ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ರಾಜ್ಯ ಸರ್ಕಾರ ಮಸೂದೆ ತಡೆಹಿಡಿದಿದ್ದೇಕೆ?
ಬೆಂಗಳೂರು, ಜುಲೈ, 17: ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ಸಿಎಂ ಕಚೇರಿ ಮಾಧ್ಯಮಗ ಪ್ರಕಟಣೆ ಹೊರಡಿಸಿದ್ದು, ಕನ್ನಡಿಗರ ಮೀಸಲಾತಿ ವಿಧೇಯಕವನ್ನು ಪುನರ್ ಪರಿಶೀಲಿಸುತ್ತೇವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್, ಸಂತೋಷ್ ಲಾಡ್ ಹಾಗೂ 4 ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗುತ್ತದೆ. ಕ್ಯಾಬಿನೆಟ್‌ನಲ್ಲಿ ಸೂಕ್ತ ಮಾಹಿತಿ ಹಂಚಿಕೆಯಾಗದೆ, ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಈ ಅಧಿವೇಶನದಲ್ಲಿ ವಿಧೇಯಕ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇಕಡ 50ರಷ್ಟು ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇಕಡ 75ರಷ್ಟು ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿತ್ತು.
ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೊಶ: ಇದರ ಬೆನ್ನಲ್ಲೇ ಈ ಮಸೂದೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಕಂಪನಿಯವರು ವಿರೋಧ ವ್ಯಕ್ತಪಡಿಸಿದ್ದು, ಕಿರಣ್ ಮಜುಂದಾರ್, ಮೋಹನ್ ದಾಸ್ ಪೈ ಸೇರಿದಂತೆ ಹಲವು ಉದ್ಯಮಿಗಳು ರಾಜ್ಯ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಖಾಸಗಿ ಕಂಪನಿಯವರು ಹೇಳೋದೇನು?: ಈ ರೀತಿಯ ಕ್ರಮದಿಂದ ಐಟಿ ಉದ್ಯಮಕ್ಕೆ ತೊಂದರೆ ಆಗಲಿದೆ. ಉದ್ಯಮದಲ್ಲಿ ಗುಣಮಟ್ಟದ ಸೇವೆ ನೀಡಲು ಸಮಸ್ಯೆ ಆಗುತ್ತದೆ ಎಂದು ಉದ್ಯಮಿಗಳು ಆಕ್ರೊಶ ಹೊರಹಾಕಿದ್ದರು. ಕೆಲವರಂತೂ ಇದು ತಾರತಮ್ಯದ ಮಸೂದೆ ಎಂದು ಆಕ್ಷೇಪ ವ್ಯಕ್ತಪಸಿಡಿದ್ದರು. ಅಲ್ಲದೆ, ಕೆಲ ಐಟಿ-ಬಿಟಿಗಳು ಕೂಡ ಸರ್ಕಾರಕ್ಕೆ ನೀಡಿದ್ದವು. ಹೀಗೆ ಉದ್ಯಮ ವಲಯದಲ್ಲಿ ಆಕ್ಷೇಪ ಕೇಳಿಬಂದ ಬಳಿಕ ಎಚ್ಚೆತ್ತ ಸರ್ಕಾರ, ಮೀಸಲಾತಿ ಮಸೂದೆ ಮಂಡನೆ ನಿರ್ಧಾರದಿಂದ ಹಿಂದೆ ಸರಿದಿದೆ.
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ.
— Siddaramaiah (@siddaramaiah) July 17, 2024
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು.
ಮಸೂದೆಯ ಮುಖ್ಯಾಂಶಗಳು
* ಆಡಳಿತಾತ್ಮಕ ಹುದ್ದೆಗೆ ಶೇಕಡ 50 (ಸೂಪರ್‌ವೈಸರ್, ವ್ಯವಸ್ಥಾಪಕ, ಟೆಕ್ನಿಕಲ್ ಇತರೆ ಉನ್ನತ ಹುದ್ದೆಗಳು)
* ಆಡಳಿತೇತರ ಹುದ್ದೆಗೆ ಶೇಕಡ 75 (ಕೌಶಲ ರಹಿತ, ಅರೆ ಕೌಶಲ ಗುತ್ತಿಗೆ ನೌಕರ)
* ಉಲ್ಲಂಘಿಸಿದರೆ 25,000 ರೂಪಾಯಿವರೆಗೆ ದಂಡ, ಕನಿಷ್ಟ 10,000 ಸಾವಿರ ರೂಪಾಯಿ, ಗರಿಷ್ಟ 25,000 ರೂಪಾಯಿ.
* ದಂಡ ವಿಧಿಸಿದ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂಪಾಯಿ ದಂಡ.
ಕನ್ನಡಿಗರಿಗೆ ಅರ್ಹತೆ ಹೇಗೆ?
* ಕರ್ನಾಟಕದಲ್ಲಿ ಹುಟ್ಟಿರಬೇಕು.
* ಕರ್ನಾಟಕದಲ್ಲಿ 15 ವರ್ಷ ವಾಸ ಇರಬೇಕು.
* ಕನ್ನಡ ಓದಲು, ಬರೆಯಲು ಮಾತನಾಡಲು ಬರಬೇಕಾಗುತ್ತದೆ.
* ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕಾಗುತ್ತದೆ.












Click it and Unblock the Notifications