ವೈದ್ಯಾಧಿಕಾರಿ ಹುದ್ದೆ ವಂಚಿತೆಯ ನೆರವಿಗೆ ಧಾವಿಸಿದ ಹೈಕೋರ್ಟ್
ಬೆಂಗಳೂರು, ಮೇ 2; ಕೋವಿಡ್ ಸಂದರ್ಭದಲ್ಲಿ ಹಲವರು ಹಲವು ಬಗೆಯ ಸಂಕಷ್ಟ ಅನುಭವಿಸಿದ್ದು ಎಲ್ಲಿರಿಗೂ ತಿಳಿದೇ ಇದೆ. ಅದೇ ರೀತಿ ಆ ಸಮಯದಲ್ಲಿ ತಾಯಿಯನ್ನು ಕೆಳದುಕೊಂಡಿದ್ದ ಓರ್ವ ವೈದ್ಯ ತಾನು ಸರ್ಕಾರಿ ವೈದ್ಯಾಧಿಕಾರಿ ಹುದ್ದೆಯಿಂದ ವಂಚಿತರಾಗಿದ್ದರು. ಆದರೆ, ಅವರ ನೆರವಿಗೆ ಧಾವಿಸಿರುವ ಕರ್ನಾಟಕ ಹೈಕೋರ್ಟ್, ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆಗೆ ವೈದ್ಯೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ.
ತಾಯಿ ಮೃತಪಟ್ಟ ಕಾರಣ ದಾಖಲೆಗಳ ಪರಿಶೀಲನೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ (ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್) ಹುದ್ದೆಯಿಂದ ವಂಚಿತರಾಗಿದ್ದ ವೈದ್ಯೆಯೊಬ್ಬರ ಪರವಾಗಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆಕೆಯ ನೆರವಾಗಿ ಆಗಮಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ (ಕೆಎಟಿ) ವೈದ್ಯಕೀಯ ಅಧಿಕಾರಿ ಹುದ್ದೆಗೆ ಬೀದರ್‌ನ ಡಾ. ಸ್ನೇಹಾ ಅವರನ್ನು ಪರಿಗಣಿಸುವಂತೆ ನಿರ್ದೇಶಿಸಿ ಹೊರಡಿಸಿತ್ತು.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಏನು ಹೇಳಿದೆ?; ವಾದ-ಪ್ರತಿವಾದದ ನಂತರ ಡಾ. ಸ್ನೇಹಾ ಮೆರಿಟ್ ಅಭ್ಯರ್ಥಿಯಾಗಿದ್ದಾರೆ. ವೈದ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಿರುವ ಅಭ್ಯರ್ಥಿಗಿಂತ ಸ್ನೇಹಾ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗೆ ಮೆರಿಟ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಅರ್ಹ ಅಭ್ಯರ್ಥಿಗಳು ಲಭ್ಯವಾಗದೆ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೇ, ದಾಖಲೆಗಳ ಪರಿಶೀಲನೆಗೆ ಹಾಜರಾಗದಿರಲು ಸ್ನೇಹಾ ಅವರಿಗಿದ್ದ ಸಂಕಷ್ಟದ ಪರಿಸ್ಥಿತಿ ಪರಿಗಣಿಸಿ ಅವರ ಅರ್ಜಿಯನ್ನು ಕೆಎಟಿಯು ಪುರಸ್ಕರಿಸಿದೆ. ಜೊತೆಗೆ ಆಕೆಯ ಮನವಿ ಪರಿಗಣಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶಿಸಿದೆ. ಈ ಆದೇಶದಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಸಕಾರಣ ಇಲ್ಲ ಎಂದು ತಿಳಿಸಿದ ವಿಭಾಗೀಯಪೀಠ ಅರ್ಜಿ ವಜಾಗೊಳಿಸಿದೆ..

ಪ್ರಕರಣದ ಹಿನ್ನೆಲೆ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆ ನೇಮಕಾತಿಗೆ 2020ರ ಸೆ.10ರಂದು ಅರ್ಜಿ ಆಹ್ವಾನಿಸಿತ್ತು. ಡಾ. ಸ್ನೇಹಾ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆಯಲ್ಲಿ ಅವರು ಶೇ. 61.25 ಅಂಕವನ್ನು ಪಡೆದುಕೊಂಡಿದ್ದರು. ಸಾಮಾನ್ಯ ಮಹಿಳೆ ವರ್ಗದಡಿ ಮೀಸಲಾತಿಗೆ ಅವರನ್ನು ಪರಿಗಣಿಸಲಾಗಿತ್ತು.
ಕೋವಿಡ್ ಸಂದರ್ಭದಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಇಲಾಖೆ ಮುಂದಾಗಿತ್ತು. ಆ ವೇಳೆ ಸ್ನೇಹ ಅವರ ತಂದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಮತ್ತೊಂದೆಡೆ ತಾಯಿ ಮೃತಪಟ್ಟಿದ್ದರು. ಈ ಸಂಕಷ್ಟ ಪರಿಸ್ಥಿತಿಯಿಂದ ಸ್ನೇಹಾ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದರಿಂದ ನೇಮಕಾತಿ ಅವಕಾಶದಿಂದ ಸ್ನೇಹ ವಂಚಿತರಾಗಿದ್ದರು.
ನಂತರ ಸ್ನೇಹಾ ಅವರಿಗಿಂತ ಕಡಿಮೆ ಅಂದರೆ ಶೇ 57.43ರಷ್ಟು ಅಂಕ ಪಡೆದಿದ್ದ ಮತ್ತೊಬ್ಬರನ್ನು ಈ ಕೋಟಾದಡಿ ನೇಮಕ ಮಾಡಲಾಗಿತ್ತು. ಇದರಿಂದ ಸ್ನೇಹಾ ಅವರು ಅಗತ್ಯ ದಾಖಲೆಗಳೊಂದಿಗೆ ಯಾವ ಕಾರಣಕ್ಕೆ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ವಿವರಣೆ ನೀಡಿದ್ದರು. ಜತೆಗೆ, ನೇಮಕಾತಿಗೆ ತಮ್ಮನ್ನು ಪರಿಗಣಿಸುವಂತೆ ಕೋರಿದ್ದರು. ಅದನ್ನು ಆರೋಗ್ಯ ಇಲಾಖೆ ಪರಿಗಣಿಸದ ಕಾರಣ ಸ್ನೇಹ ಕೆಎಟಿಗೆ ಅರ್ಜಿ ಸಲ್ಲಿಸಿ, 2021ರ ಮೇ 17ರಂದು ಪ್ರಕಟಿಸಲಾಗಿದ್ದ ಅಭ್ಯರ್ಥಿಗಳ ನೇಮಕಾತಿ ಪಟ್ಟಿಯನ್ನು ಪ್ರಶ್ನಿಸಿದ್ದರು.
ಸ್ನೇಹ ಅವರ ಅರ್ಜಿಯನ್ನು ಪುರಸ್ಕರಿಸಿದ್ದ ಕೆಎಟಿ, ಸಾಮಾನ್ಯ ಮಹಿಳಾ ಕೋಟಾದಡಿ ವೈದ್ಯಾಧಿಕಾರಿ ಹುದ್ದೆಗೆ ಅರ್ಜಿದಾರನ್ನು ಪರಿಗಣಿಸುವಂತೆ ಆರೋಗ್ಯ ಇಲಾಖೆಗೆ ನಿರ್ದೇಶಿಸಿ 2022ರ ಸೆ.16ರಂದು ಆದೇಶಿಸಿತ್ತು. ಆದೇಶ ಪ್ರಶ್ನಿಸಿ ರಾಜ್ಯ ಆರೋಗ್ಯ ಇಲಾಖೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.












Click it and Unblock the Notifications