ಕಂದಾಯ ಇಲಾಖೆ; 2 ಸಾವಿರ ನೇಮಕಾತಿ, ಯಾವ ಯಾವ ಹುದ್ದೆ?
ಬೆಂಗಳೂರು, ಜನವರಿ 31: ಕರ್ನಾಟಕದ ಕಂದಾಯ ಇಲಾಖೆ ವಿವಿಧ ಹುದ್ದೆಗಳ ಭರ್ತಿಗೆ ತಯಾರಿ ನಡೆಸಿದೆ. ಹುದ್ದೆಗಳ ಭರ್ತಿಗೆ 2024-25ನೇ ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಸ್ತಾವನೆ ಸಲ್ಲಿಸಿದೆ.
ಕಂದಾಯ ಇಲಾಖೆ ಭೂ ದಾಖಲೆಗಳ ಉಪ ನಿರ್ದೇಶಕರು, ಸರ್ವೇಯರ್ ಹಾಗೂ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಬಜೆಟ್‌ನಲ್ಲಿ ಈ ಕುರಿತು ಘೋಷಣೆಯಾದರೆ ಹುದ್ದೆಗಳ ನೇಮಕಾರಿ ಅಧಿಸೂಚನೆ ಪ್ರಕಟವಾಗಲಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತು ಮಾತನಾಡಿದ್ದು, "ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಹಾಗೂ ಬಜೆಟ್‌ನಲ್ಲಿ ಘೋಷಣೆ ಮಾಡಿದ ನಂತರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
ಯಾವ-ಯಾವ ಹುದ್ದೆಗಳು?: ಇಲಾಖೆಯ ಮಾಹಿತಿ ಪ್ರಕಾರ ಭೂ ದಾಖಲೆಗಳ ಉಪ ನಿರ್ದೇಶಕರು 500, ಸರ್ವೇಯರ್ ಹಾಗೂ ಗ್ರಾಮ ಲೆಕ್ಕಿಗ 1,500 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಆದರೆ ಇದಕ್ಕೆ ಮೊದಲು ಆರ್ಥಿಕ ಇಲಾಖೆಯ ಒಪ್ಪಿಗೆ ಬೇಕಿದೆ.
ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿ ಬಗ್ಗೆ ಕಲಾವತಿ ಎಸ್. ಎನ್. ಸರ್ಕಾರದ ಉಪ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು-2, ಪು&ಪು ನಿರ್ಮಾಣ ಹಾಗೂ ಸಮನ್ವಯ ಶಾಖೆ) ಆದೇಶವೊಂದನ್ನು ಹೊರಡಿಸಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಪ್ರಸ್ತುತ ವಿವರಗಳನ್ನು ಸಲ್ಲಿಸುವ ಬಗ್ಗೆ ಎಂದು ಸೂಚನೆಗಳನ್ನು ನೀಡಿದ್ದಾರೆ. ಒಟ್ಟು 1000 ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ.
ಆರ್ಥಿಕ ಇಲಾಖೆ ಈಗಾಗಲೇ 347 ಸರ್ವೇಯರ್ ನೇಮಕಾತಿಗೆ ಒಪ್ಪಿಗೆ ನೀಡಿದೆ ಎಂದು ಕಂದಾಯ ಸಚಿವರು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಇಲಾಖೆ 748 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ, ಇದಕ್ಕೆ ಮುಖ್ಯಮಂತ್ರಿಗಳ ಒಪ್ಪಿಗೆ ಬೇಕಿದೆ.
ಗ್ರಾಮ ಆಡಳಿತಾಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡುವ ಸಂಬಂಧ ಆರ್ಥಿಕ ಇಲಾಖೆಯು 2023-24, 2024-25 ಹಾಗೂ 2025-26ನೇ ಸಾಲಿಗೆ ವಾರ್ಷಿಕವಾಗಿ 500 ಹುದ್ದೆಗಳನ್ನು ಭರ್ತಿ ಮಾಡಲು ಸಹಮತಿ ನೀಡಿದೆ.
ಜಿಲ್ಲೆಗಳಿಗೆ ಮಂಜೂರಾದ ಹುದ್ದೆಗಳು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಗಳಿಗನುಗುಣವಾಗಿ ಪ್ರಸಕ್ತ ಖಾಲಿಯಿರುವ 1820 ಹುದ್ದೆಗಳಿಗೆ ಎದುರಾಗಿ 1000 ಹುದ್ದೆಗಳನ್ನು ನೇರ ನೇಮಕಾತಿಯಡಿ ಭರ್ತಿ ಮಾಡಲಾಗುತ್ತದೆ.
ಗ್ರಾಮ ಆಡಳಿತಾಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳಿಗೆ ದ್ವಿತೀಯ ಪಿಯುಸಿ ಆದವರು ಅರ್ಜಿ ಸಲ್ಲಿಸಬಹುದು. ಸರ್ವೇಯರ್ ಹುದ್ದೆಗಳಿಗೆ ಡಿಪ್ಲೊಮಾ, ಐಟಿಐ, ಬಿಇ, ಬಿಟೆಕ್ ಮುಂತಾದ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಅಧಿಸೂಚನೆ ಪ್ರಕಟವಾದ ಬಳಿಕ ಈ ಕುರಿತು ಅಧಿಕೃತವಾಗಿ ಮಾಹಿತಿ ತಿಳಿಯಲಿದೆ.












Click it and Unblock the Notifications