Government Jobs: ಶಿಕ್ಷಣ ಇಲಾಖೆ ಅನುಕಂಪ ಆಧಾರಿತ ನೌಕರಿ, ಸುತ್ತೋಲೆ
ಬೆಂಗಳೂರು, ಜುಲೈ 22: ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ಹಲವು ನಿಯಮಗಳಿವೆ. ಆದರೆ ಬೇರೆ-ಬೇರೆ ಇಲಾಖೆಗಳ ನಿಯಮಗಳಲ್ಲಿ ಕೆಲವು ಬದಲಾವಣೆ ಇದೆ. ಶಿಕ್ಷಣ ಇಲಾಖೆಯಲ್ಲಿ ಈ ಕುರಿತು ಇರುವ ನಿಯಮಗಳ ಬಗ್ಗೆ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಸುತ್ತೋಲೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಸುತ್ತೋಲೆಯು ಅನುಕಂಪದ ಆಧಾರದ ಮೇಲೆ ನೌಕರಿ ಕೋರಿ ಸಲ್ಲಿಸುತ್ತಿರುವ ಪ್ರಸ್ತಾವನೆಗಳನ್ನು ಕ್ರಮವಾಗಿ ಪರಿಶೀಲಿಸದೇ, ಅಪೂರ್ಣ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಅನುಕಂಪದ ಆಧಾರದ ಮೇರೆಗೆ ನೇಮಕಾತಿ ನೀಡುವ ಬಗ್ಗೆ ಸರ್ಕಾರದ ಅಧಿಸೂಚನೆಗಳಲ್ಲಿ ಹಾಗೂ ಕಾಲಕಾಲಕ್ಕೆ ಹೊರಡಿಸಿರುವ ಸರ್ಕಾರದ ಆದೇಶಗಳ ಪ್ರಕಾರ ಮತ್ತು ಕಛೇರಿಯಿಂದ ನೀಡಿರುವ ಸುತ್ತೋಲೆಗಳು ಮತ್ತು ವಿಡಿಯೋ ಸಂವಾದದಲ್ಲಿ ನೀಡಿರುವ ನಿರ್ದೇಶನದಂತೆ, ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಗಳೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರುಗಳು ಮತ್ತು ವಿಭಾಗೀಯ ಸಹ ನಿರ್ದೇಶಕರುಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಅನುಕಂಪದ ಆಧಾರದ ನೇಮಕಾತಿ ಪ್ರಸ್ತಾವನೆಗಳನ್ನು ಯಾವುದೇ ವಿಳಂಬವಿಲ್ಲದಂತೆ ಸೂಕ್ತ ಆಯಾ ನೇಮಕಾತಿ ಪ್ರಾಧಿಕಾರಿಯವರಿಗೆ ಕಳುಹಿಸಲು ಸೂಚಿಸಲಾಗಿರುತ್ತದೆ.
ಅನುಕಂಪದ ಆಧಾರಿತ ನೇಮಕಾತಿ ಪ್ರಸ್ತಾವನೆಗಳ ಬಗ್ಗೆ ಅಧೀನ ಕಛೇರಿಗಳಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದವಾಗದಂತ ಆಯಾ ಕಛೇರಿ ಮುಖ್ಯಸ್ಥರು/ ಬಿಇಒ/ ಸಹನಿರ್ದೇಶಕರು/ ಉಪ ನಿರ್ದೇಶಕರು ಕ್ರಮವಹಿಸಲು ಮತ್ತು ಸ್ವಯಂ ಎಚ್ಚರಿಕೆ ವಹಿಸಲು ಅನುವಾಗುವಂತೆ ಸೂಚನೆಗಳನ್ನು ನೀಡಿ, ಪಾಲಿಸಲು ತಿಳಿಸಲಾಗಿದೆ.
ನಿಯಮಗಳು ಹೇಳುವುದೇನು?
* ಇಲಾಖೆಯ ಮೃತ ಸಿಬ್ಬಂದಿಗಳು ಸಹೋದ್ಯೋಗಿ ಮಿತ್ರರೇ ಆಗಿದ್ದು, ಸಂಕಷ್ಟದಲ್ಲಿರುವ ಇಲಾಖಾ ಸಿಬ್ಬಂದಿಗಳು ಆ ಕುಟುಂಬಕ್ಕೆ ನೈತಿಕ ಸ್ಥೈರ್ಯವನ್ನು ತುಂಬುವುದು ಮತ್ತು ಸರ್ಕಾರಿ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸುವುದು ಎಲ್ಲಾ ಸಂಬಂಧಿತ ಅಧಿಕಾರಿ/ ನೌಕರರ ಜವಾಬ್ದಾರಿಯಾಗಿರುತ್ತದೆ. ಇದಕ್ಕಾಗಿ ಆಯಾ ಕಛೇರಿ/ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿನ ಅಂತಹ ಮೃತರ ಕುಟುಂಬ ಸದಸ್ಯರಿಗೆ ಸಕಾಲದಲ್ಲಿ ಅನುಕಂಪದ ಆಧಾರಿತ ನೇಮಕಾತಿ ಬಗ್ಗೆ ಅರ್ಜಿಯನ್ನು ಕ್ರಮವಾಗಿ ಸಲ್ಲಿಸುವ ಬಗ್ಗೆ ಆಯಾ ಕಛೇರಿಯ ಮುಖ್ಯಸ್ಥರು ವಿಳಂಬವಿಲ್ಲದಂತೆ ಅಗತ್ಯ ತಿಳುವಳಿಕೆಯನ್ನು ನೀಡಲು ಕ್ರಮವಹಿಸುವುದು.
* ಅನುಕಂಪದ ಆಧಾರಿತ ನೇಮಕಾತಿಗೆ ಇರುವ ನಿಯಮಗಳು ಮತ್ತು ಅಗತ್ಯವಿರುವ ದಾಖಲೆಗಳು ಹಾಗೂ ಚೆಕ್‌ಲಿಸ್ಟ್/ ನಮೂನೆಗಳನ್ನು ನೀಡಿ ಅನುಕಂಪದ ಆಧಾರಿತ ನೇಮಕಾತಿ ಕೋರುವ ಅರ್ಜಿದಾರರಿಗೆ ಸಕಾಲದಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಲು ಅನುವಾಗುವಂತೆ ಕ್ರಮವಹಿಸುವುದು.
* ಅರ್ಜಿದಾರರಿಂದ ಸ್ವೀಕೃತವಾಗುವ ಸದರಿ ಪ್ರಸ್ತಾವನೆಗಳನ್ನು ವಿಳಂಬವಿಲ್ಲದಂತೆ ಕಛೇರಿಯ ಕಾರ್ಯವಿಧಾನದಂತೆ ಕನಿಷ್ಠ ಕಾಲಾವಧಿಯೊಳಗೆ ಮೇಲು ಕಛೇರಿಗೆ ಸಲ್ಲಿಸಲು ಆಯಾ ಕಛೇರಿ ಮುಖ್ಯಸ್ಥರು ಕ್ರಮ ವಹಿಸಲು ಮತ್ತು ಆಯಾ ಕಛೇರಿಗೆ ಸಲ್ಲಿಸಿದ ದಿನಾಂಕದವರೆಗೆ ವಿವಿಧ ನೌಕರರ/ ಅಧಿಕಾರಿಗಳ ಹಂತದಲ್ಲಿ ತೆಗೆದುಕೊಂಡ ಕಾಲಾವಧಿ ಕುರಿತಂತೆ ದಿನಚರಿ/ ಕಾಲಾನುಕ್ರಮಣಿಕೆಯನ್ನು ದೃಡೀಕರಿಸಿ ಲಗತ್ತಿಸಿ ಸಲ್ಲಿಸುವುದು. ಹಾಗೆಯೇ ಸಲ್ಲಿಸುವ ಪ್ರಸ್ತಾವನೆಗಳೊಂದಿಗೆ ಪ್ರಸ್ತಾವನೆಯನ್ನು ಮೇಲ್ಕಛೇರಿಗೆ ಸಲ್ಲಿಸಲು ಕನಿಷ್ಠ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿದ್ದು, ಯಾವುದೇ ಅನಗತ್ಯ ವಿಳಂಬ ಸಂಭವಿಸಿಲ್ಲ ಎಂಬುದಾಗಿ ಆಯಾ ಕಛೇರಿ ಮುಖ್ಯಸ್ಥರು ಪ್ರತ್ಯೇಕವಾದ ಒಂದು ದೃಢೀಕರಣವನ್ನು ಸಹ ಲಗತ್ತಿಸಿ ಸಲ್ಲಿಸುವುದು.
* ಸದರಿ ಪ್ರಸ್ತಾವನೆಗಳೊಂದಿಗೆ ಸದರಿ ಕಡತ ನಿರ್ವಹಣೆಗೆ ಆಯಾ ಕಛೇರಿಯಲ್ಲಿ ತೆಗೆದುಕೊಂಡಿರುವ ಕಾಲಾವಧಿ ಬಗ್ಗೆ ವಿವರವಾದ ಕಾಲಾನುಕ್ರಮಣಿಕೆ ಅಂದರೆ, ಆಯಾ ಕಾರ್ಯ ನಿರ್ವಾಹಕರು/ ಅಧೀಕ್ಷಕರು/ ವ್ಯವಸ್ಥಾಪಕರು/ ಪತ್ರಾಂಕಿತ ಸಹಾಯಕರ ಹಂತಗಳಲ್ಲಿ ತೆಗೆದುಕೊಂಡಿರುವ ಕಾಲಾವಧಿ ದಿನಚರಿಯನ್ನು ನಮೂದಿಸಿ ದೃಡೀಕರಿಸಿ ಉಪ ನಿರ್ದೇಶಕರು/ ಕಛೇರಿ ಮುಖ್ಯಸ್ಥರು ಮೇಲು ಕಛೇರಿಗೆ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿರುವುದರಿಂದ ವಿಳಂಬವಾಗುವುದರ ತಡೆಗೆ ಒಂದು ಸ್ವಯಂ ಎಚ್ಚರಿಕೆ ಪರಿಣಾಮವನ್ನು ತರಬಹುದಾಗಿದೆ. ಇದರಿಂದ ಪ್ರಸ್ತಾವನೆ ನಿರ್ವಹಣೆಯಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಬಹುದಾಗಿರುತ್ತದೆ.
* ಇನ್ನು ಮುಂದೆ ಎಲ್ಲಾ ಅನುಕಂಪದ ಆಧಾರಿತ ಪುಸ್ತಾವನೆಗಳನ್ನು ಮೇಲು ಕಛೇರಿಗೆ ಸಲ್ಲಿಸುವಾಗ ಈ ಹಿಂದೆ ನಿಗಧಿಪಡಿಸಿರುವ ಚೆಕ್ ಲೀಸ್ಟ್ ನೊಂದಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಜೊತೆಗೆ ಮೇಲಿನಂತೆ ಸಂಪೂರ್ಣ ಕಾಲಾನುಕ್ರಮಣಿಕೆ ಮತ್ತು ದೃಡೀಕರಣವನ್ನು ಸಹ ಆಯಾ ಉಪ ನಿರ್ದೇಶಕರು/ ಸಹ ನಿರ್ದೇಶಕರು ಕಡ್ಡಾಯವಾಗಿ ಲಗತ್ತಿಸುವುದು. ಅಧೀನ ಕಛೇರಿಗಳಿಂದಲೂ ಸದರಿ ಕಾಲಾನುಕ್ರಮಣಿಕೆ/ ದೃಡೀಕರಣವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು ಮತ್ತು ಕಾಲಾನುಕಮಣಿಕೆಯನ್ನು ಪರಿಶೀಲಿಸಿ, ಅಸಾಧಾರಣ ವಿಳಂಬ ಪಸಂಗಗಳಲ್ಲಿ ಸದರಿ ಅಧಿಕಾರಿ/ ಸಿಬ್ಬಂದಿಯವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
* ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಕ್ರಮವಾಗಿ ಪರಿಶೀಲಿಸಿ, ಅರ್ಜಿದಾರರಿಗೆ ಸೂಕ್ತ ನಿರ್ದೇಶನ ನೀಡಿ, ಅಗತ್ಯವಾದ ಎಲ್ಲಾ ಪೂರಕ ದಾಖಲೆಗಳನ್ನು ಪಡೆದು ಪರಿಶೀಲಿಸಿ ಆಕ್ಷೇಪಣೆ ರಹಿತವಾದ ಹಾಗೂ ಪರಿಪೂರ್ಣವಾದ ಪ್ರಸ್ತಾವನೆಗಳನ್ನು ವಿಳಂಬ ನೀತಿ ಅನುಸರಿಸದೇ ಕಾಲಾನುಕ್ರಮಣಿಕೆಯನ್ನು ಸಹ ದಾಖಲಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದೆ.
* ತುಂಬಾ ಹಳೆಯ ಪ್ರಕರಣಗಳು ಬಾಕಿ ಇರುವುದರ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ತಮ್ಮ ಕಛೇರಿಯಲ್ಲಿನ ಕಡತಗಳನ್ನು ಪರಿಶೀಲಿಸಿಕೊಂಡು ಪ್ರಕರಣಗಳ ಬಗ್ಗೆ ಖುದ್ದು ಆಸಕ್ತಿವಹಿಸಿ, ಅರ್ಜಿದಾರರ ಮಾಹಿತಿಗಳನ್ನು ಸಲ್ಲಿಸುವುದರಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸದರಿ ಅರ್ಜಿದಾರರಿಂದ ಮಾಹಿತಿಯನ್ನು ಪಡೆದು ಪರಿಶೀಲಿಸತಕ್ಕದ್ದು ಮತ್ತು ಅಗತ್ಯ ಮಾರ್ಗದರ್ಶನವನ್ನು ಸಹ ನೀಡಿ ಮತ್ತಷ್ಟು ವಿಳಂಬವಾಗದಂತೆ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸುವುದು.
* ಆಕ್ಷೇಪಣೆಯಾದ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ 2 ದಿನಗಳೊಳಗಾಗಿ ಮಾಹಿತಿ ನೀಡಿ, ಆಕ್ಷೇಪಣಾರ್ಹ ಅಂಶಗಳು ಮತ್ತು ಪೂರಕ ದಾಖಲೆಗಳನ್ನು ಒಂದು ವಾರದೊಳಗೆ ಸಲ್ಲಿಸುವಂತೆ ತಿಳಿಸಿ, ದಾಖಲೆಗಳನ್ನು ಪಡೆದು ತಕ್ಷಣ ವಿಳಂಬವಿಲ್ಲದ ಕಛೇರಿಗೆ ಸಲ್ಲಿಸುವ ಎಲ್ಲಾ ಅಗತ್ಯ ಕ್ರಮ ವಹಿಸುವುದು.
* ಒಂದು ವೇಳೆ ಅರ್ಜಿದಾರರು ಪೂರಕ ದಾಖಲೆಗಳನ್ನು ಸಲ್ಲಿಸಲು ವಿಳಂಬವಾಗುವ ಸನ್ನಿವೇಶಗಳು ಕಂಡುಬಂದಲ್ಲಿ ಅವರಿಂದ ಮುಚ್ಚಳಿಕೆ ಪತ್ರವನ್ನು ಪಡೆದು ಕಡತದೊಂದಿಗೆ ಸಲ್ಲಿಸುವುದು. ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಅರ್ಜಿದಾರರಿಂದ ಪಡೆದು ತಕ್ಷಣ ಪರಿಶೀಲಿಸಿ, ನೇಮಕಾತಿಯ ನೀಡುವವರೆಗಿನ ಎಲ್ಲಾ ಪಕ್ರಿಯೆಯು 3 ತಿಂಗಳೊಳಗೆ ಮುಕ್ತಾಯವಾಗುವಂತೆ ಕ್ರಮವಹಿಸಲು ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದೆ ಹಾಗೂ 3 ತಿಂಗಳ ಕಾಲಮಿತಿಯನ್ನು ನಿಗಧಿಪಡಿಸಿದೆ.
* ಸೂಚನೆಗಳನ್ನು ಪಾಲಿಸದೇ, ಆಕ್ಷೇಪಣಾರ್ಹ ಪ್ರಸ್ತಾವನೆಗಳು ಮೇಲಧಿಕಾರಿಗಳಿಗೆ ಸಲ್ಲಿಕೆಯಾದಲ್ಲಿ ಇದನ್ನು ಗಮನಿಸಿ, ಸಂಬಂಧಿಸಿದ ವಿಷಯ ನಿರ್ವಾಹಕರು/ ಅಧೀಕ್ಷಕರು/ ಪತ್ರಾಂಕಿತ ವ್ಯವಸ್ಥಾವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಪತ್ರಾಂಕಿತ ಸಹಾಯಕರು ಮತ್ತು ಉಪ ನಿರ್ದೇಶಕರುಗಳು/ ಸಹ ನಿರ್ದೇಶಕರುಗಳನ್ನೇ ನೇರ ಜವಾಬ್ದಾರನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ.












Click it and Unblock the Notifications