ಬಿಬಿಎಂಪಿ ಕಚೇರಿಯಲ್ಲಿ ತಾಯಿ ಮಾಡಿದ ತಪ್ಪಿಗೆ ಮಗ ಲೋಕಾಯುಕ್ತ ಬಲೆಗೆ
ಬೆಂಗಳೂರು, ಜನವರಿ, 12: ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುತ್ತಾರೆ ಎನ್ನುವುದಕ್ಕೆ ಬಿಬಿಎಂಪಿ ಕಚೇರಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹಾಗಾದರೆ ಅಷ್ಟಕ್ಕೂ ಬೃಹತ್ ಬೆಂಗಳೂರು ಮಹಾನಗರ ಪಾಲಿಯಲ್ಲಿ ನಡೆದಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಿಯಮದ ಪ್ರಕಾರ ಸರ್ಕಾರಿ ಅಥವಾ ಯಾವುದೇ ಕಚೇರಿಯಲ್ಲಾಗಲಿ ಅವರ ಕೆಲಸಗಳನ್ನು ಅವರೇ ಮಾಡಬೇಕಾಗುತ್ತದೆ. ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳನ್ನು ಬೇರೆಯವರ ಬಳಿ ಮಾಡಿಸಿದರೆ ಅಪರಾಧವಾಗುತ್ತದೆ. ಅಲ್ಲದೆ, ಅಂತಹವರ ವಿರುದ್ಧ ಸೂಕ್ತ ಕ್ರಮವನ್ನು ಸಹ ಜರುಗಿಸಲಾಗುತ್ತದೆ. ಅಂತಹದ್ದೇ ಒಂದು ತಪ್ಪು ಘಟನೆ ಇದೀಗ ಬಿಬಿಎಂಪಿ ಕಚೇರಿಯಲ್ಲಿ ನಡೆದಿದೆ.

ಬಿಬಿಎಂಪಿ ಕಚೇರಿ ಮೇಲೆ ನಡೆದ ಲೋಕಾಯುಕ್ತ ದಾಳಿ ಭಯಾನಕ ಸತ್ಯವೊಂದು ಹೊರಬಿದ್ದಿದೆ. ತಾಯಿಯ ಹೆಸರಲ್ಲಿ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಬಂಧಿಸಲಾಗಿದೆ. ಕೆಂಪೇಗೌಡನಗರ ಸಬ್ ಡಿವಿಷನ್ ಎಸ್‌ಡಿಎ ಅಗಿರುವ ಕವಿತಾ ಅವರ ಬದಲಾಗಿ ಅವರ ಪುತ್ರ ನವೀನ್ ಬಿಬಿಎಂಪಿ ಕಚೇರಿಯಲ್ಲಿ ತಾಯಿ ಪರವಾಗಿ ಕೆಲಸ ಮಾಡುತ್ತಿದ್ದು, ಈ ವೇಳೆ ಅವರು ಲೋಕಾಯುಕ್ತ ಅಧಿಕಾರಿಗಳ ಬಲಗೆ ಬಿದ್ದಿದ್ದಾರೆ ಅಂತಾ ನ್ಯೂಸ್ 18 ಕನ್ನಡ ವರದಿ ಮಾಡಿದೆ.
ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದ ವೇಳೆ ಈ ಕಳ್ಳಾಟ ಬಯಲಾಗಿದೆ. ಅಲ್ಲದೆ, ಕರ್ತವ್ಯ ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಬಿ ವೀರಪ್ಪ ಅವರ ನೇತೃತ್ವದಲ್ಲಿ ಸೌತ್ ಎಂಡ್ ಸರ್ಕಲ್ ಬಳಿಯ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಪ್ರಕರಣ ಅಲ್ಲಿನ ಉದ್ಯೋಗಿ ಕವಿತಾ ಅವರು ತಮ್ಮ ಬದಲು ಮಗನನ್ನ ಕೆಲಸಕ್ಕೆ ಕಳಿಸಿರುವುದು ಬೆಳಕಿಗೆ ಬಂದಿದೆ. ಕಚೇರಿಯ ಲಾಗಿನ್ ಐಡಿ ನೀಡಿ ಮಗನಿಗೆ ಕೆಲಸ ಮಾಡಲು ಬಿಟ್ಟಿದ್ದರು ಎನ್ನುವ ಭಯಾನಕ ಸತ್ಯ ಬಟಾಬಯಲಾದ ಘಟನೆ ನಡೆದಿದೆ.
ನವೀನ್ ಅನ್ನು ಕೆಲಸ ಮಾಡಲು ಕಳುಹಿಸಿ ಕವಿತಾ ಅವರು ಮನೆಯಲ್ಲಿದ್ದರು ಎನ್ನಲಾಗಿದೆ. ಅಲ್ಲದೇ ಗೀತಾ ಎಂಬುವವರನ್ನ ಸಹಾಯಕ್ಕಾಗಿ ಅನಧಿಕೃತವಾಗಿ ನೇಮಕ ಮಾಡಿಕೊಂಡಿದ್ದರು. ಅಧಿಕಾರಿಗಳಿಂದ ಕರ್ತವ್ಯ ದುರುಪಗೋಗ ಹಿನ್ನೆಲೆ ಸಿದ್ದಾಪುರ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಚೇರಿ ಮುಖ್ಯಸ್ಥರಾದ ಸುಜಾತ, ಕವಿತಾ ಹಾಗೂ ಇವರ ಮಗ ನವೀನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ನವೀನ್‌ನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್ವೆಲ್ನಲ್ಲಿ ಹಗರಣದ ಆರೋಪ ಕೇಳಿಬಂದಿದ್ದು, ಮುಖ್ಯ ಇಂಜಿನಿಯರ್ ಕಚೇರಿ ಮೇಲೆ ಇತ್ತೀಚೆಗಷ್ಟೇ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಬಿಬಿಎಂಪಿ ಕಚೇರಿಯಲ್ಲಿ ತಲಾಶ್ ನಡೆಸಿದ್ದ ಇಡಿ ಅಧಿಕಾರಿಗಳು ಮಾಜಿ ಕಾರ್ಪೊರೇಟರ್ಗಳಿಗೆ ಶಾಕ್ ನೀಡಿದ್ದರು. ಬಿಬಿಎಂಪಿ ಮಾಜಿ ಕಾರ್ಪೊರೇಟರ್ಗಳಿಗೆ ಆಯುಕ್ತರ ಮೂಲಕ ಇಡಿ ನೋಟೀಸ್ ಕಳುಹಿಸಿತ್ತು. 2015 ರಿಂದ 2019ರ ಅವಧಿಯಲ್ಲಿ ಕೌನ್ಸಿಲ್ ಸದಸ್ಯರಿಗೆ ನೋಟೀಸ್ ನೀಡಲಾಗಿದೆ. ಬೋರ್‌ವೆಲ್ ಕೊರೆಸಿದೆ ಎನ್ನಲಾದ 43 ವಾರ್ಡ್‌ಗಳ ಕಾರ್ಪೊರೇಟರ್ಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದೆ.












Click it and Unblock the Notifications