ಪ್ರೌಢಶಾಲಾ ಶಿಕ್ಷಕರ ನೇಮಕ: ಅಧಿಸೂಚನೆ ಯಾವಾಗ, ಎಷ್ಟು ಹುದ್ದೆಗಳು, ಮೀಸಲೆಷ್ಟು? ಇಲ್ಲಿ ತಿಳಿಯಿರಿ
ಶಿವಮೊಗ್ಗ, ಡಿಸೆಂಬರ್ 07: ಪ್ರೌಢಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಫೆಬ್ರುವರಿಯಲ್ಲಿ ಆರಂಭಗೊಳ್ಳಲಿರುವ ಮಾಹಿತಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಹಂಚಿಕೊಂಡರು
ಈ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ 2500 ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ನಿರ್ಧರಿಸಲಾಗಿದೆ. ಈ ಕುರಿತು ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗುವುದು' ಎಂದು ತಿಳಿಸಿದರು.
ಪರಿಶಿಷ್ಟ ಜಾತಿ-ಪಂಗಡಕ್ಕೆ ನಿಗದಿಪಡಿಸಿರುವ ಮೀಸಲು ಆಧರಿಸಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಡೆಯಲಿದೆ. ಇದು ಹೊಸ ಕಾನೂನಿನ ಅನ್ವಯ ನಡೆಯಲಿದೆ. ಇದರ ಅಡಿಯಲ್ಲಿ 250 ಮಂದಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ಅನ್ನು ರಾಜ್ಯದಲ್ಲಿ ಈ ವರೆಗೆ ಜಾರಿ ಮಾಡಿಲ್ಲ. ರಾಜ್ಯದಲ್ಲಿ 300ರಿಂದ 400 ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಜನವರಿ 26ರಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಯೋಜಿಸಿದ್ದೇವೆ' ಎಂದು ಶಿಕ್ಷಣ ಸಚಿವರು ಹೇಳಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅಗತ್ಯವಿರುವ ಪಠ್ಯಕ್ರಮ ಕೂಡ ರೂಪುಗೊಂಡಿದೆ. ಎನ್‌ಇಪಿಯು ಪಠ್ಯ ಆಧಾರಿತವಾಗಿ ಇರುವುದಿಲ್ಲ. ಚಟುವಟಿಕೆ ಆಧಾರಿತ ಶಿಕ್ಷಣವಾಗಿ ಇರಲಿದೆ. ಈ ನೀತಿಯಡಿಯಲ್ಲಿ ಹೆಚ್ಚು ಪುಸ್ತಕಗಳು ಇರುತ್ತವೆ ಎಂದೇನೂ ನನಗೆ ಅನ್ನಿಸಿಲ್ಲ. ಪಠ್ಯಕ್ರಮಕ್ಕೆ ತಕ್ಕಂತೆ ಶಿಕ್ಷಕರಿಗೆ ತರಬೇತಿ ನೀಡಿಬೇಕಿದೆ. ಅವರನ್ನು ಸಜ್ಜುಗೊಳಿಸಬೇಕಿದೆ ಎಂದು ತಿಳಿಸಿದರು.

15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ
ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಚಾರ ಹೈಕೋರ್ಟ್‌ನಲ್ಲಿದೆ. ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಡಬೇಕು. ಈ ಷರತ್ತಿನ ಮೇರೆಗೆ ನೇಮಕಾತಿ ಆದೇಶ ನೀಡಿ ಎಂಬುದು ಆಯ್ಕೆಯಾಗಿರುವ ಅಭ್ಯರ್ಥಿಗಳ ಒತ್ತಾಯವಾಗಿದೆ. ಇದನ್ನೂ ನಾವು ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಜನವರಿ 18ಕ್ಕೆ ಈ ವಿಚಾರವನ್ನು ನ್ಯಾಯಾಲಯ ಪರಿಶೀಲಿಸಲಿದೆ. ಅಲ್ಲಿನ ಪ್ರಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಬಿ.ಸಿ.ನಾಗೇಶ್ ತಿಳಿಸಿದರು.
'15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧಿಸಿದ 1:1 ಅನುಪಾತದ 'ತಾತ್ಕಾಲಿಕ ಆಯ್ಕೆ' ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 15,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದರಲ್ಲಿ 13,363 ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ' ಎಂದು ನಾಗೇಶ್ ನವೆಂಬರ್‌ನಲ್ಲಿ ಟ್ವೀಟ್ ಮಾಡಿದ್ದರು.

'ಲಿಂಗತ್ವ ಅಲ್ಪಸಂಖ್ಯಾತರಿಗೆ ಶಿಕ್ಷಕರ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡಲಾಗಿತ್ತು. ಪ್ರಪ್ರಥಮ ಬಾರಿಗೆ ಮೂವರು ಲಿಂಗತ್ವ ಅಲ್ಪಸಂಖ್ಯಾತರು 1:1 ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಅರ್ಹ ಎಂಜಿನಿಯರಿಂಗ್ ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. 19 ಜನರು 1:1 ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ' ಎಂದು ತಿಳಿಸಿದ್ದರು.
'15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಕಟ್ಟು ನಿಟ್ಟಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಅದರಂತೆ ಅಧಿಸೂಚನೆ ಹೊರಡಿಸಿದ ದಿನದಿಂದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆವರೆಗಿನ ಪ್ರಕ್ರಿಯೆಯನ್ನು 9 ತಿಂಗಳ ಒಳಗೆ ಪೂರ್ಣಗೊಳಿಸಲಾಗಿದೆ' ಎಂದು ಹೇಳಿದ್ದರು.












Click it and Unblock the Notifications