ಸಹೋದರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗವಿಲ್ಲ; ಹೈಕೋರ್ಟ್
ಬೆಂಗಳೂರು, ಸೆಪ್ಟೆಂಬರ್ 14; ಸರಕಾರಿ ನೌಕರರು ಮೃತಪಟ್ಟಲ್ಲಿ ಅವರ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲು ಸಾಧ್ಯವಿಲ್ಲ, ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ತುಮಕೂರು ಜಿಲ್ಲೆ ಗೆದ್ಲಹಳ್ಳಿಯ ಜಿ. ಎಂ. ಪಲ್ಲವಿ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಕೊಟ್ಟಿದೆ. ಅರ್ಜಿದಾರರು ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ಉದ್ಯೋಗ ಒದಗಿಸಲು ಕೆಪಿಟಿಸಿಲ್ ಮತ್ತು ಬೆಸ್ಕಾಂಗೆ ನಿರ್ದೇಶಿಸುವಂತೆ ಕೋರಿದ್ದರು.

ಹೈಕೋರ್ಟ್ ಆದೇಶವೇನು?; ಅನುಕಂಪದ ಆಧಾರದ ಮೇಲೆ ನೇಮಕಾತಿಯು ಸಂವಿಧಾನದ 14 ಮತ್ತು 16ನೇ ವಿಧಿಗಳಲ್ಲಿ ಜಾರಿಗೆ ತಂದಿರುವ ಸಾರ್ವಜನಿಕ ಉದ್ಯೋಗದಲ್ಲಿ ಸಮಾನತೆಯ ಸಾಮಾನ್ಯ ನಿಯಮಕ್ಕೆ ಒಂದು ಅಪವಾದವಾಗಿದೆ. ಹಾಗಾಗಿ, ಅನುಕಂಪದ ಉದ್ಯೊಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ನ್ಯಾಯಾಲಯಗಳು ವ್ಯಾಖ್ಯಾನದ ಪ್ರಕ್ರಿಯೆಯ ಮೂಲಕ ಶಾಸನಬದ್ಧ ವ್ಯಾಖ್ಯಾನದ ಬಾಹ್ಯರೇಖೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ನೌಕರರ ಕುಟುಂಬ ಸದಸ್ಯ ವ್ಯಕ್ತಿ ಎಂಬುದಕ್ಕೆ ಕಾನೂನು ರೂಪಕರು ಹಲವು ಪದಗಳನ್ನು ನಿರ್ದಿಷ್ಟ ಪಡಿಸಿರುವ ವೇಳೆ ಕುಟುಂಬದ ವ್ಯಾಖ್ಯಾನಕ್ಕೆ ನ್ಯಾಯಾಲಯ ಒಂದು ಪದವನ್ನು ಸೇರಿಸಲು ಮತ್ತು ರದ್ದುಪಡಿಸಲು ಸಾಧ್ಯವಿಲ್ಲ. ನಿಯಮಕ್ಕೆ ವಿರುದ್ಧವಾಗಿರುವ ವಾದವನ್ನು ಒಪ್ಪಿದರೆ, ನಿಯಮವನ್ನು ಮತ್ತೆ ಬರೆದಂತಾಗುತ್ತದೆ. ಹಾಗಾಗಿ, ಮೇಲ್ಮನವಿದಾರೆಯ ವಾದ ಹಾಗೂ ಮನವಿ ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.
ಕರ್ನಾಟಕ ನಾಗರೀಕ ಸೇವೆಗಳ (ಅನುಕಂಪದ ಆಧಾರದ ನೇಮಕಾತಿ) ನಿಯಮಗಳು 1996ರ 2(1) (ಬಿ) ಪ್ರಕಾರ ಒಂದು ವೇಳೆ ವಿವಾಹಿತ ಪುರುಷ ಸರ್ಕಾರಿ ನೌಕರ ಅನಾರೋಗ್ಯದಿಂದ ಸೇವಾವಧಿಯಲ್ಲಿ ಮೃತಪಟ್ಟಲ್ಲಿ ಅವರನ್ನು ಅಲಂಭಿಸಿರುವ ವಿಧವಾ ಪತ್ನಿ, ಮಗ ಅಥವಾ ಮಗಳು (ಅವಿವಾಹಿತೆ, ವಿವಾಹಿತೆ, ವಿಚ್ಛೇದಿತೆ ಹಾಗೂ ವಿಧವೆ) ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಹುದಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದರಂತೆ ಈ ವ್ಯಾಖ್ಯಾನದಲ್ಲಿ ಸಹೋದರಿಯನ್ನು ಸೇರಿಸಿಲ್ಲ. ಸಹೋದರಿಯನ್ನು ಮೃತ ನೌಕರನ ಕುಟುಂಬದ ಸದಸ್ಯೆಯಾಗಿ ಅರ್ಥೈಸಲು ಸಾಧ್ಯವಿಲ್ಲ ಎಂದು ತಿಳಿಸಿದ ವಿಭಾಗೀಯ ಪೀಠ, ಏಕ ಸದಸ್ಯ ನ್ಯಾಯಪೀಠವು 2023ರ ಮಾ.30ರಂದು ಹೊರಡಿಸಿದ್ದ ಆದೇಶವನ್ನು ಪುರಸ್ಕರಿಸಿದೆ.
ಮೇಲ್ಮನವಿದಾರೆಯು ಮೃತ ನೌಕರ ಸಾವನ್ನಪ್ಪಿದ ವೇಳೆ ಅವರ ಆದಾಯದ ಮೇಲೆ ತಾನು ಅಲವಂಬಿಸಿದ್ದೆ ಎಂಬುದನ್ನು ದೃಢಪಡಿಸುವ ಸಾಕ್ಷವನ್ನು ಸಲ್ಲಿಸಿಲ್ಲ. ಹಾಗೆಯೇ, ಅನುಕಂಪದ ಉದ್ಯೊಗವನ್ನು ಕ್ಲೇಮು ಸಮರ್ಥಿಸಿಕೊಳ್ಳವುದಕ್ಕಾಗಿ ಮೃತ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳು ಇಲ್ಲವಾಗಿದೆ. ಆದ್ದರಿಂದ ಮೇಲ್ಮನವಿದಾರೆಯನ್ನು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಪರಿಗಣಿಸಲು ನಿರಾಕರಿಸಿದ ಏಕ ಸದಸ್ಯ ನ್ಯಾಯಪೀಠದ ಆದೇಶದಲ್ಲಿ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಅಲ್ಲದೆ, ಮೃತ ನೌಕರನ ಕುಟುಂಬ ಸದಸ್ಯರು ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ನೇಮಕಾತಿ ಕ್ಲೇಮು ಮಾಡಬೇಕಿದೆ ಎಂದು ಕಾನೂನು ಹೇಳುತ್ತದೆ. ಅದು ಸಹ ಅನಾರೋಗ್ಯದಿಂದ ಸಾವನ್ನಪ್ಪಿದ ಸರ್ಕಾರಿ ನೌಕರನ ಮೇಲೆ ಅಲಂಬಿತರಾಗಿದ್ದೆವು ಎಂಬುದನ್ನು ದೃಢಪಡಿಸುವ ಸಾಕ್ಷ್ಯಾಧಾರಗಳ ಮೇಲೆ ಅನುಕಂಪದ ಉದ್ಯೋಗವನ್ನು ಕ್ಲೇಮು ಮಾಡಬಹುದಾಗಿದೆ ಎಂದು ತಿಳಿಸಿದೆ.












Click it and Unblock the Notifications