Infosys: ಹುಬ್ಬಳ್ಳಿ ಕ್ಯಾಂಪಸ್‌ಗೆ ವರ್ಗಾವಣೆ: ಉದ್ಯೋಗಿಗಳಿಗೆ ಭರ್ಜರಿ ಆಫರ್ ಕೊಟ್ಟ ಇನ್ಫೋಸಿಸ್
ಉತ್ತರ ಕರ್ನಾಟಕ ಭಾಗದಲ್ಲಿ ತನ್ನ ಕಾರ್ಯಾಚರಣೆ ಬಲಪಡಿಸಲು ಇನ್ಫೋಸಿಸ್ ಮುಂದಾಗಿದ್ದು, ಹುಬ್ಬಳ್ಳಿ ಕ್ಯಾಂಪಸ್‌ಗೆ ವರ್ಗಾವಣೆಯನ್ನು ತೆಗೆದುಕೊಳ್ಳಲು ಸಿದ್ಧರಿರುವ ಉದ್ಯೋಗಿಗಳಿಗೆ ಭರ್ಜರಿ ಕೊಡುಗೆ ನೀಡಿದೆ.
ಹುಬ್ಬಳ್ಳಿಗೆ ವರ್ಗಾವಣೆಯನ್ನು ತೆಗೆದುಕೊಳ್ಳಲು ಸಿದ್ಧರಿರುವವರಿಗೆ ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್‌ನೊಂದಿಗೆ ವರ್ಗಾವಣೆ ನೀತಿಯನ್ನು ಸೋಮವಾರ ಪ್ರಕಟಿಸಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ನೆಲೆ ಬಲಪಡಿಸಲು ಮುಂದಾಗಿದೆ.

ಉದ್ಯೋಗಿಗಳಿಗೆ ಇಮೇಲ್ ಮಾಡಿರುವ ಇನ್ಫೋಸಿಸ್, "ಭವಿಷ್ಯದ ನಿರ್ಮಾಣಕ್ಕಾಗಿ ನಿಮ್ಮಂತಹ ಪ್ರತಿಭೆಗಳಿಗೆ ಕಾಯುತ್ತಿದೆ. ಹುಬ್ಬಳ್ಳಿಯಲ್ಲಿ ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ಇದನ್ನು ಪರಿಗಣಿಸಬಹುದು" ಎಂದು ಹೇಳಿದೆ.
ಪ್ಯಾಕೇಜ್ ಘೋಷಿಸಿದ ಕಂಪನಿ
ಭಾರತದಲ್ಲಿನ ಯಾವುದೇ ಅಭಿವೃದ್ಧಿ ಕೇಂದ್ರದಿಂದ ಬ್ಯಾಂಡ್ 2 ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಜೆಕ್ಟ್‌ಗಳನ್ನು (ವಿತರಣೆ) ನಿರ್ವಹಿಸುವ ಉದ್ಯೋಗಿಗಳಿಗೆ ಈ ನೀತಿಯು ಅನ್ವಯಿಸುತ್ತದೆ ಎಂದು ಕಂಪನಿ ಹೇಳಿದೆ.
ಬ್ಯಾಂಡ್ 3 ಮತ್ತು ಕೆಳಗಿನ ಉದ್ಯೋಗಿಗಳು ಹುಬ್ಬಳ್ಳಿಗೆ ವರ್ಗಾವಣೆ ಸಮಯದಲ್ಲಿ ₹ 25,000 ಮತ್ತು ಎರಡು ವರ್ಷಗಳವರೆಗೆ ಪ್ರತಿ ಆರು ತಿಂಗಳಿಗೊಮ್ಮೆ ₹25,000 ಪಡೆಯುತ್ತಾರೆ. ಈ ಹಂತದಲ್ಲಿರುವ ಉದ್ಯೋಗಿಗಳು 24 ತಿಂಗಳ ಕೊನೆಯಲ್ಲಿ 1.25 ಲಕ್ಷ ರೂ ಪಡೆಯುತ್ತಾರೆ ಎಂದು ಹೇಳಿದೆ. ಬ್ಯಾಂಡ್ 4 ರ ಹಂತದ ಉದ್ಯೋಗಿಗಳು ಆರಂಭದಲ್ಲಿ 50 ಸಾವಿರ ಮತ್ತು ಆರು ತಿಂಗಳಿಗೊಮ್ಮೆ 50,000 ಪಡೆಯುತ್ತಾರೆ, 24 ತಿಂಗಳ ಕೊನೆಯಲ್ಲಿ 2.5 ಲಕ್ಷ ರೂಪಾಯಿ ಗಳಿಸುತ್ತಾರೆ.
ಬ್ಯಾಂಡ್ 5ರ ಹಂತದ ಉದ್ಯೋಗಿಗಳು 24 ತಿಂಗಳಿನಲ್ಲಿ 5 ಲಕ್ಷ ಪಡೆಯಲಿದ್ದು, 6ನೇ ಹಂತದ ಉದ್ಯೋಗಿಗಳು 6 ಲಕ್ಷ ಮತ್ತು 7ನೇ ಹಂತದ ಉದ್ಯೋಗಿಗಳು 8 ಲಕ್ಷ ರೂಪಾಯಿ ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ.
ಈ ನೀತಿಯು ಅಭಿವೃದ್ಧಿಯ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ಉತ್ತರ ಕರ್ನಾಟಕದಿಂದ ಬಂದ ಉದ್ಯೋಗವನ್ನು ತಮ್ಮ ಸ್ವಂತ ಪ್ರದೇಶದಲ್ಲಿ ಮುಂದುವರೆಸಲು ಬಯುಸುತ್ತದೆ. ಇದು ಕಂಪನಿಯು ಆಧುನಿಕ ಸೌಲಭ್ಯದಲ್ಲಿ ಮೂಲಸೌಕರ್ಯವನ್ನು ಅತ್ಯುತ್ತಮವಾಗಿ ಬಳಸಲು ಮತ್ತು ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ.
ಏಪ್ರಿಲ್ 2023 ರಲ್ಲಿ ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ ಇನ್ಫೋಸಿಸ್, "ಈ ಕಾರ್ಯತಂತ್ರದ ಭಾಗವಾಗಿ, ಈ ವರ್ಷ, ನಾವು ಭಾರತದಲ್ಲಿ ಹುಬ್ಬಳ್ಳಿ, ಇಂದೋರ್, ನವಿ ಮುಂಬೈ, ನಾಗ್ಪುರ ಮತ್ತು ಕೊಯಮತ್ತೂರಿನಲ್ಲಿ ಕಚೇರಿಗಳನ್ನು ಸ್ಥಾಪಿಸಿದ್ದೇವೆ" ಎಂದು ಹೇಳಿತ್ತು.
ಇನ್ಫೋಸಿಸ್ ಕಂಪನಿಯ ಈ ನಡೆ ಹುಬ್ಬಳ್ಳಿಯಲ್ಲಿ ಐಟಿ ವಲಯದ ಅಭಿವೃದ್ಧಿಗೆ ಸಹಕಾರಿಯಾಗಬಹುದು. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ, ಪ್ರಮುಖ ಐಟಿ ಕಂಪನಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಕಚೇರಿ ತೆರೆದರೆ, ಆ ಭಾಗದ ಜನರಿಗೆ ಉದ್ಯೋಗ ಸೃಷ್ಟಿಸಿಕೊಡಬಹುದು. ಬೆಂಗಳೂರಿಗೆ ಹೋಲಿಕೆ ಮಾಡಿದರೆ, ಹುಬ್ಬಳ್ಳಿಯಲ್ಲಿ ಕಚೇರಿ ನಿರ್ವಹಣಾ ವೆಚ್ಚ ಕೂಡ ಕಡಿಮೆ ಇರುತ್ತದೆ.












Click it and Unblock the Notifications