KPSC Recruitment: ಕೆಎಎಸ್ ಮುಖ್ಯ ಪರೀಕ್ಷೆಗೆ KAT ತಡೆ ನೀಡಿ ಆದೇಶ
ಬೆಂಗಳೂರು, ಫೆಬ್ರವರಿ 24: ಕರ್ನಾಟಕ ಲೋಕಸೇವಾ ಆಯೋಗವು (KPSC) ಡಿಸೆಂಬರ್ 29ರಂದು ಕರ್ನಾಟಕ ಆಡಳಿತ ಸೇವೆ (KAS)ಯಲ್ಲಿ ಖಾಲಿ ಇರುವ 384 ಗ್ರೂಪ್ 'ಎ' ಮತ್ತು 'ಬಿ' ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆದಿತ್ತು. ಇದಾಗಿ ಒಂದು ತಿಂಗಳ ಅಂತರದಲ್ಲಿ KAS 2024-25 ಮುಖ್ಯ ಪರೀಕ್ಷೆಗೆ (ಮೇನ್ಸ್) ವೇಳಾಪಟ್ಟಿ ಪ್ರಕಟಿಸಿತ್ತು. ಇದೀಗ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಮುಖ್ಯ ಪರೀಕ್ಷೆಯನ್ನು ತಡೆ ಹಿಡಿದು ಆದೇಶಿಸಿದೆ.
ಹೌದು, ರಾಜ್ಯದಲ್ಲಿ ಕೆಪಿಎಸ್‌ಸಿ ಯಿಂದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಎರಡು ಭಾರಿ ಪರೀಕ್ಷೆ ನಡೆದಿವೆ. ಎರಡನೇ ಭಾರಿಯು ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿ ಉಂಟಾದ ಲೋಪದೋಷ, ಯಡವಟ್ಟು ಕೆಎಟಿ ಮೆಟ್ಟಿಲೇರಿತ್ತು. ನೇಮಕಾತಿ ಪ್ರಕ್ರಿಯೆ ಮುಂದುವರೆಸುವಂತೆ ತಿಳಿಸಿದ್ದ ನ್ಯಾಯಮಂಡಳಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಮುಂದೂಡಿತ್ತು.

ಇದೀಗ ಮತ್ತೆ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು ಜನವರಿ 29 ರಂದು ನೀಡಿದ್ದ ಮುಖ್ಯ ಪರೀಕ್ಷೆಯ ವೇಳಾಪಟ್ಟಿಗೆ ತಡೆ ನೀಡಿದೆ. ನ್ಯಾಯಾಂಗ ಸದಸ್ಯ ಎಸ್.ವೈ. ವಾಟವತಿ ಮತ್ತು ಆಡಳಿತ ಸದಸ್ಯ ಡಾ. ಅಮಿತಾ ಪ್ರಸಾದ್ ಅವರಿದ್ದ ಕೆಎಟಿ ಪೀಠವು ಅರ್ಜಿ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ.
ಈ ಹಿಂದೆ ಜನವರಿ 30 ರಂದು ಕೆಎಟಿ ಅರ್ಜಿ ವಿಚಾರಣೆ ನಡೆಸಿತ್ತು. ಪ್ರಾಥಮಿಕ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದ ಕೆಪಿಎಸ್‌ಸಿಗೆ ತಾವು ಕೆಎಎಸ್ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ಅನುಮತಿ ನೀಡಿತ್ತು. ತದನಂತರ ನಡೆದ ವಿಚಾರಣೆಯಲ್ಲಿ ಒಂದಷ್ಟು ಅಂಶಗಳನ್ನು ನ್ಯಾಯಮಂಡಳಿ ಗಮನಿಸಿ, ಮುಖ್ಯ ಪರೀಕ್ಷೆಗೆ ಸಂಬಂಧಿಸಿದ ವೇಳಾಪಟ್ಟಿಗೆ
(ಜನವರಿ 29ರ ಅಧಿಸೂಚನೆ) ತಡೆ ನೀಡುವಂತೆ ಕೆಪಿಎಸ್‌ಸಿಗೆ ನಿರ್ದೇಶಿಸಿದೆ.
ಮರು ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವಲ್ಲಿ ಲೋಪದೋಷಗಳು ಉಂಟಾಗಿವೆ. ಇದೇನು ಮೊದಲ್ಲ. ಇದು ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ತೊಂದರೆ ಉಂಟು ಮಾಡಿದೆ ಎಂಬುದನ್ನು ಕೆಎಟಿ ಗಮನಿಸಿದೆ. ಇನ್ನೂ ಈ ಬಗ್ಗೆ KPSC ಸ್ವತಃ ಆದ ಲೋಪವನ್ನು ಒಪ್ಪಿಕೊಂಡಿದೆ. ವಿಷಯ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿಯು ಆದ ಯಡವಟ್ಟುಗಳನ್ನು ಖಚಿತಪಡಿಸಿದ್ದಾಗಿ ನ್ಯಾಯಮಂಡಳಿಗೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕೆಎಟಿ ಆದೇಶ ನೀಡಿದ್ದರಿಂದ ಕೆಎಎಸ್ ಮುಂದಿನ ನೇಮಕಾತಿ ಪ್ರಕ್ರಿಯೆಗೆ ಅಂದರೆ, ಮುಖ್ಯ ಪರೀಕ್ಷೆಗೆ ಸದ್ಯಕ್ಕೆ ತಡೆ ಬಿದ್ದಂತಾಗಿದೆ. ಮುಖ್ಯ ಪರೀಕ್ಷೆ ಸಿದ್ಧತೆಯಲ್ಲಿದ್ದ ಕೆಎಎಸ್ ಅಭ್ಯರ್ಥಿಗಳಿಗೆ ಮತ್ತೊಂದು ಸವಾಲು ಎದುರಾದಂತಾಗಿದೆ.
ಅಭ್ಯರ್ಥಿಗಳ ಪರ ಬಿಜೆಪಿ: ರಾಜಕೀಯ ಜಟಾಪಟಿ
KPSC ಮಾಡಿದ ಪರೀಕ್ಷಾ ಯಡವಟ್ಟು ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ವಿಪಕ್ಷ ಮತ್ತು ಆಡಳಿತಾರೂಢ ಕಾಂಗ್ರೆಸ್ ಮಧ್ಯ ಜಟಾಪಟಿಗೆ ಕಾರಣವಾಯಿತು. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಹೇಳಿದರೂ ಕೆಪಿಎಸ್‌ಸಿ ಮೊಂಡುತನ ಪ್ರದರ್ಶಿಸುತ್ತಿದೆ. ಆಯೋಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರ ಆಗ್ರಹಿಸಿದ್ದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಕೆಪಿಎಸ್‌ಸಿ ಲೋಪದೋಷ ವಿರುದ್ಧ ಹೋರಾಟಕ್ಕಿಳಿದ ಅಭ್ಯರ್ಥಿಗಳ ಪರ ಬಿಜೆಪಿ ಬೆಂಬಲ ವ್ಯಕ್ತಪಡಿಸಿತ್ತು. ಅವರೊಂದಿಗೆ ಪ್ರತಿಭಟನೆ ಮಾಡಿತ್ತು.












Click it and Unblock the Notifications