KPSC Recruitment: ಕೆಪಿಎಸ್‌ಸಿ ನೇಮಕಾತಿಯಲ್ಲಿ ವಿಳಂಬ ಏಕೆ, ವಿವರ
ಬೆಂಗಳೂರು, ಜುಲೈ 29: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ವಿವಿಧ ಇಲಾಖೆಗಳ ಹಲವು ವೃಂದಗಳ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಆದರೆ ನೇಮಕಾತಿಗಳು ವಿಳಂಬವಾಗುತ್ತಿವೆ ಎಂಬುದು ಆರೋಪ. ಈ ಕುರಿತು ವಿಧಾನಸಭೆ ಕಲಾಪದಲ್ಲಿಯೂ ಚರ್ಚೆ ನಡೆದಿದೆ.
ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ (ಖಾನಾಪುರ) ಕೆಪಿಎಸ್‌ಸಿ ನೇಮಕಾತಿ ಕುರಿತು ಕೇಳಿದ್ದ ಪ್ರಶ್ನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ವಿವಿಧ ಇಲಾಖೆಗಳ ನೇಮಕಾತಿ ವಿವರ, ವಿಳಂಬಕ್ಕೆ ಕಾರಣಗಳನ್ನು ವಿವರಿಸಿದ್ದಾರೆ.

ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇಮಕಾತಿ ಹಂತದಲ್ಲಿರುವ ವಿವಿಧ ಪರೀಕ್ಷೆಗಳು ಯಾವುವು?. ಕಳೆದ ಒಂದು ವರ್ಷದಲ್ಲಿ ಈ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿರುವ ಅಧಿಸೂಚನೆಗಳು ಎಷ್ಟು?. ನೇಮಕಾತಿ ಪ್ರಕ್ರಿಯೆ ವಿಳಂಬವಾಗಲು ಕಾರಣಗಳೇನು? ಎಂದು ಪ್ರಶ್ನಿಸಲಾಗಿತ್ತು.
ಮುಖ್ಯಮಂತ್ರಿಗಳ ಉತ್ತರ: ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ಆಯೋಗದಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳು/ ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ನಡೆಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ.
* ವಿವಿಧ ನೇಮಕಾತಿ ಪ್ರಾಧಿಕಾರಗಳಿಂದ ಸ್ವೀಕೃತವಾಗುವ ಪ್ರಸ್ತಾವನೆಗಳಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿದ್ದು ಅದರಲ್ಲೂ ವಿಶೇಷವಾಗಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನ್ಯೂನತೆಗಳಿದ್ದಲ್ಲಿ ಅವುಗಳ ಬಗ್ಗೆ ಸೃಷ್ಟೀಕರಣ/ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಆಯೋಗವು ಕೋರಿದ ಸಂದರ್ಭದಲ್ಲಿ ಅವುಗಳನ್ನು ನೀಡಲು ನೇಮಕಾತಿ ಪ್ರಾಧಿಕಾರಗಳು ಕಾಲಾವಕಾಶ ತೆಗೆದುಕೊಳ್ಳುತ್ತಿರುವುದು.
* ಕರ್ನಾಟಕ ನಾಗರಿಕ ಸೇವೆಯ ವಿವಿಧ ವೃಂದದ ಹುದ್ದೆಗಳನ್ನು ನೇಮಕಾತಿ ಮಾಡುವ ಸಲುವಾಗಿ ವಿವಿಧ ಇಲಾಖೆಗಳ ಆಯ್ಕೆ ಪ್ರಾಧಿಕಾರಗಳು/ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ ವಿಶ್ವವಿದ್ಯಾಲಯಗಳು/ ಮಂಡಳಿಗಳಲ್ಲದೆ ಕೇಂದ್ರ ಲೋಕಸೇವಾ ಆಯೋಗಗಳಿಂದ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಹಲವಾರು ಪರೀಕ್ಷೆಗಳು ನಡೆಸಲಾಗುತ್ತಿದ್ದು ಈ ದಿನಾಂಕಗಳಲ್ಲದೆ ಹಬ್ಬಗಳು/ ಜಯಂತಿಗಳು/ ರಾಷ್ಟ್ರೀಯ ದಿನಾಚರಣೆಗಳ ದಿನಾಂಕಗಳನ್ನು ಹೊರತುಪಡಿಸಿ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಬೇಕಿರುತ್ತದೆ.
* ಆಯ್ಕೆಗೊಂಡ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನಾ ಕಾರ್ಯಕ್ಕೆ ಹಾಜರಾಗುವ ಅಭ್ಯರ್ಥಿಗಳು ಕೆಲವು ಸಂದರ್ಭಗಳಲ್ಲಿ ಕೆಲವು ದಾಖಲೆಗಳನ್ನು ಹಾಜರುಪಡಿಸಲು ಕಾಲಾವಕಾಶಗಳನ್ನು ತೆಗೆದುಕೊಳ್ಳುತ್ತಿದ್ದು ನಿಗದಿತ ಸಮಯದಲ್ಲಿ ದಾಖಲೆಗಳನ್ನು ಸಲ್ಲಿಸದೇ ಇರುವುದು.
* ಆಯೋಗವು ಅಧಿಸೂಚಿಸುವ ಕೆಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ವಿಕಲಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಕಾರ್ಯವನ್ನು ಮಾಡಿಸಬೇಕಾಗಿದ್ದರಿಂದ ವಿಳಂಬವಾಗಿರುತ್ತದೆ. ಪ್ರತಿ ನೇಮಕಾತಿ ಪ್ರಕ್ರಿಯೆಗಳಲ್ಲಿಯೂ ಅಭ್ಯರ್ಥಿಗಳು ಕಾನೂನು ಪ್ರಕರಣಗಳನ್ನು ದಾಖಲಿಸುತ್ತಿರುವುದು.
* ಆಯೋಗಕ್ಕೆ ಖಾಯಂ/ ಗುತ್ತಿಗೆ ಹೊರಗುತ್ತಿಗೆ ಎಲ್ಲಾ ವೃಂದದ ಹುದ್ದೆಗಳನ್ನು ಸೇರಿಸಿ ಒಟ್ಟು 380 ಹುದ್ದೆಗಳು ಮಂಜೂರಾಗಿದ್ದು ಹಲವಾರು ಅಧಿಕಾರಿ/ ನೌಕರರು ವಯೋನಿವೃತ್ತಿ/ ನಿಧನ / ಸ್ವಯಂನಿವೃತ್ತಿ/ ಸೇವೆಯಿಂದ ಬಿಡುಗಡೆ ಮತ್ತಿತರ ಕಾರಣಗಳಿಂದಾಗಿ 210 ಹುದ್ದೆಗಳು ತೆರವಾಗಿದ್ದು, ಅದರಲ್ಲಿ ಹೊರಗುತ್ತಿಗೆ 88 ನೌಕರರನ್ನು ಭರ್ತಿ ಮಾಡಿಕೊಂಡಿದ್ದರೂ ಸಹ 122 ಹುದ್ದೆಗಳು ಖಾಲಿ ಇರುತ್ತವೆ.
ನೇಮಕಾತಿ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಹಾಕಿಕೊಂಡು ಗುರಿಯನ್ನು ನಿಗದಿಪಡಿಸಿಕೊಳ್ಳಲಾಗುತ್ತದೆ. ಅಲ್ಲದೇ ವಿಳಂಬವನ್ನು ತಡೆಗಟ್ಟಿ, ನೇಮಕಾತಿ ಪಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಯೋಗದ ಅಧಿಕಾರಿ/ ನೌಕರರು ನಿಗದಿತ ಕಛೇರಿ ವೇಳೆಯ ಮುನ್ನ ಮತ್ತು ನಂತರ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅಲ್ಲದೇ ವಿಳಂಬವನ್ನು ತಡೆಗಟ್ಟಲು ನೇಮಕಾತಿಯ ವಿವಿಧ ಹಂತಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪರಿಶೀಲಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications