ಪ್ರೌಢಶಾಲೆಗಳಲ್ಲಿ ತೆರವಾದ ಹುದ್ದೆ ಭರ್ತಿಗೆ ಒಪ್ಪಿಗೆ, ಮಾರ್ಗಸೂಚಿ
ಬೆಂಗಳೂರು, ಮಾರ್ಚ್ 02: ಕರ್ನಾಟಕ ಸರ್ಕಾರ ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ನಿಧನ, ನಿವೃತ್ತಿ, ರಾಜೀನಾಮೆ ಮತ್ತು ಇತರ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಿದೆ. ಈ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಅದಕ್ಕಾಗಿ ಅನುಸರಿಸುವ ಕ್ರಮಗಳ ಕುರಿತು ಮಾರ್ಗಸೂಚಿಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983 ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸೇವಾ ಷರತ್ತು ನಿಯಮ 1999ರ ಅನುಬಂಧ-4. ಸರ್ಕಾರದ ಸುತ್ತೋಲೆ ದಿನಾಂಕ 25-11-2024, ಮಾನ್ಯ ಜಂಟಿ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ ಇವರ ಟಿಪ್ಪಣಿ ದಿನಾಂಕ 18-02-2025 ಉಲ್ಲೇಖಿಸಿ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ.

ರಾಜ್ಯ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ದಿನಾಂಕ 01-01-2016 ರಿಂದ 31-12-2020ರವರೆಗೆ ನಿಧನ, ನಿವೃತ್ತಿ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಆದೇಶದಲ್ಲಿ ಅನುಮತಿ ನೀಡಲಾಗಿದೆ. ಆದೇಶದಲ್ಲಿ ಅನುದಾನಿತ ಪ್ರೌಢಶಾಲೆಗಳ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆಯನ್ನು ಆನ್‌ಲೈನ್ ತಂತ್ರಾಂಶದ ಮೂಲಕ ನಿರ್ವಹಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಪ್ರಸ್ತಾವನೆಗಳನ್ನು ವ್ಯವಹರಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳ ನೇಮಕಾತಿ ಪ್ರಕ್ರಿಯೆಯನ್ನು ಆನ್‌ಲೈನ್ ಮುಖಾಂತರ ನಿರ್ವಹಿಸಲು ಕ್ರಮವಹಿಸಲಾಗುತ್ತಿದೆ. ದಿನಾಂಕ 28-10-2024ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತಗೆದುಕೊಂಡ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದೆಂದು ಸೂಚಿಸಲಾಗಿತ್ತು, ಅದರಂತೆ ತಂತ್ರಾಶ ಬಿಡುಗಡೆ ತಡೆಹಿಡಿಯಲಾಗಿತ್ತು.
ಖಾಸಗಿ ಅನುದಾನಿತ ಶಾಲೆಗಳ ಎಲ್ಲಾ ಬೋಧಕ ಮತ್ತು ಬೋಧನೇತರ ನೌಕರರ ಮಾಹಿತಿಯನ್ನು ಇಂದೀಕರಿಸಲು ಸೂಚಿಸಲಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಅನುದಾನಿತ ಶಾಲೆಗಳ ಮಾಹಿತಿಯನ್ನು ಇ.ಇ.ಎಸ್ ತಂತ್ರಾಂಶದಲ್ಲಿ ಇಂದೀಕರಿರವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು ಎಂದು ಹೇಳಿದೆ.
ಪ್ರೌಢಶಾಲೆಗಳಲ್ಲಿ ನಿಧನ, ನಿವೃತ್ತಿ, ರಾಜೀನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ತಂತ್ರಾಂಶದ ಮೂಲಕ ವ್ಯವಹರಿಸಲು ಮೊದಲನೇ ಹಂತದಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳ ಮಂಜೂರಾದ, ಕಾರ್ಯನಿರ್ವಹಿಸುತ್ತಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಅಪ್‌ಡೇಟ್ ಮಾಡುವ ಕಾರ್ಯವನ್ನು ಡಿಡಿಓಗಳಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ವಹಿಸಬೇಕಿರುತ್ತದೆ.
* ತಮ್ಮ ವ್ಯಾಪ್ತಿಯ ಎಲ್ಲಾ ಖಾಸಗಿ ಅನುದಾನಿತ ಪ್ರೌಢಶಾಲೆಗಳ ಮಾಹಿತಿ ಮತ್ತು ಸಂಬಂಧಿಸಿದ ದಾಖಲೆಗಳನ್ನು (ಶಾಲಾ ಅನುದಾನಕ್ಕೆ ಒಳಪಟ್ಟ ಆದೇಶ, ಅನುದಾನ ಸಹಿತವಾಗಿ ಅನುಮೋದನೆಗೊಂಡ ಶಿಕ್ಷಕರ ಆದೇಶದ ಪ್ರತಿ, ಶಾಲಾ ಮಾನ್ಯತೆ ನವೀಕರಣ ಇತ್ಯಾದಿ) ಸಂಗ್ರಹಿಸುವುದು.
* ತಂತ್ರಾಂಶದಲ್ಲಿ ಲಾಗಿನ್ ಆದ ನಂತರ ತಮ್ಮ ವ್ಯಾಪ್ತಿಯ ಎಲ್ಲಾ ಖಾಸಗಿ ಅನುದಾನಿತ ಪ್ರೌಢಶಾಲೆಗಳ ಮಾಹಿತಿಯು ಲಭ್ಯವಾಗುವುದು. ಯಾವುದೇ ಶಾಲೆಯ ಮಾಹಿತಿ ಇಲ್ಲದಿರುವುದು ಕಂಡುಬಂದಲ್ಲಿ ಎಸ್.ಎ.ಟಿ.ಎಸ್ ತಂತ್ರಾಂಶದಲ್ಲಿ ಸದರಿ ಶಾಲೆಯ ಮಾಹಿತಿಯನ್ನು ಪರಿಶೀಲಿಸಿ ಇಂದೀಕರಿಸುವುದು.
* ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಾಹಿತಿ ಲಭ್ಯವಿರುವುದನ್ನು ಖಚಿತಪಡಿಸಿಕೊಂಡ ನಂತರ ಶಾಲಾವಾರು ಮಾಹಿತಿ ಇಂದೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸುವುದು. ಪ್ರತಿ ಮಂಜೂರಾದ ಹುದ್ದೆಯ ವಿಷಯ ಮತ್ತು ಮಾಧ್ಯಮಕ್ಕೆ ಅನುಸಾರವಾಗಿ Dropdownನಲ್ಲಿ ಆಯ್ಕೆ ಮಾಡುವುದು.
* ಹುದ್ದೆಯು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಯ ಅಥವಾ ಖಾಲಿ ಹುದ್ದೆಯೆ ಎಂಬ ಮಾಹಿತಿಯನ್ನು Dropdown ನಲ್ಲಿ ಆಯ್ಕೆ ಮಾಡುವುದು. ಕಾರ್ಯನಿರ್ವಹಿಸುತ್ತಿರುವ ಹುದ್ದೆಯಾಗಿದ್ದಲ್ಲಿ ತಂತ್ರಾಂಶದಿಂದ ಶಿಕ್ಷಕರ ಜೀವವಿಮೆ ಪಾಲಿಸಿ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಶಿಕ್ಷಕರ ಹೆಸರು ಲಭ್ಯವಾಗುವುದು. ಸದರಿ ಶಿಕ್ಷಕರ ಅನುದಾನಸಹಿತ ಅನುಮೋದನೆಯಾದ ಆದೇಶ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಆದೇಶದ ಪ್ರತಿಯನ್ನು ಆಪ್‌ಲೋಡ್ ಮಾಡುವುದು.
* ಖಾಲಿ ಹುದ್ದೆಯಾಗಿದ್ದಲ್ಲಿ ಖಾಲಿ ಹುದ್ದೆ ಉದ್ಭವವಾದ ಕಾರಣಕ್ಕೆ ಸಂಬಂಧಿಸಿದ ದಾಖಲೆಯನ್ನು ಅಪ್‌ಲೋಡ್ ಮಾಡಿ ಖಾಲಿ ಹುದ್ದೆ ಉದ್ಭವವಾದ ದಿನಾಂಕವನ್ನು ನಮೂದಿಸುವುದು ಮತ್ತು ಕಾರಣವನ್ನು ನಿಗದಿತ Text Box ನಲ್ಲಿ ನಮೂದಿಸುವುದು. ಸದರಿ ಖಾಲಿಯಾದ ಹುದ್ದೆಯೇ ಎಂದು Drop down ನಲ್ಲಿ Yes/No ಎಂದು ಆಯ್ಕೆ ಮಾಡುವುದು.
* ಎಲ್ಲಾ ಹುದ್ದೆಗಳ ಮಾಹಿತಿಯನ್ನು ಇಂದೀಕರಿಸಿದ ನಂತರ ಶಾಲೆಗೆ ಅಗತ್ಯವಿರುವ ಖಾಲಿಹುದ್ದೆ ಮತ್ತು ಹೆಚ್ಚುವರಿ ಹುದ್ದೆಯ ಮಾಹಿತಿ ಲಭ್ಯವಾಗುವುದು. ತಂತ್ರಾಂಶದಲ್ಲಿ ಇಂದೀಕರಿಸಿರುವ ಮಾಹಿತಿಯನ್ನು ಪಿ.ಡಿ.ಎಫ್ ನಮೂನೆಯಲ್ಲಿ ಪಡೆದು ಸರಿ ಇರುತ್ತದೆ ಎಂದು ದೃಢೀಕರಿಸಿ ಸಹಿ ಮಾಡಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದು ಹಾಗೂ ಕೊನೆಯಲ್ಲಿ Approve ಮಾಡಿ ಪ್ರಕ್ರಿಯೆಯನ್ನು ಅಂತಿಮಗೊಳಿಸುವುದು.












Click it and Unblock the Notifications