ಕವಿಪ್ರನಿನಿ, ಎಸ್ಕಾಂಗಳ ಹೊರಗುತ್ತಿಗೆ ಕಾರ್ಮಿಕರ ಸೇವಾ ಭದ್ರತೆ ಬಗ್ಗೆ
ಬೆಂಗಳೂರು, ಜನವರಿ 02; ಕವಿಪ್ರನಿನಿ ಮತ್ತು ಎಸ್ಕಾಂಗಳ ಹೊರಗುತ್ತಿಗೆ ಕಾರ್ಮಿಕರ ಸೇವಾ ಭದ್ರತೆ ಬಗ್ಗೆ ವರದಿ ನೀಡಲು ಸರ್ಕಾರ ಸಮಿತಿ ರಚನೆ ಮಾಡಲು ಆದೇಶ ಹೊರಡಿಸಿದೆ. ಸದರಿ ಸಮಿತಿಯ ಸಂಚಾಲಕರನ್ನಾಗಿ ಇಂಧನ ಇಲಾಖೆಯ ಅಪರ ಕಾರ್ಯದರ್ಶಿಗಳನ್ನು ನೇಮಿಸಬಹುದಾಗಿದೆ.
ಕಡೂರು ಕ್ಷೇತ್ರದ ಮಾಜಿ ಶಾಸಕ ವೈ. ಎಸ್. ವಿ. ದತ್ತಾ ಈ ಕುರಿತು ಪತ್ರವನ್ನು ಬರೆದಿದ್ದರು. ವಿನೋದ್ ಕುಮಾರ್ ಡಿ. ಎಂ. ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 15-20 ವರ್ಷಗಳಿಂದ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕರು, ಗ್ಯಾಂಗ್‌ಮ್ಯಾನ್, ಮೀಟರ್ ರೀಡರ್‌ಗಳಾಗಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಏಜೆನ್ಸಿಯನ್ನು ಹೊರಗಿಟ್ಟು, ನೇರವಾಗಿ ಇಲಾಖೆಯಿಂದಲೇ ಸಂಬಳ ಪಾವತಿಸುವುದರೊಂದಿಗೆ, ಸದರಿ ನೌಕರರು ಪ್ರಾಣಾಪಾಯದ ಕೆಲಸ ನಿರ್ವಹಿಸುತ್ತಿರುವುದರಿಂದ ಸೇವಾ ಭದ್ರತೆ ಒದಗಿಸುವಂತೆ ವೈ. ಎಸ್. ವಿ. ದತ್ತಾ ಕೋರಿದ್ದರು.

ಇಂಧನ ಸಚಿವರು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳ ಟಿಪ್ಪಣಿ, ಮಾಜಿ ಪ್ರಧಾನ ಮಂತ್ರಿಗಳು, ಸಚಿವರು, ಶಾಸಕರು ಹಾಗೂ ಇತರ ಗಣ್ಯವ್ಯಕ್ತಿಗಳ ಮನವಿಗಳ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ವಿಷಯವನ್ನು ಅಧ್ಯಯನ ಮಾಡಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಸಮಿತಿ ರಚನೆ ಮಾಡಿ ಆದೇಶಿಸಲಾಗಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆ, ಕಾನೂನು ಇಲಾಖೆ ಹಾಗೂ ಕಾರ್ಮಿಕ ಇಲಾಖೆಗಳ ಪ್ರತಿನಿಧಿಗಳನ್ನು ಸೇರಿಸಿ, ಸಮಿತಿ ರಚನೆ ಮಾಡುವುದು ಹಾಗೂ ಸರ್ಕಾರಕ್ಕೆ 3 ತಿಂಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ 15-20 ವರ್ಷಗಳಿಂದ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕರು, ಗ್ಯಾಂಗ್‌ಮ್ಯಾನ್ ಮತ್ತು ಮೀಟರ್ ರೀಡರ್‌ಗಳಾಗಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಏಜೆನ್ಸಿಯನ್ನು ಹೊರಗಿಟ್ಟು, ನೇರವಾಗಿ ಇಲಾಖೆಯಿಂದಲೇ ಸಂಬಳ ಪಾವತಿಸುವುದರೊಂದಿಗೆ, ಸೇವಾ ಭದ್ರತೆ ಒದಗಿಸುವ ವಿಷಯದ ಕುರಿತಂತೆ ಅಧ್ಯಯನ ಮಾಡಲು ಸಮಿತಿ ರಚನೆ ಮಾಡಲು ಆದೇಶಿಸಲಾಗಿದೆ.
ಸಮಿತಿಯಲ್ಲಿರುವ ಅಧಿಕಾರಿಗಳ ವಿವರ
* ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ. ಅಧ್ಯಕ್ಷರು
* ಆರ್ಥಿಕ ಇಲಾಖೆಯ ಪ್ರತಿನಿಧಿ. ಸದಸ್ಯರು
* ಕಾನೂನು ಇಲಾಖೆಯ ಪ್ರತಿನಿಧಿ. ಸದಸ್ಯರು
* ಕಾರ್ಮಿಕ ಇಲಾಖೆಯ ಪ್ರತಿನಿಧಿ. ಸದಸ್ಯರು
* ಸರ್ಕಾರದ ಅಪರ ಕಾರ್ಯದರ್ಶಿ ಇಂಧನ ಇಲಾಖೆ. ಸಂಚಾಲಕರು












Click it and Unblock the Notifications