ಇದೇ ರೀತಿಯ ಪ್ರೀತಿ ನನಗೆ ಬೇಕೇ?
ನೀವು ನಿಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದಕ್ಕಿಂತ, ಅವರು ನಿಮ್ಮನ್ನು ಹೇಗೆ ಪ್ರೀತಿಸುತ್ತಿದ್ದಾರೆ ಎಂಬುದು ಮುಖ್ಯ. "ಸಾಮಾನ್ಯ ದಿನಗಳಲ್ಲಿ ಅವರು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ? ನೀವು ಕಷ್ಟದಲ್ಲಿದ್ದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ? ಮುಂದಿನ 40 ವರ್ಷಗಳ ಕಾಲ ಇದೇ ರೀತಿಯ ಪ್ರೀತಿ ಮತ್ತು ಕಾಳಜಿ ನಿಮಗೆ ಸಾಕಾ?" ಎಂದು ಯೋಚಿಸಿ. ಜೆಫ್ ಅವರ ಪ್ರಕಾರ, ಮದುವೆ ಅಥವಾ ದೀರ್ಘಕಾಲದ ಸಂಬಂಧವೆಂದರೆ ನೀವು ಇದನ್ನೇ ಒಪ್ಪಿಕೊಳ್ಳುತ್ತಿದ್ದೀರಿ ಎಂದರ್ಥ.
2. ಈ ಸಂಬಂಧದಲ್ಲಿರುವ 'ನನ್ನ ವ್ಯಕ್ತಿತ್ವ' ನನಗೆ ಇಷ್ಟವಾಗುತ್ತಿದೆಯೇ?
ಪ್ರತಿ ಸಂಬಂಧವೂ ನಮ್ಮ ಒಳಗಿನ ವಿಭಿನ್ನ ವ್ಯಕ್ತಿತ್ವವನ್ನು ಹೊರತರುತ್ತದೆ. ನಿಮ್ಮ ಸಂಗಾತಿಯ ಜೊತೆಗಿರುವಾಗ ನಿಮ್ಮ ವರ್ತನೆ ಹೇಗಿರುತ್ತದೆ ಎಂಬುದನ್ನು ಗಮನಿಸಿ. ಅವರ ಜೊತೆಗಿದ್ದಾಗ ನೀವು ಹೆಚ್ಚು ಕೋಪಗೊಳ್ಳುತ್ತೀರಾ? ಅಸುರಕ್ಷಿತ ಭಾವನೆ ಕಾಡುತ್ತದೆಯೇ? ಅಥವಾ ಅವರ ಜೊತೆಗಿರುವಾಗ ನೀವು ಹೆಚ್ಚು ಖುಷಿಯಾಗಿ, ಮುಕ್ತವಾಗಿರುತ್ತೀರಾ? ನಿಮ್ಮ ಪ್ರಸ್ತುತ ವ್ಯಕ್ತಿತ್ವ ನಿಮಗೆ ಇಷ್ಟವಾಗದಿದ್ದರೆ, ಆ ಸಂಬಂಧದ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ ಎಂದು ಅರ್ಥ.
3. ನನ್ನ ಸಂಗಾತಿಗೆ ನಾನು ತಮಾಷೆಯ ವ್ಯಕ್ತಿ ಎಂದು ಅನಿಸುತ್ತೇನೆಯೇ?
ಇದು ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ, ಇದು ಬಹಳ ಮುಖ್ಯವಾದ ವಿಚಾರ. ಜೆಫ್ ಅವರ ಪ್ರಕಾರ, "ಹಾಸ್ಯವು ನಮ್ಮನ್ನು ಇತರರು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ಅಳೆಯುವ ಸಾಧನವಾಗಿದೆ." ನಿಮ್ಮ ಜೋಕ್‌ಗಳಿಗೆ, ನಿಮ್ಮ ಯೋಚನಾ ಲಹರಿಗೆ ಅವರು ನಗುವುದಿಲ್ಲ ಎಂದಾದರೆ, ಅವರಿಗೆ ನಿಮ್ಮ ನೈಜ ವ್ಯಕ್ತಿತ್ವ ಇನ್ನೂ ಅರ್ಥವಾಗಿಲ್ಲ ಎಂದರ್ಥ. ಇದು ಬಹಳಷ್ಟು ವಿಚಾರಗಳನ್ನು ನಿರ್ಧರಿಸುತ್ತದೆ.
4. ಅವರು ಎಂದಿಗೂ ಬದಲಾಗದಿದ್ದರೆ, ನೀವು ಸಂತೋಷವಾಗಿರುತ್ತೀರಾ?
"ಮದುವೆಯಾದ ಮೇಲೆ ಅಥವಾ ಭವಿಷ್ಯದಲ್ಲಿ ಅವರು ಬದಲಾಗಬಹುದು" ಎಂಬ ಭ್ರಮೆ ಬಹುತೇಕರಿಗಿರುತ್ತದೆ. ಆದರೆ ವಾಸ್ತವದಲ್ಲಿ, ಜನರು ಸುಲಭವಾಗಿ ಬದಲಾಗುವುದಿಲ್ಲ. ಈಗ ಅವರು ಹೇಗಿದ್ದಾರೋ, ಮುಂದೆಯೂ ಹಾಗೆಯೇ ಇರುತ್ತಾರೆ ಅಥವಾ ಅವರ ಈಗಿನ ಸ್ವಭಾವ ಇನ್ನಷ್ಟು ಹೆಚ್ಚಾಗಬಹುದು. ಹಾಗಾಗಿ, ನಿಮ್ಮ ಸಂಗಾತಿ ಯಾವುದೇ ಬದಲಾವಣೆ ಇಲ್ಲದೆ ಜೀವನಪೂರ್ತಿ ಹೀಗೆಯೇ ಇದ್ದರೆ ನೀವು ಖುಷಿಯಾಗಿರುತ್ತೀರಾ? ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಭವಿಷ್ಯದಲ್ಲಿ ಅವರು ಬದಲಾಗುತ್ತಾರೆ ಎಂಬ ಆಧಾರದ ಮೇಲೆ ನಿಮ್ಮ ಉತ್ತರ ನಿಂತಿದ್ದರೆ, ಅದು ಖಂಡಿತ 'ಹೌದು' ಅಲ್ಲ.
5. ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವಾಗ ನಿಮ್ಮ ಮನಸ್ಸಿನಲ್ಲಿ ಏನಿದೆ?
ಇದು ಅತ್ಯಂತ ಪ್ರಮುಖವಾದ ಅಂಶ. ಮೇಲಿನ ನಾಲ್ಕು ಪ್ರಶ್ನೆಗಳನ್ನು ಓದುವಾಗ ನಿಮ್ಮ ಮನಸ್ಸು ಏನನ್ನು ಹುಡುಕುತ್ತಿತ್ತು? "ಸಂಬಂಧದಿಂದ ಹೊರಬರಲು ಒಂದು ಕಾರಣ ಸಿಗಲಿ" ಎಂದು ನೀವು ಆಶಿಸುತ್ತಿದ್ದೀರಾ? ಅಥವಾ "ಈ ಸಂಬಂಧದಲ್ಲಿ ಉಳಿಯಲು ಏನಾದರೂ ದಾರಿ ಸಿಗಲಿ" ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಮನಸ್ಸಿನ ಈ ಒಲವು ನಿಮ್ಮ ಮುಂದಿನ ನಿರ್ಧಾರವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಪ್ರೀತಿಯ ಸಂಬಂಧಗಳು ಯಾವಾಗಲೂ ಸುಲಭವಾಗಿರುವುದಿಲ್ಲ. ಆದರೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ.












Click it and Unblock the Notifications