ಜಗಮೊಂಡ ನಂಜುಂಡಯ್ಯನ "ಕಣ್ವ ವಂಚನೆ" ಅಸಲಿ ಚಿತ್ರಣ
ಬೆಂಗಳೂರು, ಆ. 25: ವಾರ್ಷಿಕ 12 ರಿಂದ 15 ಪರ್ಸೆಂಟ್ ಬಡ್ಡಿಯ ಅಮಿಷ. ಕೆಲಸ ಮಾಡಲು ಇಚ್ಚಿಸಿದರೆ ಒಂದು ಬ್ರಾಂಚ್‌ನಲ್ಲಿ ಕೆಲಸ ತಿಂಗಳಿಗೆ 20 ಸಾವಿರ ಸಂಬಳ. ಪ್ಲಸ್ ಕಮೀಷನ್! ಇಂಥದ್ದೊಂದು ಆಫರ್ ಕೊಟ್ಟು ಬೆಳಗಿನ ಜಾವ ಬೆಂಗಳೂರಿನ ಉದ್ಯಾನವನಗಳ ಸಮೀಪ ನೆಮ್ಮದಿಯಾಗಿ ವಾಯು ವಿಹಾರ ಮಾಡುತ್ತಿದ್ದ ನಿವೃತ್ತ ಸರ್ಕಾರಿ ನೌಕರರಿಂದ ಹೂಡಿಕೆ ಮಾಡಿಸಿಕೊಂಡು ಕೈ ಎತ್ತಿದ ಅಕ್ರಮವೇ ಕಣ್ವ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಕ್ರಮ. ಜಗಮೊಂಡ ನಂಜುಂಡಯ್ಯ ರೂಪಿಸಿದ ಈ ಮಹಾ ಪ್ಲಾನ್‌ಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಎಂಟು ಸಾವಿರ ಜನ ಮೋಸಕ್ಕೆ ಒಳಗಾಗಿ ಬರೋಬ್ಬರಿ 650 ಕೋಟಿ ರೂ.ಗೂ ಅಧಿಕ ಮೊತ್ತ ಕಳೆದುಕೊಂಡಿದ್ದಾರೆ. ಕಣ್ವ ಫ್ಯಾಷನ್ಸ್ , ಕಣ್ವ ಮಾರ್ಟ್ , ಕಣ್ವ ರೆಸಾರ್ಟ್, ಕಣ್ವ ಹೋಟೆಲ್ಸ್ ಪಾರ್ಟರ್ ಕನಸು ಕಂಡವರು ಇದೀಗ ಹಣ ಹೂಡಿಕೆ ರಶೀದಿಗಳನ್ನು ಹಿಡಿದು ಸಿಐಡಿ ಪೊಲೀಸರ ಕದ ತಟ್ಟುತ್ತಿದ್ದಾರೆ. ನಿವೃತ್ತಿಯ ಬದುಕಿನ ನೆಮ್ಮದಿಗಾಗಿ ಇಟ್ಟುಕೊಂಡಿದ್ದ ಗಂಟು ಕಳೆದುಕೊಂಡು ಪರಿತಪಿಸುತ್ತಿದ್ದಾರೆ.
ನಂಜುಂಡಯ್ಯ ಎಂಬ ಅನಕ್ಷರಸ್ಥ ಬುದ್ಧಿವಂತರನ್ನೇ ಯಾಮಾರಿಸಿ ಕಟ್ಟಿದ ಕಣ್ವ ಸಾಮ್ರಾಜ್ಯ ಕುಸಿದು ಬಿದ್ದಿದೆ. ಜೈಲಿಗೆ ಹೋಗಿದ್ದ ನಂಜುಂಡಯ್ಯ ಜಾಮೀನು ಪಡೆದು ಬಿಡುಗಡೆ ಆಗಿದ್ದಾನೆ. ರಾಜ್ಯದ ಬರೋಬ್ಬರಿ ಎಂಟು ಸಾವಿರ ಮಂದಿಗೆ ಸುಮಾರು 650 ಕೋಟಿ ರೂ. ಮೊತ್ತಕ್ಕೆ ನಾಮ ಹಾಕಿದ್ದಾನೆ. ಇನ್ನು ಕೆನರಾ ಬ್ಯಾಂಕ್ ಸೇರಿದಂತೆ ಬ್ಯಾಂಕ್ ವಲಯಕ್ಕೆ 150 ಕೋಟಿ ರೂ. ಸಾಲ ಯಾಮಾರಿಸಿದ್ದಾನೆ. ವಿವಿಧ ಬ್ಯುಸಿನೆಸ್ ಮೆನ್ ಗಳಿಂದ ಉತ್ಪನ್ನಗಳನ್ನುಹಾಕಿಸಿಕೊಂಡು ಸುಮಾರು 50 ಕೋಟಿ ರೂ. ನಷ್ಟು ವಂಚಿಸಿದ್ದಾನೆ. ನಂಜುಂಡಯ್ಯನ ಜತೆ ಬಂಧನಕ್ಕೆ ಒಳಗಾಗಿದ್ದ ನಿರ್ದೇಶಕರು ಸೇರಿದಂತೆ 20 ಮಂದಿ ಬಿಡುಗಡೆ ಆಗಿದ್ದಾರೆ. ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸಿ ಪ್ರಾಥಮಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕೆಲವೇ ದಿನಗಳಲ್ಲಿ ಅಂತಿಮ ವರದಿ ಕೂಡ ಸಲ್ಲಿಸಲು ಸಿಐಡಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ಹಣ ವಾಪಸು ಭರವಸೆ ಮೂಡಿಸಿರುವ ಏಕೈಕ ಪ್ರಕರಣ
ಕಣ್ವ ಸಮೂಹ ಸಂಸ್ಥೆಗಳ ಬೇನಾಮಿ ವಹಿವಾಟು ಸಂಬಂಧ ಜಾರಿ ನಿರ್ದೇಶನಾಲಯ 225 ಕೋಟಿ ರೂ. ಹಣವನ್ನು ಜಪ್ತಿ ಮಾಡಿತ್ತು. ಆ ಬಳಿಕ ಸಿಐಡಿ ಪೊಲೀಸರು ತುಮಕೂರು, ಕೊರಟಗೆರೆ, ಗೌರಿಬಿದನೂರು, ನೆಲಮಂಗಲ ಸೇರಿದಂತೆ ಅನೇಕ ಕಡೆ ಸ್ಥಿರಾಸ್ತಿ ಸೆರಿದಂತೆ ಸುಮಾರು 426 ಕೋಟಿ ರೂ. ಆಸ್ತಿಯನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಮುಗಿಯುವ ವೇಳೆಗೆ ಸ್ಥಿರಾಸ್ತಿಯನ್ನು ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಿದರೂ ಬಹುಶಃ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗಲಿದೆ. ಬ್ಯಾಂಕ್ ಸಾಲ 150 ಕೋಟಿ ರೂ. ತೀರಿಸಿದ ಬಳಿಕ ಸಾರ್ವಜನಿಕರ ಹಣ ವಾಪಸು ಕೊಟ್ಟರೂ ಸಹ ಯಾವುದೇ ಕೊರತೆ ಎದುರಾಗುವುದಿಲ್ಲ ಎಂಬ ಮಾತು ಸಿಐಡಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಹಣ ವಾಪಸು ಬರುವ ಭರವಸೆ ಮೂಡಿಸಿದ ಏಕೈಕ ಪ್ರಕರಣ ಕಣ್ವ ಎಂದರೆ ತಪ್ಪಾಗಲಾರದು. ಯಾಕೆಂದರೆ ಕಾಲಮಿತಿಯಲ್ಲಿ ಈ ಪ್ರಕರಣದ ಜಪ್ತಿ ಜಾಸ್ತಿಯನ್ನು ಪರಭಾರೆ ಮಾಡಲು ಸಕ್ಷಮ ಪ್ರಾಧಿಕಾರ ರಚನೆ ಮಾಡಿ ಕಾಲಮಿತಿ ನಿಗದಿ ಮಾಡಿದಲ್ಲಿ ರಾಜ್ಯದಲ್ಲಿ ಈವರೆಗೂ ಬೆಳಕಿಗೆ ಬಂದಿರುವ 45 ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಅತಿ ಹೆಚ್ಚು ಪರಿಹಾರ ಸಿಕ್ಕಿದ ಸಾಲಿಗೆ ಈ ಪ್ರಕರಣ ಸೇರ್ಪಡೆಯಾಗಲಿದೆ. ಈ ಪ್ರಕರಣಕ್ಕೆ ಕಾಲಮಿತಿ ನಿಗದಿ ಮಾಡಿ ವಿಲೇವಾರಿ ಮಾಡಲು ಗೃಹ ಸಚಿವರೇ ಉತ್ಸುಕತೆ ತೋರಬೇಕಾಗುತ್ತದೆ.

ಪಾರ್ಕ್ ಬಳಿ ನಿವತ್ತ ಅಧಿಕಾರಿಗಳ ಟಾರ್ಗೆಟ್
ಕಣ್ವ ಸಮೂಹ ಸಂಸ್ಥೆಗಳಲ್ಲ ಹೂಡಿಕೆ ಮಾಡಿದರೆ ವಾರ್ಷಿಕ 12 ರಿಂದ 15 ಪರ್ಸೆಂಟ್ ಬಡ್ಡಿ, ಜತೆಗೆ ನಿಮ್ಮ ಆಪ್ತರು ಹೂಡಿಕೆ ಮಾಡಿದರೆ ಕಮೀಷನ್, ಇಷ್ಟ ಪಟ್ಟರೆ ನಿಮ್ಮ ಹೆಸರಿಗೆ ಕಣ್ವ ಬಟ್ಟೆ ಮಳಿಗೆ ಪ್ರಾರಂಭ, ಕಣ್ವ ರೆಸಾರ್ಟ್ ನಲ್ಲಿ ಪಾಲುದಾರಿಕೆ, ಕಣ್ವ ರಿಯಲ್ ಎಸ್ಟೇಟ್ ನಲ್ಲಿ ಪಾಲುದಾರಿಕೆ ಕೊಡುವ ಅಮಿಷೆಗಳನ್ನು ನಂಜುಂಡಯ್ಯ ನೀಡಿದ್ದ. ಮಾತ್ರವಲ್ಲದೇ ತನ್ನ ಏಜೆಂಟರನ್ನು ಬೆಳಗಿನ ಜಾವ ಬೆಂಗಳೂರಿನ ಪಾರ್ಕ್‌ಗಳ ಬಳಿ ವಾಕ್ ಮಾಡುವ ನಿವೃತ್ತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲು ತಿಳಿಸಿದ್ದ. ಅದರಂತೆ ನಂಜುಂಡಯ್ಯನ ವಂಚನೆ ಬಲೆಗೆ ಬಿದ್ದವರಲ್ಲಿ ಹೆಚ್ಚು ಮಂದಿ ಸರ್ಕಾರಿ ನಿವೃತ್ತ ಅಧಿಕಾರಿಗಳು. ನಿವೃತ್ತಿ ಬಳಿಕ ಸಣ್ಣ ಕೆಲಸ ಮಾಡೋಣ ಎಂದು ಬಯಸಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿ ಕಣ್ವ ಮಾರ್ಟ್‌ನಲ್ಲಿ ಕೂತಿದ್ದರು. ನಿವೃತ್ತಿ ಕಾಲದಲ್ಲಿ ಆದಾಯ ಗಳಿಸುವ ಆಸೆಯಿಂದ ಇದ್ದ ಹಣ ಕರ್ಣದಲ್ಲಿ ಹೂಡಿಕೆ ಮಾಡಿದರು. ಹೂಡಿಕೆ ಮಾಡಿದ ಕೆಲವೇ ತಿಂಗಳಲ್ಲಿ ದೇಶದಲ್ಲಿ ನೋಟು ಅಮಾನ್ಯೀಕರಣ ಗಿತ್ತು. ಅಷ್ಟೊತ್ತಿಗೆ ನಂಜುಂಡಯ್ಯ ದಿವಾಳಿಯಾಗಿ ಬೀದಿಗೆ ಬಿದ್ದಿದ್ದ. ಜನರು ಅಸಲನ್ನಾದರೂ ಕೊಡಿ ಎಂದು ದಂಬಾಲು ಬಿದ್ದಿದ್ದರು. ಹಲವರು ದೂರು ಸಹ ನೀಡಿದ್ದರು. ಯವಾಗ ಹೂಡಿಕೆದಾರರ ನೀಡಿದ್ದ ಚೆಕ್ ಹಾಗೂ ಬಾಂಡ್‌ಗಳು ಬೌನ್ಸ್ ಆಗಿದ್ದವು. ಇದ್ದಕ್ಕಿದ್ದಂತೆ ಸಾವಿರಾರು ಜನರು ರಾಜಾಜಿನಗರದಲ್ಲಿರುವ ಕಣ್ವ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಅದಾಗಲೇ ಬೇನಾಮಿ ವಹಿವಾಟಿನಲ್ಲಿ ಇಡಿ ಬಲೆಗೆ ಬಿದ್ದಿದ್ದ ನಂಜುಂಡಯ್ಯನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ನಂಜುಂಡಯ್ಯನನ್ನು ವಿಚಾರಣೆ ನಡೆಸಿ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಲಾಗಿದೆ.

ಕಣ್ವದಲ್ಲಿ ಮೋಸ ಹೋದವರಿಗೆ ನ್ಯಾಯ ಕೊಡಿಸಿ
ಅರಣ್ಯ ಇಲಾಖೆ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಂಟು ಸಾವಿರ ಮಂದಿ ಮೋಸ ಹೋಗಿದ್ದಾರೆ. ಪ್ರಕರಣವನ್ನು ಕೇವಲ ಇಬ್ಬರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಮೋಸ ಹೋದವರಿಗೆ ಕೊಡುವಷ್ಟು ಹಣವನ್ನು ಸಿಐಡಿ ಪೊಲೀಸರು ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಆದರೆ, ಕೂಡಲೇ ಸಕ್ಷಮ ಪ್ರಾಧಿಕಾರ ರಚನೆ ಮಾಡಿ, ಅದರ ಮುಖ್ಯಸ್ಥರನ್ನು ನಿಯೋಜಿಸಿ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು.
ಆದರೆ, ಹಿರಿಯ ಅಧಿಕಾರಿಗಳಾಗಲೀ, ಗೃಹ ಇಲಾಖೆ ಅಧಿಕಾರಿಗಳಾಗಲೀ ಉತ್ಸುಕತೆ ತೋರುತ್ತಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಮೋಸ ಹೋದವರಿಗೆ ಪರಿಹಾರ ಸಿಗಲು ವರ್ಷಗಳು ಉರುಳಿದರೂ ಅಚ್ಚರಿಯಿಲ್ಲ. ಹೀಗಾಗಿ ಕಣ್ವ ಬ್ಲೇಡ್ ಸ್ಕೀಮ್ ಪ್ರಕರಣವನ್ನು ಇತ್ಯರ್ಥ ಮಾಡಲು, ಹಣವನ್ನು ಸಾರ್ವಜನಿಕರಿಗೆ ವಿತರಣೆ ಮಾಡಲು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಕಾಲಮಿತಿಯನ್ನು ನಿಗದಿ ಪಡಿಸಿ ಮುಗ್ಧರಿಗೆ ನ್ಯಾಯ ಕೊಡಿಸಬಲ್ಲರೇ? ಆರ್ಥಿಕ ಅಪರಾಧದಲ್ಲಿ ಮುಗ್ಧರಿಗೆ ನ್ಯಾಯ ಕೊಡಿಸವುದು ಗೃಹ ಸಚಿವರ ಹೊಣೆಗಾರಿಕೆ ಅಲ್ಲವೇ?

ರೀಕವರಿ ಪೆರೇಡ್‌ಗಳು ಸಾಕು
ರಾಜ್ಯದಲ್ಲಿ ಪೊಲೀಸರು ತುಂಬಾ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಂಬಿಸಲು ಸರಗಳ್ಳ ಪ್ರಕರಣಗಳ ಪತ್ತೆ, ಕಳವು ಬೈಕ್ ವಶಪಡಿಸಿಕೊಂಡು ರೀಕವರಿ ಪೆರೇಡ್ ಮಾಡುವುದರಲ್ಲಿ ಅರ್ಥವೇ ಇಲ್ಲ. ಇಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ತನಿಖೆ ಮಾಡಲು ಕೇವಲ ಬೆರಳೆಣಿಕೆ ಅಧಿಕಾರಿಗಳನ್ನು ನೇಮಿಸಿ ಕಾಲಾಹರಣ ಮಾಡಲಾಗುತ್ತದೆ. ಹೀಗಾಗಿ ಪೊಲೀಸರು ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಮೊದಲ ಹೆಜ್ಜೆ ಇಡಬೇಕು. ಅದಕ್ಕಿಂತಲೂ ತುರ್ತಾಗಿ ಗೃಹ ಸಚಿವರೇ ಸ್ವತಃ ಕಾಳಜಿ ವಹಿಸಿ ಆರ್ಥಿಕ ಅಪರಾಧ ಪ್ರಕರಣಗಳನ್ನು ಕಾಲ ಮಿತಿಯಲ್ಲಿ ಇತ್ಯರ್ಥಗೊಳಿಸಿ ನೊಂದ ಜನರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು.












Click it and Unblock the Notifications