ನರೇಗಾ ಹಾಜರಾತಿಯಲ್ಲಿ ಲೋಪ; ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 23: ಗ್ರಾಮೀಣ ಭಾಗದ ಬಡವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕಾಲ ಕಾಲಕ್ಕೆ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈಗ ಬೇಸಿಗೆಯ ಸಮಯದಲ್ಲಿಯೂ ಮನರೇಗಾ ಅಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಮನರೇಗಾ ಕಾಮಗಾರಿ ಸ್ಥಳದಲ್ಲಿ ಹಾಜರಾತಿ ಪಡೆಯುವಲ್ಲಿ ಲೋಪಗಳು ಉಂಟಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಅಧಿಕಾರಿಗಳಿಗೆ ಆಯುಕ್ತರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಈ ಕುರಿತು ಮಾಹಿತಿ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಆಯುಕ್ತರು ಪತ್ರವನ್ನು ಕಳಿಸಿದ್ದಾರೆ. ಈ ಪತ್ರ ನರೇಗಾ ಯೋಜನೆಯಡಿ NMMS ಹಾಜರಾತಿ ಸೆರೆ ಹಿಡಿಯುವಲ್ಲಿ ಆಗುತ್ತಿರುವ ಲೋಪದೋಷಗಳ ಕುರಿತು ಎಂಬ ವಿಷಯ ಒಳಗೊಂಡಿದೆ. ಅಲ್ಲದೇ ಆಯುಕ್ತಾಲಯಕ್ಕೆ ಸ್ವೀಕೃತಗೊಳ್ಳುತ್ತಿರುವ ಲಿಖಿತ ದೂರುಗಳು ಎಂದು ಉಲ್ಲೇಖ ಮಾಡಲಾಗಿದೆ.
ಪತ್ರದ ವಿವರಗಳು: ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಿಸಲಾಗುತ್ತಿರುವ ಎಲ್ಲಾ ಸಮುದಾಯ ಕಾಮಗಾರಿಗಳಲ್ಲಿ NMMS ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ NMMS ಹಾಜರಾತಿಯಲ್ಲಿ ಆಗುತ್ತಿರುವ ಲೋಪದೋಷಗಳ ಬಗ್ಗೆ ಆಯುಕ್ತಾಲಯಕ್ಕೆ ದೂರುಗಳು ಸ್ವೀಕೃತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ NREGA soft daily NMMS attendance report ಗಳನ್ನು random ಆಗಿ ಪರಿಶೀಲಿಸಲಾಗುತ್ತಿದೆ.
NMMS ಹಾಜರಾತಿಯಲ್ಲಿ ಹಾಜರಿರುವ ಕೂಲಿಕಾರರ ಸಂಖ್ಯೆ ಹಾಗೂ ಛಾಯಾ ಚಿತ್ರದಲ್ಲಿರುವ ಕೂಲಿಕಾರರ ಸಂಖ್ಯೆಗೂ ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ. ಈ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ/ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಸೂಚಿಸಲಾಗಿದೆ.
ಇನ್ನು ಮುಂದೆ NMMS ಹಾಜರಾತಿಯಲ್ಲಿನ ವ್ಯತ್ಯಾಸಗಳಿಗೆ ಸಂಬಂಧಿಸಿದ ದೂರುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಪ್ರಕರಣ ಸಾಬೀತಾದಲ್ಲಿ, ತಪ್ಪಿತಸ್ತ ಅಧಿಕಾರಿ/ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮನರೇಗಾ ಕಾಮಗಾರಿ ಸ್ಥಳದಲ್ಲಿ ಜಾಗೃತಿ: ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈಗ ಬೇಸಿಗೆಯ ಸಮಯವೂ ಆದ್ದರಿಂದ ಜನರು ಕೆಲಸ ಅರಸಿ ಗುಳೆ ಹೋಗಿರುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಮತದಾನ ಮಾಡುವಂತೆ ನರೇಗಾ ಕಾಮಗಾರಿ ಸ್ಥಳದಲ್ಲಿಯೂ ಅರಿವು ಮೂಡಿಸಲಾಗುತ್ತಿದೆ.
ಬಳ್ಳಾರಿ ತಾಲ್ಲೂಕಿನ ಬೆಳಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗಲ್ಲು ತಾಂಡಾದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಮನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರ ಮತ್ತು ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.
ಬಳ್ಳಾರಿ ತಾಲ್ಲೂಕು ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ಮಾತನಾಡಿ, "ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಪ್ರಮಾಣ ಹೆಚ್ಚಳಕ್ಕೆ ವೈವಿಧ್ಯಮಯ ಮತದಾನ ಅರಿವು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗುತ್ತಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 7ರಂದು ನಡೆಯಲಿರುವ ಚುನಾವಣೆಗೆ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಚುನಾವಣೆಯ ಹಬ್ಬವನ್ನು ಯಶಸ್ವಿಗೊಳಿಸಿಬೇಕು" ಎಂದು ಕರೆ ನೀಡಿದರು.
ಮತದಾನ ಜಾಗೃತಿ ಅಭಿಯಾನದಲ್ಲಿ ಚುನಾವಣಾ ಘೋಷಣೆಗಳನ್ನು ಕೂಗುವ ಮೂಲಕ ತಪ್ಪದೇ ಮತದಾನ ಮಾಡುತ್ತೇನೆ ಎಂದು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಮಹಾತ್ಮ ಗಾಂಧಿ ನರೇಗಾ ಯೋಜನೆಯ ಉಚಿತ ಸಹಾಯವಾಣಿ ಸಂಖ್ಯೆಯನ್ನು ಪ್ರದರ್ಶಿಸಲಾಯಿತು.












Click it and Unblock the Notifications