ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2,00,000ಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿ..
ಸಿಎಂ ಸಿದ್ದರಾಮಯ್ಯ ಅವರು ಉದ್ಯೋಗ ಸೃಷ್ಟಿ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2,00,000ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ಇದ್ದು, ಈ ಮೂಲಕ ತಂತ್ರಜ್ಞಾನ ವಲಯದಲ್ಲಿ ನಮ್ಮ ಸರ್ಕಾರವು ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ತಿಳಿಸಿದರು.
ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿಂದು 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 2035ರ ವೇಳೆಗೆ ಕರ್ನಾಟಕವನ್ನು 20 ಬಿಲಿಯನ್ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವನ್ನಾಗಿಸುವ ಗುರಿಯನ್ನು ನಾವು ಹೊಂದಿದ್ದು, ಬೆಂಗಳೂರಿನ ಬಳಿ ಎಲ್ಲಾ ಮೂಲ ಸೌಕರ್ಯಗಳಿರುವ ಕ್ವಾಂಟಮ್ ನಗರಿ ಸ್ಥಾಪನೆ ಮಾಡಲಿ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

ಅಲ್ಲದೆ, ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಘನತೆಯ ಬದುಕು ಸ್ವಾತಂತ್ರ್ಯದ ನೈಜ ಆಶಯ. ಈ ಆಶಯದ ಈಡೇರಿಕೆಗಾಗಿ ನಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ ಅಂತಲೂ ತಿಳಿಸಿದ್ದಾರೆ. ಇನ್ನು ಇನ್ವೆಸ್ಟ್ ಕರ್ನಾಟಕದಲ್ಲಿ 6,23,970 ಕೋಟಿ ರೂಪಾಯಿ ಹೂಡಿಕೆ ಒಡಂಬಡಿಕೆ ಆಗಿದ್ದು, 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ವಿದೇಶಿ ಹೂಡಿಕೆಯಲ್ಲಿ ದೇಶದಲ್ಲೇ ರಾಜ್ಯ 2ನೇ ಸ್ಥಾನದಲ್ಲಿ ಕರ್ನಾಟಕವಿದೆ. 2024-25ನೇ ಸಾಲಿನಲ್ಲಿ 56,30,000 ಕೋಟ ರೂಪಾಯಿ ವಿದೇಶಿ ಹೂಡಿಕೆ ಆಕರ್ಷಿಸಲಾಗಿತ್ತು ಎಂದು ಹೇಳಿದರು. ಇನ್ನು ಕರ್ನಾಟಕ ಬಜೆಟ್‌ನ ಶೇಕಡ 20.1ರಷ್ಟು ಅನುದಾನವನ್ನ ಮೂಲ ಸೌಕರ್ಯ ಯೋಜನೆಗಳಿಗೆ ವಿನಿಯೋಗಿಸುತ್ತಿರುವ ರಾಜ್ಯ ನಮ್ಮದಾಗಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳು ಮಹಿಳೆಯರ ಛಲವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.
ರೈತನ ಮಗ ವಿಜ್ಞಾನಿ ಆಗಬೇಕು. ನೇಕಾರನ ಮಗಳು ಉದ್ಯಮಿ ಆಗಬೇಕು, ಪ್ರತಿ ಮಗುವಿಗೂ ಭವಿಷ್ಯ ತನ್ನ ಕೈಯಲ್ಲಿದೆ ಎಂಬ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ , ಗೃಹಜ್ಯೋತಿ, ಯುವನಿಧಿ, ಗ್ಯಾರಂಟಿ ಯೋಜನೆಗಳಿಗೆ ಈವರೆಗೆ 96 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ವೆಚ್ಚ ಮಾಡಲಾಗುತ್ತದೆ. ಶಕ್ತಿ ಯೋಜನೆಯಲ್ಲಿ 500 ಕೋಟಿ ಟ್ರಿಪ್‌ಗಳ ಮೂಲಕ ಮಹಿಳೆಯರು ಉಚಿತ ಪ್ರಯಾಣಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕವು ತಲಾ ಆದಾಯದಲ್ಲಿ ಮೊದಲ ಸ್ಥಾನದಲ್ಲಿ ಇದ್ದು, ಕಳೆದ 10 ವರ್ಷಗಳಲ್ಲಿ ಶೇಕಡ 101ರಷ್ಟು ಪ್ರಗತಿ ಕಂಡಿದೆ. 2024-25ರ ವೇಳೆಗೆ ತಲಾ ಆದಾಯ 2,04,605 ರೂಪಾಯಿಗಳಿಗೆ ತಲುಪಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜೊತೆಗೆ ಸಹಾಯಧನ, ಪ್ರೋತ್ಸಾಹಧನ, ವಿದ್ಯಾರ್ಥಿ ವೇತನ, ಸಾಮಾಜಿಕ ಯೋಜನೆಗಳಿಗೆ 1.12 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ವ್ಯಯಿಸಲಾಗುತ್ತಿದೆ ಎಂದು ಹೇಳಿದರು.
ಹಿಂದಿನ ಸರ್ಕಾರ ಬಾಕಿ ಉಳಿಸಿದ್ದ 609 ಕೋಟಿ ರೂಪಾಯಿ ಸೇರಿ 3,280 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಹೈನುಗಾರರಿಗೆ ಪಾವತಿ ಮಾಡಲಾಗಿದೆ. ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ನೂತನವಾಗಿ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡುತ್ತಿದ್ದು, 2,500 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ ಎಂದು ಹೇಳಿದರು.












Click it and Unblock the Notifications