KPSC Recruitment: ಕೆಪಿಎಸ್‌ಸಿ ನೇಮಕಾತಿಯಲ್ಲಿ ಬದಲಾವಣೆ, ಸಿಎಂಗೆ ಪತ್ರ
ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕದ ವಿವಿಧ ಇಲಾಖೆಗಳ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತದೆ. ಆದರೆ ಈ ನೇಮಕಾತಿ ಪ್ರಕ್ರಿಯೆಗಳಲ್ಲಿ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಈಗ ಸರ್ಕಾರವು ಗಮನ ಹರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಕುರಿತು ಪತ್ರವನ್ನು ಬರೆಯಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಖಾತೆ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಯಾವ ಯಾವ ಬದಲಾವಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಪತ್ರದಲ್ಲಿ ಸಚಿವರು ಕರ್ನಾಟಕ ಲೋಕ ಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಇತರೆ ನೇಮಕಾತಿ ಪ್ರಾಧಿಕಾರಗಳಲ್ಲಿ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಈ ಸಲಹೆಗಳನ್ನು ಪರಿಗಣಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಂಬಂಧಪಟ್ಟ, ಎಲ್ಲಾ ಇಲಾಖೆಯ ಮುಖ್ಯಸ್ಥರು ಹಾಗೂ ನೇಮಕಾತಿ ಪ್ರಾಧಿಕಾರಗಳಿಗೆ ನಿರ್ದೇಶನ ನೀಡುವಂತೆ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಚಿವರು ನೀಡಿದ ಸಲಹೆಗಳು
* ವಿವಿಧ ನೇಮಕಾತಿ ಪ್ರಾಧಿಕಾರಗಳು ಇಡೀ ನೇಮಕಾತಿ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು.
* ಎಲ್ಲಾ ಗ್ರೂಪ್ 'ಸಿ' ಪರೀಕ್ಷೆಗಳು ಒಂದೇ ಪಠ್ಯಕ್ರಮವನ್ನು ಹೊಂದಿರುವುದರಿಂದ, ಎಲ್ಲಾ ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಾಧಿಕಾರಗಳು ಒಂದೇ ಪರೀಕ್ಷೆಯನ್ನು ನಡೆಸುವುದು.
* OMR ಆಧಾರಿತ ಲಿಖಿತ ಪರೀಕ್ಷೆಯ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಪರಿಚಯಿಸಬೇಕು. ಒಎಂಆರ್ ವಿಧಾನವು ಟ್ಯಾಂಪರಿಂಗ್ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸಹಾಯಕವಾಗಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಕೂಡ ವೇಗಗೊಳಿಸುತ್ತದೆ.
* ವಿವಿಧ ನೇಮಕಾತಿ ಪ್ರಾಧಿಕಾರಗಳು ಸಹಾಯವಾಣಿಯನ್ನು ಸಮರ್ಪಕವಾಗಿ ನಿರ್ವಹಿಸುವುದು.
* ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳು ನಡೆಸುವ ಪರೀಕ್ಷೆಗಳ ನಡುವಿನ ದಿನಾಂಕಗಳ ಕಾಕತಾಳೀಯವಾಗಿ ಒಮ್ಮೆಲೆ ಬರುವ ಕಾರಣದಿಂದ ವಿವಿಧ ಪರೀಕ್ಷೆಯ ದಿನಾಂಕಗಳನ್ನು ಅನೇಕ ಬಾರಿ ಪರಿಷ್ಕರಿಸಲಾಗಿದೆ. ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ನೇಮಕಾತಿ ಏಜೆನ್ಸಿಗಳ ನಡುವೆ ಸಂವಹನವನ್ನು ಖಾತ್ರಿಪಡಿಸುವ ಅವಶ್ಯಕತೆ ಇದ್ದು, ಅಭ್ಯರ್ಥಿಗಳು ಅವರು ಅರ್ಹರಾಗಿರುವ ಎಲ್ಲಾ ಪರೀಕ್ಷೆಗಳಲ್ಲಿಯೂ ಬರೆಯುವ ಹಕ್ಕನ್ನು ಎತ್ತಿಹಿಡಿಯಬೇಕು.
* ಒಂದೇ ದಿನ ನಡೆಸುವ 2 ಪರೀಕ್ಷೆಗಳಿಗೆ 2 ವಿವಿಧ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸುವ ಮೂಲಕ ಆಯೋಗವು ಹಲವು ಬಾರಿ ಮುಜುಗರವನ್ನು ಎದುರಿಸುವಂತಾಗಿದ್ದು, ಇದು ಅಭ್ಯರ್ಥಿಗಳಲ್ಲಿ ಗೊಂದಲವನ್ನು ಮೂಡಿಸುತ್ತಿರುತ್ತದೆ.
* ಒಮ್ಮೆ 1:3 ಪಟ್ಟಿಯನ್ನು ಪ್ರಕಟಿಸಿದ ನಂತರ 1:1 ಪಟ್ಟಿಯನ್ನು ಪ್ರಕಟಿಸಲು ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಲು ಸುಮಾರು 6 ತಿಂಗಳು ಕಾಲವನ್ನು ತೆಗೆದುಕೊಳ್ಳುತ್ತದೆ. ಸಮಯವನ್ನು ಉಳಿಸಲು ಮತ್ತು ಪ್ರಕ್ರಿಯೆಯನ್ನು ವೇಗಗೊಳಿಸಲು ವಿವಿಧ ನೇಮಕಾತಿ ಪ್ರಾಧಿಕಾರಗಳು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಾಧ್ಯವಿರುವ ಕಡೆ ಕಂದಾಯ ವಿಭಾಗ ಸಂಖ್ಯೆ (RD ಸಂಖ್ಯೆ) ಬಳಕೆ ಮಾಡಬಹುದು.
* ಇತರ ನೇಮಕಾತಿ ಏಜೆನ್ಸಿಗಳಿಗೆ ಹೋಲಿಸಿದರೆ KEA ನಡೆಸುವ ಎಲ್ಲಾ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕಗಳು ದುಬಾರಿಯಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ.
* KEA ಕನ್ನಡ ಕಡ್ಡಾಯ ಪರೀಕ್ಷೆ ನಡೆಸುವ ವಿಧಾನವನ್ನು ಮಾರ್ಪಡಿಸಿ KPSC ನಿಗದಿಪಡಿಸಿರುವ ಆದ್ಯತೆಯನ್ನು ಅನುಸರಿಸಬೇಕು. (ಟಿಪ್ಪಣಿ: ಕೆಪಿಎಸ್‌ಸಿ ಮೇಲಿನ ಹೊರೆಯನ್ನು ಕಡಿಮೆ ಮಾಡಲು, ಆಯೋಗವು ಕನ್ನಡ ಕಡ್ಡಾಯ ಪತ್ರಿಕೆಯನ್ನು ಒಮ್ಮೆ ತೇರ್ಗಡೆ ಮಾಡುವ ಪ್ರತಿಯೊಬ್ಬ ಅಭ್ಯರ್ಥಿಗೆ 3 ವರ್ಷಗಳವರೆಗೆ ಪರೀಕ್ಷೆಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡುತ್ತದೆ ಎಂದು ನಿಯಮ ಮಾಡಿದ)
* ಸರ್ಕಾರದ ಮುಂದಿನ 3 ವರ್ಷಗಳ ನೇಮಕಾತಿ ಯೋಜನೆಯನ್ನು ಮುಂಚಿತವಾಗಿ ವಿವಿಧ ನೇಮಕಾತಿ ಪ್ರಾಧಿಕಾರಗಳಿಗೆ ತಿಳಿಸುವುದು ಇದರಿಂದ ನೇಮಕಾತಿ ಪ್ರಾಧಿಕಾರ ತಮ್ಮ ವಾರ್ಷಿಕ ಕ್ಯಾಲೆಂಡರ್ ಅನ್ನು ತಯಾರಿಸುವುದು.
* ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಲ್ಲಿ ಕನ್ನಡ ಮಾಧ್ಯಮವಾಗಿಟ್ಟುಕೊಂಡು ಮುಖ್ಯ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆಯು ಅಂತಿಮ ಆಯ್ಕೆ ಪಟ್ಟಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವುದನ್ನು ಗಮನಿಸಲಾಗಿದೆ ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸುವುದು.












Click it and Unblock the Notifications